ಮಹಾರಾಷ್ಟ್ರದ ವರ್ಲಿ ಆದಿವಾಸಿಗಳ ಜೀವನ ಕ್ರಮ ಅನನ್ಯ. ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಕಾಳಜಿ ತೋರುವುದನ್ನು ಅವರು ಕರುಣೆ ಎಂದುಕೊಳ್ಳುವುದಿಲ್ಲ. ಬದಲಿಗೆ ನಮ್ಮ ಉಳಿವಿಗೆ ನಾವು ಹಾಕಿಕೊಳ್ಳುವ ಬುನಾದಿ ಎಂದು ಭಾವಿಸುತ್ತಾರೆ. ಕಾಡು ಮತ್ತು ಅಲ್ಲಿನ ಪ್ರಾಣಿಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳು ಎಂಬುದನ್ನು ತೋರಿಸುವಂಥ ವರ್ಲಿ ಚಿತ್ರಕಲೆ ನೋಡುವುದಕ್ಕೂ ಬಲು ಸುಂದರ. ಇಂಥದ್ದೇ ಭಾವವನ್ನು ಹೊತ್ತ ಸುಂದರ ಕಥೆಯೊಂದು ಇಲ್ಲಿದೆ.
ಬಡವನೊಬ್ಬ ಕಾಡಿನಲ್ಲಿ ಹಣ್ಣು-ಹಂಪಲುಗಳನ್ನು ಹುಡುಕುತ್ತಾ ಅಲೆಯುತ್ತಿದ್ದ. ಹುಲಿಯ ಬಾಯಿಗೆ ಹಂದಿಯೊಂದು ಸಿಲುಕಿದ್ದನ್ನು ಕಂಡ ಆತ, ಹಂದಿಯನ್ನು ರಕ್ಷಿಸಿದ. ಆತನಿಂದ ಉಪಕೃತವಾದ ಹಂದಿ, ʻನಿನಗೆ ಧನ್ಯವಾದಗಳು. ನನ್ನ ಜೀವವನ್ನು ರಕ್ಷಿಸಿದ ನಿನಗೆ ನಾನೇನಾದರೂ ಕೊಡಬೇಕು. ಬಾ ನನ್ನೊಂದಿಗೆʼ ಎಂದು ಹೇಳಿ ತನ್ನ ಮನೆಯೆಡೆಗೆ ಹೋಯಿತು. ಈತ ಅದನ್ನು ಹಿಂಬಾಲಿಸಿದ. ತಾನು ವಾಸವಾಗಿದ್ದ ಗುಹೆಯೊಳಗೆ ಹೋದ ಹಂದಿ, ಅಲ್ಲಿಂದ ಹೊರಬರುತ್ತಾ ಕೈಯಲ್ಲಿ ಉಂಗುರವೊಂದನ್ನು ತಂದಿತ್ತು. ಅದನ್ನು ಆತನ ಕೈಗಿಡುತ್ತಾ, ʻಇದೊಂದು ಅದೃಷ್ಟದುಂಗುರ. ಇದನ್ನು ನಿನ್ನ ಮನೆಯ ಮಾಡಿಗೆ ಕಟ್ಟಿಡು. ಇದರಿಂದ ನಿನ್ನ ಮನೆಯಲ್ಲಿ ಸಮೃದ್ಧಿ ತುಂಬಿತುಳುಕುತ್ತದೆʼ ಎಂದು ಹೇಳಿತು. ಉಂಗುರವನ್ನು ತೆಗೆದುಕೊಂಡ ಆತ ಸಂತೋಷದಿಂದ ಮನೆಗೆ ತೆರಳಿದ.
ಮನೆಗೆ ಬಂದು ಕಥೆಯನ್ನೆಲ್ಲಾ ಮಡದಿಗೆ ಹೇಳಿದ ಆತ, ಉಂಗುರವನ್ನು ಮನೆಯ ಮಾಡಿನ ಭಾಗಕ್ಕೆ ಕಟ್ಟಿದ. ರಾತ್ರಿಯಾಯಿತು. ಇಬ್ಬರೂ ನಿದ್ದೆಹೋದರು. ಬೆಳಗ್ಗೆ ಏಳುತ್ತಿದ್ದಂತೆ ಇಬ್ಬರಿಗೂ ಅಚ್ಚರಿ… ಮನೆಯಲ್ಲಿ ದವಸ-ಧಾನ್ಯ, ಹಣ್ಣು-ಹಂಪಲು, ಹಾಲು-ಹೈನ ತುಂಬಿ ತುಳುಕಾಡುತ್ತಿದ್ದವು. ಎಷ್ಟು ದಿನಗಳ ನಂತರ ಇಬ್ಬರೂ ಹೊಟ್ಟೆ ತುಂಬಾ ಉಂಡರು. ತಮ್ಮ ಮನೆಯ ಸಾಕು ಪ್ರಾಣಿಗಳಿಗೂ ಬೇಕಾದಷ್ಟು ಉಣಿಸಿದರು. ಪ್ರತಿದಿನ ಅವರ ಅಗತ್ಯವನ್ನು ಆ ಅದೃಷ್ಟದುಂಗುರು ಸರಾಗವಾಗಿ ಪೂರೈಸುತ್ತಿತ್ತು. ಅವರ ಜೀವನದಲ್ಲಿ ನೆಮ್ಮದಿ ನೆಲೆಸಿತು.
ಊರು-ಕೇರಿಯ ಎಲ್ಲರಿಗೂ ಇವರ ಸಮೃದ್ಧಿಯ ಬಗ್ಗೆ ಕುತೂಹಲ ಆರಂಭವಾಯಿತು. ಕೆಲವರು ಕೇಳಿದರು, ಹಲವರು ಹಣುಕಿದರು, ಇನ್ನಷ್ಟು ಜನ ಅವರವರೇ ಮಾತಾಡಿಕೊಂಡರು. ಅಂತೂ ಇವರಿಗೆ ಇಷ್ಟೊಂದು ಸಮೃದ್ಧಿ ಎಲ್ಲಿಂದ ಬರುತ್ತಿದೆ ಎಂಬುದೇ ಎಲ್ಲರಿಗೂ ಪ್ರಶ್ನೆ. ಊರಿನ ಒಬ್ಬ ದುರ್ಬುದ್ಧಿಯವನಿಗೆ ಮಾತ್ರ ಈ ರಹಸ್ಯವನ್ನು ತಿಳಿಯಲೇಬೇಕೆಂಬ ಛಲ ಹುಟ್ಟಿತು. ಅವರ ಮನೆಯೊಳಗೆ ಬಂದು, ಮಾತಾಡಿ, ನೋಡಿ ಅಡ್ಡಾಡಿ… ಉಂಗುರದ ರಹಸ್ಯವನ್ನು ಕಂಡುಹಿಡಿದೇಬಿಟ್ಟ. ಅದೇ ದಿನ ರಾತ್ರಿ ಅವರ ಮನೆಯೊಳಗೆ ಯಾರಿಗೂ ಗೊತ್ತಾಗದಂತೆ ಬಂದು ಉಂಗುರವನ್ನು ಕದ್ದೂಬಿಟ್ಟ! ತನ್ನ ಮನೆಯ ಮಾಡಿಗೆ ಕಟ್ಟಿಕೊಂಡ. ಕಳ್ಳನ ಮನೆಯೊಳಗೆ ಸಮೃದ್ಧಿ ಹೆಚ್ಚಾದಂತೆ, ಮೊದಲಿನ ಮನೆಯಲ್ಲಿ ಸಿರಿ ಕರಗುತ್ತಾ ಹೋಯಿತು. ತನ್ನ ಉಂಗುರ ಎಲ್ಲಿ ಹೋಯಿತು ಎಂಬುದು ಮೊದಲನೆಯಾತನಿಗೆ ತಿಳಿಯಲಿಲ್ಲ. ತನ್ನ ಸಾಕುಪ್ರಾಣಿಗೆಳಿಗೆ ಉಣಿಸಲು ಏನೂ ಇಲ್ಲವಲ್ಲ ಎಂದು ಮನೆಯೊಡತಿಗೆ ದುಃಖವಾಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಹುಲ್ಲನ್ನು ಚಿನ್ನ ಮಾಡುವ ಕಿನ್ನರ!
ʻನನ್ನಲ್ಲಿ ನಿಮಗೆ ಕೊಡಲು ಏನೂ ಉಳಿದಿಲ್ಲ. ಬೇರೆ ಯಾವುದಾದರೂ ಮನೆ ಹುಡುಕಿಕೊಳ್ಳಿ. ಇಲ್ಲೇ ಇದ್ದರೆ ನಿಮ್ಮ ಹೊಟ್ಟೆ ತುಂಬುವುದಿಲ್ಲʼ ಎಂದು ತನ್ನ ಬೆಕ್ಕು, ನಾಯಿಗಳನ್ನು ಕಳುಹಿಸಿಬಿಟ್ಟಳು. ಈ ಮನೆ ಬಿಟ್ಟು ಹೋಗಲು ಅವುಗಳಿಗೂ ಬಹಳ ಬೇಸರವಾಯಿತು. ತಮ್ಮನ್ನು ಪ್ರೀತಿಸುತ್ತಿದ್ದ ಒಡೆಯ-ಒಡತಿಯನ್ನು ಬಿಟ್ಟು ಹೋಗಲು ಅವುಗಳ ಮನಸ್ಸು ಒಪ್ಪಲಿಲ್ಲ. ಆದರೆ ಮಾಡುವುದೇನು? ʻನಮ್ಮ ಮನೆಯ ಕಥೆ ಹೀಗೇಕಾಯಿತು? ಇದಕ್ಕೆ ನಾವೇನು ಮಾಡಬಹುದು?ʼ ಬೆಕ್ಕು ಕೇಳಿತು ನಾಯಿ. ಹಳೆಯದನ್ನೆಲ್ಲಾ ನೆನಪು ಮಾಡಿಕೊಂಡ ಬೆಕ್ಕು, ʻನಮ್ಮ ಮನೆಯ ಮಾಡಿಗೆ ಕಟ್ಟಿದ್ದ ಉಂಗುರವೊಂದು ಕಾಣೆಯಾಗಿದೆ. ಅದು ಹೋದ ಮೇಲೆ ನಮಗೆಲ್ಲ ಹೀಗಾಗಿದ್ದು. ಅದನ್ನು ಹುಡುಕೋಣವೇ?ʼ ಎಂದು ಕೇಳಿತು.
ಇದಕ್ಕೆ ಎರಡೂ ಪ್ರಾಣಿಗಳು ಒಪ್ಪಿಕೊಂಡು, ಉಂಗುರದ ಹುಡುಕಾಟಕ್ಕೆ ಹೊರಟವು. ತಮ್ಮೂರಲ್ಲೆಲ್ಲಾ ಹುಡುಕುತ್ತಾ ಸಣ್ಣ ತೊರೆಯೊಂದನ್ನು ದಾಟಿ ಅಲ್ಲೊಂದು ಮನೆಗೆ ಹೋದವು. ಆ ಮನೆಯ ಹೊರಗೆ ಇಲಿಗಳ ಮದುವೆಯೊಂದು ನಡೆಯುತ್ತಿತ್ತು. ಇಲಿಗಳ ಮದುವೆಗೆ ಅದು ಅಕಾಲವಾದ್ದರಿಂದ, ಆ ಮನೆಗೆ ಇದ್ದಕ್ಕಿದ್ದಹಾಗೆ ಶ್ರೀಮಂತಿಕೆ ಬಂದಿದೆ ಎಂದು ನಾಯಿಗೆ ಅನಿಸಿತು. ನಾಯಿ-ಬೆಕ್ಕುಗಳೆರಡೂ ಚರ್ಚಿಸಿ, ಆ ಕಳ್ಳನ ಮನೆ ಇದೇ ಇರಬೇಕು ಎಂಬ ತೀರ್ಮಾನಕ್ಕೆ ಬಂದವು. ಬೆಕ್ಕು ಮದುಮಗ ಇಲಿಯನ್ನು ಫಕ್ಕನೆ ಹಿಡಿದುಕೊಂಡಿತು. ಉಳಿದೆಲ್ಲಾ ಇಲಿಗಳು ಬಂದು ʻನಮ್ಮ ಮದುಮಗನಿಗೆ ಏನೂ ಮಾಡಬೇಡ. ನಿನಗೆ ಬೇಕಾದ್ದನ್ನು ಮಾಡುತ್ತೇವೆʼ ಎಂದು ಬೇಡಿಕೊಂಡವು. ಇದನ್ನೇ ಕಾಯುತ್ತಿದ್ದ ಬೆಕ್ಕು-ನಾಯಿಗಳು, ಆ ಮನೆಯೊಳಗೆ ಹೋಗಿ ಮಾಡಿಗೆ ಕಟ್ಟಿದ್ದ ಉಂಗುರವನ್ನು ತಂದುಕೊಡಬೇಕೆಂದು ಕೇಳಿದವು. ಇಲಿಗಳು ಉಂಗುರವನ್ನು ತಂದು ಕೊಟ್ಟ ತಕ್ಷಣ ಇಲಿ-ವರನನ್ನು ಬಿಟ್ಟು ಬೆಕ್ಕು-ನಾಯಿಗಳು ಮನೆಯತ್ತ ತೆರಳಿದವು.
ಈ ಕತೆಯನ್ನೂ ಓದಿ: ಮಕ್ಕಳ ಕಥೆ: ಬ್ರಹ್ಮರಾಕ್ಷಸನಿಗೆ ಚಳ್ಳೆಹಣ್ಣು ತಿನ್ನಿಸಿದ ಜಿಪುಣ
ಇದೇ ಹೊತ್ತಿಗೆ ಜೋರಾಗಿ ಮಳೆ ಪ್ರಾರಂಭವಾಯಿತು. ಬೆಕ್ಕು-ನಾಯಿಗಳು ದಾಟಿ ಬಂದಿದ್ದ ಸಣ್ಣ ತೊರೆಯಲ್ಲೀಗ ಪ್ರವಾಹ ಬಂತು. ಮಳೆ ನಿಲ್ಲುವವರೆಗೆ ಕಾಯುವಷ್ಟು ತಾಳ್ಮೆ ಇವೆರಡಕ್ಕೂ ಇರಲಿಲ್ಲ. ಹರಿಯುತ್ತಿದ್ದ ಪ್ರವಾಹದ ನೀರಿನಲ್ಲೇ ಈಜಿಕೊಂಡು ಮನೆಯತ್ತ ಹೊರಟವು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಕ್ಕಿನ ಬಾಯಲ್ಲಿದ್ದ ಉಂಗುರ ನೀರಿಗೆ ಬಿತ್ತು. ಇವೆರಡೂ ದಡವನ್ನೇನೋ ಸೇರಿದವು. ಆದರೆ ಉಂಗುರ…? ʻಮಳೆ ನಿಂತು ನೀರಿಳಿಯುವವರೆಗೆ ಕಾಯದೆ ಬೇರೆ ದಾರಿಯಿಲ್ಲ ನಮಗೆ. ಸ್ವಲ್ಪ ತಾಳ್ಮೆಯಿಂದ ಇರೋಣʼ ಎಂದಿತು ನಾಯಿ.
ಮಳೆ ನಿಂತಿತು. ನೀರಿನ ಸೆಳವೂ ಕಡಿಮೆಯಾಯಿತು. ಇದೇ ಹೊತ್ತಿಗೆ ಸರಿಯಾಗಿ ಮಳೆಯಿಂದ ಸಂತೋಷಗೊಂಡಿದ್ದ ಕಪ್ಪೆಗಳ ಹಿಂಡೊಂದು ಮದುವೆ ಕಲಾಪ ಪ್ರಾರಂಭಿಸಿತು. ಮೊದಲಿನ ಉಪಾಯದಂತೆ, ಕಪ್ಪೆಗಳ ಮದುಮಗನನ್ನು ಬೆಕ್ಕು ಹಿಡಿದುಕೊಂಡಿತು. ʻನಮ್ಮ ಕಪ್ಪೆ-ವರನನ್ನು ಏನೂ ಮಾಡಬೇಡ ಬೆಕ್ಕಣ್ಣ. ಬದಲಿಗೇನು ಬೇಕು ಕೇಳುʼ ಎಂದು ಕಪ್ಪೆಗಳ ದಿಬ್ಬಣ ಬೇಡಿಕೊಂಡಿತು. ʻನೀರೀನಾಳಕ್ಕಿಳಿದು ಅಲ್ಲೆಲ್ಲಾದರೂ ಇರಬಹುದಾದ ನಮ್ಮ ಉಂಗುರವನ್ನು ಹುಡುಕಿಕೊಡಿʼ ಎಂದು ನಾಯಿ ಅವರಿಗೆ ಹೇಳಿತು. ಕಪ್ಪೆಗಳು ನೀರಿನಾಳಕ್ಕಿಳಿದು ಉಂಗುರ ಹುಡುಕಿ ತಂದವು. ನಾಯಿ-ಬೆಕ್ಕುಗಳು ಕಪ್ಪೆ-ವರನನ್ನು ಬಿಟ್ಟು ಮನೆಯತ್ತ ನಡೆದವು.
ಮನೆಗೆ ಮರಳಿದ ತಮ್ಮ ಸಾಕು ಪ್ರಾಣಿಗಳನ್ನು ಕಂಡು ಒಡತಿಗೆ ಸಂತೋಷವಾಯಿತು. ಜೊತೆಗೆ ಉಂಗುರವನ್ನೂ ತಂದಿದ್ದು ಕಂಡು ಆಶ್ಚರ್ಯವೂ ಆಯಿತು. ಆ ಅದೃಷ್ಟದುಂಗುರ ಮತ್ತೆ ಅವರ ಮನೆಯ ಮಾಡಲ್ಲಿ ಕುಳಿತಿತು. ಸಮೃದ್ಧಿ ಮರಳಿಬಂತು.
ಹೀಗೆ ಪ್ರಾಣಿಗಳನ್ನು ಸಾಕುವುದರಿಂದ, ಪ್ರೀತಿಸುವುದರಿಂದ ಬದುಕು ಸಮೃದ್ಧಗೊಳ್ಳುತ್ತದೆ ಎಂಬ ಭಾವದಲ್ಲಿ ವರ್ಲಿ ಆದಿವಾಸಿಗಳ ಹಿರಿಯರು ತಮ್ಮ ಮಕ್ಕಳಿಗೆ ಜೀವನಪ್ರೀತಿಯನ್ನು ಬೋಧಿಸುವ ಬಗೆಯಿದು.
ಇದನ್ನೂ ಓದಿ: ಮಕ್ಕಳ ಕಥೆ: ಹಾಡು ಮಾರಾಟಕ್ಕಿದೆ!