:: ಬಸವಣ್ಣೆಪ್ಪ ಕಂಬಾರ
ಕಡಲಿಗೆ ಬಂತು ಶ್ರಾವಣ | ಕುಣಿದ್ಹಾಂಗ ರಾವಣಾ | ಕುಣಿದಾಗ ಗಾಳಿ | ಭೈರವನ ರೂಪತಾಳಿ ||
– ದ.ರಾ.ಬೇಂದ್ರೆ
ಈ ಸಲಾನು ಬರಗಾಲ ತಪ್ಪಲಿಲ್ಲ.
ಗುರ್ಚಿ ತಿರಗಲು ಬಂದ ಧಾಮನಿ ಚಿನ್ನವ್ವ ಮನೆ ಮನೆ ತಿರುಗಿ “ ಗುರ್ಚಿಗೆ ನೀರ ಹಾಕ್ರವಾ.. ಎಂದು ಕೂಗಿ “ ನಿಜಗುಣಿ ಮಳಿಗಿ ಕುಂದರತಾನಂತಪಾ” ಅಂತ ಸುದ್ದಿ ಮುಟ್ಟಿಸಿ ಮುಂದಿನ ಮನಿಗಿ ಹೆಜ್ಜೆಯಿಟ್ಟಳು. ಶಿವಾಪೂರಿನ ಸಮಸ್ತ ಹೆಣ್ಣು ಗಂಡೆಲ್ಲ ಈ ಸುದ್ದಿ ಕೇಳಿ ಕ್ಷಣ ದಿಗಿಲುಗೊಂಡರು. ತುಡುಗ ನಿಜಗುಣಿಯ ಚಿತ್ರಣವನ್ನು ಕಣ್ಣಲ್ಲಿ ಕ್ಲಿಕ್ಕಿಸಿಕೊಂಡು ಅವನ ರಂಪಾಟಗಳ ನೆನಸಿಕೊಂಡರು. ಗ್ರಾಮದ ಹಿರಿಯ ಕಳ್ಳನು ಹಾಗು ಮಹಾ ಕುಡುಕನು ಆಗಿದ್ದ ನಿಜಗುಣಿ ಮಳಿಗಿ ಕೂಡ್ರುವ ಸುದ್ದಿ ಕೇಳಿ ಕೆಲವರು ಪೆಕರು ಪೆಕರಾಗಿ ಹಲ್ಲುಕಿರಿದರು. ಇನ್ನ ಕೆಲವರು ರವ ರವ ಸಿಟ್ಟಿನಿಂದ ನಿಡುಸುಯ್ದರು. “ಕುಡುಕರೆಲ್ಲ ಕಲ್ಯಾಣದ ಬಸವಣ್ಣರಾಗಾತಾರ ಚಾಂಗ ಬಲೋ… ಅಂತ ಸಿಡುಕಿದರು. ಇನ್ನ ಕೆಲವರಿಗೆ ಅವನ ದುಸ್ಸಾಹಸಗಳ ಪರಿಚಯವಿದ್ದವರು “ಕುಡ್ಯಾಕ ಇದೊಂದ ಹೊಸಾ ಆಟಾ ಹೂಡಿದಾನ ತಗೋ ಮಕಾಟ್ಯಾ ಅಂತ ಉಡಾಫೆ ಮಾತಾಡಿದರು. ಸ್ವಲ್ಪ ಜನ ತುಟಿಯೊಳಗ ನಕ್ಕು ಮನಸ್ಸಿನೊಳಗ ಕೊಂದ ಹಾಕ ಬೇಕ ಇಂತಾ ಅಡ್ನಾಡಿ ಸೂ..ಮಕ್ಳನ್ನ ಅಂತ ಒಳಗೊಳಗ ಅವುಡಗಚ್ಚಿದರು. ನಿತ್ಯ ತಮ್ಮ ಜೊತೆಗೆ ಬಿದ್ದುಕೊಂಡಿದ್ದು, ಅರ್ಧಾ ಸಿನ್ನರ ಬೀಡಿಗೆ ಲಾಟರಿ ಹೊಡೆಯುವ ನಿಜಗುಣಿ ಹಾಗೂ ಆತನ ಐದಾರು ಜನ ಥರ್ಡಕ್ಲಾಸ ಲೋಫರಗಳಾದ ನಾಯಿ ರಾಣ್ಯಾ, ಗದಿಗ್ಯಾ, ನಾಗ್ಯಾ, ಸಿಂಬಿ ಮಣಿ ಇವರಿಗೆಲ್ಲ ನಿಜಗುಣಿ ಮಳಿಗಿ ಕುಂದರತಾನ ಅನ್ನೋದ ಕೇಳಿ ಮುಗಿಲನ್ನೊಮ್ಮಿ ಅವರವರ ಮುಖಗಳನ್ನೊಮ್ಮಿ ನೋಡಿಕೊಂಡರು. ಖದೀಮರ ನಾಯಕನಾಗಿದ್ದ ನಿಜಗುಣಿ ಹೋದವಾರ ಗುಡ್ಡದ ನಿರ್ವಾಣೆಪ್ಪಗ ಹೋಗಿ ಬಂದ ಸುದ್ದಿ ಸ್ನೇಹಿತರ ಮುಂದೆ ಹೇಳಿಕೊಂಡಿದ್ದ. ಅದನ್ನು ಕೇಳಿ ಅವರಿಗೆ ಅತ್ಯಂತ ಸೋಜಿಗವೆನಿಸಿದ ಸಂಗತಿಯೆಂದರೆ ಕಳುವು ಮಾಡಲು ಅಲ್ಲಿ ಇರೊದಾದರು ಎನು..? ವ್ಯರ್ಥ ಪ್ರಯತ್ನವೆಂದು ಪೆಚ್ಚುಮೋರೆ ಹಾಕಿದ್ದರು. ಕುಡಿದ ಮತ್ತಿನಲ್ಲಿ ಒಬ್ಬರಿಗೊಬ್ಬರು ಟವಳಿ ಮಾಡುತ “ಮಳೆ ಬಂದರೆ ನಾನು ಹುಣ್ಸಿ ಗಿಡಾ ಹಚ್ತಿನಿ,.. ನಾ .ಬೇಯಿನ ಗಿಡಾ ಹಚ್ತಿನಿ… ಮತ್ತೋಬ್ಬ. ನಾ ನಾಲ್ಕ ಎಕರೇ ಗೊಂಜಾಳ ಬಿತ್ತತೀನಿ..ಊರೇಲ್ಲ ಹಬ್ಬಾ ಮಾಡೋಣ್ರೋ.. ಅಂತ ಹೇಳಿ ಜೋರಾಗಿ ನಕ್ಕಿದ್ದರು. ಇನ್ನಿಬ್ಬರು ಮುಂದೆ ಬಂದು “ ಬಾ..ಬಾ ಮಳೆಯೆ ಅಂಗಳ ತೊಳೆಯೆ” “ಹಸಿರ ಅಂಗಿ, ಕೊಡಿಸು ನಿಂಗಿ” ಅಂತ ಕೈ ಕೈ ಹಿಡಿದು ಸುತ್ತುವರೆದು ಹಾಡುತ ಕುಣಿದರು ನಿಜಗುಣಿ ಮಳಿಗಿ ಕೂಡ್ರತಾನ ಅನ್ನುವ ಸುದ್ದಿ ಕೇಳಿ ಬೇಜಾರು, ಅಸಮಾಧಾನಕ್ಕಿಂತ ಒಂತರಾ ಖುಷಿ ಚಿಗುರೊಡೆದಿತ್ತು.
ಮುಂದಿನ ತಿಂಗಳು 12ರಿಂದ ಶ್ರೀ ಪ್ಲವನಾಮ ಸಂವಂತ್ಸರ ಆಷಾಡ ಶ್ರಾವಣ ಮಾಸದ ಮೊದಲ ಸನ್ ಸ್ವಾಮಾರ ಶುರುವಾಯಿತೆಂದು ಪಂಚಾಂಗ ನೋಡಿ ಗ್ರಾಮದ ಬೆರಳೆನಿಕೆಯಲ್ಲಿರುವ ಯಾವ ಧರ್ಮಾಧಿಕಾರಿಗಳು, ಲೆಕ್ಕದೈ, ಅಥವಾ ಶಾಸ್ತ್ರೀಗಳು ಅವನಿಗೆ ಹೇಳಿದರೊ ಗೊತ್ತಿಲ್ಲ ಹಿಂದಿನ ಸ್ವಾಮಾರ ಗುಡ್ಡದ ನಿರ್ವಾಣೆಪ್ಪಗ ಹೋಗಿ ಹಣಿ ತುಂಬ ವಿಭೂತಿ ಹಚಗೊಂಡು ಸನ್ ಮಾಡಿ ಶಿವಭಕ್ತನಾಗಿದ್ದ.
ಬೆಳಗಿನ ಪೂಜೆಗೆ ಹೂ ಪತ್ರಿ. ಅಭಿಷೇಕದ ಸಾಮಾನಗಳನ್ನೆಲ್ಲ ಹೊತ್ತು ಬರುತ್ತಿದ್ದ ಹೆಂಗಸರು, ಗಂಡಸರು ಅಂದಾನಪ್ಪ ಸ್ವ್ವಾಮಿಗಳು ಪರಕನಟ್ಟಿ, ಗುಡಿಕ್ಷೇತ್ರ, ಶಿಂಧಿಹಟ್ಟಿ ಭಕ್ತರು ನಿಜಗುಣಿ ನೋಡಿ ಕೆಲವರು ಬೆರಗಾದರೆ, ಇನ್ನ ಕೆಲವರು ಹಲ್ಲ ಕಡಿದರು.. “ಈ ತುಡುಗ ಹಡ್ಸಿಮಗಗ ದೇವರು ದೇವಸ್ಥಾನನು ಸಾಲತಿಲ್ಲ. ಜಗತ್ತಿನಾಗ ಹುಳಾ ಮುಟ್ಟಿ, ಹಾರ್ಟ ಆಗಿ, ಎಡವಿ ಬಿದ್ದ ಎಂತೆಂತ ಪುಣ್ಯವಂತರೆಲ್ಲ ಸಾಯತಾರ ಈ ಮಕ್ಳ ಭವಿಷ್ಯ ಅದ್ಹೇಂಗ ಗಟ್ಟಿಕಟಿಗೊಂಡ ಬಂದಾರತಾರೋ ಎನೋ..? ಅಂತ ಹುಬ್ಬೇರಿಸಿದರು. ಇನ್ನ ಕೆಲವರು ಅತೀಯಾದ ಬೇಸರದಿಂದ “ದೇವರು ಎನ ಶಾಣ್ಯಾ ಅಲ್ಲ ಬಿಡೋ ಮಾರಾಯಾ.. ಇದನ್ನೆಲ್ಲ ನೋಡಿದರ ಅಂತ ಹತಾಶೆಯಿಂದ ನುಡಿದರು ಹಾಡಹಗಲೇ ಕಳ್ಳನೊಬ್ಬ ದೇವಸ್ಥಾನದ ಕದಿಯಲು ಸಮಸ್ತ ಭಕ್ತರ ಸಮ್ಮುಖದಲ್ಲಿ ಭಕ್ತನ ರೂಪದಲ್ಲಿ ಬಂದದ್ದು ನೋಡಿ ತಲಿಗಿ ರಾಡಿನಿಂದ ಹೊಡೆದಂಗಾಯ್ತು ಅಂದಾನಪ್ಪನಿಗೆ “ನಿಜಗುಣ್ಯಾ ಊರ ಸಾಲಲಿಲ್ಲಂತ ಊರ ದೇವಸ್ಥಾನ ಲೂಟಿ ಮಾಡಾಕ ಬಂದಿ..?ಶೆರೆ ಕುಡ್ಯಾಕ ನಿಮಗು ಏನು ಸಾಲವಲ್ದಲ್ಲ ಬಾರೋ ನನ್ನ ಶೆರೆ ಅಂಗಡ್ಯಾಗ ಒತ್ತೇಇಟ್ಟು ಕುಡದಿಯಂತ.. ನಡೀಲೆ..ಬೋಸಡಿಕೆ…? ಅಂತ ಕೈಯಲ್ಲಿನ ಧೂಪಾರ್ತಿಯ ಕೆಳಗ ಕುಕ್ಕರಿಸಿ ಕೈಯಾಗಿನ ಗಂಟೆಯನ್ನು ಅವನತ್ತ ಬೀಸಿ ಒಗೆದ. ನಿಜಗುಣಿ ಕತ್ತು ವಾಲಿಸಿ ತಪ್ಪಿಸಿಕೊಂಡು ಅಲ್ಲಿಂದ ಹೊರ ನಡೆದ. ಗುಡ್ಡ ಇಳಿಯತೊಡಗಿದ. ಗುಡ್ಡಕ ಬರುವ ಹೋಗುವವರೆಲ್ಲ ದಿಟ್ಟಿಸಿ ನೋಡುತ್ತಿದ್ದರು ಯಾರೋ ಅಪ್ಪಿ ತಪ್ಪಿ ಮಾತಾಡಿಸಿದರು ಕ್ಯಾರೆ ಅನದೆ ಕೆಳಗಿಳಿದು ಬಂದುಬಿಟ್ಟ.
000000000000
ಈ ಸಲದ ಶ್ರಾವಣ ಮುಗಿಯೋವರೆಗು ಶಂಕರಯ್ಯ ಸ್ವಾಮಿಗಳಿಗೆ ಬಿಡುವಿಲದಷ್ಟು ಕೆಲಸ. ಲಕ್ಷ ದೀಪೋತ್ಸವ, ತಿಂಗಳ ಕಾಲ ಪ್ರವಚನ, ದೇವಸ್ಥಾನದ ಅಲಂಕಾರ,, ಹೋಗುವ ಬರುವವವರ ಆತಿಥ್ಯ. ಭಕ್ತರ ಮನೆಗಳಿಗೆ ವಾರ್ಷಿಕ ಪೂಜೆಗೆ ಹೋಗುವುದು, ಬೇರೆ ಬೇರೆ ಊರುಗಳಿಂದ ಶ್ರೀಗಳನ್ನು ಕರೆಸಿ ಪ್ರವಚನ ನಡೆಸುವುದು, ಆಹ್ವಾನ ಪತ್ರಿಕೆ ಪ್ರಕಟಣೆ ಹಾಗು ವಿತರಣೆ, ಪತ್ರಿಕಾ ಪ್ರಕಟಣೆ ನೀಡುವುದು ಹೀಗೆ ಊರೆಲ್ಲ ದೇಣಿಗೆ ಧಾನ್ಯ ಸಂಗ್ರಹಿಸುವುದು ಇದಕ್ಕಾಗಿ ಊರಿಂದೂರಿಗೆ ಬಿಡುವಿಲ್ಲದಂತೆ ಸುತ್ತಾಟ. ಇದಾದ ಮೇಲೆ ದೀಪಾವಳಿ ಹೊತ್ತಿಗೆ ಮಗನನ್ನು ಉತ್ತರಾಧಿಕಾರಿ ಮಾಡುವ ವಿಚಾರ ಊರ ಪ್ರಮುಖರೊಂದಿಗೆ ಈ ಹಿಂದೆ ಚರ್ಚೆ ಮಾಡಿದ್ದು ಋಣಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಈ ಎಲ್ಲ ಕೆಲಸಗಳಿಗೆ ಆನೆಬಲ ತಂದಿತ್ತು. ಅಷ್ಟೇ ಏಕೆ ತನ್ನ ಕಾಯಕದ ನಿಷ್ಠೆಯಿಂದಲೆ ಪ್ರಸಿದ್ದಿಯಾಗಿದ್ದ ಶಂಕರಯ್ಯನವರು ತಮ್ಮ ಮಗನು ತಮ್ಮಂತೆ ಮುಂದಿನ ಶ್ರಾವಣಕ್ಕೆ ಪೀಠಾಧಿಪತಿಯಾಗುವ ಕನಸನ್ನು ಹೊತ್ತು ತಿರುಗುತ್ತಿದ್ದರು. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನುವಂತೆ ಅಂದಾನಪ್ಪನವರು ಶಂಕರಯ್ಯನವರಿಗೆ ನಿನ್ನೆ ಸಂಜೆನೆ ಹೊಲೇರ ನಿಜಗುಣಿ ಗುಡ್ಡದ ಮ್ಯಾಲಿನ ಪಂಚಲಿಂಗೇಶ್ವರ ದೇವಸ್ಥಾನದಾಗ ಮಳೆಗೆ ಕೂಡ್ರತಾನ ಅನ್ನುವ ಸುದ್ದಿ ಮುಟ್ಟಿಸಲು ಹವಣಿಸುತ್ತಿದ್ದ ಆಗಿರಲಿಲ್ಲ. ಕೊನೆಗೆ ಅಟ್ಟದ ಮೇಲೆ ಒಬ್ಬರೇ ಜಪಕ್ಕೆ ಕುಳಿತಾಗ “ ತುಡಗ ನಿಜಗುಣ್ಯಾ ಗುಡ್ಡದ ಮ್ಯಾಲ ಮಳಿಗಿ ಕುಂದ್ರತಾನಂತ “ ಸುದ್ದಿ ಒದರಿದ.
“ ಮಳಿಗಿ ಕುಂದರತಾನು..? ನೀರಾಗಿದ್ದ ಕಲ್ಲ ಎಂದರ ಮೆತ್ತಗಾದಿತಾ..? ಅಂತಂದು ಕಣ್ಣ ಬಿಟ್ಟರು.. ಮನಸ್ಸು ವಿಕೇಂದ್ರಿಕರಣಗೊಂಡು ರೆಪ್ಪೆಗಳು ಮತ್ತೆ ಒಂದುಗೂಡಲಿಲ್ಲ. ರುದ್ರಾಕ್ಷಿ ಮಣಿಗಳು ಮುಂದಕ್ಕ ಹೋಗಲಿಲ್ಲ.
“ ನೀ ನಮ್ಮ ಹುಡುಗರಿಗೆಲ್ಲ ತಿಳಿಸು ಇನ್ನು ಶ್ರಾವಣ ಶುರುವಾತು ಲಕ್ಷ ದೀಪೋತ್ಸವ ನಡೀತದ. ಅತ್ತ ಇತ್ತ ಯಾರಿಗೂ ತಿರಿಗ್ಯಾಡಾಕ ಬಿಡಬ್ಯಾಡ ಅಂತ ಶಂಕರಯ್ಯ ಎಚ್ಚರಿಸಿದ. ನಾನು ಛೇರ್ಮನ ಶಿವಪ್ಪನ ಜೋಡ ಮಾತಾಡಿ ಗುಡ್ಡ ಹತ್ತಬಾರದಂಗ ಮಾಡಿಸ್ತಿನಿ. ಸಮಾಧಾನವಾಗಿ ಹೇಳಿದರು ವಿಷಯ ಅಷ್ಟು ನೆಮ್ಮದಿದಾಯಕವಾಗಿಲ್ಲ ಅನ್ನೋದು ಎಲ್ಲರಿಗು ಹಂತ ಹಂತವಾಗಿ ಅರಿವಾಗುತಿತ್ತು. ಎಂದೂ ಇಲ್ಲದ ಇಂತ ಅವಗಡ ನಾಂದಿ ಹೆಂಗಾಯ್ತು..? ಇದರ ಹಿಂದಿರುವ ಷಡ್ಯಂತ್ರವೇನು..? ಎಂಬುದರ ಬಗ್ಗೆ ಮನಸ್ಸು ಬೆಳಕ ಹುಡುಕುತಿತ್ತು. ಮರುದಿನ ಗವಯಗೊಳ ಸಿದ್ದಪ್ಪ. ಪರಪ್ಪ. ಗಂಗಾಧರ ಎಡ್ರಾಮಿ ಬಾಳು ಇವರ ಜೊತಿಗಿ ದೇವಸ್ಥಾನ ಕಮಿಟಿ ಸದಸ್ಯರು ಸೇರಿ ಶಂಕರಯ್ಯನವರ ಬಳಿ ಬಂದರು.
“ಶಂಕರಯ್ಯನವರೇ ಎನೀದು. ಅನಾಚಾರ…? ನೀವ ಬದುಕಿರುವಗಲೇ ಇಂತಹಾ ಅಪಚಾರಗಳು..? ಗಾಬರಿಯಿಂದ ಕೇಳಿದ ಪ್ರಶ್ನೆಗೆ ಅಖಂಡವಾಗಿ ಯೋಚಿಸುತ್ತಿದ್ದ ಅವರ ಕಣ್ಣುಗಳ ದುರ್ಬಲತೆಯೆ ಹೇಳುತಿತ್ತು.. ನಾನು ಕೂಡ ಸುಮ್ನೆ ಕುಳಿತಿಲವೆಂದು..
“ ಹೆದರಬ್ಯಾಡ್ರಿ.. ಏನ ಆಗೊದದ ಅದು ಚಲೋಕ ಆಗತದ. ಅಂದರು ಶಂಕರಯ್ಯ.
“ಎನ ಚಲೋಕ ಆಕೈತ್ರಿ..? ಮಠದ ಸ್ವಾಮಗೋಳ ನೀವ ಹಿಂಗ ವಿಚಾರ ಮಾಡಿದ್ರ ಹೆಂಗಂತಿನಿ.. ಕುಡುಕ ಕಳ್ಳ ಹುಚ್ಚ ಸೂಳೆ ಮಗಾ ಒಬ್ಬ ಅಗಡಿ ದಿಗಡಿ ಮಾತಾಡಿ ಊರಾಗಿನ ಕಿಮ್ಮತ್ತ ಕೆಡಿಸಿದಾನ ಅವ ಬಂದ ಮಳಿಗಿ ಕುಂದರೋದ ಅಂದರೇನು..? ನವ್ವದಟಕ್ಕೆ ಒಂದ ಜಾತಿ ಮಂದಿ ನಾವ, ಹೂಂ ಅನ್ನಾಕಾಗತದ ಎನ್ರೀ..? ಅವಗ ರೀತಿ ರಿವಾಜ ಇಲ್ಲ ಬಿಡ್ರಿ ಆದರ ಅದನ್ನ ನಂಬಿ ಬದುಕ ಮಾಡಕೊಂತ ಬಂದ ನಮಗ ಇಲ್ಲೇನ್ರಿ..? ಎಡ್ರಾಮಿ ಬಾಳು ತುಸು ಕೋಪದಿಂದಲೆ ಕೇಳಿದ.
“ ಇದರ ಹಿಂದ ಏನರ ಮಸಲತ್ತ ನಡದಿರತದ ನೋಡ, ದೇವರ ದಿಂಡರಾ ಅದರ ಗಂಧ ಗಾಳಿ ಗೊತ್ತಿಲದ ಒಬ್ಬ ಕುಡುಕ ಹಾಗು ಮಹಾ ಕಳ್ಳನಾಗಿರುವಂತವನು ನಾ ಸನ್ಯಾಸಿಗತೇಕ ಮಳಿಗಿ ಕುಂದರತಿನಿ ಅಂತಾನಂದ್ರ ಸೂಕ್ಮ ವಿವರಿಸಿದ ಪರಪ್ಪ.
“ ಒಂದ ಕೆಲಸ ಮಾಡ್ರಿ ನಿಜಗುಣ್ಯಾನ ಹಿಡದ ಕೇಳ್ರಿ ಎಂದು ಇಲ್ಲದ ಭಕ್ತಿ ಇಂದ ಹೆಂಗ ಬಂತ ನಿನಗ..? ಯಾರರ ಕಲಿಸಿಕೊಟ್ಟಾರ..? ಅಂತ. ಶಂಕರಯ್ಯನವರು ಗ್ವಾಡಿಗಿ ಆಧಾರವಾಗಿ ಕುಳಿತುಕೊಳ್ಳುತ “ಮಳಿಗಿ ಕುಂದರೋದು ಅಂದ್ರ ಊಟಕ ಕುಂತಂಗ ಅನಕೊಂಡಿರೇನು..? ನಿಶೇದಾಗ ಅಂದಿರಬಹುದು ನೋಡ್ರಿ. ಅಂತ ಹಾಸ್ಯವಾಗಿ ಮಾತು ತೇಲಿಸಿದರು.
“ಇದನ ಹಗರ ತಿಳಿಬ್ಯಾಡ್ರಿ ಶಂಕರಯ್ಯನವರ.. ಸುತ್ತಿನ ಹಳ್ಳಿಗಿ ಸುದ್ದಿ ಮುಟ್ಟಿದರ ಜನರು ಊಟ ಕಟಗೊಂಡ ಬಂದು ನೋಡಿ ನಕ್ಕು ಹೋಗ್ತಾರ. ಅಣಕಿಸವರ ಮುಂದ ಹೂಂಸ ಬಿಟ್ಟಂಗ ಆಗತದ ನಮ್ಮ ಮಾನ. ಈ ಸುದ್ದಿ ಊರ ಹೊರಗ ಹೋಗಬಾರದು ಅಂದ್ರ ಹೆಚ್ಚಾಗಿ ಹೆಂಗಸರ ಬಾಯಿಗಿ ಬೀಳಬಾರದು, ಎರಡನೇದು ನಿಜಗುಣಿ ಜೊಡ್ಯಾವರನ್ನೆಲ್ಲ ಗಪ್ ಚುಪ್ ಮಾಡಬೇಕು ಈ ವರ್ಷದ ಲಕ್ಷ ದೀಪೋತ್ಸವ, ತೆಪ್ಪೋತ್ಸವ, ಪ್ರವಚನ, ಶ್ರಾವಣ ತಿಂಗಳ ಮುಗಿಯುವರೆಗು ಯಾವದ ಅಡ್ಡಿ ಆತಂಕ ಇಲ್ಲದ ನಡಿತೈತಿ ಅಂತ ಗುಡ್ಡದ ಮ್ಯಾಲಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆಯಿಂದಲೆ ಕೆಲಸಗಳು ಶುರುವಾಗಬೇಕು. ಇನ್ನೊಂದು ಯಾರರ ನಿಜಗುಣಿ ಮಳಿಗಿ ಕುಂದರತಾನಂತ ಈ ಗುಡ್ಡದ ಮ್ಯಾಲ ಖರೇ ಏನ್ರೀ..?ಅಂತ ಕೇಳಿದರ ಅದೆಲ್ಲ ಬುರ್ರ ಬುಷ್ ಸುಳ್ಳು, ಸುಳ್ಳ ಸುದ್ದಿ ನಂಬಬಾರದು ಅಂತ ತಿಳಿಸಿ ಹೇಳರಿ.ಜನರನ್ನು ನಂಬಿಸಿರಿ ಈ ಮುಂದಿನ ಪಟ್ಟಾಧಿಕಾರಿ ಕಾರ್ಯಕ್ರಮ ನಡೆಯೊವರೆಗು ಈ ಊರಿನ ಜನ ಶಾÁಂತರಾಗಿರಬೇಕು. ಅಂತ ಶಂಕರಯ್ಯನವರು ಮೈಯೆಲ್ಲ ಕಣ್ಣಾಗಿ ಪ್ರತಿಕ್ಷಣವು ಜಾಗೃತರಾಗಿ ತನ್ನ ಸುತ್ತಲಿನವರನ್ನೆಲ್ಲ ಅಲರ್ಟ ಆಗಿರುವಂತೆ ಪ್ರಚೋದಿಸಿದರು.
000000000000
ಊರತುಂಬ ಪುಕ್ಸಟ್ಟೆ ಪ್ರಚಾರಗೊಂಡ ನಿಜಗುಣಿ ಮಳೆಗೆ ಕೂಡ್ರುವ ಮಾತು ತಾಸಿಗೊಂದು ರೂಪ ತಳೆಯುತಿತ್ತು. ಅಂದಾನಪ್ಪನವರು ದೇವಸ್ಥಾನದ ಕಮೀಟಿ ಇಬ್ಬರು ಸದಸ್ಯರೊಂದಿಗೆ ಸಂಜೆ ನಿಜಗುಣಿಯ ಮನೆಗೆ ಬಂದರು. ಹೊರಗಡೆ ಕಟ್ಟಿಮ್ಯಾಲ ಕುಳಿತು ಮೌನ ಎಣಿಸುತ್ತಿದ್ದ ನಿಜಗುಣಿಗೆ ಬಾಹ್ಯಕಣ್ಣಿಗೆ ಬಂದವರು ಒಳಗಡೆ ಇದ್ದವರ್ಯಾರು ಕಾಣುತ್ತಿರಲಿಲ್ಲ.
“ನಿಜಗುಣರ.. ಪಾರಮಾರ್ಥಕ ಹೋಗಿದಿರೇನ್ರಪಾ…? ವಾಸ್ತವಕ ಬರ್ರೇಪಾ ಸಂಸಾರಿಗಳು ನಿಮ್ಮನ್ನ ನೋಡಾಕ ಬಂದೇವಿ ಅಂತ ಅಂದಾನಪ್ಪ ನಾಟಕದ ಮಾತಿನಂತೆ ಕೇಳಿದ. ಮಾಸಿದ ಅರಿವಿ, ಅಡ್ಡಾದಿಡ್ಡಿ ಬೆಳೆದ ಕೂದಲು, ಗಡ್ಡ, ಕೊರಳಾಗ ರುದ್ರಾಕ್ಷಿ ಇಲ್ಲ, ಲಿಂಗವಿಲ್ಲ ಹಣಿಮ್ಯಾಲ ವಿಭೂತಿಯಂತು ಮೊದಲ ಇಲ್ಲ ಎಂದ ಜಳಕಾ ಮಾಡಿದಾನೊ ಪುಣ್ಯಾತ್ಮ. ಒಬ್ಬ ಅವನ ಕಿಂವಿ ಹಿಡಿದು ಹಿಂಡಿದ. “ಅಯ್ಯೋ…ಹೋ.. ಅಂತ ಅರಿವಿಗಿ ಬಂದು ನೋವಿನಿಂದ ಕಣಲಿದ. ಅಂದಾನಪ್ಪ ಸ್ವಾಮಿಗಳು, ದೇವಸ್ಥಾನ ಕಮೀಟಿ ಸದಸ್ಯರಲ್ಲ ಒಟ್ಟಗೂಡ ಮನೀ ಬಾಗಿಲಿಗಿ ಬಂದುದ ನೋಡಿ ತಲಿ ದಿಮಿರ ಬಿಟ್ಟಿತು. ಏನ ಮಾತಾಡಬೇಕು ಅಂತ ಗೊತ್ತಾಗದ ಒದ್ದಾಡಿದ. ಇವರ ಕೈಯಾಗ ಒಳೇ ಸಿಕ್ಕಿದನಲ್ಲಪಾ..? ಅಂತ ಚಡಪಡಿಸಿದ. “ ನ..ನಮಸ್ಕಾರ್ರೀ… ಅಂತ ತೊದಲಿದ. ಈ ನಮಸ್ಕಾರ ಯಾರಿಗೆ ಅನ್ನೋದು ಬಂದವರಿಗೆ ಗೊಂದಲಾತು. ಈ ಸುದ್ದಿಯನ್ನು ಊರಿನ ದಲಿತ ಸಂಘರ್ಷ ಸಮಿತಿಯ ಕೆಲ ಹುಡುಗರು ತಮ್ಮ ತಮ್ಮ ವಾಟ್ಸಪ್, ಫೇಸಬುಕ್ ಇನ್ಸಟಾಗ್ರಾಮಗಳಲ್ಲಿ ಹಾಕಿ ಪ್ರಚಾರಗೈಯುತ್ತಿದ್ದರು. ಕಳ್ಳನಿದ್ದ ನಿಜಗುಣಿ ಕಾಳಿದಾಸನಾದ ಪರಿ ಹೇಗೆ..? ಅಂತ ಚರ್ಚಿತಗೊಂಡಿದ್ದ. ನಿಜಗುಣಿ ಮಳಿಗಿ ಕೂಡ್ರುವ ಕುರಿತು ನಡೆಯಬಹುದಾದ ವಿರೋಧದ ಬಗೆಗೂ ಎಚ್ಚರವಿದ್ದ ಸಮಿತಿಯವರು ಇನ್ನುಳಿದ ಊರುಗಳಲ್ಲಿನ ಸಂಘಗಳಿಗೆ ಮಾಹಿತಿ ನೀಡಿ ಎಲ್ಲರೂ ಸಪೋರ್ಟ ಮಾಡಲು ಒಂದು ವಾಟ್ಸಪ್ ಮೆಸೆಜ್ ರವಾನೆಯಾದದ್ದು ಕಳೆದ ಆರು ದಿನಗಳ ಹಿಂದೆಯಷ್ಟೆ. ಅಲ್ದೆ ಎಲ್ಲರೂ ದೇವಸ್ಥಾನಕ್ಕೆ ಬರುವ ಸುದ್ದಿಯ ಕೂಡ ಹಬ್ಬಿತ್ತು.
000000000000
ಸ್ವಾಮಾರ ಬೆಳಿಗ್ಗೆ ಎಂದಿನಂತೆ ಪಂಚಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಗಿ ತೆಂಗಿನ ಗರಿ, ಐದುಗಳ ಕಬ್ಬು, ಮಾವಿನ ತೋರಣ ಕಟ್ಟಿ ಸಿಂಗಾರ ಮಾಡುತ್ತಿದ್ದರು. ಅಂದಾನಪ್ಪ. ಬಸಯ್ಯ, ಲಿಂಗೇಶ, ಮುರಗೇಶ,ಒಂದಿಬ್ಬರು ಗೌಡರ ಕಟ್ಟಾಳುಗಳು ಸೇರಿದ್ದರು. ಅಲ್ಲಿದ್ದ ಪ್ರಾಂಗಣವನ್ನು ಗುದ್ದಲಿ ಹಿಡಿದು ಸಮಮಾಡುತ್ತಿದ್ದರು. ನಿಜಗುಣಿ ಗುಡ್ಡ ಹತ್ತಬಾರದೆಂಬಂತೆ ತಡೆಯಲು ಸಕಲ ಸಿದ್ದತೆಗಳು ಎರ್ಪಟ್ಟಿದ್ದವು. ನಿಜಗುಣಿಯಾಗಲಿ ಅವನ ಕಳ್ಳ ಸ್ನೇಹಿತರಾಗಲಿ ಶ್ರಾವಣ ಮಾಸ ಮುಗಿಯೋವರೆಗು ಪಾದಗಟ್ಟಿತನಕವು ಕೂಡ ಬಿಟ್ಟುಕೊಡಬಾರದು ಯಾಕೆಂದರೆ ತಿಂಗಳಕಾಲ ಸಮಸ್ತ ಗ್ರಾಮದ ಜನರು , ಸುತ್ತ ಹಳ್ಳಿಯ ಹೆಣ್ಣು ಗಂಡೆಲ್ಲ ಹಣ ಆಭರಣ, ತೊಟ್ಟು ಮಕ್ಕಳು ಮರಿಯೊಂದಿಗೆ ದೇವಸ್ಥಾನಕ್ಕೆ ಬರ್ತಾರೆ ಇಂತಹದರಲ್ಲಿ ಕಳ್ಳರ ಹಾವಳಿಯನ್ನು ತಡೆಯುವುದು ಪ್ರಮುಖವಾಗಿತ್ತು. ಈ ಕುರಿತು ಪಕ್ಕದ ಪೋಲಿಷ ಸ್ಟೇಷನನಲ್ಲಿ ಒಂದು ಅರ್ಜಿಯನ್ನು ಕೂಡ ಕೊಡಲಾಗಿತ್ತು.
ಬೆಳಂಬೆಳಿಗ್ಗೆ ಅನಂತ ಚಿಂತೆಗಳನ್ನು ಹೊತ್ತು ದೇವಸ್ಥಾನಕ್ಕೆ ಹೊರಡಲು ಅನುವಾಗಿದ್ದ ಅಂದಾನಪ್ಪ ದೇಣಿಗಿ ಕೌಂಟರನಲ್ಲಿ ಸದಾಶಿವಯ್ಯನ ಮಗನಿಗೆ ನಿನ್ನೆ ದಿನ ಕರೆದುಕೂಡ್ರುವಂತೆ ವಿಷಯ ತಿಳಿಸಿದರು ಇವತ್ತು ಇನ್ನೂ ಬಂದಿರಲಿಲ್ಲ. ಧಾರವಾಡದಿಂದ ಲಾರಿಯೊಂದರಲ್ಲಿ ಅಕ್ಕಿ, ಬೇಳೆ ದಿನಸಿಯನ್ನೆಲ್ಲ ಭಕ್ತರೊಬ್ಬರು ಕಳುಹಿಸಿದ್ದರು ಅದನ್ನು ಉಗ್ರಾಣದಲ್ಲಿ ಇಡುವ ವ್ಯವಸ್ಥೆ ಛೇರ್ನನ ಶಿವಪ್ಪನವರಿಗೆ ಹೇಳಿತ್ತು ಅವರು ಇಲ್ಲ, ಅವರ ಆಳ ಕಾಳು ಬಂದಿರಲಿಲ್ಲ್ಲ. ಪರ ಊರಿಗೆÀ ವರ್ಷದ ಭಿಕ್ಷೇಗೆ ಹಾಗು ಪಾದಪೂಜೆಗಂತ ಶಂಕ್ರಯ್ಯ ಸ್ವಾಮಿಗಳು ನವಲಗುಂದ ಹೋಗಿದ್ದರು. ಅಂದಾನಪ್ಪ ಸ್ವಾಮಿಗಳು ಒಬ್ಬರೇ ಎಲ್ಲವನ್ನು ಸಂಬಾಳಿಸೋದ ಹಗುರದ ಮಾತೇನಾಗಿರಲಿಲ್ಲ ಕಷ್ಟವಿತ್ತು. ಅಷ್ಟರಲ್ಲಿ, ಹುಲಿಗೆವ್ವಗೊಳ ಗುರುಪಾದ ಓಡೋಡಕೊಂತ ಛೇರ್ಮನ ಶಿವಪ್ಪನ ಮನಿಗಿ ಬಂದ. ಅವರು ಪಡಸಾಲ್ಯಾಗ ನಿಂತು ಉಗುರ ತೆಕ್ಕೊಳಕತ್ತವರು ಗುರಸಿದ್ದನ ನೋಡಿ ಗಾಬರಿಯಿಂದ “ಯಾಕೋ ಗುರಸಿದ್ದ್ಯಾ ನಿಜಗುಣ್ಯಾ ಮಳಿಗಿ ಗುಡ್ಡಾ ಏರಿ ಕುಂತ ಬಿಟ್ಟನೇನು ಮತ್ತ…? ನಮ್ ಮಂದಿಯೆಲ್ಲ ಎನ ಮಾಡಾಕತ್ತಿದ್ದರಿ ಹುಚ್ಚ ಸೂಳೆಮಕ್ಳಾ..ನೀವ ಬರೀ ಖೂಳಿಗೆ ಹೆಸರಾಗೇರಿ ಒಬ್ಬನ ತಡಿಯಾಕ ಆಗಲಿಲ್ಲ ನಿಮಗ..ಥೋ…ನಡೀ ಆಕಡೀಗಿ..ಭರಮ್ಯಾ ನನ್ನ ಬಂದೂಕ ತಗೋ ಗಾಡಿ ಚಾಲು ಮಾಡು ಗುಡ್ಡಕ ಹೊಡಿ ಗಾಡಿ ಆಂತ ಒಂದ ಸ್ವರದಾಗ ಕೋಗಿ ಬಾಗಲದೊಳಗಿನ ಕಾಲ್ಮರೀ ಮೆಟಗೊಂಡ ಹೊರಡಲು ಗಡಿಬಿಡಿ ಮಾಡಕತ್ತದ ನೋಡಿ ಗುರಸಿದ್ದನ ಜೀಂವ ಒಮ್ಮಿ ಹೋಗಿ ಬಂದಂಗಾತು.. ಊಸರ ಕೆಳಗ ಮ್ಯಾಲ ಆಗಕತ್ತಿದ್ದರೂ ತಡ ಹಿಡಕೊಂಡು ಗೌಡರ ತಡೆದ.
“ ಛೇರ್ಮನರೇ ಅದಲ್ಲರೀ..ಸುದ್ದಿ.. ಅಂತಂದು ಮತ್ತಷ್ಟು ಸುಧಾರಿಸಿಕೊಳ್ಳತೊಡಗಿದ. ದೂರದಿಂದ ಭರಾಟಿ ಓಡಿ ಬಂದುದರಿಂದ ತೇಕ ಇನ್ನೂ ಆರಿರಲಿಲ್ಲ. ಅದಲ್ಲ ಸುದ್ದಿ ಅಂತ ಕೇಳಿ ಗೌಡನ ಮಾರಿಮ್ಯಾಲ ಮೂರಿಪತ್ತರ ಹತ್ತ ಗೆರಿಗೋಳ ಒಮ್ಮಿಗೆ ಮೂಡಿದವು. ಅಲೀ ಇವನೌವ್ವನ ಈ ಹಡ್ಸಿ ಮಗಾ ಓಡಿಬಂದುದ ನೊಡಿ ನಾ ಗಾಬರಿಯಾಗಿ ನಿಜಗುಣ್ಯಾನÀ ಇಂದ ಕೊಂದ ಬಿಡಬೇಕ ಅನಕೊಂಡಿದ್ನಲ್ಲೋ ಸರಿ ಮೊದಲ ದಾಪ ಆರಿಸಕೊಳ್ಳಲಿ ತಡಿ ಅಂತಂದು ಕುರ್ಚಿಮ್ಯಾಲ ಕುಂತರು. ಅಷ್ಟರೊಳಗ ಭರಮ್ಯಾ ಬುಲೆಟ ಗಾಡಿ ಕೀ ಹಿಡಕೊಂಡ ಮುಂದ ಬಂದ ನಿಂತ. ಗುರಸಿದ್ದ ಇನ್ನು ತಡಾ ಮಾಡಿದರ ಕೆಲಸ ಕೆಡತದ ಅಂತಂದು ಅವರ ಕಾಲ ಕೆಳಗ ಕೂಡ್ರುತ “ ಯಪ್ಪಾ..ಗುಡ್ಡಕ ಹುಲಿ ಬಂದ ಹೊಕ್ಕೈತ್ರಿ…ಅಂದ ಚೇರ್ನನ ಶಿವಪ್ಪಗ ಈ ಮಾತ ಕೇಳಿ ದಿಮರ ಬಿಟ್ಟಿತು “ಎನ ಹುಲಿ ಬಂದೈತಾ..? ಯಾಂವ ಹೇಳಿದನಲೇ..? ಹುಚ್ಚ ಸೂಳಿ ಮಕ್ಳಾ ಕಾಡ ಬೆಕ್ಕಾ ನೋಡಿ ಹುಲಿ ಅನಕೊಂಡ ಊರಾಗ ಇನ್ನೊಂದು ಸುದ್ದಿ ಎಬ್ಬಿಸಿರೇನ ಮತ್ತ, ಇತರಾಗ ಆ ಕಳ್ಳ ಸೂ.ಮಕ್ಳ ಕೈವಾಡ ಇದ್ದರ ಇರಬೇಕ..ಈ ಊರಿಗಿ ಮಳಿ ಬರಾಕ ಹೆದರತೈತಿ ಹುಲಿ ಹೆಂಗ ಬರತದ..ಯಾಂವ ನೊಡಿದಂತ..? ಯಾವಾಗ..ನೋಡಿದಂತ..? ಕೇಳಿದರು. ಅಷ್ಟರಲ್ಲಿ ಸ್ವಲ್ಪ ಸುದಾರಿಸಿಕೊಂಡಿದ್ದ ಗುರಸಿದ್ದ,
“ ಹೌದ್ರಿ ಯಪ್ಪಾ..ಊರ ಮಂದಿಯೆಲ್ಲ ಕಳ್ಳ ನಿಜಗುಣ್ಯಾ ಅವನ ಗೆಣಮೈತ್ರೆಲ್ಲ ಸೇರಿ ಸುದ್ದಿ ಹಬ್ಬಿಸಿರತಾರ ಅಂತ ಅನಕೊಂಡಿದ್ವಿ ಅದೆಲ್ಲ ಸುಳ್ಳರೀ ಅವರ್ಯಾರು ಗುಡ್ಡ ಹತ್ತೇ ಇಲ್ಲ ಆಯಿ ಬಾಳು ಬೆಳಿಗ್ಗಿ ಗುಡ್ಡಕ ಬಾಳಿ ಗಿಡಾ, ಹತ್ತ ಗಳಾ ಕಬ್ಬ ತೊಲಬಾಗಿಲಿಗಿ ಕಟ್ಟಾಕ ಕೊಡಬೇಕಂತ ತಗೊಂಡ ಹೋಗಿದ್ದನಂತ, ಹುಲಿ ಗುಡಿ ಹೊಸ್ತಿಲ ಮ್ಯಾಲ ಕುಂತಿತ್ತಂತ, ಜೀವ ಜಲ್ಲೆಂದು ಕಬ್ಬ ಬಾಳಿ ಗಿಡ ಒಗೆದ ದಿಕ್ಕಾಪಾಲಾಗಿ ಓಡಿ ಬಂದಾನ. ಅವನ ಜೋಡ ಹೊಗಿದ್ದ ಪರಕನಟ್ಟಿ, ಬಳೂಬಾಳ, ಸಿಂಧಿಹಟ್ಟಿ ಮಂದಿ ಗಂಡಸರು ಹೆಂಗಸರು ಕಣ್ಣಾರ ನೋಡಿ ಎದ್ನೋ ಬಿದ್ನೋ ಅಂತ ಓಡಿ ಬಂದಾರ್ರೀ.. ಅಂದ. ಈಗ ಛೇರ್ಮನಗ ಹೌಹಾರುವ ಸರದಿ ಬಂತು..ಅಲೀ ಇತರ..ಖರೇನೊ ಸುಳ್ಳೋ ನೋಡ್ರೋ…ಅಂತಂದು ತಲಿ ಕೆರೆದುಕೊಂಡÀ ಕುಳಿತ. ಎಲ್ಲೋ ಎಣಿಕಿ ತಪ್ಪಾಗೇತಿ.. ಶಂಕ್ರಯ್ಯ ಸ್ವಾಮಗೋಳು ಊರಾಗಿಲ್ಲ. ಹೋಗ್ಲಿ ಅಂದಾನಪ್ಪನವರು ಎಲ್ಲೇದಾರ…ಗುಡ್ಡಕ ಹೋಗ್ಯಾರೇನ ಮತ್ತ..? ಕೇಳಿದ.
“ಇಲ್ಲರಿ ಇನ್ನಮ್ಯಾಲ ಹೋಗವರಿದ್ದರ.. ಅವರಿಗ್ಯಾರೊ ಸುದ್ದಿ ಮುಟ್ಟಿಸಿದರಂತ ಮೊದಲ ನಿಮಗ ತಿಳಿಸಿ ಬರಾಕ ನನ್ನ ಕಳಿಸ್ಯಾರ ನೀವ ತಾಬಡ ತೋಬಡ ಅವರ ಮನಿ ಕಡಿಗ ಬರಬೇಕಂತ ಹೇಳ್ಯಾರಿ ಅಂದ. ಛೇರ್ಮನಗ ಜಂಗಾಬಲನ ಅಡುಗಿತು. ಮಂದಿ ಆದರ ಅಂಜಿಸಬಹುದು, ದನಾ ಆದರ ಹೆದರಿಸಬಹುದು ಹುಲಿ ಹೆಂಗ ಹೆದರಿಸೋದು..? ಎದುರಿಗಿ ಹೋಗುವ ಧೈರ್ಯಾರ ಯಾರಿಗಿ ಅದ..? “ಭರಮ್ಯಾ ಗಾಡಿ ತೆಗಿ ಅಂದಾನಪ್ಪನವರ ಮನೀಗಿ ನಡಿ..ಅಂತದಂದು ಮೆಟ್ಟ ಕಾಲಿಗೇರಿಸಿಕೊಂಡು ಹೊರಟೆ ಬಿಟ್ಟರು. ಗುರಸಿದ್ದ ಅಲ್ಲಿಂದ ನೆಟ್ಟಗ ಅವರನ್ನ ಬೆನ್ನಟ್ಟಿದ. ಅಂದಾನಪ್ಪ ಸ್ವಾಮಗೋಳ ಮನಿಮುಂದ ಊರೇಲ್ಲ ಸೇರಿತ್ತು ಎಲ್ಲರ ಮಾರಿಮ್ಯಾಲ ಭಯದ ಚಿನ್ಹೆ ಎದ್ದ ಕಾಣಾತಿತ್ತು. ಯಾರ್ಯಾರ ಆ ಗುಡ್ಡ ಹೊಲದ ಕಡೀಗಿ ಹೋಗಿದಾರ. ಆಕಡೀಗಿ ಯಾರಿಗೂ ಹೋಗಬ್ಯಾಡ್ರಿ ಅಂತ ಆಳ ಕಾಳಗಳಿಂದ ಊರ ಜನರಿಂದ ಸಾಧ್ಯವಾದಷ್ಟು ಜನರಿಗೆ ಹೇಳಿಕಳಿಸುವ ಕೆಲಸ ಮಾಡಕತ್ತಿದ್ದರು. ಛೇರ್ಮನ ಶಿವಪ್ಪ ಬಂದುದು ಅವರಿಗೆ ತುಸು ಬಲ ಬಂದಂಗಾಯ್ತು. ಮೊದಲ ಹುಕ್ಕೇರಿ ಪೋಲಿಷ ಸ್ಟೇಷನಿಗಿ ಪೋನ ಮಾಡಿದರು. ಅಲ್ಲಿಂದ ಅರಣ್ಯ ಇಲಾಖೆಗೆ ಪೋನ ಮಾಡಿ ಊರಾಗ ಹುಲಿ ಬಂದೈತಿ ಅಂತ ಸುದ್ದಿ ಮುಟ್ಟಿಸಿದರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್
ಕಾಳಿ ಸಿಂಗ್ಯಾನ ಕರೆದು ಊರೇಲ್ಲ ಟುಮಕಿ ಹೊಡಿಯೊಕ ಹೇಳಿ “ಯಾರು ಮನಿ ಬಿಟ್ಟ ಹೊಲಕ, ನೀರಿಗಿ ಅಂತ ಹೊರಗ ಬರಬ್ಯಾಡ್ರಿ ಊರಾಗ ಹುಲಿ ಬಂದೈತಿ. ಹೆದರಬ್ಯಾಡ್ರಿ ಪೋಲಿಷನವರ ಬರತಾರ ಹೆಣ್ಣ, ಗಂಡ, ಮಕ್ಕಳ, ಮರಿ ಹಿಡಕೊಂಡ ಯಾರು ಅಂಗಳಕ ಬಂದೇರಿ ಹೇಳಲಿಲ್ಲ ಅಂದಿರಿ ಅಂತ ಖಡಕ್ಕಾಗಿ ಟುಮುಕಿ ಹೊಡಿಲೆ ಅಂತ ಗದರಿಸಿ ಕಳಿಸಿದರು. ಕಾಳಿ ಸಿಂಗ್ಯಾ ಹುರುಪಿನಿಂದ “ಹೂನ್ರಿ ಯಪ್ಪ್ಲಾಂತಂದು ಹೊರಟ. ತುಸು ಮುಂದ ಹೋದವ ಹಿಂತಿರುಗಿ ನೋಡಿದ. ಶಿವಪ್ಪ ಅವನ ಕಡೀಗಿ ನೋಡಿ “ಮತ್ತೇನಾತೋ…? ಹಿಂಬಾಲ ಟುಮುಕಿ ಹಿಡಕೊಳಾಕ ಯಾರ್ನರ ಕಳಿಸಬೇಕೆನ..? ಹೋಗಲೆ ಮಗನ ಅಂತ ದಬಾಯಿಸಿದ. ಸಿಂಗ್ಯಾ ಹಿಂದ ಮುಂದ ನೋಡುತ “ಯಪ್ಪಾ ಊರ ಅಗಸಿಗಿ ಹೋಗೊದ್ಕ ಹುಲಿ ಬಂದ್ರ ಏನ ಮಾಡ್ಲಿರೀ..? ಅಂದ ಹೆದರುತ ಅವನ ಮಾತಿನೊಳಗು ಸತ್ಯಾ ಇದೆ ಅನಿಸಿ ಹೌದಲ್ಲಾ ಊರಿಗೆಲ್ಲಾ ಹೊರಗ ಅಂಗಳಕ ಬರಬ್ಯಾಡ್ರಿ ಅಂತ ಹೇಳಾವರು ಅವಗ ಊರೇಲ್ಲ ಹರಗ್ಯಾಡು ಅಂದ್ರ ಹೆಂಗಾದೀತು..? ಎನೋ ವಿಚಾರ ಮಾಡಕತ್ತವರು ತಲಿ ಜಾಡಿಸಿ “ ಊರಾಗಿನ ಪ್ರಮುಖ ಪ್ರಮುಖ ಓಣ್ಯಾಗ ಅಷ್ಟ ಟುಮಕಿ ಹೊಡಿ ಆಮ್ಯಾಲ ಅದ ಊರೆಲ್ಲ ಸುದ್ದಿ ಆಕೈತಿ ..? ಅಂತಂದ ಕಳಿಸಿದ. ಅನಮನಿಸ್ಕೋಂತ ಸಿಂಗ್ಯಾ ಹೋದ. ಯಾರಿಗೆ ಎನ ಮಾಡಬೇಕು ತಿಳಿಯದೆ ಒದ್ದಾಡುತ್ತಿರುವಾಗ ಹೊತ್ತು ಒಂದ ನಮನಿ ಹದಾ ಹಿಡಿದು ಸರಿಯುತಿತ್ತು.
000000000000
ಶಿವಾಪೂರ ತುಂಬ ಸ್ಮಶಾನ ಮೌನ. ಊರಿನ ಎಲ್ಲ ಬೀದಿಗಳು ಬೀಕೊ ಎನ್ನುತ್ತಿವೆ, ಬೀದಿ ನಾಯಿಗಳು ಯಾರನ್ನ ಕಂಡು ಒದರುತ್ತಿವೆ ಗೊತ್ತಿಲ್ಲ ಬಾಗಿಲ ಹಾಕಿಕೊಂಡು ಒಳಗಡೆ ಕುತ್ತುಸಿರ ಬಿಡುತ್ತಿರುವ ಜನರಿಗೆ ನಾಯಿ ಬೊಗಳುವಿಕೆ ಒಂತರಾ ಭಯ ತರಿಸಿತ್ತು ಎಲ್ಲಿ ಹುಲಿ ಈ ಕಡೆಗೆ ಬಂದಿದೆಯೊ ಅಂತ. ಕಿಟಕಿ ಇದ್ದವರು ಬಾಗಿಲ ತೆರೆದು ಅಂಗಳ, ಇಡೀ ಓಣಿಯನ್ನು ಕಂಡಷ್ಟು ನೋಡಿ ಸುಮ್ಮನಾದರು. ಈ ಸುದ್ದಿ ಎಷ್ಟರ ಮಟ್ಟಿಗೆ ಖರೇನೊ ಸುಳ್ಳು ಎನ್ನುವುದು ಯಾರಿಗು ಗೊತ್ತಿಲ್ಲ ಅಷ್ಟರಲ್ಲಿ ಪೋಲಿಷ ಜೀಪೊಂದು ಓಣಿಯಲ್ಲಿ ಸದ್ದು ಮಾಡುತ ಬಂದ ಒಂದು ಮೂಲೆಗೆ ನಿಂತು. “ಸಾರ್ವಜನಿಕರಲ್ಲಿ ವಿನಂತಿ. ಶಿವಾಪೂರದೊಳಗ ಹುಲಿಯೊಂದು ಬಂದಿದೆ ದಯವಿಟ್ಟು ಅದನ್ನು ಬೇಟೆಯಾಡುª ಬೇಟೆಗಾರರು ಬಂದಿದ್ದಾರೆ ದಯವಿಟ್ಟು ನಾವು ಹೇಳುವವರೆಗು ಯಾರು ಮನೆಯಿಂದ ಹೊರ ಬರಬೇಡಿ. ಅದು ಎಲ್ಲೆಲ್ಲೆ ತಿರುಗಾಡುತಿದೆಯೋ..ಎಲ್ಲಿ ಅಡಗಿ ಕುಳತಿದೆಯೋ..ಅಥವಾ ಯಾರ ಮನೇಯ ದನಗಳನ್ನೋ ನಾಯಿ, ಕುರಿ ಕೋಳಿಗಳನ್ನು ಹಿಡಿದು ತಿನ್ನುತಿದೆಯೆಂದು ಬಂಡ ಧೈರ್ಯ ಮಾಡಿ ಹುಲಿ ಓಡಿಸಲು ದಯವಿಟ್ಟು ಅಂಗಳಕ ಬರಬೇಡಿ ಅದರ ಹಿಂದೆ ಬೇಟೆಯಾಡಲು ನಮ್ಮ ಅರಣ್ಯ ಇಲಾಖೆಯ ಪೋಲಿಷನವರು ಬಲೆ ಹಿಡಿದು ಹಾಗೂ ಗೋಕಾವಿಯ ಬೇಟೆಗಾರರು ಬಂದೂಕ ಹಿಡಿದು ಬೆನ್ನತಿದ್ದಾರೆ ಹುಲಿ ಸಿಕ್ಕ ತಕ್ಷಣ ನಾವ ನಿಮಗ ಮಹಿತಿ ಕೊಡ್ತಿವಿ.ದಯವಿಟ್ಟು ಕೇಳಿರಿ ಕೇಳಿರಿ.ಅಂತ ಮೈಕನಲ್ಲಿ ಕೂಗುತ್ತ ಪೋಲಿಷ ಜೀಪು ಊರಿನ ಕೇರಿಗಳನ್ನೆಲ್ಲ ತಿರುಗುತ್ತ ಓಡಾಡಿ ಮಾಯವಾಯ್ತು. ಜನರಿಗೆ ಬರಗಾಲದ ಸಂಕಟದೊಂದಿಗೆ ಈ ಸಂಕಟ ಜೀವವನ್ನು ಅಟ್ಟಾಡಿಸಿ ಬಿಟ್ಟಿತು. ಹೊರಗಡೆ ಬೈಲ ಕಡೆಗೆಂದು ಹೊಗಕ್ಕು ಆಗದೆ, ಮನೇಯಲ್ಲಿ ಮಲ ಮೂತ್ರ ಮಾಡಲು ಆಗದೆ ಅಲ್ಲೇ ಕುಳಿತು ಉಣ್ಣಲು ಆಗದೆ ಮಕ್ಕಳು ಮರಿಗಳಿಗೆ ಗಾಳಿಯಾಡದೆ ಒದ್ದಾಡಿ ಒದರುತ್ತ್ ರಂಪ ಮಾಡುತ ತಲೆ ಚಿಟ್ ಹಿಡಿಸಿದವು. ಇದನ್ನು ಯಾರಿಗೆ ಹೇಳಬೇಕು..ಹೇಗೆ ಹೇಳಬೇಕು..? ಯಾವ ಜನ್ಮದ ಕರ್ಮವೋ ಅಂತ ತಮ್ಮಷ್ಟಕ್ಕೆ ತಾವೇ ಶಪಿಸಿಕೊಳ್ಳತೊಡಗಿದರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…
ಛೇರ್ಮನ ಶಿವಪ್ಪನ ಪೋನಿಗೆ ಈಗಷ್ಟೇ ಶಂಕ್ರಯ್ಯ ಸ್ವಾಮಿಗಳು ಪೋನ ಮಾಡಿದ್ದರಂತೆ ತಾವು ಊರಿಗೆ ಈಗೀಂದ ಈಗ್ಲೇ ಬರತಿದಿನಿ..ತಡೀರಿ ಅಂತ ಹೇಳಿ ಪೊನ ಕಟ್ ಮಾಡಿದ್ದರು. ಇದನ್ನು ಶಿವಪ್ಪ ಅಂದಾನಪ್ಪನವರಿಗೆ ಹೇಳಿ ಸುಮ್ಮನಾದ. ಛೇರ್ಮನ ಶಿವಪ್ಪ ತನ್ನ ಬುಲೆಟ ಗಾಡಿಯೊಂದಿಗೆ ಊರಲ್ಲಿ ಧೈರ್ಯದಿಂದ ಬಂದೂಕ ಹಿಡಿದು ತಿರುಗಾಡುತ್ತಿದ್ದ. ಹುಲಿ ಎದುರಿಗೆ ಬಂದರೆ ಸುಟ್ಟ ಬಿಡಬೇಕು ಅಂತ. ಆದರೆ ಇವನಿಗಿದ್ದ ಧೈರ್ಯ ಭರಮ್ಯಾನಿಗೆ ಇರಲಿಲ್ಲ. ಅನಂತ ಆತಂಕಗಳ ಮಧ್ಯ ಇಳಿಹೊತ್ತಿನ ತನಕ ಜನ ಮನೆಯಲ್ಲಿಯೆ ನರಕಯಾತನೆ ಅನುಭವಿಸಿದರು.
000000000000
ಸಂಜೆ ಹುಲಿ ಸಿಕ್ಕಿತು. ಅದನ್ನು ಬಲೆ ಹಾಕಿ ಊರ ಅಗಸಿಯ ಮುಂದೆ ತಂದು ಹಾಕಿದ್ದರು ಪೋಲಿಷರು. ಇಡೀ ಉರಿನ ಜನವೆಲ್ಲ ಕಿತ್ತೇದ್ದು ನೋಡಲು ಅಗಸಿಗೆ ಜಮಾಯಿಸದರು. ಊರ ಗೌಡರು, ಛೇರ್ಮನ್ನರು, ಹಳಬ, ಶಂಕ್ರಯ್ಯಸ್ವಾಮಿಗಳು, ಅಂದಾನಪ್ಪ. ಹುಲಿಗೆವ್ವಗೊಳ ಸಾಂತಪ್ಪ. ಮಿಲ್ಟ್ರಿ ಮಹಾದೇವ ಸರ್ವ ಪಂಚಗಣ ಅಗಸಿ ಕಟ್ಟಿಮ್ಯಾಲ ಕುಳಿತು ಬಂದಂತ ಅರಣ್ಯ ಇಲಾಖೆಯವರು, ಪೋಲಿಷರು, ಗೋಕಾವಿಯ ಬೇಡರು ಹೀಗೆ ಇಡೀ ಊರು ಜನರಿಂದ ತುಂಬಿ ತುಳುಕುತಿತ್ತು. ಎಲ್ಲರಿಗು ಚಹಾ ಪರಾಳ ಮಾಡಿಸಿದ್ದರು ಛೇರ್ಮನರು. ಅವರಿಗೆ ಕುಶಾಲಿ ಕೊಡಬೇಕಾಗಿತ್ತು. ಬಗಲ ಕಿಸೆಯೊಳಗಿನಿಂದ ಮೂರ್ನಾಕ ಸಾವಿರ ಛೇರ್ಮನ ಶಿವಪ್ಪ, ಗೌಡರು ನಾಕ ಸಾವಿರ, ಹಳಬ ಎರಡ ಸಾವಿರ ರೂಪಾಯಿ ಮಿಲ್ಟ್ರೀ ಮಹಾದೇವ ಮೂರ ಸಾವಿರ ರೂಪಾಯಿ ಹಿಂಗ ಅಷ್ಟುರೆಲ್ಲ ದುಡ್ಡ ಗ್ವಾಳೆ ಮಾಡಿ ಪೋಲಿಷ ಇನ್ಸಪೆಕ್ಟರ ಕೈಗಿ ಇಟ್ಟು ಕೈ ಮುಗಿದರು. ಸೇರಿದ ಊರಿನ ಜನಗಳನ್ನು ಉದ್ದೇಶಿಸಿ ಛೇರ್ಮನ್ನರು ಎದ್ದು ನಿಂತು “ ಮಹಾಜನಗಳೇ ಯಾರು ಅಂಜಬ್ಯಾಡ್ರಿ.. ಹುಲಿ ಸಿಕ್ಕದ ನಾವೇಲ್ಲ ಪುರ್ನಜನ್ಮ ಪಡೆದಿವಿ..ನಾವು ನೀವೇಲ್ಲ ಪುಣ್ಯವಂತರು. ನಾವು ಮಾಡುವ ಕೆಲಸದಿಂದ ನಮ ಪುಣ್ಯ ಹೆಚ್ಚೇದ ಅದಕ ಕಾರಣ ಊರಾಗಿನ ದೇವರಂತ ಶಂಕ್ರಯ್ಯ ಸ್ವಾಮಿಗಳು, ಅಂದಾನಪ್ಪಗಳು ಗ್ರಾಮದೇವರು ಆಶೀರ್ವಾದ ಮತ್ತ ನಾವ ಮಾಡುವ ಪೂಜಿ ಪುನಸ್ಕಾರ, ದಾನ ಧರ್ಮ ಇವ ನಮ್ಮ ಊರಿನ ಜನರ ಪ್ರಾಣ ಕಾದಿದಾವ. ಈ ಹುಲಿ ಹಿಡಿಯುವ ತಾಕತ್ತು ನಮ್ಮ ಊರಾಗ ಯಾರಿಗಾದರು ಇತ್ತಾ..? ಇತ್ತಾ..? ಹೇಳ್ರಿ..? ಇಲ್ಲ ಬಾಗಲ ಹಾಕೊಂಡ ಸುಮ್ನ ಕುಳಿತ್ವಿ. ಅದನ ಹಿಡದವರು ಪೊಲಿಷರು, ಅವರಿಗೆ ಸಹಾಯ ಮಾಡಿದವರು ಅರಣ್ಯ ಇಲಾಖೆಯವರು, ಬೇಟೆಗಾರರು. ಅದಕ ಯಾರು ಯಾವ ಕೆಲಸ ಮಾಡಬೇಕೊ ಅದನ ಅವರೇ ಮಾಡಿದರ ಚಂದ ಇರತದ. ಅದಕೊಂದ ರಿವಾಜ ಇರತೈತಿ ಹೌದಿಲ್ಲ..? ತುಡುಗರು, ಲಫಂಗರು, ಮೋಸಗಾರರೆಲ್ಲ ಸಾಧುಗಳಾಗ್ತಿವಿ ಅಂತಾರ ಆಗ್ತಾರೇನು..? ಈ ಸಲದ ಶ್ರಾವಣ ಕಾರ್ಯಕ್ರಮಕ ಹಿಡಕೊಂಡಿದ್ದ ಗ್ರಹಣ ಬಿಟ್ತು. ಇನ್ನಮುಂದ ಇಂತ ಅಂದಾದುಂದಿ ಆಗುದುಲ್ಲ. ಊರು ಗೌಡರ ಹಿಡಿತದಾಗ ಅದ. ಈ ಸಲದ ಜಾತ್ರಿ ಜೋರ ಮಾಡೋಣ ಅಂತ ಹೇಳುತ ಪೋಲಿಷರೆಡೆಗೆ ತಿರಿಗಿ “ಸಾಹೇಬರ ನೀವು ಈ ಸಲದ ಜಾತ್ರಿಗಿ ಬರಬೇಕ್ರಿ..ʼʼ ಅಂತ ಕೇಳಿಕೊಂಡ.
ಖುಷಿಯಲ್ಲಿದ್ದ ಪೊಲಿಷ ಮುಗುಳ ನಗುತ ಒಪ್ಪಿಗೆ ಕೊಟ್ಟರು. ಸಭೆ ಮುಗಿದ ಮ್ಯಾಲ ಹುಲಿಯನ್ನು ಒಂದು ವ್ಯಾನಿನೊಳಗಡೆ ಹಾಕಲಾಯಿತು. ಗೌಡರ ಆಳುಗಳು, ಛೇರ್ಮನರ ಆಳು ಭರಿಮ್ಯಾ ಎಲ್ಲರು ಸೇರಿ ನಿಜಗುಣಿಯನ್ನು ಹಿಡಿದು ತಂದು ಪೊಲಿಷರಿಗೆ ಒಪ್ಪಿಸಿದರು. ಹುಲಿಯಿದ್ದ ವ್ಯಾನಿನೊಳಗ ನಿಜಗುಣಿಯನ್ನು ಕೂಡ್ರಿಸಿಕೊಂಡು ಪೊಲಿಷ ವ್ಯಾನಗಳು ಊರ ಹೊರಗಡೆ ಭರಾಟೆ ಓಟಕಿತ್ತವು. ಹೊತ್ತು ಪೂರ್ತಿ ಮುಳುಗಿತು. ಮೊಡ ಮುಸುಕಿದ್ದು ಕಾಣಲಿಲ್ಲ ಅಚಾನಕ್ ಆಗಿ ಸಣ್ಣಗೆ ಮಳೆ ಹುಯ್ಯಲಾರಂಭಿಸಿತು.. ಹುಲಿ ಬಂದಿದ್ದ ಪಂಚಲಿಂಗೆಶ್ವರ ಬೆಟ್ಟವನ್ನು ಆ ರಾತ್ರಿ ಮಳೆಯಲ್ಲಿ ಟಾರ್ಚ ಹಿಡಿದು ಛೇರ್ಮರು ದೃಷ್ಠಿ ಹಾಯಿಸಿ ನೊಡಿದರು ಎನೂ ಕಾಣಲಿಲ್ಲ…. ಮಳೆ ಜೋರಾಗಿಯೆ ಹಿಡಿತು.. ಹೊರಗಡೆ ಕತ್ತಲು ಇನ್ನು ಹೆಚ್ಚುತಲೆ ಇತ್ತು…ಅಷ್ಟೇ….
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ