Site icon Vistara News

Ram Mandir: ರಾಮ ಶಿಲೆ ಸಿಕ್ಕ ಜಾಗದಲ್ಲೇ ಮಂದಿರಕ್ಕೆ ಅಡಿಗಲ್ಲು; ಭೂಮಿ ಬಿಟ್ಟುಕೊಟ್ಟ ದಲಿತ ರೈತ

Harohalli Ram Mandir Bhoomi Puja

ಮೈಸೂರು: ಮೈಸೂರಿನ ಶಿಲ್ಪಿ ಅರುಣ್‌ ಯೋಗಿ ರಾಜ್‌ ಅವರು ಕೆತ್ತಿದ ರಾಮನ ಮೂರ್ತಿ ಜನವರಿ 22ರ ದಿನವಾದ ಸೋಮವಾರ ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Ram Lalla Murti Pranapratishthapane) ಕಾರ್ಯ ನೆರವೇರಿದೆ. ಈ ಮೂರ್ತಿಯನ್ನು ಕೆತ್ತಲು ಬಳಸಿದ ಕಲ್ಲು ಮೈಸೂರು ತಾಲೂಕು ಹಾರೋಹಳ್ಳಿಯ ಜಮೀನಿನಲ್ಲಿ ಸಿಕ್ಕಿದ್ದರಿಂದ ಅಲ್ಲೀಗ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಲಾಗಿದೆ. ಈಗ ಇದಕ್ಕೆ ಶಾಸಕ‌ ಜಿ.ಟಿ.ದೇವೆಗೌಡ (GT Devegowda) ನೇತೃತ್ವದಲ್ಲಿ ಭೂಮಿ ಪೂಜೆಯನ್ನೂ ನೆರವೇರಿಸಲಾಗಿದೆ. ಈ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಆಗಮಿಸಿದ್ದರೆ, ಅವರನ್ನು ಗ್ರಾಮಸ್ಥರು ಅಲ್ಲಿಂದ ವಾಪಸ್‌ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಹಾರೋಹಳ್ಳಿಯ ದಲಿತ ಕುಟುಂಬದ ರಾಮದಾಸ್‌ ಎಂಬುವವರ ಜಮೀನಿನಲ್ಲಿ ಸಿಕ್ಕಿದ್ದ ಶಿಲೆಯಿಂದಲೇ “ರಾಮಲಲ್ಲಾ ಮೂರ್ತಿ”ಯನ್ನು ಕೆತ್ತನೆ ಮಾಡಲಾಗಿತ್ತು. ಹೀಗಾಗಿ ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ ಮಾಡಬೇಕು ಎಂದು ಜಾಗದ ಮಾಲೀಕರು ಮತ್ತು ಊರಿನವರು ಚಿಂತನೆ ನಡೆಸಿದ್ದರು. ಇದಕ್ಕಾಗಿ ದಲಿತ ರೈತ ರಾಮದಾಸ್‌ ತಮ್ಮ ಜಾಗವನ್ನೇ ಬಿಟ್ಟುಕೊಟ್ಟಿದ್ದಾರೆ. ಕೆಲವು ದಿನದ ಹಿಂದೆ ಅಲ್ಲಿ ಪೂಜೆಯನ್ನು ಕೂಡಾ ನಡೆಸಲಾಗಿತ್ತು. ಈಗ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ.

ಜಮೀನಿನ ಮಾಲೀಕರಾದ ರಾಮದಾಸ್ ಹಾಗೂ ಕಲ್ಲು ಕಳುಹಿಸಿಕೊಟ್ಟ ಗುತ್ತಿಗೆದಾರ ಶ್ರೀನಿವಾಸ್, ಗ್ರಾಮಸ್ಥರು ಭಾಗಿಯಾಗಿದ್ದರು. ಸ್ಥಳದಲ್ಲಿ ಚಪ್ಪರ ಹಾಕಿ ಸಂಭ್ರಮದಿಂದ ಪೂಜೆಯನ್ನು ನೆರವೇರಿಸಲಾಯಿತು. ಹಬ್ಬದ ವಾತಾವರಣ ನಿರ್ಮಾಣ. ಕಲ್ಲು ಸಿಕ್ಕ ಪ್ರದೇಶ ಕಾಡಿನಂತೆ ಇತ್ತು. ಇದೀಗ ರಾಮಮಂದಿರಕ್ಕೆ ಗುದ್ದಲಿ ಪೂಜೆ ಮಾಡಲಾಗಿದ್ದು, ಅಭಿವೃದ್ಧಿಗೆ ಮುನ್ನುಡಿ ಎಂದು ಬಣ್ಣಿಸಲಾಗಿದೆ.

ಪ್ರತಾಪ್‌ ಸಿಂಹಗೆ ಪ್ರವೇಶ ನಿರಾಕರಣೆ

ಪ್ರತಾಪ್‌ ಸಿಂಹ ಅವರು ಹಾರೋಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಸಂಸದ ಪ್ರತಾಪ್‌ ಸಿಂಹ ಬಂದಿದ್ದಾರೆ. ಅವರನ್ನು ಕಂಡೊಡನೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. “ನೀವು ದಲಿತ ವಿರೋಧಿ”ಯಾಗಿದ್ದು, ನಿಮಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಇಲ್ಲ. ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕರಾದ ಜಿ.ಟಿ. ದೇವೇಗೌಡ ನೆರವೇರಿಸುತ್ತಾರೆ. ನಿಮ್ಮ ಅಗತ್ಯ ಇಲ್ಲ ಎಂದು ತಡೆದಿದ್ದಾರೆ. ಹೀಗಾಗಿ ಪೂರ್ಣಕುಂಭ ಸ್ವಾಗತ ಸೇರಿದಂತೆ ಕೆಲವು ಸಮಯ ಸ್ಥಳದಲ್ಲಿದ್ದ ಸಂಸದ ಪ್ರತಾಪ್‌ ಸಿಂಹ ಬಳಿಕ ಅಲ್ಲಿಂದ ನಿರ್ಗಮಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಹಾರೋಹಳ್ಳಿ ಗ್ರಾಮದ ಯಜಮಾನ ಚಲುವರಾಜು, ಪ್ರತಾಪ್ ಸಿಂಹ 10 ವರ್ಷದಿಂದ ಒಮ್ಮೆಯೂ ನಮ್ಮೂರಿಗೆ ಬಂದಿಲ್ಲ.‌ ನಮ್ಮ ಸಮಸ್ಯೆ ಏನು ಅಂತ ಕೇಳಿಲ್ಲ. ಹೀಗಾಗಿ ಅವರು ಪೂಜೆಯಲ್ಲಿ ಭಾಗವಹಿಸುವುದು ನಮಗೆ ಇಷ್ಟ ಇಲ್ಲ. ಆದ್ದರಿಂದ ಅವರನ್ನು ವಾಪಸ್ ಕಳುಹಿಸಿದ್ದೇವೆ ಎಂದು ಹೇಳಿದರು.

ಇದಕ್ಕೆಲ್ಲ ಹೆದರಲ್ಲ: ಪ್ರತಾಪ್‌ ಸಿಂಹ

ಹಾರೋಹಳ್ಳಿ ಗಲಾಟೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ ಸಿಂಹ, ನಾನು ಈ ಕ್ಷಣಕ್ಕೂ ಮಹಿಷ ದಸರಾ ವಿರೋಧಿ. ಮಹಿಷ ದಸರಾ ವಿರೋಧ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಕಾಂಗ್ರೆಸ್ ಪುಡಾರಿಗಳು ತರಲೆ ಮಾಡಿದ್ದಾರೆ. ಮತ್ತೆ ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಆದರೆ, ಚಾಮುಂಡಿ ತಾಯಿಯ ಭಕ್ತರು ಕೋಟ್ಯಂತರ ಮಂದಿ ಇದ್ದಾರೆ. ನಾನು ಚಾಮುಂಡಿಯ ಭಕ್ತ‌. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತದೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.

Exit mobile version