ಒಂದು
ನಾಳೆ ಸಾವೆಂದು ತಿಳಿದರೆ…
ತೂಸಿಡಿಡೆಸ್ ಎಂಬ ವೃದ್ಧ ತತ್ವಜ್ಞಾನಿಯಿದ್ದ.
ಒಮ್ಮೆ ಜಿಜ್ಞಾಸುವೊಬ್ಬ ಅವನ ಬಳಿಗೆ ತಾತ್ವಿಕ ಜಿಜ್ಞಾಸೆ ನಡೆಸಲು ಬಂದಾಗ, ತೂಸಿಡಿಡೆಸ್ ಹೊಸ ಉಳುತ್ತಿದ್ದ. ಇನ್ನೇನು ಇವತ್ತೋ ನಾಳೆಯೋ ಸಾಯುತ್ತಾನೆ ಎಂಬಂತಿದ್ದ ಆ ವೃದ್ಧ ಹೊಲ ಉಳುವುದು ಇವನಿಗೆ ಮೋಜಿನದಾಗಿ ಕಂಡಿತು.
”ತೂಸಿಡಿಡೆಸ್, ನೀನು ನಾಳೆಯೇ ಸಾಯುತ್ತೀ ಎಂದು ನಿನಗೆ ಗೊತ್ತಾದರೆ, ನೀನು ಈ ಕ್ಷಣ ಏನು ಮಾಡಬಯಸುತ್ತೀ?” ಎಂದು ಪ್ರಶ್ನಿಸಿದ.
”ಏನಿಲ್ಲ, ಹೊಲ ಉಳುವುದು ಮುಂದುವರಿಸುತ್ತೇನೆ” ಎಂದ ತೂಸಿಡಿಡೆಸ್.
—————————
ಎರಡು
ಲಾಫಿಂಗ್ ಬುದ್ಧ
ಜಪಾನ್‌ನಲ್ಲಿ ಲಾಫಿಂಗ್ ಬುದ್ಧ ಎಂಬ ಜೆನ್ ಗುರು ಇದ್ದ. ಒಂದು ಜೋಳಿಗೆ ತುಂಬಿಕೊಂಡು ಹೋದಲ್ಲಿ ಬಂದಲ್ಲಿ ಮಕ್ಕಳಿಗೆ ಮಿಠಾಯಿ ಹಂಚುತ್ತಿದ್ದ. ಅವನು ಹೋದಲ್ಲೆಲ್ಲ ನಗೆ ಬುಗ್ಗೆ ಸಿಡಿಸುತ್ತಿದ್ದ. ಜಗತ್ತಿನ ಯಯಾವುದೇ ವಿಚಾರವಿರಲಿ, ಅವನ ನಗೆಗೆ ಕಾರಣ ಆಗುತ್ತಿತ್ತು. ಯಾವತ್ತೂ ಸಂತೋಷವಾಗಿರಬೇಕು ಎನ್ನುವುದು ಅವನ ತತ್ವ. ಅದಕ್ಕೇ ಅವನನ್ನು ಲಾಫಿಂಗ್ ಬುದ್ಧ ಎನ್ನುತ್ತಿದ್ದರು.
ಒಂದು ದಿನ ಅವನು ಸತ್ತುಹೋದ. ಅವನನ್ನು ಅವನ ಜೋಳಿಗೆಯ ಸಮೇತ ಸುಡಲಾಯಿತು. ಅವನ ದೇಹಕ್ಕೆ ಅಗ್ನಿಸ್ಪರ್ಶ ಆಗುತ್ತಿರುವಂತೆ, ಇದ್ದಕ್ಕಿದ್ದಂತೆ ಅವನ ಜೋಳಿಗೆಯೊಳಗಿಂದ ನೂರಾರು ಪಟಾಕಿಗಳು ಸಿಡಿಯುತ್ತಾ ಚಿನಕುರುಳಿ ಸೃಷ್ಟಿಸುತ್ತಾ ಸುತ್ತಲಿದ್ದವರ ಕಣ್ಣಿಗೆ ಹಬ್ಬ ಸೃಷ್ಟಿಸಿದವು.
ನಗುವ ಬುದ್ಧ ತನ್ನ ಶವಸಂಸ್ಕಾರದಲ್ಲೂ ನಗೆಯನ್ನೇ ಅಲ್ಲಿದ್ದವರಿಗೆ ಕೊಟ್ಟಿದ್ದ.