:: ಶಮ ನಂದಿಬೆಟ್ಟ
ನೆನಪುಗಳ ಮಾತು ಮಧುರವೇ ಅಂತೇನಿಲ್ಲ
ಅಮ್ಮ ಹೋಗಿ ಕೆಲವೇ ತಿಂಗಳುಗಳಾಗಿತ್ತು. ಯಾವುದೋ ಕೆಲಸದ ನಿಮಿತ್ತ ಊರ ಕಡೆ ಹೋದಾಗ ಕೆ.ಟಿ.ಗಟ್ಟಿಯವರನ್ನು ಭೇಟಿಯಾಗಬೇಕೆನಿಸಿತ್ತು. ಅವರು ಉಜಿರೆಯಿಂದ ಮಂಗಳೂರಿಗೆ ಹೋಗಿ ನೆಲಸಿದ್ದ ಹೊಸತು. ಹೊಸ ಮನೆಗೆ ಹೊಂದಿಕೊಂಡರೋ ಇಲ್ಲವೋ ಇಷ್ಟು ಬೇಗ ನಾನು ಹೋದರೆ ವೃದ್ಧ ದಂಪತಿಗಳಿಗೆ ಕಿರಿಕಿರಿ ಆಗಬಹುದಾ ಯೋಚನೆ. ಆದರೂ ಒಂದು ಕರೆ ಮಾಡಿದ್ದೆ. ತುಂಬ ಅಕ್ಕರೆಯಿಂದ ಈ ಸಲ ಮನೆಗೆ ಬಾರದೇ ವಾಪಸ್ ಹೋಗಕೂಡದು ಎಂದಿದ್ದರು. ಇಬ್ಬರೇ ಇರುವ ಮನೆಗೆ ಇನ್ನೊಬ್ಬಳು ಬಂದರೆ ಅಷ್ಟು ಹೊತ್ತಾದರೂ ಹಾಯೆನಿಸುತ್ತದೆ ಬಾ ಅಂದರು. ಅಷ್ಟು ವರ್ಷಗಳ ಕಾಲ ಬೇರೂರಿದ್ದ ಉಜಿರೆ ಬಿಟ್ಟು ಪಟ್ಟಣಕ್ಕೆ ಬಂದ ನೋವು ಕಂಡೂ ಕಾಣದಂತೆ ಅಲ್ಲೇ ತಿರುಗಾಡುತ್ತಿತ್ತು. ಮಾತಿನ ನಡುವೆ ಅಮ್ಮ ಓದುತ್ತಿದ್ದ ಅವರ ಕಾದಂಬರಿಗಳು ಇತ್ಯಾದಿ ಸುಳಿದವು.
ಅಮ್ಮ ಹೋದ ಬಗ್ಗೆ ಹೇಳುವಾಗ ಅಮ್ಮ ದೇಹದಾನ ಮಾಡಿದ ವಿಷಯ ಬಂತಲ್ಲ, ದಂಪತಿಗಳಿಬ್ಬರೂ ಥಟ್ಟನೆ “ಬೇರೆಲ್ಲ ಬಿಡು, ದೇಹದಾನ ಮಾಡುವ ಬಗ್ಗೆ ಪೂರ್ತಿ ವಿವರ ಹೇಳು” ಅಂದರು. ಅಮ್ಮನಿಗೆ ವಿವರಿಸಿದಷ್ಟೇ ಅಕ್ಕರೆಯಿಂದ ಎಲ್ಲ ಹೇಳಿದ್ದೆ. “ಸರಿ, ಫಾರ್ಮ್ ತರಿಸಿಕೊಳ್ಳುವೆ” ಎಂದಿದ್ದರು. ಹೊರಟ ನಂತರ ಯಾಕೋ ಸಮಾಧಾನ ಎನಿಸಲಿಲ್ಲ. ಮಕ್ಕಳು ಯಾರೂ ತೀರ ಸಮೀಪದಲ್ಲಿ ಇಲ್ಲ; ಇನ್ನಿವರು ಇದಕ್ಕೆ ಇನ್ಯಾರನ್ನೋ ಆಶ್ರಯಿಸುವುದು ಬೇಡವೆನಿಸಿ ಹತ್ತಿರದಲ್ಲೇ ಇದ್ದ ಕೆ.ಎಂ.ಸಿ ಆಸ್ಪತ್ರೆಯಿಂದ ಫಾರಂ ಕೂಡ ಕೊಟ್ಟು ಬಂದೆ. ಬಹುಶಃ ಒಂದೆರಡು ತಿಂಗಳ ನಂತರ ಇರಬಹುದು ಅವರದ್ದೇ ಕರೆ. ಚಿಕ್ಕ ಮಕ್ಕಳು ನಂಗೆ ಹೊಸ ಬಟ್ಟೆ ತಂದಿದ್ದಾರೆ ಗೊತ್ತಾ ಅನ್ನುವಷ್ಟೇ ಸಂಭ್ರಮದಿಂದ “ನೀನು ಕೊಟ್ಟ ದೇಹದಾನದ ಫಾರ್ಮ್ ತುಂಬಿಸಿ ಆಯ್ತು; ಆಸ್ಪತ್ರೆಗೆ ಕೊಟ್ಟು ಬಂದೆವು” ಅಂದಾಗ ನನ್ನ ದನಿ ಭಾರವಾದ್ದು ಅವರಿಗೆ ಗೊತ್ತಾಗದಂತೆ ಮ್ಯಾನೇಜ್ ಮಾಡಿ ಏನೋ ಹಾಳು ಹರಟೆ ಮಾತಾಡಿ ಮುಗಿಸಿದ್ದೆ.
ನನ್ನ ಒಂದು ಮಾತಿಗೆ ದೇಹದಾನದ ನಿರ್ಧಾರ ಕೈಗೊಂಡ ಅಮ್ಮ, ಅವಳ ಆಯ್ಕೆಯ ಹಾದಿಯಲ್ಲಿ ನಡೆಯಲು ನಿರ್ಧಾರ ಮಾಡಿದ ಅವಳಿಷ್ಟದ ಬರಹಗಾರರು… ಅವತ್ತಿಡೀ ಭಾವುಕತೆಯೇ ನನ್ನನ್ನು ಆಳುತ್ತಿತ್ತು. ದಿನ ಪೂರ್ತಿ ಯಾವ ಮಾತೂ ಬೇಡದಂತೆ ಫೋನ್ ಕೂಡಾ ಆಫ್ ಮಾಡಿ ಮೌನವಾಗಿ ಕೂತಿದ್ದು ನೆನಪಿದೆ. ಅಮ್ಮನಿಲ್ಲದ ಊರಿಗೆ ಹೋಗುವ ಆಸಕ್ತಿಯೇ ಇಲ್ಲವಾಗಿದ್ದರೂ ಇತ್ತೀಚೆಗೆ ಅವರನ್ನೊಮ್ಮೆ ಭೇಟಿಯಾಗಲಾ ಎನಿಸಿತ್ತು. ಅಷ್ಟರಲ್ಲಿ ಅವರ ನೆನಪಿನ ಶಕ್ತಿ ಪೂರ್ತಿ ಕುಂದಿದೆ ಎಂಬುದೂ ತಿಳಿಯಿತು. ಮಾತು ಮರೆತು, ನೆನಪು ಹೋಗಿ ಬರಿಯ ದೇಹ ಜೀವಂತ ಇರುವ ಅವರನ್ನು ನೋಡುವುದು ನಂಗೇ ಕಷ್ಟವೆಂದು ಸುಮ್ಮನುಳಿದೆ. ಇನ್ನು ಆ ಕಷ್ಟವಿಲ್ಲ; ಅವರಿಗೆ ಯಾವುದೂ ನೆನಪಾಗುವುದೂ ಬೇಕಿಲ್ಲ. ನಮ್ಮೊಳಗೆ ನೆನಪನ್ನುಳಿಸಿ ತಾನೇ ನಡೆದಿದ್ದಾರೆ. “ಇನ್ನೀಗ ಅಮ್ಮ ಓದಬಹುದಾದ ಒಂದಷ್ಟು ಕತೆಗಳನ್ನು ಅಲ್ಲೂ ಬರೀತಿರಲ್ಲ?” ಪ್ರಶ್ನೆ ಕೇಳುತ್ತಿದ್ದೇನೆ, ಅವರ ಮೆಲುನಗುವಿನ ಸದ್ದು ತಥಾಸ್ತು ಎಂದಿದೆ.
ಇದನ್ನೂ ಓದಿ: KT Gatti : ಖ್ಯಾತ ಕಾದಂಬರಿಕಾರ, ವಿದೇಶದಲ್ಲೂ ಶಿಕ್ಷಕರಾಗಿದ್ದ ಸಾಹಿತಿ ಕೆ.ಟಿ. ಗಟ್ಟಿ ಇನ್ನಿಲ್ಲ