:: ಭಾಗ್ಯರೇಖಾ ದೇಶಪಾಂಡೆ
ಮೇಲೆ ಹೋಗುವ ಗುಂಡಿ ಒತ್ತಿದರೂ ಕೆಳಗಿನಿಂದ ಮೂರನೆಯ ಮಹಡಿಗೆ ಲಿಫ್ಟ್ ಸರಸರನೆ ಬರಲಿಲ್ಲ! ಕೆಳಗಿನ ಮಹಡಿಯಲ್ಲಿ ಹೊರಹೋಗುವವರು ಹೋದರೂ ಒಳಬರುವವರಲ್ಲಿ ಒಂದು ಸಣ್ಣ ಗದ್ದಲವೇ
ನಡೆದಿತ್ತು! ಒಂದೇ ಕುಟುಂಬದ ಏಳು ಜನ ಒಮ್ಮೆಲೇ ಒಳಹೊಕ್ಕಲು ಪ್ರಯತ್ನ ನಡೆಸಿದ್ದರು ಆದರೆ ಅದು ಲಿಫ್ಟ್‍ನ ಸಾಮಥ್ರ್ಯ ಮೀರಿದ್ದ ಕಾರಣ ಆಪರೇಟರ್ ಆ ಕುಟುಂಬದ ಮೂರು ಜನ ಯುವಕರಿಗೆ ಮುಂದಿನ ಸರತಿಗೆ ಕಾಯಲು ಅಥವಾ ಮೆಟ್ಟಿಲನ್ನು ಉಪಯೋಗಿಸಲು ಹೇಳಿದ್ದೇ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಒಳಹೊಕ್ಕಿದ್ದವರು ಹಾಳಾಗುತ್ತಿದ್ದ ತಮ್ಮ ಸಮಯಕ್ಕೆ ಕುಟುಂಬದವರ ಮೇಲೆ ರೇಗಾಡಿ ಒಂದೆರಡು ಅವಾಚ್ಯ ಶಬ್ದಗಳನ್ನೂ ಉದುರಿಸಿದ್ದರು. ಸಣ್ಣದಾಗಿ ಆರಂಭಗೊಂಡಿದ್ದ ವಾಕ್ಕಲಹ ಬಲಪ್ರಯೋಗಕ್ಕೆ ತಿರುಗುವ ಎಲ್ಲ ಸಾಧ್ಯತೆಗಳು ಕಂಡುಬಂದಿತು. ಒಂದಿಬ್ಬರು ಹೆಂಗಸರು ಹೆದರಿ ಹೊರನಡೆದು ಚದುರಲು ಇಚ್ಛಿಸದ ಒಗ್ಗಟ್ಟಿನ ಕುಟುಂಬಕ್ಕೆ ದಾರಿಮಾಡಿಕೊಟ್ಟು ಮೆಟ್ಟಿಲುಗಳತ್ತ ಸಾಗಿದರು.
ಮೂರನೆಯ ಮಹಡಿಯಲ್ಲಿ ಲಿಫ್ಟ್‍ಗಾಗಿ ಕಾಯುತ್ತಿದ್ದ ಗಾಯತ್ರಿ ಅವರು ಈ ಬಾರಿಯೂ ಅದು ನಿಲ್ಲದೆ ಮೇಲೆ ಚಲಿಸುವುದನ್ನು ಅದು ಕಣ್ಮರೆಯಾಗುವ ತನಕ ಗೋಣು ಎತ್ತರಿಸಿ ನೋಡಿದರು. ಅದರ ಗಾಜಿನ
ಬಾಗಿಲಿನ ಮೂಲಕ ಒಳಗೆ ತುಂಬಿದ್ದ ಜನರನ್ನೂ ಕಣ್ತುಂಬಿಕೊಂಡರು. ಎಲ್ಲರೂ ಅಪರಿಚಿತರು. ತಮಗೆ ಅವರು, ಅವರಿಗೆ ತಾವು. ಇಲ್ಲಿಯೇ ನಿಂತು ಕಾಯಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿಯೇ ಕೆಲ ಹೊತ್ತು ಕಳೆದರು. ಮತ್ತೆ ಅದು ಕೆಳಗೆ ಬರುವಾಗ ತಾವಿದ್ದಲ್ಲಿ ನಿಲ್ಲದೆ ಕೆಳಗಿನ ಮಹಡಿಗೆ ಹೋದದ್ದನ್ನು ನೋಡಿ ಆ ದೊಡ್ಡ ಮಾಲ್‍ನ ಅದೇ ಮಹಡಿಯಲ್ಲಿ ನಡೆದಾಡಲು ಮನಸ್ಸು ಮಾಡಿ ಲಿಫ್ಟ್‌ಗೆ ಬೆನ್ನು ತೋರಿಸಿದರು.
ಮೊದಲಿನ ಹಾಗೆ ರಸ್ತೆಯ ಮೂಲೆಯಲ್ಲಿದ್ದ ಸಣ್ಣ ಕಿರಾಣಿ ಅಂಗಡಿಗೆ ಹೋಗಿ ಸಾಮಾನಿನ ಪಟ್ಟಿ ಕೊಟ್ಟು ತಿಂಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಖರೀದಿ ಮಾಡುವ ಕ್ರಮ ಇತ್ತೀಚೆಗೆ ಬದಲಾಗಿತ್ತು. ಈಗ ಪ್ರತಿದಿನವೂ ಶಾಪಿಂಗ್ ಮಾಡುವ ಹುಚ್ಚನ್ನು ಜನರು ಹೆಚ್ಚಿಸಿಕೊಂಡಿರುವುದು ಆ ಮಹಡಿಯ ಅಂಗಡಿಗಳಲ್ಲಿದ್ದ ಜನರ ಹಿಂಡು ಮತ್ತು ಅವರ ಕೈಗಳಲ್ಲಿದ್ದ ಚೀಲಗಳು ಸಾರಿಹೇಳುತ್ತಿದ್ದವು. ಝಗಮಗಿಸುವ ದೀಪಗಳಿಂದ ಬೆಳಗುತ್ತಿದ್ದ ದೊಡ್ಡ ಬಟ್ಟೆ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಎಲ್ಲ ಮನುಷ್ಯಾಕೃತಿಯ ಗೊಂಬೆಗಳು ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದವು. ತುಂಡು ಬಟ್ಟೆ, ಜಿಮ್ ಬಟ್ಟೆ, ಸ್ವಿಮ್ಮಿಂಗ್ ಬಟ್ಟೆ, ಪಾರ್ಟಿ ಬಟ್ಟೆ, ಹಬ್ಬದ ಬಟ್ಟೆ, ಮಕ್ಕಳ ಬಟ್ಟೆ, ಕೆಲಸದ ಬಟ್ಟೆ, ಮನೆಯ ಬಟ್ಟೆ… ಹೀಗೆ ವಿವಿಧ ಬಗೆಯ ಉಡುಪುಗಳು ಕಣ್ಸೆಳೆಯುತ್ತಿದ್ದವು. ಬಟ್ಟೆಗಳನ್ನು ಕೊಳ್ಳದೆ ಕೇವಲ ಅವುಗಳನ್ನು ನೋಡಿಹೋಗಲು ಕೆಲವರು ಬಂದಂತಿತ್ತು. ಕೆಲ ಕಾಲೇಜು ಗೆಳತಿಯರು ಒಂದಿಷ್ಟು ಉಡುಪುಗಳನ್ನು ಆರಿಸಿ ಅಂಗಡಿಯಲ್ಲಿದ್ದ ಟ್ರಯಲ್ ರೂಮಿನಲ್ಲಿ ಅವುಗಳನ್ನು ತೊಟ್ಟು ಕನ್ನಡಿಯ ಮುಂದೆ ಒಂದಿಷ್ಟು ಸೆಲ್ಫೀ ಕ್ಲಿಕ್ಕಿಸಿಕೊಂಡು ಮತ್ತೆ ಆ ಬಟ್ಟೆಗಳನ್ನು ತೆಗೆದಿಡುತ್ತಿದ್ದರು!
ನಡೆದಾಡಲು ಓಡಲು ವ್ಯಾಯಾಮಕ್ಕೆಂದು ದಿನಬಳಕೆಗೆ ಮತ್ತು ಪಾರ್ಟಿವೇರ್ ಎಂದೇ ವಿಂಗಡಿಸಿ ಇಟ್ಟಿದ್ದ ಹಲವು ಬಗೆಯ ಚಪ್ಪಲಿಗಳುಳ್ಳ ಅಂಗಡಿಗಳೂ ಇದ್ದವು. ಆ ಅಂಗಡಿಯಲ್ಲಿ ಇದೀಗ ಪ್ರೇಮಪಾಶಕ್ಕೆ ಬಿದ್ದಂತೆ ಕಾಣುತ್ತಿದ್ದ ಯುವಕನೋರ್ವ ತಾನೇ ಚಪ್ಪಲಿಯನ್ನು ಅವನ ಪ್ರಿಯತಮೆಗೆ ತೊಡಿಸುತ್ತ ಆಕೆಗಾಗಿ ಅವನು ಆಕೆಯ ಕೈ ಮಾತ್ರ ಅಲ್ಲ ಕಾಲನ್ನು ಹಿಡಿಯಲೂ ಸಿದ್ಧ ಎಂದು ಸಾಬೀತು ಮಾಡುತ್ತಿರುವಂತೆ ತೋರಿತು!
ನಾಜೂಕಾದ ಗಾಜಿನ ತೂಗುದೀಪಗಳು, ಮರದ ಪೀಠೋಪಕರಣಗಳು, ಪುಸ್ತಕಗಳು, ವ್ಯಾಯಾಮದ ಸಲಕರಣೆಗಳ ಅಂಗಡಿಗಳು ಇದ್ದರೂ ಅಲ್ಲಿ ಹೆಚ್ಚಿನ ಗ್ರಾಹಕರಿರದೆ ಉಸಿರಾಟಕ್ಕೆ ಅವಕಾಶವಿರುವಷ್ಟು ಜಾಗವಿತ್ತು.
ಅದಕ್ಕೆ ವಿರುದ್ಧ ಎಂಬಂತೆ ಕಾಫಿ ಅಂಗಡಿಯಲ್ಲಿ ಗಿಚ್ಚು ಹೆಚ್ಚಾಗಿತ್ತು! ಒಂದು ಕಪ್ ಕಾಫಿಯಿಂದ ಏನು ಬೇಕಾದರೂ ಆಗಬಹುದು ಎನ್ನುವ ಸಿದ್ಧಾಂತ ಹೊಂದಿದ್ದ ಆ ಅಂಗಡಿಯಲ್ಲಿ ಎಲ್ಲ ವಯೋಮಾನದವರು ಕಂಡುಬಂದರೂ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿತ್ತು. ಹೊಸದಾಗಿ ಪರಿಚಯ ಆದವರು, ಸ್ನೇಹಿತರು, ಪ್ರೇಮಿಗಳು, ಕೆಲಸದ ನಿಮಿತ್ತ ಬಂದವರು ಎಲ್ಲರಿಗೂ ಇದೊಂದು ಭೇಟಿಯ ತಾಣವಾಗಿ ಪರಿಣಮಿಸಿತ್ತು. ಅಲ್ಲಿ ಸಿಗುವ ದುಬಾರಿ ಕಾಫಿಗಿಂತ ಹೆಚ್ಚಾಗಿ ಆರಾಮಾಗಿ ಗಂಟೆಗಟ್ಟಲೆ ಹರಟಲು ಮತ್ತು ಏಕಾಂತದಲ್ಲಿ ಮನಸ್ಸಿನ ಮಾತನ್ನು ಆಡಲು ಈ ಜಾಗ ಲಭ್ಯವಿದ್ದದ್ದೆ ಅಲ್ಲಿನ ವ್ಯಾಪಾರಕ್ಕೆ ಮುಖ್ಯ ಕಾರಣ ಎಂದು ತೋರುತ್ತಿತ್ತು!
ಗಾಯತ್ರಿ ಅವರಿಗೆ ಕಿರಾಣಿ ಸಾಮಾನುಗಳಲ್ಲಿದ್ದ ಆಕರ್ಷಣೆ ಉಳಿದ ಸಾಮಾನುಗಳಲ್ಲಿ ಇರಲಿಲ್ಲ. ಈ ವಾರದ ವಿಶೇಷ ರಿಯಾಯತಿಯ ಮಾಹಿತಿಯನ್ನುಳ್ಳ ಸೆಲೆಬ್ರಿಟಿ ಚಿತ್ರದ ಪೋಸ್ಟರ್ ಅದೇ ಮಹಡಿಯಲ್ಲಿದ್ದ
ಸೂಪರ್‍ಮಾರ್ಕೆಟ್ ಅಂಗಡಿಯ ಮುಂದೆ ರಾರಾಜಿಸುತ್ತಿತ್ತು. ಅದೂ ಅವರ ನೆಚ್ಚಿನ ಅಮಿತಾಭ್ ಬಚ್ಚನ್ ತಮ್ಮ ಮುಗ್ಧ ನಗುವಿನೊಂದಿಗೆ ಜಾಹೀರಾತಿನಲ್ಲಿ ಕೊಡುಗೆಯ ಬಗ್ಗೆ ಮಾಹಿತಿ ನೀಡುವ ಚಿತ್ರವಿದ್ದರೆ ಅವರ ಕಾಲು ಆ ಅಂಗಡಿಯೊಳಗೆ ಹೋಗುವುದು ಸಹಜವೇ ಸರಿ. ಆದರೂ ಹೋಗುವ ಮುನ್ನ ಮತ್ತೊಮ್ಮೆ ಲಿಫ್ಟ್‍ನತ್ತ ಅವರು ತಿರುಗಿ ನೋಡಿದರು, ಅದು ಮತ್ತೊಂದಿಷ್ಟು ಜನರನ್ನು ತುಂಬಿಕೊಂಡು ಇಳಿಯುತ್ತಿತ್ತು!
ಉದ್ದ ನಡೆದಷ್ಟೂ ಅಂಗಡಿ ಬೆಳೆಯುತ್ತಲೇ ಇದೆಯೇನೋ ಎನ್ನುವಂತೆ ವಿಶಾಲವಾದ ಜಾಗದಲ್ಲಿ ಸೂಪರ್‍ಮಾರ್ಕೆಟ್ ವಹಿವಾಟನ್ನು ನಡೆಸುತ್ತಿತ್ತು. ತಿಂಡಿ ತಿನಿಸುಗಳು, ಧಾನ್ಯಗಳು, ತರಕಾರಿ ಹಣ್ಣುಗಳು,
ದಿನಬಳಕೆಯ ವಸ್ತುಗಳು, ಡೈರಿ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ಪೂಜಾ ಸಾಮಗ್ರಿಗಳು, ಬಟ್ಟೆ ಚಪ್ಪಲಿಗಳು, ಮಕ್ಕಳ ವಸ್ತುಗಳು… ಹೀಗೆ ಪದಾರ್ಥಗಳ ಬಗೆಯ ಆಧಾರದ ಮೇಲೆ ಪ್ರತ್ಯೇಕ ಜಾಗವೇ ಅಲ್ಲಿ ಅವುಗಳಿಗೆ ಮೀಸಲಿತ್ತು. ಗಾಯತ್ರಿ ಸುತ್ತಲೂ ಕಣ್ಣಾಡಿಸುತ್ತ ಒಂದೊಂದೇ ವಿಭಾಗವನ್ನು ಗಮನಿಸುತ್ತ ಹೊರಟರು…
ಒಂದು ಜಾಗ ಥರೇವಾರಿ ಬಿಸ್ಕತ್ತು ಸಿಹಿ ಪದಾರ್ಥಗಳು ಮತ್ತು ತಿಂಡಿ ತಿನಿಸುಗಳಿಗಾಗಿ ಮೀಸಲಿತ್ತು. ತಮಗೆ ಗೊತ್ತಿರುವ ಒಂದೆರಡು ಬಿಸ್ಕತ್ತುಗಳ ಜೊತೆಗೆ ಇನ್ನೂ ಅನೇಕ ಬಗೆಯ ಬಿಸ್ಕತ್ತುಗಳ ಜೋಡಣೆ ನೋಡಿ ಗಾಯತ್ರಿ ಅಚ್ಚರಿಪಟ್ಟರು. ಇಷ್ಟೆಲ್ಲ ಹೊಸ ಹೆಸರಿನ ಬಿಸ್ಕತ್ತುಗಳು ಯಾವಾಗ ಮಾರುಕಟ್ಟೆಗೆ ಬಂದವೋ ಎಂದುಕೊಳ್ಳುತ್ತ ತಮ್ಮ ನೆಚ್ಚಿನ ಬಿಸ್ಕತ್ತಿನ ದೊಡ್ಡ ಫ್ಯಾಮಿಲಿ ಪ್ಯಾಕ್ ನೋಡಿ ಖುಷಿಪಟ್ಟರು. ಈ ಒಂದು ಪೊಟ್ಟಣ ಕೊಂಡರೆ ಮನೆಯವರೆಲ್ಲ ತಿನ್ನಬಹುದೆಂದು ಲೆಕ್ಕ ಹಾಕಿದರು. ಇದೇ ಬಿಸ್ಕತ್ತನ್ನು ಅವರ ತಂದೆ ಆಫೀಸಿನಿಂದ ಮನೆಗೆ ಬರುವಾಗ ತರುತ್ತಿದ್ದರು. ತಂದೆಯ ಜೊತೆ ಬಿಸ್ಕತ್ತನ್ನು ಚಹಾದಲ್ಲಿ ಎದ್ದಿ ತಿನ್ನುತ್ತ ಹರಟುತ್ತಿದ್ದ ಗಳಿಗೆಗಳು ಗಾಯತ್ರಿ ಅವರಿಗೆ ಅಚ್ಚುಮೆಚ್ಚು. ತಮ್ಮ ಮನೆಯ ಮಾವಿನ ಮರದ ಕೆಳಗೆ ಆರಾಮ ಕುರ್ಚಿಯಲ್ಲಿ ಕೂರುತ್ತಿದ್ದ ತಂದೆ ಚಹಾ ಕುಡಿಯುವಾಗ ಅದೆಷ್ಟು ವಿಷಯಗಳನ್ನು ಹೇಳುತ್ತಿದ್ದರು, ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಮಧ್ಯೆ ತಾವು ಹೂಂ ಎನ್ನದಿದ್ದರೆ ಸಣ್ಣದಾಗಿ ಗದರುತ್ತಿದ್ದರು. ಈ ಬಿಸ್ಕತ್ತುಗಳು ತಮ್ಮ ಜೀವನದ ಭಾಗವೇನೋ ಎನ್ನುವಂತೆ ಒಂದು ದೊಡ್ಡ ಪೊಟ್ಟಣವನ್ನು ಕೈಯಲ್ಲಿ ಹಿಡಿದರು. ಅಷ್ಟರಲ್ಲಿ ಸಮವಸ್ತ್ರ ಧರಿಸಿದ್ದ ಆ ಅಂಗಡಿಯ ಸಹಾಯಕಿಯೋರ್ವಳು ಲೋಹದ ಗಾಲಿಬುಟ್ಟಿಯೊಂದನ್ನು ದೂಡುತ್ತ ಅವರ ಮುಂದೆ ತಂದಿಟ್ಟು `ಟ್ರಾಲಿ ಮ್ಯಾಮ್’ ಎಂದಳು. ಅವರಿಗೆ ಅದು ಬೇಕಿತ್ತೋ ಇಲ್ಲವೋ ಅಂತೂ ಅದನ್ನು ಅವಳಿಂದ ಪಡೆದು ಅದರಲ್ಲಿ ಬಿಸ್ಕತ್ತನ್ನು ಹಾಕಿದರು, ತಂದೆಯೊಂದಿಗಿನ ಮಾತುಕತೆಯ ಸಮಯವನ್ನು ಕಾಯ್ದಿರಿಸಿಕೊಳ್ಳುವಂತೆ!
ಗಾಲಿಬುಟ್ಟಿಯ ಚಕ್ರಗಳು ನಡೆಸಿದತ್ತ ಹೋಗುತ್ತಿದ್ದ ಗಾಯತ್ರಿ ಅವರ ಕಣ್ಣಿಗೆ ಈಳಿಗೆ ಮಣೆಗಳು ಕಂಡಾಗ ಅದರ ಮೇಲೆ ಕುಳಿತು ಕಾಯಿ ತುರಿಯುತ್ತಿದ್ದ ಅಮ್ಮ ಕಣ್ಮುಂದೆ ಬಂದಳು. ಅಪ್ಪ ತೆಂಗಿನಕಾಯಿ ಒಡೆದರೆ ಅಮ್ಮ ಕಾಯಿ ತುರಿಯುತ್ತಿದ್ದಳು. ಕೊಬ್ಬರಿ ಇಲ್ಲದ ಅಡಿಗೆ ಅವರಿಗೆ ರುಚಿಸದು. ಈಳಿಗೆಯ ತುದಿಗೆ ಕಾಯಿ ಹತ್ತಿದಾಗ ಆಗುತ್ತಿದ್ದ ಸದ್ದು, ವೇಗವಾಗಿ ಅಮ್ಮ ಕಾಯಿ ತುರಿದಾಗ ಕೆಳಗಿಡುತ್ತಿದ್ದ ತಟ್ಟೆಯಲ್ಲಿ ಬೀಳುತ್ತಿದ್ದ ಬಿಳಿ ಬಣ್ಣದ ಹಸಿ ಕೊಬ್ಬರಿ, ಅಮ್ಮನ ವಿಶೇಷ ಕೂಟಿನ ಜೊತೆಗೆ ಕೆಲವೊಮ್ಮೆ ಕೊಬ್ಬರಿಯಿಂದ ತಯಾರಾಗುತ್ತಿದ್ದ ರುಚಿಕರ ಮಿಠಾಯಿಯ ನೆನಪಾಗಿ ಬಾಯಿಯಲ್ಲಿ ನೀರೂರಿತು. ಎಷ್ಟೋ ದಿನಗಳಿಂದ ಈಳಿಗೆಮಣೆಯ ಹರಿತ ಕಡಿಮೆ ಆಗಿದೆ ಎಂದು ಅಮ್ಮ ಹೇಳುತ್ತಿದ್ದದ್ದು ನೆನಪಾಯಿತು. ಅದನ್ನು ಹರಿತ ಮಾಡುವವರು ಇತ್ತೀಚೆಗೆ ಮನೆಯ ಮುಂದೆಯೂ ಬಂದಿರಲಿಲ್ಲ. ಅಂತೂ ಗಾಯತ್ರಿ ಅವರ ಗಾಲಿಬುಟ್ಟಿಯಲ್ಲಿ ಒಂದು ಈಳಿಗೆ ಮಣೆಯೂ ಸೇರಿತು.
ಪುಸ್ತಕ ಪೆನ್ನುಗಳ ರಾಶಿ ಅಂಗಡಿಯಲ್ಲಿ ಒಂದೆಡೆಗೆ ಜಾಗ ಪಡೆದಿದ್ದವು. ಮಕ್ಕಳಿಗಾಗಿ ಬಣ್ಣಬಣ್ಣದ ಚಿತ್ರಗಳಿದ್ದ ಕಥೆಯ ಪುಸ್ತಕಗಳೂ ಸಾಕಷ್ಟಿದ್ದವು. ಅಲ್ಲಿಯೇ ಚಿಕ್ಕ ದೊಡ್ಡ ಕಾರುಗಳು ಲಾರಿ ಟ್ರಕ್ಕು ವಿಮಾನುಗಳು ರೊಬೋಟುಗಳು ರಿಮೋಟ್ ಕಂಟ್ರೋಲ್ಡ್ ಡ್ರೋನುಗಳನ್ನು ಹೊಂದಿಸಿಡಲಾಗಿತ್ತು. ವಿವಿಧ ಆಕಾರ ಆಕೃತಿಗಳಲ್ಲಿ ಜೋಡಿಸುವ ಬ್ಲಾಕ್‍ಗಳು, ಪ್ರಶ್ನೋತ್ತರಗಳ ಆಟಗಳು, ಆಧುನಿಕ ಸ್ಲೇಟುಗಳು, ಗೊಂಬೆಗಳು ಎಲ್ಲವೂ ಇದ್ದವು. ಮಕ್ಕಳು ಆ ಜಾಗಕ್ಕೆ ಬಂದರೆ ಸಾಕು ಅವರು ಏನನ್ನಾದರೂ ಖರೀದಿಸದೆ ಹಿಂತಿರುಗುವ ಸಾಧ್ಯತೆಯೇ ಇರಲಿಲ್ಲ. ಓದುವ ಮಕ್ಕಳಿಗೆ ಇಷ್ಟೆಲ್ಲ ಸಲಕರಣೆಗಳು ಯಾವಾಗ ಎಲ್ಲಿಂದ ಬಂದವು ಎಂಬ ಕುತೂಹಲ ಗಾಯತ್ರಿ ಅವರಿಗೆ ಆಗಿತ್ತು. ಕೆಲವು ಆಟಿಕೆಗಳನ್ನು ಹೇಗೆ ಉಪಯೋಗಿಸಬೇಕೋ ಎಂಬುದನ್ನೇ ತಿಳಿಯದಾದರು. ಅಷ್ಟೆಲ್ಲ ಸಾಮಾನುಗಳ ಮಧ್ಯೆ ಹಿಂದೆ ರಬ್ಬರ್ ಜೋಡಿಸಿದ್ದ ಹತ್ತು ಪೆನ್ಸಿಲ್ಲುಗಳ ಒಂದು ಡಬ್ಬಿ ಮಾತ್ರ ಅವರಿಗೆ ಆಕರ್ಷಕವಾಗಿ ಕಂಡಿತು. ತಮ್ಮನ ಚಿತ್ರಕಲೆಗೆ ಇಂತಹದ್ದೇ ಪೆನ್ಸಿಲ್ಲುಗಳು ಬೇಕಿತ್ತು. ಅವನು ತನಗೆ ತೋಚಿದ್ದನ್ನು ಚಿತ್ರ ಬಿಡಿಸುತ್ತ ನಡುನಡುವೆ ಪೆನ್ಸಿಲ್ಲಿನ ಹಿಂಭಾಗದಲ್ಲಿದ್ದ ರಬ್ಬರಿನಿಂದ ಅಳಿಸುತ್ತ ಆ ರಬ್ಬರಿನ ಚೂರುಗಳನ್ನು ಹಾಳೆಯ ಮೇಲಿಂದ ಉಫ್ ಎಂದು ಊದುತ್ತ ಸಾಕಷ್ಟು ಸಮಯ ಕಳೆಯುತ್ತಿದ್ದ. ಚಿತ್ರಗಳನ್ನು ಬಿಡಿಸದೆ ಕೇವಲ ಓದುವುದೆಂದರೆ ಅವನಿಗೆ ಆಗದ ಕೆಲಸ, ಅವನ ಚಿತ್ರದ ಹಾಳೆಗಳು ಮರೆಯಾದರೋ ಅಪ್ಪಿತಪ್ಪಿ ತುದಿ ಒಂದಿಷ್ಟು ಹರಿದರೆ ಅವನು ಅಳುತ್ತ ಕೂರುತ್ತಿದ್ದ! ಪೆನ್ಸಿಲ್ಲಿನ ಡಬ್ಬಿಯ ಜೊತೆಗೆ ಒಂದು ಕಟ್ಟು ಹಾಳೆಗಳನ್ನೂ ಸೇರಿಸಿಕೊಂಡು ಗಾಯತ್ರಿ ಮುನ್ನಡೆದರು.
ವಿವಿಧ ಗಾತ್ರದ ದೊಡ್ಡ ಪರದೆಗಳನ್ನುಳ್ಳ ಅನೇಕ ಟಿ.ವಿ.ಗಳನ್ನು ಒಂದು ಗೋಡೆಯ ತುಂಬ ನೇತುಹಾಕಿದ್ದರು. ಅವುಗಳೆಲ್ಲ ಹುಲಿ ಸಿಂಹ ಚಿರತೆಗಳ ಬಗ್ಗೆ ಮಾಡಿದ್ದ ಕಾರ್ಯಕ್ರಮವನ್ನು ಒಟ್ಟಿಗೇ ಪ್ರಸಾರ ಮಾಡುತ್ತಿದ್ದವು. ಅದರ ಮುಂದೆ ಒಂದೆರಡು ಕುರ್ಚಿಗಳು ಇದ್ದವು. ಒಂದರ ಮೇಲೆ ಪುಟ್ಟ ಹುಡುಗಿ ಒಬ್ಬಳು ಕುಳಿತಿದ್ದಳು. ಪಕ್ಕದಲ್ಲಿ ಖಾಲಿ ಇದ್ದ ಕುರ್ಚಿಯ ಮೇಲೆ ಗಾಯತ್ರಿ ಅವರು ಆಸೀನರಾದರು. ಪಕ್ಕದಲ್ಲಿದ್ದ ಹುಡುಗಿ ಟಿ.ವಿ.ಯಲ್ಲಿ ಆನೆಗಳ ಹಿಂಡು ನೀರಿನಲ್ಲಿ ಆಡುವುದನ್ನು ಕಂಡು ಚಪ್ಪಾಳೆ ತಟ್ಟುತ್ತಿದ್ದಳು. ಗಾಯತ್ರಿ ಅವರೂ ತಲ್ಲೀನರಾಗಿ ಅದನ್ನು ವೀಕ್ಷಿಸುತ್ತ ಕುಳಿತುಬಿಟ್ಟರು!
ಒಂದೆರಡು ಗಂಟೆ ಕಳೆದು ವನ್ಯಜೀವಿಗಳ ಕುರಿತಾದ ಆ ಕಾರ್ಯಕ್ರಮ ಮುಗಿದು ಜಾಹೀರಾತು ಪ್ರಸಾರವಾಗತೊಡಗಿದಾಗ ಪಕ್ಕಕ್ಕೆ ನೋಡಿದರು, ಪುಟ್ಟ ಹುಡುಗಿ ಈಗ ಅಲ್ಲಿರಲಿಲ್ಲ, ಆಕೆ ಅದು ಯಾವ ಸಮಯ
ಅಲ್ಲಿಂದ ಎದ್ದುಹೋದಳೋ ಅವರಿಗೆ ತಿಳಿದಿಲ್ಲ. ಈಗ ಆ ಕುರ್ಚಿಯ ಮೇಲೆ ಒಬ್ಬ ಗಂಡಸು ಮೊಬೈಲಿನಲ್ಲಿ ಜೋರು ದನಿಯಲ್ಲಿ ಮಾತನಾಡುತ್ತ ಕುಳಿತಿದ್ದ. ಗಾಯತ್ರಿ ಎದ್ದು ನಿಂತು ಸರಸರನೆ ಹೊರಟರು, ಆದರೆ, ಮೊದಲು ಗಾಲಿಬುಟ್ಟಿಯನ್ನು ತಂದಿದ್ದ ಅಂಗಡಿಯ ಸಹಾಯಕಿ ಈಗ ಮತ್ತೆ ಪ್ರತ್ಯಕ್ಷವಾಗಿ ಅವರ ಹಿಂದಿದ್ದ ಗಾಲಿಬುಟ್ಟಿಯನ್ನು ಅವರ ಕೈ ಸೇರಿಸಿದಳು! ಬಿಲ್ಲಿಂಗ್ ಕೌಂಟರ್ ಯಾವ ಕಡೆಗೆ ಇದೆ ಎಂಬುದನ್ನೂ ಬೆರಳು ಮಾಡಿ ತೋರಿಸಿದಳು! ಗಾಯತ್ರಿ ಅವರು ಆಕೆಯ ಸೂಚನೆಯಂತೆ ಗಾಲಿಬುಟ್ಟಿಯನ್ನು ದೂಡುತ್ತ ಹೊರಟರು.
ಬಿಲ್ಲಿಂಗ್ ಕೌಂಟರ್ ಹಾದಿಯಲ್ಲಿದ್ದ ಶೆಲ್ಫ್‍ನಿಂದ ಕೊಬ್ಬರಿ ಎಣ್ಣೆಯ ಬಾಟಲಿಯೊಂದನ್ನು ಹಾಕಿಕೊಂಡು ಸಾಲಿನಲ್ಲಿ ನಿಂತರು. ತಮ್ಮ ತಂಗಿಯ ತಲೆಯ ಸ್ನಾನಕ್ಕೆ ಕೊಬ್ಬರಿ ಎಣ್ಣೆ ಬೇಕಿತ್ತು. ಅವರಿಬ್ಬರು ವಾರಕ್ಕೊಮ್ಮೆ ಒಬ್ಬರ ಕೂದಲಿಗೆ ಮತ್ತೊಬ್ಬರು ಎಣ್ಣೆ ಹಚ್ಚುತ್ತ ಹರಟೆ ಹೊಡೆಯುತ್ತಿದ್ದರು. ಕೆಲವೊಮ್ಮೆ ಅಮ್ಮ ಎಣ್ಣೆಯನ್ನು ಬಿಸಿ ಮಾಡಿ ಕೊಡುತ್ತಿದ್ದರು. ಆಗೆಲ್ಲ ಮುಖ ಕೈ ಕಾಲುಗಳಿಗೂ ಎಣ್ಣೆಯ ಲೇಪನವಾಗುತ್ತಿತ್ತು. ಬಿಸಿಮಾಡಿದ ಕೊಬ್ಬರಿ ಎಣ್ಣೆಯ ಪರಿಮಳ ತಂಗಿಗೆ ಬಹಳ ಹಿಡಿಸುತ್ತಿತ್ತು.
ಐದು ಹತ್ತು ನಿಮಿಷ ಕಳೆದರೂ ಬಿಲ್ಲಿಂಗ್ ಕೌಂಟರಿನ ಸಾಲು ಇದ್ದ ಹಾಗೇ ಇತ್ತು! ಹಣ ಪಾವತಿಗಾಗಿಯೇ ಇದ್ದ ಹಲವು ಕೌಂಟರ್‍ಗಳ ಮುಂದೆ ಅನೇಕ ಜನರ ಸಾಲುಗಳಿದ್ದವು. ಕೆಲವರು ಕುಟುಂಬಸಮೇತರಾಗಿ ಮಾತನಾಡುತ್ತ ನಿಂತಿದ್ದರು. ಕೆಲವರು ಜೊತೆಗೆ ಬಂದವರನ್ನು ಒಂದೆಡೆಗೆ ನಿಲ್ಲಿಸಿ ಒಬ್ಬರೇ ಸಾಲಿನಲ್ಲಿ ನಿಂತಿದ್ದರು. ಈ ದಿನ ಈ ಸಮಯದಲ್ಲಿ ಎಷ್ಟು ಜನ ಸಾಮಾನು ಖರೀದಿ ಮಾಡಿದ್ದಾರೆ ಎಂಬುದಕ್ಕೆ ಈ ಸಾಲುಗಳೇ ಸಾಕ್ಷಿ ಆದಂತಿದ್ದವು! ಕೆಲವರ ಸಾಮಾನಿನ ಬುಟ್ಟಿಗಳು ತುಂಬಿ ತುಳುಕುತ್ತ ಸಾಮಾನುಗಳು ಉದುರಿ ಬೀಳಬಹುದೇನೋ ಎನ್ನುವಂತಿತ್ತು! ಸಾಕಷ್ಟು ಜನ ಮೊಬೈಲಿನ ಮೂಲಕ ಇಲ್ಲವೇ ತಮ್ಮ ಬ್ಯಾಂಕಿನ ಕಾರ್ಡಿನ ಮೂಲಕವೇ ಹಣ ಪಾವತಿಸುತ್ತಿದ್ದರು. ಒಂದಿಬ್ಬರು ಹಣ ಕೊಟ್ಟು ಚಿಲ್ಲರೆ ಸಿಗದೆ ಅದಕ್ಕಾಗಿಯೇ ನಿಮಿಷಗಟ್ಟಲೇ ಕೌಂಟರಿನ ಮುಂದೆ ನಿಂತುಬಿಟ್ಟಿದ್ದರು. ಬಿಲ್ ಮಾಡುತ್ತಿದ್ದವರು `ಕ್ಷಮಿಸಿ, ನಮ್ಮ ಬಳಿ ಚಿಲ್ಲರೆ ಇಲ್ಲ, ಕಾರ್ಡ್ ಪೇಮೆಂಟ್ ಅಥವಾ ಕ್ಯೂಆರ್ ಸ್ಕ್ಯಾನ್ ಮಾಡಿ ಯುಪಿಐ ಪೇಮೆಂಟ್ ಮಾಡಿಬಿಡಿ ಪ್ಲೀಜ್’ ಎಂದು ವಿನಂತಿಸಿಕೊಳ್ಳುತ್ತಿದ್ದರು. ಆದರೆ ಹಣವನ್ನೇ ಕೊಡುತ್ತೇವೆ ಎನ್ನುವವರು ಇಷ್ಟು ವ್ಯಾಪಾರ ವಹಿವಾಟು ಇರುವವರು ಐನೂರಕ್ಕೆ ಎರಡು ಸಾವಿರಕ್ಕೆ ಚಿಲ್ಲರೆ ಇಟ್ಟುಕೊಂಡಿಲ್ಲವೇ ಎಂದು ಪ್ರಶ್ನಿಸುತ್ತಿದ್ದರು!
ಅಷ್ಟು ಕೌಂಟರ್‌ಗಳು, ಡಿಜಿಟಲ್ ಹಣ ಪಾವತಿಯ ಸೌಲಭ್ಯಗಳು ಇದ್ದರೂ ಆಗಬೇಕಿದ್ದ ವೇಗದಲ್ಲಿ ಸಾಲು ಕಡಿಮೆ ಆಗುತ್ತಿರಲಿಲ್ಲ, ವಿಶೇಷವಾಗಿ ಸಮಯ ಉಳಿದಂತೆ ಕಾಣಲಿಲ್ಲ. ಈ ಎಲ್ಲ ಯಂತ್ರಗಳು ಸೌಲಭ್ಯಗಳು ಮಾನವನ ಕೈ ಕೆಲಸಕ್ಕಿಂತ ವೇಗವಾಗಿ ಮುಗಿಯಬೇಕಿದ್ದರೂ ಅಂತಹ ವ್ಯತ್ಯಾಸವೇನು ಅಲ್ಲಿ ಕಂಡುಬರುತ್ತಿರಲಿಲ್ಲ! ಒಂದು ಕೌಂಟರಿನ ಸಾಲಿನಲ್ಲಿದ್ದ ಎಷ್ಟೋ ಜನರಂತೂ ಆ ಕೌಂಟರಿನ ಮುಂದೆ ಇದ್ದಕ್ಕಿದ್ದಂತೆ ಇಟ್ಟ `ಸರ್ವರ್ ಡೌನ್ – ವ್ಹಿ ರಿಗ್ರೆಟ್ ದಿ ಇನ್‍ಕನ್ವೀನಿಯೆನ್ಸ್’ ಬೋರ್ಡ್ ನೋಡುತ್ತಲೇ ತಮಗೆ ತೋಚಿದ ಉಳಿದ ಸಾಲುಗಳಲ್ಲಿ ಸೇರಿಕೊಳ್ಳತೊಡಗಿದರು. ಮತ್ತೊಮ್ಮೆ ಹಿಂದೆಮುಂದೆ ತಳ್ಳುವುದು ಮುಂದಿನವರು ಗುರಾಯಿಸುವುದು ಶುರು ಆಯಿತು. ಎಲ್ಲೆಂದರಲ್ಲಿ ಹೀಗೆ ಜನ ಜಮಾಯಿಸಿ ತಳ್ಳಾಡುತ್ತ ಮೈ ಮೇಲೆ ಬೀಳುತ್ತ ವಾದ ಮಾಡಿ ಜಗಳ ಆಡುವುದೂ ಆಧುನಿಕತೆಯ ಲಕ್ಷಣವಿರಬೇಕೇನೋ!
ಗಾಯತ್ರಿ ಅವರ ಮುಂದೆಯೂ ಮೂರ್ನಾಲ್ಕು ಯುವಕರು ತೂರಿಕೊಂಡರು. ಗಾಯತ್ರಿ ಅವರಿಗೆ ಈಗ ಇದ್ದಕ್ಕಿದ್ದಂತೆ ತಮ್ಮ ಕಾಲೇಜಿನ ದಿನಗಳಲ್ಲಿ ಊರಿನ ಸಿನೆಮಾ ಮಂದಿರಕ್ಕೆ ಗೆಳತಿಯರೊಂದಿಗೆ ಹೋಗಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದ ದಿನಗಳು ಜ್ಞಾಪಕವಾಗಿ ಮುಗುಳ್ನಕ್ಕರು. ಈ ಸಲ ಅವರ ಮಂದಹಾಸಕ್ಕೆ ಪ್ರತ್ಯುತ್ತರವಾಗಿ ಮುಗುಳ್ನಗೆ ಬೀರುತ್ತಿದ್ದಂತೆ ನಟಿ ಹೇಮಾ ಮಾಲಿನಿ ಮತ್ತೊಂದು ಜಾಹೀರಾತಿನ ಭಿತ್ತಿಪತ್ರದಲ್ಲಿ ಮಿಂಚುತ್ತಿದ್ದಳು. ಅರ್ಧ ಗಂಟೆ ಕಳೆದ ನಂತರ ಗಾಯತ್ರಿ ಅವರ ಸರದಿ ಬಂತು. ಬಿಲ್ ಮಾಡುವ ಯುವಕ `ಮೇಡಮ್ ಬ್ಯಾಗ್ ಬೇಕೇನು? ಚಿಕ್ಕದಕ್ಕೆ ಎಂಟು, ದೊಡ್ಡದಕ್ಕೆ ಹದಿನೈದು’ ಎಂದು ಕೇಳಿದ. ಗಾಯತ್ರಿ ಅವರು ಕೊಂಚ ಗಲಿಬಿಲಿಗೊಂಡರು. ಬ್ಯಾಗ್ ಬೇಡ ಎಂದರು. ಆದರೆ ಸಾಮಾನುಗಳನ್ನು ಹಾಕಿಕೊಳ್ಳಲು ತಮ್ಮ ಬಳಿ ಬ್ಯಾಗ್ ಇಲ್ಲವಲ್ಲ ಎಂದು ಯೋಚಿಸಿ ಚಿಕ್ಕ ಬ್ಯಾಗ್ ಕೊಡಲು ಸೂಚಿಸಿದರು. ಯುವಕ ಎಲ್ಲ ಸಾಮಾನುಗಳನ್ನು ಹಾಕಿ ಅವರ ಕೈಗೆ ಕೊಡುತ್ತ ಒಟ್ಟು ಮೊತ್ತವನ್ನು ಹೇಳಿದ. ಗಾಯತ್ರಿ ಮತ್ತೆ ಗಲಿಬಿಲಿಗೊಂಡು ಎಡ ಬಲ ಭುಜಗಳ ಮೇಲೆ ಕೈಯಾಡಿಸುತ್ತ ಬ್ಯಾಗಿಗಾಗಿ ಹುಡುಕಾಡತೊಡಗಿದರು…
ಸಾಲಿನಲ್ಲಿ ಹಿಂದೆ ನಿಂತಿದ್ದ ಮೂರು ಜನರ ಕುಟುಂಬ ಬೇಸರಪಡುತ್ತ ಗಾಯತ್ರಿ ಅವರಿಗೆ ಬೇಗನೆ ದುಡ್ಡು ಕೊಡಲು ಸೂಚಿಸಿದರು. ಒಂದೆರಡು ನಿಮಿಷದಲ್ಲಿ ಆ ಕುಟುಂಬದ ಗಂಡಸು `ಛೀ ಥೂ ಅದ್ಯಾಕಾದ್ರೂ ಬರ್ತಾರಪ್ಪ ಸುಮ್ಮನೆ! ರೀ ಸರೀರಿ ರೀ…’ ಎಂದೆಲ್ಲ ಗದರಲು ಶುರುಮಾಡಿದ. ಮತ್ತೆ ದೊಡ್ಡ ರಂಪ ಆಗುವ ಮೊದಲು ಗಾಯತ್ರಿ ಅವರೇ ಪಕ್ಕಕ್ಕೆ ಸರಿದು ನಿಂತರು. ಗಾಲಿಬುಟ್ಟಿಯನ್ನು ಕೊಟ್ಟ ಅಂಗಡಿಯ ಸಹಾಯಕಿ ಮತ್ತೆ ಅವರ ಕಡೆಗೆ ಧಾವಿಸಿ ಸಮಸ್ಯೆ ಏನೆಂದು ಕೇಳಿದಳು. ಅವರು ತಮ್ಮ ಬ್ಯಾಗು ಕಳೆದುಹೋಗಿದೆ ಎಂದು ಹೇಳುತ್ತಲೆ ಸಹಾಯಕಿ ಮಾಲ್‍ನಲ್ಲಿ ಪ್ರತ್ಯೇಕ ಜಾಗದಲ್ಲಿ ಕುಳಿತಿದ್ದ ಅಧಿಕಾರಿಯ ಬಳಿ ಗಾಯತ್ರಿ ಅವರನ್ನು ಕರೆದೊಯ್ದಳು.
ಅಧಿಕಾರಿ ಗಾಯತ್ರಿ ಅವರನ್ನು ವಿಚಾರಿಸತೊಡಗಿದ. ಹೆಸರು ಊರು ಮನೆಯ ವಿಳಾಸ ಬ್ಯಾಗಿನ ಬಣ್ಣ ಆಕಾರ ಅಂಗಡಿಯ ಒಳಗೆ ಬರುವಾಗ ಅದು ಅವರ ಬಳಿ ಇತ್ತೋ ಇಲ್ಲವೋ ಅಂತೆಲ್ಲ ಪ್ರಶ್ನೆಗಳ ಮಳೆಯನ್ನು ಸುರಿಸಿದ. ಆದರೆ ಗಾಯತ್ರಿ ಅವರು ಕೊಡೆ ಹಿಡಿದು ಮಳೆಯಿಂದ ಪಾರಾಗುವವರಂತೆ ಸಮರ್ಪಕ ಉತ್ತರ ಕೊಡಲಾರದೆ ತಮಗೆ ತೋಚಿದ್ದನ್ನು ಊಹೆ ಮಾಡಿ ಹೇಳುವಂತೆ ತಡವರಿಸುತ್ತಿದ್ದರು. ಅವರಿಗೆ ಇಲ್ಲಿಗೆ ಬಂದಾಗ ಬ್ಯಾಗು ತಮ್ಮ ಬಳಿ ಇತ್ತೋ ಇಲ್ಲವೋ ನೆನಪಾಗಲಿಲ್ಲ. ತಾವು ಬಳಸುವ ಬ್ಯಾಗಿನ ಬಣ್ಣ ಕೆಂಪೋ ಕಪ್ಪೋ ಎಂಬ ಗೊಂದಲ ಅವರನ್ನು ಕಾಡಿತು. ಇಲ್ಲಿಗೆ ಬರುವ ಮುನ್ನ ಅವರು ಬೇರೆ ಎಲ್ಲಿಗೆ ಹೋಗಿದ್ದರು ಎನ್ನುವ ಪ್ರಶ್ನೆ ಮೂಡಿತು!
ಅಧಿಕಾರಿ ಅವರಿಗೆ ಕುಡಿಯಲು ನೀರು ಕೊಟ್ಟು ಕೊಂಚ ಹೊತ್ತು ಸುಧಾರಿಸಿಕೊಳ್ಳಲು ಸೂಚಿಸಿದ. ಅಗತ್ಯ ಮಾಹಿತಿ ದೊರೆಯದ ಕಾರಣ ತಾನೇ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ. ಗಾಯತ್ರಿ ಅವರು ಅಧಿಕಾರಿಯ ಬಳಿ ಇದ್ದ ಕುರ್ಚಿಯ ಮೇಲೆ ಆಸೀನರಾದರು. ಸುತ್ತಲೂ ಗಿರಾಕಿಗಳ ಗದ್ದಲ. ಮಕ್ಕಳ ಅಳು, ಹೆಂಗಸರ ಮಾತಿನ ದನಿ, ನಡುನಡುವೆ ಅಂಗಡಿಯವರು ಮೈಕ್‍ನಲ್ಲಿ ಮಾಡುತ್ತಿದ್ದ ಘೋಷಣೆ. ಈ ಎಲ್ಲ ಶಬ್ದಗಳು ಗಾಯತ್ರಿ ಅವರ ಕಿವಿಯಲ್ಲಿ ಗುಂಯ್‍ಗುಟ್ಟಿದಂತೆ ಆಗುತ್ತಿತ್ತು ಆದರೂ ಅವರು ಕುಳಿತಲ್ಲಿಯೇ ಸಣ್ಣ ನಿದ್ರೆಗೆ ಜಾರಿದರು…
“ಹಳ್ಳಿಯ ಜಾತ್ರೆಯಲ್ಲಿ ಎತ್ತ ನೋಡಿದರತ್ತ ಜನ. ದೊಡ್ಡವರು ಸಣ್ಣವರು ಗಂಡಸರು ಹೆಂಗಸರು ಎತ್ತುಗಳು ಕುರಿಗಳು ಕೋಳಿಗಳು. ತಳ್ಳುವ ಗಾಡಿಯಲ್ಲಿ ಮಾರುತ್ತಿದ್ದ ಬಣ್ಣಬಣ್ಣದ ಗಾಜಿನ ಬಳೆಗಳು, ರಿಬ್ಬನ್‍ಗಳು, ಕಿವಿ ಓಲೆ, ಸರಗಳು. ಸುವಾಸನೆ ಬೀರುವ ಹೂವುಗಳು. ಮಕ್ಕಳಿಗಾಗಿ ಪುಟ್ಟಪುಟ್ಟ ಆಟಿಕೆಗಳು, ಪೀಪಿ, ಬಲೂನುಗಳು. ಎಲ್ಲ ಕಡೆಗೂ ಕರಿದ ಪದಾರ್ಥಗಳು, ಬೆಂಡು ಬತ್ತಾಸಿನ ರಾಶಿ ಹಾಕಿಕೊಂಡು ಮಾರಾಟಕ್ಕೆ ಕುಳಿತಿದ್ದ ಅಂಗಡಿಯವರು!
`ಒಂದು ಕೈಗೆ ಕೆಂಪು ಗಾಜಿನ ಬಳೆ ಮತ್ತೊಂದಕ್ಕೆ ಹಸಿರು ಹಾಕಿದರೆ ಹೇಗೆ?’ ಅಕ್ಕನ ಪ್ರಶ್ನೆ.
`ಅದೂ ಚೆಂದ. ನಾನೂ ಹಾಗೇ ಮಾಡ್ತೀನಿ’ ತಂಗಿಯ ಉತ್ತರ.
ಎರಡು ಡಜನ್ ಬಳೆಗಳನ್ನು ಕೊಳ್ಳುವಷ್ಟರಲ್ಲಿ ಕಡ್ಲೆಕಾಯಿ ತಿನ್ನಲು ಕಾಯುತ್ತಿದ್ದ ತಮ್ಮ. ಜೊತೆಗೆ ಉಪ್ಪುಖಾರದ ಪೇರಲಕಾಯಿ ಮತ್ತು ಐಸ್ ಕ್ಯಾಂಡಿಯನ್ನೂ ಖರೀದಿಸಿ ತೇರಿನ ಹತ್ತಿರ ಬಂದಾಗ ನೂಕುನುಗ್ಗಲು. ಕೈ ಎಲ್ಲೋ ಕಾಲು ಎಲ್ಲೋ ಕೈಯಲ್ಲಿದ್ದ ಸಾಮಾನುಗಳು ಮತ್ತೆಲ್ಲೋ! ಗುಂಪಿನಲ್ಲಿ ಗೋವಿಂದ ಎನ್ನುವಂತೆ ಮೂವರು ತಮ್ಮನ್ನು ತಾವು ಮುಂದೆ ಸಾಗಿಸಿಕೊಂಡು ತೇರಿನ ಬಳಿ ಬರಲು ಸಾಹಸ ಮಾಡುತ್ತಿದ್ದರು. ತೇರಿನಿಂದ ಆಗಾಗ ಬೀಳುತ್ತಿದ್ದ ಹೂವು ಹಣ್ಣು ಉತ್ತತ್ತಿಯ ಪ್ರಸಾದಕ್ಕೆ ಎಲ್ಲರ ಕೈಗಳು ಮುಂದೆ ಚಾಚುತ್ತಿದ್ದವು. ಹಾಗೆ ಚಾಚಿದ ಕೈಗಳು ಮುಂದಿದ್ದವರ ಗಲ್ಲ ತಲೆಗಳಿಗೂ ಬಡಿಯುತ್ತಿದ್ದವು. ಪೆಟ್ಟು ಬಿದ್ದರೂ, ನೂಕುನುಗ್ಗಲಿದ್ದರೂ ಜನರ ಉತ್ಸಾಹಕ್ಕೇನು ಕಡಿಮೆ ಇರಲಿಲ್ಲ. ದೇವರ ಹೆಸರಿನ ಘೋಷಣೆ ಮಾಡುತ್ತ ತೇರಿನ ಸುತ್ತ ಭಕ್ತರ ದಂಡು ಸೇರುತ್ತಲೇ ಇತ್ತು! ತೇರಿನ ಗಾಲಿಗಳು ಮೆಲ್ಲನೆ ಮುಂದೆ ಸಾಗುತ್ತಿದ್ದಂತೆ ಅದನ್ನು ಎಳೆಯುತ್ತಿದ್ದವರ ಸಂಭ್ರಮ ದುಪ್ಪಟ್ಟಾಗಿ ಇನ್ನೂ ಹೆಚ್ಚಿನ ಶಕ್ತಿ ಹಾಕಿ ಅದನ್ನು ಮುಂದೆ ಎಳೆಯುತ್ತಿದ್ದರು.
ಬಹುತೇಕ ಎಲ್ಲರು ಹುರುಪಿನಿಂದಿದ್ದರೂ ಬಿಸಿಲಿನ ತಾಪಕ್ಕೆ ನಡುವಯಸ್ಸಿನ ವ್ಯಕ್ತಿಯೊಬ್ಬ ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದುಬಿಟ್ಟಿದ್ದ. ಅವನನ್ನು ಗಮನಿಸಿದರೂ ಗಮನಿಸದಂತೆ ಬಹಳಷ್ಟು ಜನ ತಮ್ಮಲ್ಲೆ ತಾವಿದ್ದರು. ಆದರೆ ಮೂರ್ನಾಲ್ಕು ಜನ ಮಾತ್ರ ಅವನ ಮುಖಕ್ಕೆ ನೀರು ಚಿಮುಕಿಸಿ ಬಾಯಿಯಲ್ಲಿ ನೀರು ಹಾಕುತ್ತ ಏಳಿ, ಎಚ್ಚೆತ್ತುಕೊಳ್ಳಿ. ಕಣ್ಬಿಟ್ಟು ನೋಡಿ... ತಾವು ಒಬ್ಬರೇ ಬಂದಿರುವಿರೇನು? ಇಲ್ಲಿ ನೋಡಿ...' ಎಂದು ಎಚ್ಚರಪಡಿಸುತ್ತ ಅವನ ಸಹಾಯಕ್ಕೆ ನಿಂತಿದ್ದರು. ಅವನಿಗೆ ಎಚ್ಚರವಾದಂತೆ ಕಂಡುಬಂದರೂ ತತ್ತಕ್ಷಣವೇ ಕಣ್ಣು ತೆರೆಯಲು ಆಗುತ್ತಿರಲಿಲ್ಲ. ಅವನ ಸುತ್ತಲಿದ್ದ ಜನ
ಏಳಿ… ಇಲ್ಲಿ ನೋಡಿ…’ ಎಂದೆನ್ನುತ್ತ ಅವನನ್ನು ಎಬ್ಬಿಸುತ್ತಲೇ ಇದ್ದರು…”
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಕಸೂತಿ
`ಏಳಿ… ಎಚ್ಚೆತ್ತುಕೊಳ್ಳಿ… ಇಲ್ಲಿ ನೋಡಿ’ ಮತ್ತೆ ಮತ್ತೆ ಅದೇ ಮಾತುಗಳು… ಸುರುಳಿಯಾಗಿ ಕಿವಿಯ ಪರದೆಗೆ ತಾಕುತ್ತ ಎಬ್ಬಿಸುವ ಪ್ರಯತ್ನಮಾಡುವ ಪದಗಳು. ಜೊತೆಗೆ ಭುಜ ತಟ್ಟುವ ಅನುಭವ ಬೇರೆ! ಕಷ್ಟಪಟ್ಟು ಕಣ್ಣುತೆರೆಯುವ ಪ್ರಯತ್ನ ಮಾಡಿದ ಗಾಯತ್ರಿ ಅವರಿಗೆ ಇದು ಹಳ್ಳಿಯೋ ಬೇರೆ ಊರೋ ತಿಳಿಯಲಿಲ್ಲ. ಅಕ್ಕಪಕ್ಕ ನೋಡಿದರೆ ಬರೀ ಜನ. ಬೇರೆಯದೇ ವೇಷಭೂಷಣದಲ್ಲಿರುವ ಜನ. ಎಲ್ಲರೂ ಅಪರಿಚಿತರು ಆದರೆ ಅದೇ ಹಳ್ಳಿಯ ಪರಸೆಯಂತೆ ಗದ್ದಲ! ಗುಜುಗುಜು. ಮಾತುಕತೆ. ಘೋಷಣೆ. ತಾವೀಗ ಕಂಡದ್ದು ಕನಸೋ ಅಥವಾ ಈಗ ಕಾಣುತ್ತಿರುವುದು ಕನಸೋ ಎಂಬ ಪ್ರಶ್ನೆ ಗಾಯತ್ರಿ ಅವರನ್ನು ದಿಕ್ಕುತೋಚದಂತೆ ಮಾಡಿತು.
`ಓಹ್! ಅಂತೂ ಎಚ್ಚರವಾಯಿತಲ್ಲ!’ ಗಾಯತ್ರಿ ಅವರ ಕೈ ಹಿಡಿದಿದ್ದ ಗೋಪಾಲ ನಿಟ್ಟುಸಿರುಬಿಟ್ಟ.
ವಿಚಾರಮಗ್ನರಾಗಿದ್ದ ಗಾಯತ್ರಿ ಅವರ ಗಮನ ಗೋಪಾಲನತ್ತ ಹೋಯಿತು. ಅವರು ಇದೀಗ ಎಚ್ಚರಗೊಂಡಂತೆ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ತೆರೆದರು.
`ಏ ಗೋಪಾಲ ನೀನು ಯಾವಾಗ ಬಂದೆ? ನಾವು ಒಟ್ಟಿಗೆ ಬಂದಿದ್ದೆವೇನು? ನಾವೆಲ್ಲಿದೀವಿ? ನಾವು ಜಾತ್ರೆಗೆ ಬಂದಿದ್ದಲ್ಲವೇನು? ತೇರು ಹೊರಟುಹೋಯಿತೇ?’ ಗಾಯತ್ರಿ ಅವರು ಕುತೂಹಲದಿಂದ ಮುಂದಿದ್ದ ಮಗನಿಗೆ ಪ್ರಶ್ನೆ ಕೇಳಿದರು.
`ಹೌದು. ನಾವು ಒಟ್ಟಿಗೆ ಬಂದಿದ್ದು. ಆದರೆ ಜಾತ್ರೆಗಲ್ಲ, ಇಲ್ಲಿ ಸಾಮಾನು ಖರೀದಿ ಮಾಡೋದಕ್ಕೆ. ನಿನಗೆ ಕಾಲುನೋವು ಅಂತ ನಾನೇ ಇಲ್ಲಿ ಕೂರಿಸಿದೆ. ನೀನು ಬೇಸತ್ತು ಸಣ್ಣ ನಿದ್ರೆಗೆ ಜಾರಿರಬೇಕು. ನಡಿ. ಮನೆಗೆ ಹೊರಡೋಣ.’
`ಓಹ್! ಹೌದೇನು? ನಡಿ. ನನಗೆಲ್ಲೋ ಈ ಗದ್ದಲದಲ್ಲಿ ಜಾತ್ರೆಗೆ ಬಂದ ಹಾಗಾಗಿತ್ತು!’ ಗಾಯತ್ರಿ ಅವರಿಗೆ ಇನ್ನೂ ಗಲಿಬಿಲಿ ಕಡಿಮೆ ಆಗಿರಲಿಲ್ಲ.
`ಅಮ್ಮ, ಇನ್ನೊಂದು ನಿಮಿಷ ನೀನು ಇಲ್ಲಿಯೇ ಕುಳಿತಿರು. ನಾನು ಈಗ ಬಂದೆ’ ಎಂದವನೇ ಗೋಪಾಲ ಸನಿಹದಲ್ಲಿದ್ದ ಸಹಾಯಕಿಗೆ ತಾಯಿಯನ್ನು ಕೊಂಚ ಹೊತ್ತು ನೋಡಿಕೊಳ್ಳುವಂತೆ ಕೋರಿದ. ಕುತೂಹಲದಿಂದ ಇವರತ್ತಲೇ ನೋಡುತ್ತ ಅಲ್ಲಿಯೇ ನಿಂತಿದ್ದ ಅಧಿಕಾರಿಯನ್ನು ಕೊಂಚ ಪಕ್ಕಕ್ಕೆ ಕರೆದ. ಅಧಿಕಾರಿಯ ಕೈ ಕುಲುಕಿ ತಾಯಿಯ ಬಗ್ಗೆ ಕರೆಮಾಡಿ ವಿಷಯ ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ.
`ಸರ್, ಇದು ನಮ್ಮ ಕರ್ತವ್ಯ. ನಿಮ್ಮ ತಾಯಿಯನ್ನು ನೋಡಿದರೆ ಒಳ್ಳೆಯ ಕುಟುಂಬದವರು ಎನಿಸಿದರು. ಆದರೆ ಸಾಮಾನನ್ನು ಖರೀದಿ ಮಾಡಿ ಹಣ ಕೊಡುವಾಗ ಬ್ಯಾಗ್ ಕಳೆದಿದೆ ಎಂದರು. ನಮ್ಮ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಒಳಗೆ ಬಂದಾಗ ಜೊತೆಗೆ ಏನನ್ನೂ ತರದೆ ಖಾಲಿ ಕೈಯಲ್ಲಿ ಬಂದಿದ್ದು ಗೊತ್ತಾಯಿತು. ಜೊತೆಗೆ ನಾವು ಏನೇ ಪ್ರಶ್ನೆ ಕೇಳಿದರೂ ಅವರಿಂದ ಸಮರ್ಪಕ ಉತ್ತರ ಬರದೆ ಇದ್ದಾಗ ನಮಗೆ ಅನುಮಾನ ಮೂಡಿ ಅವರಿಗೆ ಇಲ್ಲಿಯೇ ಕುಳಿತಿರಲು ತಿಳಿಸಿ ಹತ್ತಿರದ ಪೊಲೀಸಿಗೆ ವಿಷಯ ಮುಟ್ಟಿಸಿದೆವು. ನೀವೂ ನಿಮ್ಮ ತಾಯಿ ಕಾಣೆಯಾಗಿದ್ದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿದ್ದರಿಂದ ಅವರು ಬಹುಬೇಗನೆ ತಮಗೆ ವಿಷಯ ತಿಳಿಸಿದ್ದಾರೆ. ಆದರೆ ನೀವೇಕೆ ಅವರಿಗೆ ನೀವು ಒಟ್ಟಿಗೆ ಬಂದೆವೆಂದು ಹೇಳಿದಿರಿ?’
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ
ನಮ್ಮ ತಾಯಿಯವರಿಗೆ ಮರೆವಿನ ಕಾಯಿಲೆ ಸುಮಾರು ಎರಡು ಮೂರು ವರ್ಷಗಳಿಂದ ಇದೆ. ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಎಂದೇ ಹೇಳಬೇಕು. ಅವರು ರಿಟೈರ್ಡ್ ಟೀಚರ್. ವೃತ್ತಿಯಲ್ಲಿದ್ದಾಗ ಶಾಲೆಯಲ್ಲಿ ತುಂಬಾ ಹೆಸರುವಾಸಿ. ನಿವೃತ್ತಿ ಆದನಂತರ ಮನೆಯಲ್ಲಿ ಹೆಚ್ಚಿನ ಹೊತ್ತು ಕಾಲ ಕಳೆಯುತ್ತಿದ್ದರು. ಆದರೂ ತಮಗೆ ಸಾಧ್ಯವಾದಷ್ಟು ಮನೆಯ ಕೆಲಸ ಮಾಡುತ್ತ ನನ್ನ ಮಕ್ಕಳಿಗೂ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತಿದ್ದರು. ಆಗಾಗ ಸಣ್ಣಪುಟ್ಟ ವಿಷಯಗಳನ್ನು ಮರೆತಾಗ ನಾವು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅದು ಸಾಕಷ್ಟು ವಿಷಯಗಳಲ್ಲಿ ಮರುಕಳಿಸತೊಡಗಿದಾಗ ನಮಗೆ ಕಾಳಜಿ ಆಗತೊಡಗಿತು. ಅದರಲ್ಲೂ ಅವರು ಕೆಲವೊಮ್ಮೆ ತಮ್ಮ ಬಾಲ್ಯದಲ್ಲಿ ತಂದೆ ಅಣ್ಣ-ತಮ್ಮ ತಂಗಿಯ ಜೊತೆಗೆ ಇದ್ದ ದಿನಗಳಲ್ಲಿ ಇದ್ದಂತೆ ವರ್ತಿಸತೊಡಗಿದಾಗ ನಮ್ಮನ್ನು ಬೇರೆಯವರಂತೆ ಕಾಣತೊಡಗಿದಾಗ ನಾವು ವೈದ್ಯರನ್ನು ಕಂಡೆವು. ವೈದ್ಯರು ನನ್ನ ತಾಯಿಗೆ ಮರೆವಿನ ಕಾಯಿಲೆ ಇರುವ ಬಗ್ಗೆ ದೃಢಪಡಿಸಿದರು!' ಗೋಪಾಲ ಆ ದಿನ ಆಸ್ಪತ್ರೆಯಲ್ಲಿ ವೈದ್ಯರು ಕೆಲ ಪರೀಕ್ಷೆಗಳನ್ನು ಮಾಡಿ
ದಿಸ್ ಈಜ್ ಏ ಕೇಸ್ ಆಫ್ ಡಿಮೆನ್ಶಿಯಾ ಮಿಸ್ಟರ್ ಗೋಪಾಲ್’ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಕೊಂಚ ಭಾವುಕನಾದ. ಆ ದಿನದಿಂದ ಅವನ ಜೀವನವೂ ಮೊದಲಿನಂತೆ ಸಹಜವಾಗಿ ಇರಲೇ ಇಲ್ಲ! ಪ್ರತಿದಿನ ತಾಯಿಯ ಸುರಕ್ಷತೆಯದೇ ಚಿಂತೆ!
`ಕ್ಷಮಿಸಿ ಸರ್, ನಿಮ್ಮ ತಾಯಿಯವರು ಈ ದಿನ ಇಲ್ಲಿಗೆ ಬಂದಂತೆ ಮತ್ತೆಲ್ಲಾದರೂ ಹೋಗಬಹುದಲ್ಲ?’ ಅಧಿಕಾರಿಯ ದನಿಯಲ್ಲಿ ಕಾಳಜಿ ಇತ್ತು.
`ಹೌದು! ಎಷ್ಟೇ ಎಚ್ಚರವಹಿಸಿದರೂ ಒಂದೆರಡು ಸಲ ಪಾರ್ಕಿಗೆ, ಮತ್ತೊಮ್ಮೆ ಒಂದು ಚರ್ಚಿಗೆ ಹೋಗಿದ್ದರು. ವಾಹನಗಳ ದಟ್ಟಣೆ ಇರುವ ರಸ್ತೆಗಳಲ್ಲಿ ಹೆಚ್ಚಿಗೆ ಲಕ್ಷ್ಯವಿರದೆ ಒಬ್ಬರೇ ಓಡಾಡುವುದನ್ನು ನೆನೆಯಲೂ ಭಯವಾಗುತ್ತದೆ. ಅವರಿಗೆ ಕಾಯಿಲೆಯ ವಿಷಯ ತಿಳಿಸಿದರೂ ಅದು ತಿಳಿಯುವುದೂ ಇಲ್ಲ ನೆನಪಿನಲ್ಲಿಯೂ ಉಳಿಯುವುದಿಲ್ಲ. ಅವರನ್ನು ಒಂದು ಕಡೆಗೆ ಕಟ್ಟಿಹಾಕಲೂ ಸಾಧ್ಯವಿಲ್ಲ! ಸಹಜವಾಗಿಯೇ ಹಿಂದಿನ ದಿನಗಳ ನೆನಪು ಮತ್ತು ಇಂದಿನ ದಿನಗಳಲ್ಲಿ ಇರುತ್ತಾರೆ. ಈ ದಿನವೂ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗಳ ಕಣ್ತಪ್ಪಿಸಿ ಇಲ್ಲಿ ಬಂದುಬಿಟ್ಟಿದ್ದಾರೆ. ನನ್ನ ಮಗಳು ನನಗೆ ಕರೆಮಾಡಿ ವಿಷಯ ತಿಳಿಸಿದ ಕೂಡಲೇ ಆಫೀಸಿನಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದೆ. ಅಂತೂ ಕೆಲವೇ ಗಂಟೆಗಳಲ್ಲಿ ಅವರ ಪತ್ತೆ ಆಯಿತು. ನಿಮ್ಮ ಪರಿಶ್ರಮಕ್ಕೆ ತುಂಬಾ ಥ್ಯಾಂಕ್ಸ್. ಸರಿಯಾಗಿ ಗಮನಿಸಿ ನನ್ನ ತಾಯಿ ನಮಗೆ ಸಿಗುವಂತೆ ಮಾಡಿದ್ದೀರಿ.’ ಗೋಪಾಲ ಅಧಿಕಾರಿಯ ಕೈ ಮತ್ತೊಮ್ಮೆ ಕುಲುಕಿ ಹೊರಟ.
ಕುಳಿತಿದ್ದ ಗಾಯತ್ರಿ ಅವರು ಈಗ ಎದ್ದುನಿಂತು ಹೂದಾನಿಯನ್ನು ನೋಡತೊಡಗಿದ್ದರು. ತಾಯಿ ಖರೀದಿಸಿದ್ದ ಸಾಮಾನುಗಳಿಗೆ ಹಣ ಪಾವತಿಸಿದ ಗೋಪಾಲ ಸಾಮಾನುಗಳ ಚೀಲದೊಂದಿಗೆ ತಾಯಿಯ ಕೈ ಹಿಡಿದು
ಮನೆಗೆ ಕರೆದುಕೊಂಡು ಹೊರಟ. ತಾನು ಚಿಕ್ಕವನಿದ್ದಾಗ ಶಾಲೆಯಿಂದ ಮನೆಗೆ ಅಮ್ಮ ಹೀಗೆಯೇ ಕರೆದುಕೊಂಡು ಹೋಗುತ್ತಿದ್ದರು. ತಾನು ಕೈ ಬಿಡಿಸಿಕೊಳ್ಳುತ್ತ ಮುಂದೆ ಓಡುತ್ತಿದ್ದೆ. ಮಗ ದಾರಿತಪ್ಪಬಾರದೆಂದು ಕಳೆದುಹೋಗಬಾರದೆಂದು ಹಿಂದೆ ಓಡಿಬರುತ್ತಿದ್ದ ಅಮ್ಮನ ಆತಂಕ ಈಗ ಗೋಪಾಲನಿಗೆ ಹೆಚ್ಚು ಅರ್ಥವಾಗಿತ್ತು.
ಈ ಬಾರಿ ಮೇಲಿನಿಂದ ಕೆಳಗಿಳಿಯುತ್ತಿದ್ದ ಲಿಫ್ಟ್ ಮೂರನೆಯ ಮಹಡಿಯಲ್ಲಿ ನಿಂತು ಬಾಗಿಲನ್ನು ತೆರೆಯಿತು. ಮಗನೊಂದಿಗೆ ಅದರೊಳಗೆ ಹೋದ ಗಾಯತ್ರಿ ಅವರು ಅದು ಮತ್ತೆ ಕೆಳಗಿಳಿಯುತ್ತಿದ್ದಂತೆ ಗಾಜಿನ ಬಾಗಿಲಿನ ಮೂಲಕ ಹೊರಗೆ ಕಾಣಿಸುತ್ತಿದ್ದ ಅಂಗಡಿಗಳನ್ನು ಮತ್ತು ಜನರನ್ನು ವೀಕ್ಷಿಸತೊಡಗಿದರು, ತಮ್ಮೂರಿನ ಪರಸೆಯಲ್ಲಿ ತಂದೆಯೊಂದಿಗೆ ತಿರುಗುಣಿಯಲ್ಲಿ ಕುಳಿತಾಗ ಕೆಳಗಿನ ದೃಶ್ಯಗಳನ್ನು ಕೌತುಕದಿಂದ ನೋಡುತ್ತಿದ್ದಂತೆ..!
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಶ್ರಾವಣಾ