Site icon Vistara News

Ayodhya Ram Mandir: ರಾಮ ಮಂದಿರ ಪ್ರವೇಶಕ್ಕೆ ಹೆಚ್ಚುವರಿ ಸಮಯಾವಕಾಶ; ಇಲ್ಲಿದೆ ಹೊಸ ವೇಳಾಪಟ್ಟಿ

ram lalla

ram lalla

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಭವ್ಯ ರಾಮ ಮಂದಿರಲ್ಲಿ (Ayodhya Ram Mandir) ರಾಮಲಲ್ಲಾ ( Ram lalla) ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆದಿದೆ. ಜನವರಿ 22ರಂದು ನಡೆದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು. ಸಾವಿರಾರು ಮಂದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಬಳಿಕ ಜನವರಿ 23ರಿಂದ ಸಾರ್ವಜನಿಕರ ದರ್ಶನಕ್ಕಾಗಿ ದೇಗುಲವನ್ನು ತೆರೆಯಯಾಗಿದ್ದು, ಭಕ್ತ ಜನ ಪ್ರವಾಹವೇ ಹರಿದು ಬರುತ್ತಿದೆ. ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ಇದೀಗ ದರ್ಶನದ ಸಮಯವನ್ನು ಹೆಚ್ಚಿಸಲಾಗಿದೆ.

ರಾತ್ರಿ 10 ಗಂಟೆ ತನಕ ರಾಮ ದರ್ಶನ ಲಭ್ಯ

ʼʼದೇವಾಲಯದಲ್ಲಿನ ಭಕ್ತರ ಹೆಚ್ಚಿನ ಜನಸಂದಣಿಗೆ ಗಮನಿಸಿ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ. ರಾತ್ರಿ 10 ಗಂಟೆಯವರೆಗೆ ದೇಗುಲಕ್ಕೆ ಪ್ರವೇಶಿಸಲು ಅವಕಾಶವಿದೆ. ಅಲ್ಲದೆ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಾಮ ಜನ್ಮಭೂಮಿ ಸಂಕೀರ್ಣದೊಳಗೆ ದಿನದ ಮಟ್ಟಿಗೆ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಲಾಗಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ದೇಗುಲದ ಬಾಗಿಲನ್ನು ರಾತ್ರಿ 7 ಗಂಟೆಗೆ ಮುಚ್ಚಲಾಗುತ್ತಿತ್ತು. ಇದೀಗ ದರ್ಶನಕ್ಕೆ 3 ಗಂಟೆ ಹೆಚ್ಚುವರಿ ಕಾಲವಕಾಶ ಲಭಿಸಿದಂತಾಗಿದೆ.

ಹೊಸ ಸಮಯ ಹೇಗಿದೆ?

ರಾಮ ಮಂದಿರಕ್ಕೆ ಎರಡು ಹಂತಗಳಲ್ಲಿ ಪ್ರವೇಶ ಲಭಿಸಲಿದೆ. ಮೊದಲ ಹಂತದಲ್ಲಿ ಬೆಳಗ್ಗೆ 7 ಗಂಟೆಯಿಂದ 11.30ರವರಗೆ ರಾಮನ ದರ್ಶನ ಲಭ್ಯ. ಇನ್ನು ಎರಡನೇ ಹಂತದಲ್ಲಿ ಅಪರಾಹ್ನ 3 ಗಂಟೆಯಿಂದ ರಾತ್ರಿ 10ರವರೆಗೆ ದೇಗುಲ ಪ್ರವೇಶಿಸಬಹುದು. ಸದ್ಯ ಭಕ್ತರ ಹೆಚ್ಚಿದ್ದು, ಸುಮಾರು 10-15 ದಿನಗಳ ಬಳಿಕ ಭೇಟಿ ನೀಡಲು ಯೋಜನೆ ರೂಪಿಸಿ ಎಂದು ಪ್ರವಾಸಿಗರ ಬಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸುರಕ್ಷತೆಗೆ ಒತ್ತು

ಸುರಕ್ಷತೆಯ ದೃಷ್ಟಿಯಿಂದ ದೇವಾಲಯಕ್ಕೆ ತೆರಳುವ ಕೆಲವು ರಸ್ತೆಗಳಲ್ಲಿ ವಾಹನ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಮತ್ತು ಭಕ್ತರು ಕಾಲ್ನಡಿಗೆಯಲ್ಲಿ ದೇಗುಲಕ್ಕೆ ತೆರಳುವಂತೆ ಸೂಚಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್, ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಎಫ್‌) ಮತ್ತು ಖಾಸಗಿ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಲ್ಲದೆ ಜನಸಂದಣಿ ನಿಯಂತ್ರಣಕ್ಕಾಗಿ 8,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರವಾಸಿಗರ ಸಂಖ್ಯೆಯಲ್ಲಿ ಕಂಡುಬಂದ ಭಾರೀ ಏರಿಕೆಯನ್ನು ಪರಿಗಣಿಸಿ ಆರತಿಗಾಗಿ ನಡೆಯುವ ಆನ್‌ಲೈನ್‌ ಬುಕಿಂಗ್ ಅನ್ನು ಜನವರಿ 29ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜ. 23ರಂದು ಒಂದೇ ದಿನ ಸುಮಾರು 5 ಲಕ್ಷ ಭಕ್ತರು ಚಳಿಯನ್ನೂ ಲೆಕ್ಕಿಸದೆ ದೇವಾಲಯಕ್ಕೆ ಆಗಮಿಸಿದ್ದರು. ಈ ಪೈಕಿ 3 ಲಕ್ಷ ಜನರು ಹಗಲಿನಲ್ಲಿ ದರ್ಶನ ಪಡೆಯುವಲ್ಲಿ ಯಶಸ್ವಿಯಾದರೆ ಉಳಿದವರು ರಾತ್ರಿ ತನಕ ತಾಳ್ಮೆಯಿಂದ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಇಂದು (ಜನವರಿ 24) ಕೂಡ ಬಾಲಕ ರಾಮನ ದರ್ಶನ ಪಡೆಯಲು ಲಕ್ಷಾಂತರ ಮಂದಿ ಆಗಮಿಸಿದ್ದಾರೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರದೊಳಗೆ ಎರಡನೇ ದಿನವೇ ಹನುಮಾನ್‌ ಪ್ರವೇಶ!

ಸೂಕ್ತ ವ್ಯವಸ್ಥೆಗಾಗಿ ಉತ್ತರ ಪ್ರದೇಶ ಸರ್ಕಾರವು ಹಿರಿಯ ಅಧಿಕಾರಿ ಸಂಜಯ್ ಪ್ರಸಾದ್ ಮತ್ತು ಉನ್ನತ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಅಯೋಧ್ಯೆಗೆ ಕಳುಹಿಸಿದೆ. ʼʼಜನಸಂದಣಿ ನಿರ್ವಹಣೆಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆʼʼ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version