Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

man from dark to light

:: ಸದಾಶಿವ ಸೊರಟೂರು

“ದೇಖಿಯೇ ಯಹೀ ಕಮರಾ ಹೈ, ಠಿಕ್ ಲಗೇ ತೋ ನೀಚೆ ಚೆಕ್ ಇನ್ ಕರಾ ದೀಜಿಯೆ..” ಎಂದು ಹೇಳಿ ಗಿರಾಕಿಯನ್ನು ಕೆಳಗೆ ಕಳುಹಿಸಿ ಅವನು ಅಲ್ಲಿಯೆ ನಿಂತ. ಕೆಳಗೆ ತನ್ನದೆ ವಯಸ್ಸಿನ ಹುಡುಗಿಯನ್ನು ನಿಲ್ಲಿಸಿ ಇವನು ಮಾತ್ರ ರೂಮು ನೋಡಲು ಮೇಲೆ ಬಂದಿದ್ದ ಆ ಗಿರಾಕಿ ಬೆದರಿದಂತೆ, ತುಸು ಬೆವೆತಂತೆ ಕಾಣುತ್ತಿದ್ದ. ರಾತ್ರಿಯಿಡೀ ಪಯಣಿಸಿದ ದಣಿವು ಅವನ ಕಣ್ಣಲ್ಲಿ ಕಾಣಿಸುತ್ತಿತ್ತು.

ಕೊರಳಿನಲ್ಲಿ ನೇತಾಡುತ್ತಿದ್ದ ಹೆಡ್ಫೋನಿನ ವೈರೊಂದನ್ನು ಕಿವಿಗೆ ತೂರಿಸಿಕೊಂಡು ಅಲ್ಲೆ ನಿಂತ. ಕುರುಚಲು ಗಡ್ಡ, ತೆಳು ಮೀಸೆ, ಎಡಗಣ್ಣಿನ ಮೇಲ್ಭಾಗದಲ್ಲಿ ಒಂದು ಹಳೆಗಾಯದ ಕಲೆ ಗುರುತು ಅವನಿಗೊಂದು ಲಕ್ಷಣ ಕರುಣಿಸಿದ್ದವು. ಬಸ್ಸಿನಲ್ಲಿ ಕೇಳಿಸಿಕೊಂಡ ತುಂಡು ಹಾಡು ದಿನಪೂರ್ತಿ ನಮ್ಮೊಳಗೆ ಅಡಗಿ ಇಷ್ಟಿಷ್ಟೆ ಹೊರಬಂದು ಕೆಣಕುವಂತೆ ಅವನೊಳಗಿನ ಯಾವುದೊ ವಿಷಾದವೊಂದು ಕಣ್ಣಿನ ಬಾಗಿಲಿಗೆ ಬಂದು ಜೀಕುತ್ತಿತ್ತು.

ರೂಮು ತೋರಿಸಲು ಮೆಟ್ಟಿಲು ಹತ್ತುವಾಗಲೇ ಒಮ್ಮೆ ಅವನ ಅಮ್ಮನ ದನಿ ಕೇಳಿಸಿದಂತಾಗಿ ತಿರುಗಿ ನೋಡಿದ್ದ. ಊರು ಬಿಡುವಾಗ ಮೊದಲ ಬಾರಿ ಕೇಳಿಸಿದ ಅಮ್ಮನ ಬಿಕ್ಕಳಿಕೆಯ ದನಿ ಅವನನ್ನು ತುಸು ಗಲಿಬಿಲಿಗೊಳಿಸಿತ್ತು. ಎಲ್ಲಿಂದ ಬರುತ್ತದೆ ಎಂದು ವಿಚಲಿತನಾಗಿ ಆ ಕಡೆ ಈ ಕಡೆ ನೋಡಿ, ಬಸ್ಸು ಇಳಿದು ಹುಡುಕಾಡಿದ್ದ. ಇಲ್ಲದ ಅಮ್ಮ ಅವನಿಗೆ ಸಿಕ್ಕುವುದಾದರೂ ಹೇಗೆ ಸಾಧ್ಯವಿತ್ತು? ಅವನು ಮೆಜೆಸ್ಟಿಕ್ಕಿಗೆ ಬಂದು ಇಳಿದು ಕಂಗಾಲಾದಾಗಲೂ ಅಮ್ಮನ ದನಿ ಅವನಿಗೆ ಕೇಳಿಸಿತ್ತು. ಅದು ಗೊಣಗಾಟವಲ್ಲ, ಚೀರಾಟವೂ ಅಲ್ಲ.. ಆ ದನಿಗೆ ಅರ್ಥವಿರುತ್ತಿರಲಿಲ್ಲ. ಈ ಕೆಲಸ ಬಿಟ್ಟು ಹೋಗಬೇಕೆಂದು ಅವನು ವಾರದಿಂದ ಚಡಪಡಿಸಿದ್ದ.

ಹುಲಿಗೆ ಸಿಕ್ಕಿ ಹಾಕಿಕೊಂಡ ಜಿಂಕೆಯೊಂದು ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಮತ್ತೆ ಹುಲಿಯ ಎದುರಿಗೆ ಬಂದು ಬೀಳುವಂತೆ ಅವನು ಲಾಡ್ಜಿನಲ್ಲಿ ರೂಮ್‍ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಊರು ಬಿಡುವಾಗ ತಾನೆಲ್ಲಿ ಕೆಲಸಕ್ಕೆ ಸೇರಬಾರದು ಅಂದುಕೊಂಡಿದ್ದನೊ ಕೊನೆಗೆ ಅಲ್ಲೆ ಕೆಲಸ ಮಾಡುವಂತಾಗಿತ್ತು. ಹೋಟೆಲಿನಲಿ ಸರ್ವರ್ ಕೆಲಸ ಮಾಡಿಕೊಂಡಿದ್ದ ಅವನನ್ನು ಹೋಟೆಲ್ ಮ್ಯಾನೇಜರ್ ಅವರದೇ ಇನ್ನೊಂದು ಹೋಟೆಲ್ ಕಮ್ ಲಾಡ್ಜ್ ಇರುವ ಇಲ್ಲಿಗೆ ವರ್ಗಾಹಿಸಿದ್ದರು. ಜನರ ಮಾತು ಇವನಿಗೆ ಅರ್ಥವಾಗುತ್ತಿರಲಿಲ್ಲ. ಇವನಿಗೆ ಮಲೆಯಾಳಿ ಮತ್ತು ತುಸು ಹಿಂದಿ ಬಿಟ್ಟರೆ ಬೇರೆ ಬರುತ್ತಿರಲಿಲ್ಲ. ಕನ್ನಡ ಕಲಿಯುವ ಯಾವ ಉತ್ಸಾಹವೂ ಇರಲಿಲ್ಲ. ಒಮ್ಮೊಮ್ಮೆ ಹಿಂದಿಯಲ್ಲಿ, ಒಮ್ಮೊಮ್ಮೆ ಮಲೆಯಾಳಿಯಲ್ಲಿ ಏನೇನೊ ಹೇಳುತ್ತಿದ್ದ.

ಗಿರಾಕಿಗಳಿಗೆ ರೂಮು ತೋರಿಸುವುದು, ರೂಮನಿಂದ ಕಾಲ್ ಬಂದಾಗ ಅಟೆಂಡ್ ಮಾಡಿ ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವುದು ಇವನ ಕೆಲಸವಾಗಿತ್ತು. ನಿಧಾನಕ್ಕೆ ಕೆಲಸಕ್ಕೆ ಒಗ್ಗಿಕೊಳ್ಳತೊಡಗಿದ್ದ. ಕಾಲದ ಅಸಲಿ ಗುಣವೆ ಅದು ಬೇಡವಾದದ್ದು ಕೂಡ ಕ್ರಮೇಣ ಸಹ್ಯಗೊಳಿಸುತ್ತಾ ಹೋಗುತ್ತದೆ.


ಸುಮಾರು ಇಪ್ಪತ್ತೈದು ವರ್ಷದ ಜಯಸೂರ್ಯನ್ ಕೇರಳದ ಮಲಪ್ಪುರಮ್‍ನ ಕಳಾವ್ ಬಿಟ್ಟಾಗ ಅವನ ಬಳಿ ಎರಡು ಜೊತೆ ಬಟ್ಟೆ, ನಾಲ್ಕು ಸಾವಿರ ರೂಪಾಯಿ ಮತ್ತು ಸತ್ತ ಅಮ್ಮನ ನೆನಪು ಮಾತ್ರ ಇತ್ತು. ಜನ ಗೊತ್ತಿಲ್ಲದ, ಭಾμÉ ಗೊತ್ತಿಲ್ಲದ ಊರಿಗೆ ಹೋಗಿ ಬದುಕಬೇಕು ಅನ್ನುವ ಉದ್ದೇಶದಿಂದಲೇ ಊರು ತೊರೆದಿದ್ದ. ಬಸ್ಸು ಹತ್ತಿ ಕೂತಾಗ ‘ಸೂಕ್ಷಿಕ್ಕಣೊ ಮೋನೆ..’ ಅನ್ನುವ ಅಮ್ಮನ ದನಿಯೊಂದು ಅವನಿಗೆ ಕೇಳಿಸಿತ್ತು. ಎದ್ದು ಆ ದನಿಗಾಗಿ ಹುಡುಕಾಡಿದ್ದ. ತನಗೇನೊ ಭ್ರಮೆ ಇರಬೇಕೆಂದು ಸುಮ್ಮನಾಗಿದ್ದ.

ಬಸ್ಸು ಕಳಾವ್‍ನಿಂದ ಹೊರಟು ಮುಖ್ಯ ರಸ್ತೆಗೆ ಬಂದು ಎಡಕ್ಕೆ ಹೊರಳುವಾಗ ಒಮ್ಮೆ ಕಿಟಕಿಯ ಮೂಲಕ ಅವಳ ಮನೆಯ ಕಡೆ ನೋಡಿದ. ಬಾಗಿಲಾಕ್ಕಿತ್ತು. ಕಿಟಕಿಯಿಂದ ತಪ್ಪಿಸಿಕೊಂಡ ಬೆಳಕು ರಸ್ತೆ ಮೇಲೆ ಚೆಲ್ಲಿತ್ತು. ಅವಳನ್ನೊಮ್ಮೆ ನೋಡಬೇಕು ಅನಿಸಿತ್ತಾದರೂ ಅಂದು ಅವಳಾಡಿದ್ದ ‘ನೋಕು ಜಯ, ಎಲಾಂ್ಲ ಮರಕ್ಕು, ಎನ್ನೆಯಂ. ಎಂದಿನೆನ್ನು ಎನ್ನೋಡು ಚೋದಿಕ್ಕರುದು” ಅಂದ ಅವಳ ನೆನಪಾಯಿತು. ಎದೆಗೆ ತಿವಿದಂತಾಯ್ತು. ಅವಳು ತನ್ನನ್ನು ಬಿಟ್ಟಿದ್ದು ಯಾಕೆ ಎಂಬುದು ಅವನಿಗೇನು ಒಗಟಾಗಿ ಉಳಿದಿರಲಿಲ್ಲ. ಅಪ್ಪನ ಘಟನೆ ನಡೆದ ಮರುಕ್ಷಣಕ್ಕೆ ಅವಳು ಬಿಡುವ ಮಾತಾಡಿದ್ದಳು. ಅವನಿಗೆ ಅವಳ ಮೇಲೆ ಯಾವುದೇ ದೂರುಗಳಿರಲಿಲ್ಲ. ಎಷ್ಟೋ ಬಾರಿ ಅವನಿಗವನೆ ದೂರಿಕೊಳ್ಳುತ್ತಿದ್ದ. ಅಂದು ಅವಳ ಕಣ್ಣಲ್ಲಿ ನೀರಿತ್ತು. ಅವಳು ಅವನನ್ನು ಮಸುಕ ಮಸುಕಾಗಿಯೆ ನೋಡಿದ್ದಳು. ಅವಳ ಕಣ್ಣಿನ ನೀರಿನ ಜೊತೆ ಅವನೂ ಉದುರಿ ಹೋಗಿದ್ದ. ಅವನು ಒಂದೂ ಮಾತಾಡಿರಲಿಲ್ಲ. ಅವನ ಮಾತು ಸತ್ತುಹೋಗಿತ್ತು. ಕಣ್ಣಿನಲ್ಲಿ ಅದರ ಕಳೇಬರ ಕಾಣಿಸುತ್ತಿತ್ತು. ಗುಟ್ಟಾಗಿಯೆ ಶುರುವಾಗಿದ್ದ ಅವರ ಪ್ರೇಮ ಹೀಗೆ ಗುಟ್ಟಾಗಿಯೇ ಒಡೆದು ಹೋಗಿತ್ತು.

ಅದಾದ ತಿಂಗಳಲ್ಲೆ ಅವಳಿಗೆ ಮದುವೆಯೂ ಆಯಿತು. ಪಕ್ಕದ ಊರಿನಲ್ಲಿದ್ದ ಅವಳ ಅಮ್ಮನ ದೂರದ ಸಂಬಂಧಿಯೊಬ್ಬನನ್ನು ಮದುವೆಯಾದಳು. ಇವನು ಮತ್ತಷ್ಟು ಒಂಟಿಯಾದ. ಅವತ್ತು ಎಲ್ಲವನ್ನೂ ಹೇಳಿಕೊಂಡು ಹಗುರಲು ಅವನ ಬಳಿ ಅಮ್ಮನೂ ಇರಲಿಲ್ಲ. ಬದುಕಿನಲ್ಲಿ ಒಂಟಿಯಾದ. ಅಪ್ಪ ಮನೆ ತೊರೆದದ್ದು, ಅಮ್ಮ ಹೊರಟು ಹೋದದ್ದು ಈ ಎರಡೂ ಅವನನ್ನು ಇನ್ನಿಲ್ಲದಂತೆ ಹಣಿದು ಹಾಕಿದ್ದವು. ಅದೆಲ್ಲವೂ ನೆನಪಾಗಿ ಎದೆಯೊಳಗೆ ಯಾರೊ ಕೈಹಾಕಿ ಕಲಿಸಿದಂತಾಗಿತ್ತು. ಒಂದಾದರೂ ಹನಿ ಉದುರಬಹುದೆಂದು ಕಾದಿದ್ದ. ಅವನ ಕಣ್ಣೊಳಗೆ ಬರಗಾಲವಿತ್ತು. ಕಣ್ಣು ಮುಚ್ಚಿಕೊಂಡು ಕೂತಿದ್ದ. ಬಸ್ಸು ಹೊರಟಿತ್ತು.

ಹತ್ತು ಹದಿನೈದು ನಿಮಿಷದ ತರುವಾಯ ಬಸ್ಸು ಮಲಪ್ಪುರಮ್ ನಿಲ್ದಾಣಕ್ಕೆ ಬಂದಾಗ ಜಯ ಬಸ್ಸು ಇಳಿದು ಹೋಗಿ ಒಂದು ನೀರಿನ ಬಾಟಲು ಕೊಂಡು ಬಸ್ ಹತ್ತುವಾಗ ಬಸ್ಟ್ಯಾಂಡಿನಲ್ಲಿ ನಿಂತಿದ್ದ ಅಪ್ಪನ ಗೆಳತಿ ವಸುಂಧರ ಕಾಣಿಸಿದ್ದಳು. ಅವಳನ್ನು ನೋಡಿದ್ದೆ ಅವನ ಎದೆ ಬಡಿತ ಜೋರಾಗಿತ್ತು. ಅಲ್ಲಿ ಎಲ್ಲಾದರೂ ಅಪ್ಪ ಇರಬಹುದಾ ಅಂತ ಹುಡುಕಾಡಿದ್ದ. ಅಪ್ಪ ಕಾಣಿಸಿರಲಿಲ್ಲ. ಇವಳು ಇಲ್ಲಿ ಒಬ್ಬಳೆ ಏನಕ್ಕೆ ನಿಂತಿರಬಹುದು? ಅಪ್ಪ ಎಲ್ಲಿ ಹೋಗಿರಬಹುದು ಎಂಬ ಯೋಚನೆಯಲ್ಲಿರುವಾಗಲೇ ಬಸ್ಸು ಹೊರಟಿತ್ತು. ಹತ್ತಿ ಕೂತುಕೊಂಡಿದ್ದ. ಅಪ್ಪ ಎಲ್ಲಾದರೂ ಕಾಣಿಸಬಹುದಾ ಅಂತ ಕಿಟಕಿ ಮೂಲಕ ಕಣ್ಣು ಹಾಯಿಸಿ ಹುಡುಕತೊಡಗಿದ್ದ. ಬಸ್ಸು ತನ್ನ ವೇಗ ಹೆಚ್ಚಿಸಿಕೊಂಡಿತ್ತು. ತಿರುಗಿ ನೋಡಿದ ಊರು ಸಣ್ಣದಾಗಿತ್ತು. ಜನರೂ ಸಣ್ಣವರಾಗಿದ್ದರು. ದೂರದ್ದು ಯಾವತ್ತೂ ಸಣ್ಣದೆ. ಮತ್ತೊಮ್ಮೆ ಅವನಿಗೆ ಅಮ್ಮನ ನರಳುವ ದನಿ ಕೇಳಿಸಿತ್ತು. ಸುತ್ತಾ ಕಣ್ಣು ಹಾಯಿಸಿದ್ದ. ಅಮ್ಮ ಕಾಣಿಸಿರಲಿಲ್ಲ. ಬಸ್ಸಿನ ಕಿಟಕಿ ತೆರೆದಿತ್ತು. ಹೊರಗೆ ಸುರಿಯುತ್ತಿರುವ ಕತ್ತಲಿತ್ತು. ತೊರೆಯುವವರು ಕತ್ತಲಲ್ಲೆ ತೊರೆಯಬೇಕು. ಹಗಲಿಗೆ ಕಣ್ಣುಗಳು ಜಾಸ್ತಿ. ಸಾಯುವವರೆಗೂ ಹಗಲು ಸಾಕ್ಷಿ ನುಡಿಸುತ್ತದೆ. ಕಿಟಕಿಯಿಂದ ನುಗ್ಗುವ ಗಾಳಿಗೆ ಮುಖವೊಡ್ಡಿದ. ಬಸ್ಸು ಓಡತೊಡಗಿತ್ತು.


ಏಳೆಂಟು ದಿನಗಳು ಕಳೆದವು. ಲಾಡ್ಜ್ ಒಗ್ಗತೊಡಗಿತು. ನೋವೂ ಒಂದು ವ್ಯಸನವಾಗುವಂತೆ ಈಗ ಬೇಡದ ಲಾಡ್ಜಿನ ಕೆಲಸವೂ ಅವನಿಗೆ ಹೊಂದಿಕೊಂಡಿತ್ತು. ಮೆಜೆಸ್ಟಿಕ್ಕಿನ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಕಟ್ಟಡದ ಪಕ್ಕದ ಓಣಿಯಲ್ಲಿ ತುಸು ದೂರ ನಡೆದರೆ ಬಲಗಡೆಯ ದೊಡ್ಡ ಕಟ್ಟಡಕ್ಕೆ ‘ಸೂರ್ಯಸಾಗರ ರೆಸಿಡೆನ್ಸಿ’ ಅನ್ನುವ ಫಲಕ. ಹಗಲಿನಲ್ಲಿ ಕೆಂಪಾಗಿ ರಾತ್ರಿಯಲ್ಲಿ ಬಣ್ಣ ಬಣ್ಣದಾಗಿ ಕಾಣುವ ಫಲಕವದು. ಅದೇ ಜಯಸೂರ್ಯನ್ ಕೆಲಸ ಮಾಡುವ ಲಾಡ್ಜ್. ಮೆಜೆಸ್ಟಿಕ್ ತುಂಬಾ ಹತ್ತಿರವೇ ಇರುವ ಈ ಲಾಡ್ಜ್‍ಗೆ ಬೆಳ್ ಬೆಳಗ್ಗೆ ಅದೆಷ್ಟು ಜನ ಬರ್ತಾರೆ. ಬೆಂಗಳೂರಿಗೆ ಕೆಲಸಕ್ಕೆಂದು ಬರುವವರ ದೊಡ್ಡ ದಂಡೆ ಇರುತ್ತದೆ. ಆಟೋದವರು ಕರೆದುಕೊಂಡು ಬಂದು ರೂಮು ಕೊಡಿಸಿ ಮಾಮೂಲಿ ಪಡೆದು ಹೊರಟು ಹೋಗುತ್ತಾರೆ.

ಸುಮಾರು ಒಂದು ವಾರದಿಂದ ಅಲ್ಲಿದ್ದ ಜಯನಿಗೆ ಲಾಡ್ಜ್‍ಗೆ ಬರುವವರ ಮುಖಗಳು ಗೊತ್ತಾಗತೊಡಗಿದ್ದವು. ಇಲ್ಲಿನ ಭಾಷೆ ಅರ್ಥವಾಗುವುದಿಲ್ಲ. ಇವರೆಲ್ಲಾ ಏನು ಮಾತಾಡಿಕೊಳ್ಳುತ್ತಾರೆ ಎಂಬುದು ಅವನಿಗೆ ತಿಳಿಯುವುದಿಲ್ಲ. ತಿಳಿಯಬಾರದೆಂದೆ ಅವನು ಇಲ್ಲಿನ ಭಾಷೆಯನ್ನು ಕಲಿಯಲು ಹೋಗಿಲ್ಲ. ಮ್ಯಾನೇಜರ್ ಆಗಾಗ ರೇಗುತ್ತಾರೆ “ಅರೆ ಯಾರ್ ಕಿತನೇ ದಿನ್ ಹೋಗಯೇ ಆಪಕೋ ಯಹಾ ಆಕರ್, ಯಹಾ ಕಾ ಭಾಷಾ ಸಮಝಮೇ ನಹೀ ಆಯಾ ಮತಲಬ್ ಕೈಸೆ?” ಅನ್ನುತ್ತಾರೆ. “ಆಪಕೀ ಭಾಷಾ ಮುಷ್ಕಿಲ್ ಹೈ ಭೈಯಾ..” ಒಂದು ನೆವ ಹೇಳಿ ಸುಮ್ಮನಾಗುತ್ತಾನೆ ಜಯ. ಹೋಟೆಲ್‍ನಲ್ಲಿದ್ದಾಗ ಇಲ್ಲಿನ ಮಾತುಗಳನ್ನು ಕಲಿಯಬೇಕು ಅಂತ ಅನಿಸಿದ್ದರೂ ಈ ಲಾಡ್ಜ್‌ಗೆ ಬಂದ ಮೇಲೆ ಮಾತುಗಳು ಅರ್ಥವಾಗುವುದೇ ಬೇಡವೆಂದು ಸುಮ್ಮನಾಗಿದ್ದ “ಪ್ರೆಂಡ್ ಮನೆಗೆ ಹೋದೆ ಅಂತ ನಂಬಿಸಿ ಬಂದೆ ಕಣೊ, ಅಯ್ಯೊ ಗೊತ್ತಾದರೂ ಏನ್ ಮಾಡ್ತಾರೆ ಬಿಡೊ..” ಇಂತಹ ಮಾತುಗಳನ್ನು ಕೇಳಿಸಿಕೊಳ್ಳುವುದು ಅವನಿಗೆ ಅತೀ ಕಷ್ಟದ್ದು.

ಲಾಡ್ಜ್‌ಗೆ ಬರುತ್ತಿದ್ದ ಹತ್ತು ಜನರಲ್ಲಿ ನಾಲ್ಕು ಜನಕ್ಕೆ ಬೇರೆಯದೆ ಉದ್ದೇಶ ಇರುತ್ತದೆ ಎಂದು ಜಯಗೆ ಈಗೀಗ ಅನಿಸತೊಡಗಿದೆ. ಕೆಲವರಂತೂ ಬಂದು ಒಂದೇ ಗಂಟೆಗೆ ಚೆಕ್‍ಔಟ್ ಆಗುತ್ತಿದ್ದರು. ಕೆಲವರು ಎರಡ್ಮೂರು ದಿನ ಇದ್ದು ಹೋಗುತ್ತಿದ್ದರು. ಒಂಟಿಯಾಗಿ ಯಾವುದೊ ಕೆಲಸದ ಮೇಲೆ ಬಂದವರು, ಫ್ಯಾಮಿಲಿ ಸಮೇತ ಬಂದವರು, ಮಕ್ಕಳೊಂದಿಗೆ ಬಂದವರು, ಒಂಟಿಯಾಗಿ ಬಂದ ಹುಡುಗಿಯರು, ಒಂಟಿಯಾಗಿ ಬಂದ ಮಧ್ಯ ವಯಸ್ಕರು.. ಹೀಗೆ ಜಯ ಒಂದು ವಾರದಲ್ಲಿ ಎಲ್ಲಾ ತರಹದ ಜನರನ್ನೂ ನೋಡಿಬಿಟ್ಟಿದ್ದ. ಎಲ್ಲಿಂದಲೊ ಬಂದವರಿಗೆ ಮನೆಯಂತೆ ಸಲುಹುವಾ ಈ ರೂಮುಗಳ ಬಗ್ಗೆ ಅವನಿಗೆ ಒಂದು ಅಭಿಮಾನವೂ ಇತ್ತು.

ಆದರೆ ಅವನನ್ನು ತುಂಬಾ ಕಾಡುತ್ತಿದ್ದದ್ದು ಕೆಲವು ಗಂಟೆ ಮಾತ್ರ ಇದ್ದು ಹೋಗುತ್ತಿದ್ದ ಜನರದ್ದು. ಬರುವಾಗ ಅವನಲ್ಲಿ ಹುರುಪು ಇರುತ್ತಿತ್ತು, ಅವಳಲ್ಲಿ ಭಯ ಇರುತ್ತಿತ್ತು. ದಂಪತಿಗಳಂತೆ ನಟನೆ ಇರುತ್ತಿತ್ತು. ಏನೇನೊ ಪಿಸಿ ಪಿಸು ಮಾತು, ಅಂಜಿಕೆ, ದೂರ ದೂರ ನಿಲ್ಲುವುದು, ಆಟೋದವನು ನಮ್ಮವರೆ ಅಂತ ಶಿಫಾರಸು ಮಾಡುವುದು ಇವೆಲ್ಲವನ್ನು ನೋಡುತ್ತಿದ್ದ. ಆರಂಭದಲ್ಲಿ ಇವರೆಲ್ಲಾ ದಂಪತಿಗಳೇ ಇರಬಹುದು ಅಂದುಕೊಂಡಿದ್ದ ಜಯ. ಆದರೆ ಒಮ್ಮೆ ಅಂತಹ ರೂಮುಗಳಲ್ಲಿ ವೀರ್ಯ ತುಂಬಿದ ಕಾಂಡೂಮು ಮತ್ತು ಒಡೆದ ಬಿದ್ದ ಬಳೆಯ ಚೂರುಗಳು, ಅಲ್ಲಲ್ಲಿ ಸುರಿದು ಬಿದ್ದ ಹೆಂಗಸರ ತಲೆ ಕೂದಲುಗಳು, ಮದ್ಯದ ಬಾಟಲಿಗಳು, ಸಿಗರೇಟು ತುಂಡುಗಳು ಅವನಿಗೆ ಬಂದು ಹೋದವರ ಉದ್ದೇಶವನ್ನು ಸ್ಪಷ್ಟವಾಗಿ ಅರ್ಥ ಮಾಡಿಸುತ್ತಿದ್ದವು. ಆ ಕ್ಷಣದಲ್ಲಿ ಅವನಿಗೆ ಅವನ ಅಪ್ಪ ನೆನಪಾಗುತ್ತಿದ್ದ, ಹಿಂದಿನಿಂದ ಅಮ್ಮನ ನರಳುವಿಕೆ ಕೇಳಿಸುತ್ತಿತ್ತು. ತಲೆ ಸಿಡಿದಂತಾಗಿ ಅಲ್ಲಿಂದ ಎದ್ದು ರೆಸಿಡೆನ್ಸಿಯ ಕೊನೆ ಮಹಡಿ ತಲುಪಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತಾ ಸುಮ್ಮನೆ ನಿಂತುಕೊಳ್ಳುತ್ತಿದ್ದ. ಎದೆ ತುಂಬಿದಂತಾಗುತ್ತಿತ್ತು. ಲಾಡ್ಜ್ ಬಿಟ್ಟು ಓಡಿ ಹೋಗಬೇಕು ಅನಿಸುತ್ತಿತ್ತು. ಆದರೆ ಅವನಿಗೆ ಬೇರೊಂದು ಕೆಲಸ ಸುಲಭಕ್ಕೆ ಸಿಗುವಂತಿರಲಿಲ್ಲ.

ರೆಸಿಡೆನ್ಸಿಗೆ ಬಂದು ಹೋದವರ ಮನೆಯ ಚಿತ್ರಣ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅವನಿಗೆ ಕಷ್ಟವಾಗುತ್ತಿತ್ತು. ಬಂದ ಹೋದ ಹುಡುಗಿಯ ತಂದೆ, ಸಹೋದರ ಅಥವಾ ಗಂಡ, ಹಾಗೆ ಕರೆದುಕೊಂಡು ಬಂದವನ ಹೆಂಡತಿ, ಅವನ ಮಗಳು, ಅವನ ಮಗ.. ಹೀಗೆ ಎಲ್ಲರೂ ಕಣ್ಣು ಮುಂದೆ ಬರುತ್ತಿದ್ದರು. ಅವರಲ್ಲಿ ತನ್ನನ್ನೆ ನೋಡಿಕೊಂಡಂತೆ, ತನ್ನಲ್ಲಿ ಅವರನ್ನೆ ಕಂಡುಕೊಂಡಂತೆ ಅನಿಸಿತಿತ್ತು. ಅವನಿಗೆ ಗೊತ್ತಿಲ್ಲದೆ ಕಣ್ಣುಗಳು ಹನಿಗೂಡುತ್ತಿದ್ದವು. ಅಮ್ಮನ ದನಿ ಮತ್ತೆ ಮತ್ತೆ ಕೇಳಿಸಿತ್ತಿತ್ತು.


ಮಲಪ್ಪುರಮ್ ಬಿಟ್ಟು ಬಸ್ಸು ಓಡುತ್ತಿತ್ತು. ಜಯ ಕಣ್ಣು ಮುಚ್ಚಿಕೊಂಡು ಕೂತಿದ್ದ. ಕಣ್ಣೊಳಗೆ ಬಸ್ಟ್ಯಾಂಡಿನಲ್ಲಿ ನಿಂತಿದ್ದ ವಸುಂಧರ ಪ್ರತ್ಯಕ್ಷವಾದಳು. ಅವನಿಗೆ ಅವಳ ಮೇಲೆ ದೂರುಗಳಿಲ್ಲ. ದೂರುಗಳೆನಿದ್ದರೂ ಅಪ್ಪನ ಮೇಲೆ. ಅಮ್ಮನನ್ನು ಹಂತ ಹಂತವಾಗಿ ಕೊಂದು ಹಾಕಿದ ಅಪ್ಪನನ್ನು ಅವನು ಕ್ಷಮಿಸುವುದಾದರೂ ಹೇಗೆ?

ವಸುಂಧರಳ ಜೊತೆ ಅಪ್ಪನ ವಿಕಾರ ರೂಪವೂ ಅವನು ಕಣ್ಣೊಳಗೆ ಮೂಡಿತು. ಅಮ್ಮ ಸತ್ತ ದಿನ ಅಪ್ಪ ಅವಳನ್ನು ನೋಡಲು ಬಂದಿದ್ದ. ಜಯ ಕೂಗಾಡಿ ಅಪ್ಪನನ್ನು ಮನೆಯಿಂದ ಆಚೆ ಕಳುಹಿಸಿದ್ದ. “ಎಂಡೆ ಜೀವನ ಭಕ್ಷಿಚ್ಚಿಟ್ಟು ಎಂದಿನಾಣ್ ಶರೀರತ್ತಿನಾಯಿ ವನ್ನದ್? ನೀ ಅವಳುಡೆ ಭರ್ತಾವುಂ ಅಲ್ಲ ಎಂಡೆ ಅಚ್ಚನುಂ ಅಲ್ಲ ಪೋಯ್‍ಕೋಳ್ ” ಎಂದು ಜೋರಾಗಿ ಅರಚಿ ಆಚೆ ನೂಕಿ ಒಳಗೆ ಬಂದು ಅಮ್ಮನ ಹೆಣದ ಮುಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದ. ಅಮ್ಮ, ಅಪ್ಪನಿಂದ ಮತ್ತು ತನಗೆ ಅಂಟಿಕೊಂಡಿದ್ದ ಕೆಸರಿನಿಂದ ಶಾಶ್ವತ ಬಿಡುಗಡೆ ಪಡೆದು ನಿದ್ರಿಸುತ್ತಿದ್ದಳು. ಅವಳ ಮುಖದಲ್ಲಿ ಬಿಡುಗಡೆ ಕಾಣುತ್ತಿತ್ತು. ಜಯನನ್ನು ಸಮಾಧಾನಿಸಲು ಯಾರೂ ಇರಲಿಲ್ಲ. ಅನಾಥ ಅಳುವಿಗೆ ನೋವೇ ಸಮಾಧಾನಿ.

ಅಪ್ಪನಿಗೆ ವಸುಂಧರಳ ಸಹವಾಸ ಹೇಗೆ ಶುರುವಾಯಿತೊ ಏನೊ ಜಯನಿಗೆ ಗೊತ್ತಿರಲಿಲ್ಲ, ಅವನ ಅಮ್ಮನಿಗೂ ಗೊತ್ತಿರಲಿಲ್ಲ. ಆ ಒಂದು ಘಟನೆಯಾಗುವವರೆಗೂ ಇವನ ಅಪ್ಪನ ಸುತ್ತಾ ಅಂತಹ ಅನುಮಾನವೂ ಇರಲಿಲ್ಲ. ವಸುಂಧರ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ದುಡಿದು ಉಣ್ಣುತ್ತಿದ್ದ ಹೆಣ್ಮಗಳೆಂದು ಊರು ಮಾತಾಡುತ್ತಿತ್ತು. ಜಯನ ಕಿವಿಗೂ ಅದು ಬಿದ್ದಿತ್ತು, ವಸುಂಧರಳ ಮೇಲೆ ಅವನಿಗೊಂದು ಗೌರವವೂ ಇತ್ತು.

ಆದರೆ ಇತ್ತೀಚಿಗೆ ಮನೆಯಲ್ಲಿ ಅಪ್ಪ ಅಮ್ಮನ ನಡುವೆ ಸಣ್ಣಪುಟ್ಟ ಜಗಳಗಳಾಗುತ್ತಿದ್ದದ್ದು ಜಯನಿಗೆ ಗೊತ್ತಾಗಿದ್ದರೂ ಗಂಡ-ಹೆಂಡತಿಯರ ಜಗಳವಿದು ಎಂದು ಸುಮ್ಮನಾಗಿದ್ದ. ಅವನ ಅಮ್ಮನಿಗೆ ತನ್ನ ಗಂಡನ ಅಡ್ಡದಾರಿಯ ವಾಸನೆ ಸಿಕ್ಕಿತ್ತೊ ಏನೊ ಗಂಡನೊಂದಿಗೆ ಸದಾ ಜಗಳವಾಡುತ್ತಿದ್ದಳು. ಹೆಂಡತಿಯರಿಗೆ ಗಂಡನ ಸಣ್ಣ ಬದಲಾವಣೆಯೂ ಬೇಗ ಗಮನಕ್ಕೆ ಬಂದುಬಿಡುತ್ತದೆ. ಒಮ್ಮೆ ಜಯನೂ ಅಪ್ಪನ ಪರ ವಹಿಸಿಕೊಂಡು ಅಮ್ಮನಿಗೆ ಬೈದಿದ್ದ. ಯಾಕಮ್ಮ ಮನೆಯಲ್ಲಿ ಅಪ್ಪನಿಗೆ ಒಂದೇ ಸಮ್ಮನೆ ಬೈತೀಯ ಅಂದಾಗ ಅವನ ಅಮ್ಮ ಏನೊಂದೂ ಹೇಳದೆ ಮೂಲೆಯಲ್ಲಿ ಕೂತು ಬಿಕ್ಕಿದ್ದಳು. ಅವನ ಅಪ್ಪ ಎಂದೊ ಮನೆಗೆ ಬರುವುದು, ಬರದೆ ಇರುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ಬೆಳಗ್ಗೆ ಅವರ ಮನೆಗೆ ಬಾರಿಸಿದ ಸಿಡಿಲು ಮನೆಯನ್ನು, ಜಯನನ್ನು ಮತ್ತು ಅವನ ಅಮ್ಮನನ್ನು ಸುಟ್ಟು ಹಾಕುತ್ತದೆಯೆಂದು ಯಾರೂ ಊಹಿಸಿರಲಿಲ್ಲ.

ಜಯನ ಅಪ್ಪ ಮತ್ತು ವಸುಂಧರ ಮಲಪ್ಪುರಮ್ ಲಾಡ್ಜ್‌ವೊಂದರ ರೂಮಿನಲ್ಲಿ ಬೆತ್ತಲಾಗಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇಂತಹ ಅದೆಷ್ಟು ರಾತ್ರಿಗಳನ್ನು ಅಲ್ಲಿ ಕಳೆದಿದ್ದ ಆ ಇಬ್ಬರೂ ಇಂದು ಪೊಲೀಸರ ವಶವಾಗಿದ್ದರು. ಯಾವುದೊ ವೈಶ್ಯವಾಟಿಕೆಯ ಬೆನ್ನುಹತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಇವರು.

ಠಾಣೆಗೆ ಕರೆದುಕೊಂಡು ಬಂದು ಇಬ್ಬರನ್ನೂ ಕೂರಿಸಿಕೊಂಡು ವಿಚಾರಿಸಿದರು. ಮೊದ ಮೊದಲು ಈತ ಈ ವಸುಂಧರ ತನ್ನ ಹೆಂಡತಿಯೆಂದೂ ಮತ್ತು ತಾನು ದೂರದ ಊರಿನವನೆಂದೂ, ಯಾವುದೊ ಕೆಲಸದ ನಿಮಿತ್ತ ಬಂದವನೆಂದೂ ಹೇಳುತ್ತಿದ್ದ ಅವನ ಅಪ್ಪ ಪೊಲೀಸರು ಕೊಟ್ಟ ಎರಡು ಏಟಿಗೆ ಸತ್ಯ ಬಾಯಿ ಬಿಟ್ಟಿದ್ದ.

“ತನಗೊಬ್ಬ ಮಗ ಇದ್ದಾನೆ. ಹೆಂಡತಿಯೂ ಇದ್ದಾಳೆ. ತನ್ನ ಊರು ಕಳಾವ್.. ಇವಳು ತಾನು ಇಟ್ಟುಕೊಂಡ ಗೆಳತಿಯೆಂದು ಸತ್ಯ ಒಪ್ಪಿಕೊಂಡಿದ್ದ. ವಸುಂಧರ ಮುಖಮುಚ್ಚಿಕೊಂಡು ನಿಂತಿದ್ದಳು. ಇಂತಹದೊಂದು ದಿನ ಬರುತ್ತದೆಯೆಂದು ಅವಳೆಂದೂ ಭಾವಿಸಿದಂತಿರಲಿಲ್ಲ. ಪೊಲೀಸರು ಅವಳಿಗೆ ” ಏನಮ್ಮಾ ನಿನಗೂ ಗೊತ್ತಾಗಲ್ವ? ಅಷ್ಟೊಂದು ತೆವಲಾ? ಕಂಡ ಕಂಡಲ್ಲಿ ಮಲಗೋಕೆ ನಾಚಿಕೆ ಆಗಲ್ವ..” ಎಂದು ಈಗ್ಗಾ ಮುಗ್ಗ ಜಾಡಿಸಿದ್ದರು.

ಈ ಸುದ್ದಿ ಏಕಾಏಕಿ ಕಳಾವ್‍ಗೆ ಹಬ್ಬಿಬಿಟ್ಟಿತು. ವಸುಂಧರಾಳ ಜೊತೆ ಜಯನ ಅಪ್ಪ ಲಾಡ್ಜ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದನಂತೆ. ಪೊಲೀಸ್ ಹಿಡ್ಕೊಂಡು ಹೋದ್ರಂತೆ ಅನ್ನುವ ಸುದ್ದಿ ಕಾಳ್ಗಚ್ಚಿದಂತೆ ಹರಡಿತು. ಈ ಬಗ್ಗೆ ಸಣ್ಣ ಅನುಮಾನವನ್ನು ಹೊಂದಿರದ ಊರಿನ ಜನರಲ್ಲಿ ಅಚ್ಚರಿ ಹುಟ್ಟಿತು. ಊರಿನ ಜನ ಅವರ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾತಾಡತೊಡಗಿದರು.

ಜಯನ ಅಮ್ಮನ ಮೇಲೆಯೇ ಹೆಚ್ಚಿನವರ ಮಾತುಗಳಿದ್ದವು. “ಅವಳು ಸರಿಯಾಗಿ ಸುಖ ಕೊಟ್ಟಿದ್ರೆ ಅವನ್ಯಾಕೆ ಇನ್ನೊಬ್ಬಳ ಹತ್ರ ಹೋಗ್ತಿದ್ದ.. ಅವಳಿಗೆ ಇನ್ಯಾರ ಜೊತೆ ಸಂಬಂಧ ಇತ್ತೊ ಏನೊ ಅದು ಗೊತ್ತಾಗಿ ಇವ್ನು ವಸುಂಧರನ ಬೆನ್ನು ಹತ್ತಿರಬೇಕು… ಅವಳಿಗೆ ಏನೊ ಸಮಸ್ಯೆ ಅಂತೆ ರಾತ್ರಿ ಗಂಡನ ಜೊತೆ ಮಲಗಲ್ವಂತೆ.. ಬೆಳೆದ ಮಗ ಇದ್ದಾನೆ ಆವಯ್ಯನಿಗೆ ಚೂರಾದರೂ ಮರ್ಯಾದೆ ಬೇಡ್ವ ಹೆಣ್ಣು ಕಾಣಿಸಿದ ತಕ್ಷಣ ಚಡ್ಡಿ ಕಳ್ಚೊದಾ?.. ವಸುಂಧರಾಗೆ ಇವ್ನು ಎಷ್ಟನೆಯವನೊ.. ಹೇಳೊರು, ಕೇಳೊರು ಯರೂ ಇಲ್ಲ ಅಂದ್ರೆ ಹೀಗೆ” ಮಾತುಗಳು ಊರಿನ ತುಂಬಾ ಹರಿಡಿದವು.

ಜಯನ ಅಮ್ಮನಿಗೆ ನಿಜಕ್ಕೂ ಸಿಡಿಲು ಬಡಿದಂತಾಗಿತ್ತು. ರೂಮಿನ ಬಾಗಿಲಿಕ್ಕಿಕೊಂಡು ಗೋಳಾಡಿ ಅತ್ತು ಬಿಟ್ಟಳು. ಜಯನಿಗೆ ಏನು ಮಾತಾಡಬೇಕೆಂದು ತೋಚಲಿಲ್ಲ. ಅವನಿಗೆ ಮನೆಯಿಂದ ಹೊರ ಹೋಗುವುದು, ಜನರಿಗೆ ಎದುರಾಗುವುದು ಸಾಧ್ಯವಾಗಲಿಲ್ಲ. ಜನ ತನ್ನನ್ನು ನೋಡಿ ನಗಬಹುದು ಎನಿಸಿತ್ತು. ದುಃಖ ತುಂಬಿಕೊಂಡು ಮನೆಯಲ್ಲೆ ಕೂತ.

ಸಂಜೆ ಹೊತ್ತಿಗೆ ಅವನ ಅಪ್ಪ ಮನೆಗೆ ಬಂದ. ಬೀದಿಯಲ್ಲಿ ಬರುವಾಗ ಜನ ಅವನನ್ನೆ ನೋಡುತ್ತಿದ್ದರು. ಮನೆಗೆ ಬಂದು ನಡುಮನೆಯಲ್ಲಿ ಸುಮ್ಮನೆ ಕೂತ. ಎಷ್ಟೋ ಹೊತ್ತಿನ ಬಳಿಕ ರೂಮಿನಲ್ಲಿದ್ದ ಅವನ ಅಮ್ಮ ಹೊರಗೆ ಬಂದು.. ತುಂಬಿದ ಕಣ್ಣುಗಳಿಂದ ಗಂಡನನ್ನು ನೋಡಿದಳು. ಅವನು ತಲೆತಗ್ಗಿಸಿ ಕೂತಿದ್ದ.

“ನೀವು ಅವಳನ್ನು ಕರೆದುಕೊಂಡು ಬಂದು ಇದೇ ಮನೆಯಲ್ಲಿಟ್ಟುಕೊಂಡು ನನ್ನ ಮುಂದೆಯೆ ಮಲಗಿದ್ದರೆ ನನಗಿಷ್ಟು ನೋವಾಗ್ತಿರಲಿಲ್ಲ.. ನಿಮಗೆ ಕಿವಿ, ಮನಸು ಇದ್ದರೆ ಹೊರಗಿನ ನಾಲ್ಕು ಜನರ ಮಾತು ಕೇಳಿಸಿಕೊಳ್ಳಿ. ಈ ಅಪವಾದನ ನಾನು ಹೇಗೆ ಹೋರಲಿ? ಇನ್ನೊಮ್ಮೆ ನೀವು ಈ ಮನೆಗೆ ಬಂದರೆ ನನ್ನ ಹೆಣ ನೋಡುತ್ತೀರಿ. ಹೊರಟು ಹೋಗಿ…” ಇದುವರೆಗೂ ತಡೆದಿದ್ದ ತನ್ನೆಲ್ಲಾ ನೋವನ್ನು ಚೆಲ್ಲಿ ತುಂಬಿದ ಗಂಟಲಲ್ಲಿ ಕೂಗಿ ಕೂಗಿ ಅತ್ತಳು. ಹೊರಗೆ ಜನ ಸೇರಿತ್ತು. ಜಯ ಏನೊಂದು ಮಾತಾಡದೆ ಸುಮ್ಮನೆ ಕೂತಿದ್ದ.

ಜಯನ ಅಪ್ಪ ಮನೆಗೆ ಹೇಗೆ ನಡೆದು ಬಂದಿದ್ದನೊ ಹಾಗೆ ಎದ್ದು ನಡೆದು ಹೋಗಿಬಿಟ್ಟ. ಜಯನೂ ಎಲ್ಲಿಗೆಂದು ಕೇಳಲಿಲ್ಲ.. ಮೂಲೆ ಹಿಡಿದು ಕೂತು ಬಿಕ್ಕಳಿಸುತ್ತಿದ್ದ ಅಮ್ಮನೂ ಕೇಳಲಿಲ್ಲ. ಎದ್ದು ಹೋದ ಅವನ ಮುಖದಲ್ಲಿ ಏನಿತ್ತು? ಇಬ್ಬರಿಗೂ ನೋಡಲಾಗಲಿಲ್ಲ. ಅವನು ಹೊರಗೆ ಬಂದು ಒಮ್ಮೆ ಮನೆಯ ಕಡೆ ತಿರುಗಿ ನೋಡಿ ನಡೆದು ಬಿಟ್ಟ. ದಾರಿಯಲ್ಲಿ ಜನ ಅವನನ್ನೆ ನೋಡುತ್ತಿದ್ದರು. ಅಡ್ಡದಾರಿಯಲ್ಲಿ ಪಡೆವ ಸುಖಕ್ಕೆ ಕಂದಾಯ ಹೆಚ್ಚು.

ಇತ್ತ ಈ ಮನೆಯಲ್ಲಿ ಅಮ್ಮ ಮಗ ಎಷ್ಟೋ ಹೊತ್ತಿನವರೆಗೂ ಕೂತೆ ಇದ್ದರು. ಕಣ್ಣಿನ ರೆಪ್ಪೆ ಆಡಿಸಲೂ ಕೂಡ ಬೇಡವಾಗಿತ್ತು. ಜಯ, ಅಮ್ಮನನ್ನು ಸಮಾಧಾನಿಸಲು ನೋಡಿದ. ಆಗಲಿಲ್ಲ. ಅದು ಸಮಾಧಾನಗೊಳ್ಳುವಂತಹ ವಿಷಯವೂ ಆಗಿರಲಿಲ್ಲ. ಊಟ ಸರಿಯಿಲ್ಲ ಅಂದರೆ ಸಮಾಧಾನಿಸಿ ತಿನ್ನಿಸಬಹುದು. ಊಟವೇ ಬೇಡವೆಂದು ಎದ್ದುವರನ್ನು ಹೇಗೆ ಒಪ್ಪಿಸುವುದು. ಅಮ್ಮನನ್ನು ಮಾತಾಡಿಸಲು ನೋಡಿದ. ಅವಳು ಮಾತಾಡಲಿಲ್ಲ. ದಿನಪೂರ್ತಿ ಅಮ್ಮ, ಮಗ ಕೂತೇ ಇದ್ದರು. ಸಂಜೆ ಹೊತ್ತಿಗೆ ಜಯ ಅಮ್ಮನನ್ನು ಬಿಟ್ಟು ತಾನು ಹೊರ ನಡೆದ. ಯಾವುದೊ ತುರ್ತು ಕೆಲಸಕ್ಕಾಗಿ ಅವನು ಎದ್ದು ಹೋದಂತಿತ್ತು.

ಏಳುಗಂಟೆಯ ಸುಮಾರಿಗೆ ನಿತ್ಯ ಕಲ್ಯಾಣಿಯ ಬಳಿ ಲತಿಕಾ ಬರುತ್ತಿದ್ದಳು. ಲತಿಕಾ ಎಂದರೆ ಜಯನಿಗೆ ಪ್ರಾಣ. ಅವಳು ಅವನದೆ ಬೀದಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಪೃಥ್ವಿರಾಜ ಅವರ ಮಗಳು. ಪದವಿ ಓದಲು ಮಲಪ್ಪುರಮ್‍ಗೆ ಹೋಗಿ ಬರುತ್ತಿದ್ದ ಅವಳನ್ನು ಜಯ ಮೆಚ್ಚುಕೊಂಡಿದ್ದ. ತುಂಬಾ ಚೆಂದದ, ಸಣ್ಣ ಮೈಕಟ್ಟಿನ, ಒಂದು ಸಣ್ಣ ಕೋರೆ ಹಲ್ಲಿರುವ ಲತಿಕಾಳನ್ನು ಜಯ ಪ್ರೀತಿಸುತ್ತಿದ್ದ. ಅವನನ್ನು ಕಾಡಿಸಿ ಕಾಡಿಸಿ ಕೊನೆಗೂ ಅವಳು ಕೂಡ ಅವನ ಪ್ರೀತಿಗೆ ಒಪ್ಪಿಗೆಯಿತ್ತಿದ್ದಳು.

ಇಬ್ಬರೂ ಎರಡ್ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಮದುವೆಯಾಗಬೇಕು ಅಂದುಕೊಂಡಿದ್ದರು. ಜಯ ಅವಳೊಂದಿಗೆ ಏನಾದ್ರೂ ಮಾತಾಡುವುದಿದ್ದರೆ ಕಲ್ಯಾಣಿಯ ಬಳಿ ಏಳು ಗಂಟೆಗೆ ಹಾಜರಿರುತ್ತಿದ್ದ. ಇಂದು ಜಯ ಅಪ್ಪನ ವಿಚಾರವಾಗಿ ಲತಿಕಾಗೆ ಮುಟ್ಟಿರುವ ವಿಚಾರದ ಬಗ್ಗೆ ಮಾತಾಡಲು ಬಯಸಿ ಹೊರಟು ಬಂದಿದ್ದ. ಸರಿಯಾಗಿ ಏಳು ಗಂಟೆಗೆ ಕಲ್ಯಾಣಿಯ ಬಳಿ ಲತಿಕಾ ಬಂದಳಾದರೂ ಜಯನ ಕಡೆ ನೋಡದೆ ಹೋಗಿ ಬಿಟ್ಟಳು. ಜಯನ ಎದೆಗೆ ಬೆಂಕಿಯಿಟ್ಟಂತಾಯ್ತು. ಎಂದೂ ಕೂಡ ಉಪೇಕ್ಷೆ ಮಾಡದ ಲತಿಕಾಳ ಈ ನಡೆಯಿಂದ ಅವನು ಕಂಗಾಲಾಗಿ ಹೋದ. ಅವನಿಗೆ ಏನೂ ಮಾಡಬೇಕೆಂದು ಈ ಕ್ಷಣಕ್ಕೆ ತಿಳಿಯಲಿಲ್ಲ, ಕಂಗಾಲಾದ. ಇದುವರೆಗೂ ಅಪ್ಪನ ಬಗ್ಗೆ ಬರೀ ತಿರಸ್ಕಾರವಿದ್ದ ಅವನಿಗೆ ಈಗ ಲತಿಕಾಳ ನಡೆಯಿಂದ ಅವನ ಮೇಲೆ ದ್ವೇಷವೂ ಹುಟ್ಟಿಕೊಂಡಿತು.

ಹೇಗೆ ಹೋಗಿದ್ದನೊ ಹಾಗೆಯೇ ಮನೆಗೆ ವಾಪಸು ಬಂದ. ತಂದೆಯ ವಿಚಾರ ಅವಳನ್ನು ಮುಟ್ಟಿದೆ. ಖಂಡಿತ ಅದರಿಂದ ಅವಳಿಗೆ ಕಸಿವಿಸಿ ಆಗಿದೆ. ಅರಗಿಸಿಕೊಳ್ಳಲು ಕಷ್ಟವಾಗಿದೆ. ಇಂತಹ ಕನಿಷ್ಠ ವ್ಯಕ್ತಿಯ ಮಗನನ್ನು ನಾನು ಪ್ರೀತಿಸಬೇಕಾ ಎಂಬ ತಿರಸ್ಕಾರವೂ ಅವಳಲ್ಲಿ ಮೂಡಿರಬೇಕು ಎಂದು ಅಂದಾಜಿಸಿದ. ಯಾಕೊ ಮನಸಿಗೆ ತುಂಬಾ ಸಂಕಟವಾಯಿತು. ಅಪ್ಪನ ಮೋಸ, ಅಮ್ಮನನ್ನು ತಿನ್ನುತ್ತಿರುವ ನೋವು, ಲತಿಕಾಳ ಸಂಜೆಯ ವರ್ತನೆ ಅವನನ್ನು ಸತತವಾಗಿ ಹಣಿಯತೊಡಗಿದವು. ಇದನ್ನು ಅವಳೊಟ್ಟಿಗೆ ಮಾತಾಡಿ ಸರಿಪಡಿಸಿಬೇಕು. ಇಲ್ಲದಿದ್ದರೆ ಇದು ಕೆಟ್ಟು ಹೋಗುತ್ತದೆ ಅನಿಸಿತು. ಲತಿಕಾ ಕೈಬಿಟ್ಟು ಹೋಗುತ್ತಾಳಾ? ಅವನಿಗೆ ಭಯವಾಗತೊಡಗಿತು. ನಡುಗಿ ಹೋದ. ಹಣೆಯ ಮೇಲೆ ಬೆವರ ಸಾಲುಗಳು.

ಮನೆಗೆ ಬಂದಾಗ ಒಳಗೆ ಕತ್ತಲೆ. ಅಮ್ಮ ದೀಪ ಹಚ್ಚಿರಲಿಲ್ಲ. ಇವನೇ ದೀಪ ಹಚ್ಚಿದ. ಅಮ್ಮ ಅಲ್ಲಿರಲಿಲ್ಲ. ಗಾಬರಿಯಿಂದ ಹುಡುಕಾಡಿದ, ಕಾಣಿಸಲಿಲ್ಲ. ಕೂಗಿ ಕರೆದ. ಅಮ್ಮನಿಂದ ಪ್ರತಿಕ್ರಿಯೆ ಬರಲಿಲ್ಲ. ದಡಬಡಾಯಿಸಿ ರೂಮಿಗೆ ಹೋಗಿ ನೋಡಿದ. ಮಲಗಿದ್ದರು. ತುಸು ಸಮಾಧಾನವಾಯಿತು. ಮಾತಾಡಿಸಲು ನೋಡಿದ. ಅಮ್ಮ ಮಾತಾಡಲಿಲ್ಲ. ಮತ್ತೆಂದೂ ಮಾತಾಡುವುದಿಲ್ಲವೊ ಎಂಬಂತೆ ಅವಳು ಗಾಢ ಮೌನದಲ್ಲಿದ್ದಳು. ಊಟಕ್ಕೆ ಕರೆದ. ಅಮ್ಮ ಎದ್ದೇಳಲಿಲ್ಲ. ಅವಳಿಗೆ ಮತ್ತೆ ತಾನು ಜೀವನದಲ್ಲಿ ಎದ್ದು ಕೂರಬೇಕು ಎನ್ನುವ ಯಾವ ಹುರುಪು ಕೂಡ ಅವಳಿಗಿರಲಿಲ್ಲ. ತಾನೇ ಊಟ ತೆಗೆದುಕೊಂಡ ಹೋದ. ಅಮ್ಮ ಏಳಲಿಲ್ಲ. ತಾನೂ ಕೂಡ ಊಟ ಮಾಡದೆ ಹಾಗೆಯೇ ಮಲಗಿಬಿಟ್ಟ. ಮನೆ ಮತ್ತೆಂದೂ ಸರಿಯಾಗದಂತೆ ಕೆಟ್ಟು ಹೋಗಿತ್ತು.

ಅಂದಿನಿಂದ ಅವನ ಅಮ್ಮ ಮಾತು ಬಿಟ್ಟಳು. ಊಟ ಬಿಟ್ಟಳು. ರೂಮಿನಿಂದ ಆಚೆಯೂ ಬರದೆ ಅಲ್ಲಿಯೆ ಉಳಿದರು. ಮಗನ ಯಾವ ಮಾತನ್ನು ಅವಳು ಕೇಳಲಿಲ್ಲ. ಅಂದು ಹೊರಟು ಹೋದ ಅವನ ಅಪ್ಪ ಮತ್ತೆಂದೂ ವಾಪಸು ಬರಲಿಲ್ಲ. ಜನ ಅವನು ವಸುಂಧರಳ ಜೊತೆ ಮಲಪ್ಪುರಮ್‍ನಲ್ಲಿ ವಾಸವಿದ್ದಾನೆ ಎಂದು ಮಾತಾಡಿಕೊಳ್ಳುತ್ತಿದ್ದರು. ಇದು ಜಯನಿಗೆ ಗೊತ್ತಾಗಿತ್ತು ಆದರೆ ಅದನ್ನು ಅವನು ಅಮ್ಮನ ಬಳಿ ಹೇಳಿಕೊಂಡಿರಲಿಲ್ಲ. ಊಟ ಬಿಟ್ಟ ಅಮ್ಮ ದಿನೇ ದಿನೇ ಕೃಶವಾಗತೊಡಗಿದರು. ಜಯ ಬಲವಂತ ಮಾಡಿ ಗಂಜಿ, ಎಳನೀರು ಕುಡಿಸತೊಡಗಿದ.

ಇದಾದ ವಾರದವರೆಗೂ ಲತಿಕಾ ಅವನಿಗೆ ಸಿಗಲಿಲ್ಲ. ಅವಳು ಕಲ್ಯಾಣಿ ಬಳಿಯೂ ಬರಲಿಲ್ಲ. ಮನೆಯಲ್ಲಿ ಅಮ್ಮ ಕೊರಗುತ್ತಾ ಕೂತಿದ್ದಾಳೆ. ಆಚೆ ಲತಿಕಾ ತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ಈ ಎರಡರ ಮಧ್ಯೆ ಜಯ ನವೆದು ಹೋದ. ಒಮ್ಮೊಮ್ಮೆ ಅವನಿಗೆ ಸತ್ತು ಹೋಗುವ ಯೋಚನೆಯಾಗುತ್ತಿತ್ತು. ಅಮ್ಮನ ಮುಖ ನೋಡಿ ದುಃಖವಾಗುತ್ತಿತ್ತು. ಅಮ್ಮ ಒಂದಾದರೂ ಮಾತಾಡಲಿ ಎಂಬ ಆಸೆ ಅವನಿಗೆ. ಅವತ್ತು “ಅವಳನ್ನು ಮನೆಗೆ ಕರೆದುಕೊಂಡು ಬಂದು ನನ್ನ ಮುಂದೆಯೇ ಮಲಗಿಸಿಕೊಂಡಿದ್ದರೂ ನನಗೆ ನೋವಾಗುತ್ತಿರಲಿಲ್ಲ..” ಎಂಬ ಮಾತೇ ಅವನ ಅಮ್ಮ ಆಡಿದ ಕೊನೆಯ ಮಾತು.

ವಾರದ ಬಳಿಕ ಲತಿಕಾಳನ್ನು ಹಿಡಿದು ನಿಲ್ಲಿಸಿ ಮಾತಾಡಿಸಿದ್ದ. ಅವಳು ಒಂದೇ ಮಾತಿನಲ್ಲಿ ಇಡೀ ಸಂಬಂಧವನ್ನು ಕತ್ತರಿಸಿ ಹಾಕಿದ್ದಳು. ಒಮ್ಮೆಯೂ ಕೂಡ ತಿರುಗಿ ನೋಡದೆ ಹೊರಟು ಹೋಗಿದ್ದಳು. ಇವನು ಮಾತ್ರ ನಿಂತ ಹಾಗೆಯೇ ನಿಂತಿದ್ದ. ಅವಳ ಮುಂದೆ ಗೋಗೆರೆಯುವುದು, ಒಪ್ಪಿಸುವುದು, ಕ್ಷಮೆ ಕೇಳುವುದನ್ನು ಅವನು ಮಾಡಲಿಲ್ಲ. ಅವಳನ್ನು ಅವಳ ಪಾಡಿಗೆ ಹೋಗಲು ಬಿಟ್ಟು ನಿಂತಿದ್ದ. ಸಾಧ್ಯವಾದರೆ ಅವಳು ಹೋಗುವ ದಾರಿಯಲ್ಲಿ ಮುಳ್ಳುಗಳೇನಾದರೂ ಇದ್ದರೆ ತೆಗೆದು ಹಾಕಬೇಕು ಅನಿಸಿತು ಅವನಿಗೆ. ಒತ್ತಿ ಬಂದ ದುಃಖವನ್ನು ಹಾಗೆ ಉಳಿಸಿಕೊಂಡು ಬಂದು ಅಮ್ಮನ ಮುಂದೆ ಕೂತು ಬಿಕ್ಕಳಿಸಿದ್ದ. ಅವನ ಅಮ್ಮ ಆಗಲೂ ಮಾತಾಡದೆ ಕೇವಲ ಕಣ್ಣೀರು ಸುರಿಸಿದ್ದರು.

ಅವನ ಅಮ್ಮ ದಿನೇ ದಿನೇ ಕೊರಗುತ್ತಾ, ಸಣ್ಣಗಾಗುತ್ತಾ ಸವೆದು ಹೋಗಿ ತಿಂಗಳ ನಂತರ ಒಂದಿನ ಸತ್ತೆ ಹೋದರು. ಜಯ ಅಂದು ಬೋರಿಟ್ಟು ಅತ್ತ. ನೋಡಲು ಬಂದ ಅಪ್ಪನನ್ನು ಹೊರಹಾಕಿದ. ಅಮ್ಮನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ. ಆದರೆ ಅದೇ ದಿನ, ಅದೇ ಊರಲ್ಲಿ ಪಕ್ಕದ ಊರಿನ ದೂರದ ಸಂಬಂಧಿ ಜೊತೆ ಲತಿಕಾಳ ಮದುವೆಯೂ ಅಯಿತು. ಲತಿಕಾಳ ಗಂಡನನ್ನು ಜಯ ದೂರದಿಂದ ನೋಡಿದ್ದ. ಲತಿಕಾಗೆ ಅವನು ಅಷ್ಟೇನೂ ಜೋಡಿಯಲ್ಲ ಅನಿಸಿತ್ತು. ಲತಿಕಾ ತುಂಬಾ ಅವಸರÀಪಟ್ಟಳೊ ಅಥವಾ ತನ್ನ ಮೇಲಿನ ಜಿದ್ದಿಗಾಗಿ ಮದುವೆಯಾಗಿಬಿಟ್ಟಳೊ ಅವನಿಗೆ ಅರ್ಥವಾಗಲಿಲ್ಲ. ಅಂದೇ ಊರು ತೊರೆಯುವ ನಿರ್ಧಾರ ಮಾಡಿ ಮರುದಿನ ರಾತ್ರಿ ಮನೆಬಿಟ್ಟಿದ್ದ.


ಜಯಗೆ ದಢಾರನೆ ಎಚ್ಚರವಾಯಿತು. ಏನೊ ಅಸ್ಪಷ್ಟ ಕನಸು. ಲತಿಕಾ ಬಂದಂತಿತ್ತು ಕನಸಲ್ಲಿ. ಅವನನ್ನು ಬಿಟ್ಟು ಹೋದ ಮೇಲೆ ಅವಳೆಂದೂ ಅವನ ಕನಸಲ್ಲೂ ಸುಳಿದಿರಲಿಲ್ಲ. ಇಂದು ಕನಸಲ್ಲಿ ಕಾಣಿಸಿದ್ದಳು. ಮುಖ ಮಾತ್ರ ಅವಳದು, ದೇಹ ಪಕ್ಷಿಯದು. ಅವಳು ಹಾರಿ ಹಾರಿ ಹೋಗುತ್ತಿದ್ದಳು. ಇನ್ನೊಂದು ಯಾವುದೊ ಪಕ್ಷಿ ಅವಳನ್ನು ಹಿಂಬಾಲಿಸಿಕೊಂಡು ಬಂದು ಅವಳನ್ನು ಕುಕ್ಕಲು ನೋಡುತ್ತಿತ್ತು. ಇವಳು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದಳು. ಎಚ್ಚರವಾಯಿತು. ಎದ್ದು ಕೂತ. ಇದೇನು ಕನಸು ಇμÉ್ಟೂಂದು ವಿಚಿತ್ರವಾಗಿದೆಯಲ್ಲಾ ಅನ್ನುವ ಸಣ್ಣ ಭಯವೂ ಆಯಿತು. ಅವಳಿಗೇನಾಗಿದೆಯೊ ಎಂಬ ಕಾಳಜಿಯೂ ಹುಟ್ಟಿತು.

ಹಾಸಿಗೆಯಿಂದ ಎದ್ದು, ಮುಖ ತೊಳೆದು, ಕಾಫಿ ಕುಡಿದು ಬಂದ. ಹೊತ್ತು ಆರನ್ನು ಮೀರಿ ಹೋಗಿತ್ತು. ಈ ಹೊತ್ತಿನಲ್ಲಿ ಲಾಡ್ಜ್‍ಗೆ ಗಿರಾಕಿಗಳು ಜಾಸ್ತಿ. ಕೆಲಸಕ್ಕೆ ಸಜ್ಜಾಗಿ ನಿಂತ. ಎಂದಿನಂತೆ ಜನ ಬಂದು ರೂಮು ತೆಗೆದುಕೊಂಡು ಒಳಗೆ ಸೇರಿಕೊಳ್ಳುತ್ತಿದ್ದರು. ಇಷ್ಟು ದಿನದ ಅವನ ಅನುಭವದಲ್ಲಿ ಯಾರು ಅಸಲಿ ಜೋಡಿಗಳು, ಬರೀ ಮಲಗಲು ಬಂದವರ್ಯಾರೆಂದು ಅವನಿಗೆ ಬರೀ ಕಣ್ಣಳತೆಯಲ್ಲೆ ತಿಳಿಯುತ್ತಿತ್ತು.

ಸ್ವಲ್ಪ ಹೊತ್ತಿನ ನಂತರ ಒಂದು ಜೋಡಿ ಬಂತು. ಜಯ ಅಲ್ಲೆಲ್ಲೊ ಕೂತಿದ್ದ. ಮ್ಯಾನೇಜರ್ ಕರೆದು ರೂಮು ತೋರಿಸಲು ಹೇಳಿದರು. ಆ ಜೋಡಿಯಲ್ಲಿದ್ದ ಗಂಡಸನ್ನು ನೋಡಿದ್ದೆ ಅವನಿಗೆ ಇದು ಯಾವುದೊ ಪರಿಚಿತ ಮುಖವೆನಿಸಿತು. ಈ ಮೊದಲು ಆ ಮುಖವನ್ನು ಎಲ್ಲೊ ನೋಡಿದ ನೆನಪು ಅನಿಸಿತಿತ್ತು. ಆದರೆ ಅವನ ಜೊತೆ ಇರುವ ಅವಳ ಪರಿಚಯವಿಲ್ಲ. ಇವನ್ಯಾರು ಹಾಗಾದರೆ? ಯೋಚಿಸುತ್ತಲೇ ಅವರೊಂದಿಗೆ ನಡೆದು ಹೋಗಿ ಅವರಿಗೆ ರೂಮು ತೋರಿಸಿದ. ತೋರಿಸುವಾಗ ಒಮ್ಮೆ ಅವನ ಮುಖವನ್ನು ಗಮನವಿಟ್ಟು ನೋಡಿದ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ

ಅಮ್ಮನ ದನಿ ಒಮ್ಮೆ ನರಳಿ ನರಳಿ ಮಾಯವಾಯಿತು.

ಅವನನ್ನು ನೋಡಿ ಜಯಗೆ ಒಮ್ಮೆಲೆ ಎದೆ ದಸಕ್ ಎಂದಿತು.

“ಓಹ್, ಇವನು ಲತಿಕಾಳ ಗಂಡ..” ನೆನಪು ಚಿಮ್ಮಿ ಬಂತು. ಹಾಗಾದರೆ ಇವಳು ಯಾರು? ಮದುವೆಯಾಗಿ ಎರಡು ತಿಂಗಳಾಗಿಲ್ಲ. ಇವನ್ಯಾಕೆ ಬೇರೆಯವರ ಜೊತೆ ಬಂದಿದ್ದಾನೆ?

ಅವರನ್ನು ರೂಮಿನಲ್ಲಿ ಬಿಟ್ಟು ದಡದಡ ಮೆಟ್ಟಿಲಿಳಿದು ಕೆಳಗೆ ಬಂದ. ಯಾವುದೊ ಸಂಕಟವೊಂದು ಆವರಿಸಿದಂತಾಯ್ತು. ಲತಿಕಾಳ ಅಮಾಯಕ ಮತ್ತು ಮುದ್ದು ಮುಖ ನೆನಪಾಯಿತು. ಅವಳಿಗೆ ಮೋಸವಾಗುತ್ತಿದೆ. ಅಲ್ಲೆ ಕರೆದುಕೊಂಡು ಮಲಗಿದ್ದರೆ ಗೊತ್ತಾಗಿ ಬಿಡಬಹುದೆಂಬ ಯೋಚನೆಯಿಂದ ಇಲ್ಲಿಯವರೆಗೂ ಬಂದನೇ?

ಅಪ್ಪನ ವಿಷಯಕ್ಕೆ ತನ್ನನ್ನು ಬಿಟ್ಟು ಹೋದ ಲತಿಕಾ ಸ್ವತಃ ಗಂಡನೇ ಅಂತವನಾಗಿರುವಾಗ ಅದನ್ನು ಹೇಗೆ ಸ್ವೀಕರಿಸುತ್ತಾಳೆ?

ಇದನ್ನು ಲತಿಕಾಗೆ ತಿಳಿಸಲೆ ಈಗಲೇ?
“ನೋಡು.. ಈಗ ಏನಂತೀಯ?” ಎಂದು ಅವಳನ್ನು ಮೂದಲಿಸಲೆ?
ತನಗೇನು ಗೊತ್ತೆ ಇಲ್ಲ ಎಂಬಂತೆ ಸುಮ್ಮನಿರಲೆ? ಸುಮ್ಮನಿರುವುದು ಕೂಡ ನಾನು ಅವಳಿಗೆ ಮಾಡುವ ಮೋಸವಾಗಬಹುದಾ?
ತಿಳಿಸಿದರೂ ಕಷ್ಟ ತಿಳಿಸದಿದ್ದರೂ ಕಷ್ಟ..ಇಕ್ಕಟ್ಟಿನಲ್ಲಿ ಸಿಲುಕಿ ಕೂತ.

ಒಮ್ಮೆ ಮೇಲೆ ಬಂದು. ಅವರ ರೂಮಿನ ಬಳಿ ನಿಂತ. ರೂಮು ಮುಚ್ಚಿಕೊಂಡಿತ್ತು. ಅವನನ್ನು ಹೊರಗೆ ಕರೆದು “ಹೆಂಡತಿಗೆ ಮೋಸ ಮಾಡ್ತಿಯೇನೊ ಲೋಫರ್..” ಎಂದು ನಾಲ್ಕು ಬಾರಿಸಲೇ ಅನಿಸಿತು. ಮನಸು ಬರಲಿಲ್ಲ.

ಇದರಲ್ಲಿ ಅವನೊಬ್ಬನ ಬದುಕು ಮಾತ್ರ ಇರಲಿಲ್ಲ. ಅವನೊಂದಿಗೆ ಬಂದ ಆ ಹೆಂಗಸಿನ ಜೀವನವೂ ಇದೆ. ಅವಳ ಗಂಡ, ಅವಳ ಮಗ, ಅವಳಿಗಿರಬಹುದಾದ ಅವಳದೇ ಒಂದು ನಂಬಿಕಸ್ಥ ಕೋಟೆ ಇದೆ. ಅದೆಲ್ಲವೂ ಇದೊಂದು ಘಟನೆಯಿಂದ ಒಡೆದುಹೋಗಬಹುದು. ಆದರೆ ಲತಿಕಾಳ ಜೀವನ?

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಸೀಕ್ರೆಟ್ ಸ್ಯಾಂಟಾ

ಬರೀ ದೇಹಕ್ಕಾಗಿ ಬಂದರೆ ಅಡ್ಡಿಯಿಲ್ಲ.. ದೇಹದ ಹಸಿವು ತೀರಿದ ಮೇಲೆ ಊರು ಸೇರುತ್ತಾರೆ. ಆದರೆ ಮನಸಿನ ಹಸಿವಿಗಾಗಿ ಬಂದಿದ್ದರೆ ಇವರು ಮರಳಿ ಹೋದರೂ.. ಮರಳಿ ತಮ್ಮ ತಮ್ಮ ಸಂಸಾರಗಳಲ್ಲಿ ಉಳಿದು ಹೋಗುತ್ತಾರಾ? ಅವನಿಗೆ ಇದೊಂದು ಬಿಡಿಸಲಾಗದ ಒಗಟಾಯಿತು.

ನನಗೆ ಗೊತ್ತಿದೆ ನಿಜ.. ನಾನು ಅದನ್ನು ಮುಚ್ಚಿಹಾಕಬಹುದು.ಆದರೆ ನಾಳೆ ಬೇರೆಯವರಿಗೆ ಗೊತ್ತಾಗಿ ಅದು ಲತಿಕಾಗೆ ಹೋಗಿ ತಲುಪಿದರೆ ಅವಳ ಮನಸ್ಸು ಏನಾಗಬೇಡ..?

“ಜಯಾ, ಏಕ್ ಮಿನಟ್ ದೇಕ್ತೇ ರಹೋ, ಆಯಾ..” ಎಂದು ಮ್ಯಾನೇಜರ್ ಎದ್ದು ಹೋದ.

ತನ್ನ ಯೋಚನೆಗಳಿಂದ ತಪ್ಪಿಸಿಕೊಂಡು ಜಯ ಕೆಳಗೆ ಬಂದು ಕೂತ.

ಅಮ್ಮನ ಅರ್ಥವಾಗದ ಆ ಅಸ್ಪಷ್ಟ ದನಿ ಮತ್ತೊಮ್ಮೆ ಅವನಿಗೆ ಕೇಳಿಸಿತು. ಆ ದನಿ ಬಂದಾಗಲೆಲ್ಲಾ ಜಯ ಗೆಲುವಾಗುತ್ತಾನೆ.

ಮ್ಯಾನೇಜರ್ ಜಾಗದಲ್ಲಿ ಬಂದು ಕೂತ ಎರಡ್ಮೂರು ನಿಮಿಷಕ್ಕೆ ರೆಸಿಡೆನ್ಸಿಯ ಮುಂದೆ ಪೊಲೀಸ್ ಜೀಪೊಂದು ಬಂದು ಗಕ್ಕನೆ ನಿಂತಿತು. ಮೊನ್ನೆಯಷ್ಟೇ ಇಲ್ಲಿನ ಹುಡುಗರು ಲಾಡ್ಜ್‌ಗೆ ಪೊಲೀಸರು ಬಂದಾಗ, ಇಲ್ಲಿ ಸಿಕ್ಕಿ ಬೀಳುವವರ ಪಡಿಪಾಟಲ ಬಗ್ಗೆ ಹೇಳಿದ್ದರು.

ಪೊಲೀಸ್ ಜೀಪ್ ಬಂದಿದ್ದೆ.. ಇವನ ಕಣ್ಣ ಮುಂದೆ ಬಂದದ್ದು ಲತಿಕಾ ಮತ್ತು ಅವಳ ಗಂಡ. ಲತಿಕಾಳ ಗಂಡ ಯಾರೊಂದಿಗೆ ಮಲಗಿರುವ ವಿಷಯ ಈಗ ಪೊಲಿಸರಿಗೆ ಸಿಗಬಹುದು. ಅದು ಊರಿಗೆ ತಲುಪಿಯೇ ತಲುಪುತ್ತದೆ. ಏನು ಮಾಡುವುದೆಂದು ಯೋಚಿಸಲು ಅವನ ಬಳಿ ತುಂಬಾ ಸಮಯ ಇರಲಿಲ್ಲ. ಪೊಲಿಸರು ಇನ್ನೇನು ಲಾಡ್ಜಿನ ಒಳಗೆ ಬರಬೇಕು ಅನ್ನುವಾಗಲೇ ಜಯ ಓಡಿಹೋಗಿ. ರೂಮು ರಿಜಿಸ್ಟರ್ ತೆಗೆದು ಲತಿಕಾಳ ಗಂಡ ಇರುವ ರೂಮು ನಂಬರ್ 17 ರ ಮುಂದೆ ಚೆಕ್ ಔಟ್ ಅಂತ ಬರೆದು. ಆ ರೂಮಿನ ಇನ್ನೊಂದು ಕೀ ಎತ್ತಿಕೊಂಡು ಓಡಿ ಹೋಗಿ ಆ ರೂಮಿನ ಬೀಗವನ್ನು ಹೊರಗಡೆಯಿಂದ ಹಾಕಿ ದಡದಡ ಇಳಿದುಬಿಟ್ಟ.

‘ಇಂಥದೊಂದು ಬೀಗವನ್ನು ಅಪ್ಪನ ರೂಮಿಗೆ ಯಾರಾದರೂ ಹಾಕಿದ್ದರೆ..?’ ಅವನ ಮನಸಿನಲ್ಲಿ ಪ್ರಶ್ನೆಯೊಂದು ಚಿಮ್ಮಿತು.

ಈಗವವನಿಗೆ ಅಮ್ಮನ ದನಿ ಕೇಳಿಸಲಿಲ್ಲ.

ಅದೇ ಕೊನೆ ಮತ್ತೆಂದೂ ಅವನಿಗೆ ಅಮ್ಮನ ದನಿ ಕೇಳಿಸಲಿಲ್ಲ.

                    *****

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ

Exit mobile version