Site icon Vistara News

Ayodhya Ram Mandir: ದೇಗುಲದ ಗರ್ಭ ಗುಡಿ ಎಂದರೇನು? ಏನಿದರ ವಿಶೇಷ?

ram mandir

ram mandir

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಭಗವಾನ್ ರಾಮ್ ಲಲ್ಲಾ (Ram lalla) ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭವು ಇಂದು (ಜನವರಿ 22) ಮಧ್ಯಾಹ್ನ 12.20ಕ್ಕೆ ನಡೆಯಲಿದೆ. ವಿಗ್ರಹವನ್ನು ದೇವಾಲಯದ ಗರ್ಭ ಗುಡಿಯಲ್ಲಿ (Garbh Griha) ಇರಿಸಿ ಧಾರ್ಮಿಕ ವಿಧಿ-ವಿಧಾನ ನಡೆಸಲಾಗುತ್ತದೆ. ಹಾಗಾದರೆ ಗರ್ಭಗುಡಿ ಎಂದರೇನು? ಏನಿದರ ವೈಶಿಷ್ಟ್ಯ ಎನ್ನುವ ವಿವರ ಇಲ್ಲಿದೆ.

ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ರಾಮ ಲಲ್ಲ ವಿಗ್ರಹದ ದರ್ಶನ ಭಕ್ತರಿಗೆ ಸಿಗಲಿದೆ. ಗರ್ಭ ಗೃಹವು ದೇವಾಲಯದ ಪ್ರಧಾನ ದೇವತೆಯ ವಾಸಸ್ಥಾನವಾಗಿರುವುದರಿಂದ ಇದು ಅತ್ಯಂತ ಮಹತ್ವವನ್ನು ಹೊಂದಿದೆ. ಅಯೋಧ್ಯೆಯ ರಾಮ ಮಂದಿರವು ಅದ್ಭುತವಾದ ಗರ್ಭ ಗುಡಿಯನ್ನು ಹೊಂದಿದ್ದು, ಇದು ವಿಶ್ವದ ಅತಿದೊಡ್ಡ ಗರ್ಭ ಗುಡಿಗಳಲ್ಲಿ ಒಂದು ಎನಿಸಿಕೊಂಡಿದೆ. ಕಳೆದ ವರ್ಷ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗರ್ಭ ಗೃಹಕ್ಕೆ ಶಿಲಾಪೂಜೆ ನೆರವೇರಿಸಿದ್ದರು.

ಗಾತ್ರ

ರಾಮ ಮಂದಿರದ ಗರ್ಭ ಗುಡಿಯು 20 ಅಡಿ ಉದ್ದ, 20 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಗುಜರಾತ್‌ನ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಗರ್ಭಗೃಹವು 15 ಅಡಿ ಉದ್ದ ಮತ್ತು 15 ಅಡಿ ಅಗಲವನ್ನು ಹೊಂದಿದೆ.

ಗರ್ಭ ಗುಡಿಯ ರಚನೆ ಹೇಗಿರುತ್ತದೆ?

ಗರ್ಭಗೃಹದಲ್ಲಿ ಯಾವುದೇ ಕಿಟಕಿಗಳನ್ನು ಅಳವಡಿಸಲಾಗುವುದಿಲ್ಲ. ಬೆಳಕಿನ ಲಭ್ಯತೆ ಕಡಿಮೆ ಪ್ರಮಾಣದಲ್ಲಿದ್ದು, ಭಕ್ತರು ತಮ್ಮ ಮನಸ್ಸನ್ನು ದೇವರ ವಿಗ್ರಹದ ಕೇಂದ್ರೀಕರಿಸಲು ಇದು ನೆರವಾಗುತ್ತದೆ. ದೇವಾಲಯದ ಪಶ್ಚಿಮ ಮೂಲೆಯಲ್ಲಿ ಗರ್ಭ ಗೃಹವನ್ನು ನಿರ್ಮಿಸಲಾಗುತ್ತದೆ. ಅಲ್ಲದೆ ಸಾಮಾನ್ಯವಾಗಿ ಗರ್ಭ ಗೃಹಕ್ಕೆ ಕೇವಲ ಒಂದು ಬಾಗಿಲನ್ನು ಮಾತ್ರ ಜೋಡಿಸಲಾಗುತ್ತದೆ ಮತ್ತು ಇತರ ಮೂರು ಬದಿಗಳಲ್ಲಿ ಗೋಡೆಗಳಿಂದ ಸುತ್ತವರಿದಿರುತ್ತದೆ. ಗರ್ಭಗುಡಿಯ ದ್ವಾರವನ್ನು ಸೂಕ್ಷ್ಮವಾಗಿ ಅಲಂಕರಿಸಲಾಗುತ್ತದೆ.

ಆಕಾರ ಹೇಗಿರುತ್ತದೆ?

ಗರ್ಭ ಗೃಹವನ್ನು ಸಾಂಪ್ರದಾಯಿಕವಾಗಿ ಚೌಕಾಕಾರದಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಮೂರು ಬದಿಗಳಲ್ಲಿ ಗೋಡೆಗಳು ಮತ್ತು ವಿಗ್ರಹಗಳ ಮುಂದೆ ಒಂದು ಪ್ರವೇಶ ದ್ವಾರವಿರುತ್ತದೆ. ಅಲ್ಲದೆ ಗರ್ಭ ಗುಡಿಯನ್ನು ಬ್ರಹ್ಮಾಂಡದ ಸೂಕ್ಷ್ಮರೂಪವನ್ನು ಪ್ರತಿನಿಧಿಸುವ ವೇದಿಕೆಯ ಮೇಲೆ ನಿರ್ಮಿಸಿ ಅದರ ಮಧ್ಯದಲ್ಲಿ ದೇವರ ವಿಗ್ರಹವನ್ನು ಇರಿಸಲಾಗುತ್ತದೆ. ಒಟ್ಟಿನಲ್ಲಿ ಗರ್ಭ ಗೃಹವು ದೇವಾಲಯದ ಕೇಂದ್ರ ಸ್ಥಾನದಲ್ಲಿರುತ್ತದೆ.

ವಿಗ್ರಹ ಎಲ್ಲಿರಿಸಲಾಗುತ್ತದೆ?

ಗರ್ಭ ಗೃಹದೊಳಗೆ ವಿಗ್ರಹಗಳ ಸ್ಥಾನವು ಪ್ರಧಾನ ದೇವತೆಯ ಆಧಾರದ ಮೇಲೆ ಬದಲಾಗುತ್ತದೆ. ಉದಾಹರಣೆಗೆ ವಿಷ್ಣುವಿನ ವಿಗ್ರಹಗಳನ್ನು ಸಾಮಾನ್ಯವಾಗಿ ಹಿಂಭಾಗದ ಗೋಡೆಗೆ ವಿರುದ್ಧವಾಗಿ ಇರಿಸಲಾಗುತ್ತದೆ. ಆದರೆ ಶಿವಲಿಂಗವನ್ನು ಗರ್ಭಗುಡಿಯ ಮಧ್ಯದಲ್ಲಿ ಇರಿಸಲಾಗುತ್ತದೆ. ದೇವಾಲಯದ ಬ್ರಹ್ಮಸ್ಥಾನವೆಂದು ಪರಿಗಣಿಸಲ್ಪಟ್ಟಿರುವ ಗರ್ಭ ಗೃಹದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಜತೆಗೆ ಅರ್ಚಕರು ಶುದ್ಧರಾಗಿ, ಮಡಿಯೊಂದಿಗೆ ಗರ್ಭ ಗುಡಿಯೊಳಗೆ ಪ್ರವೇಶಿಸಬೇಕಾಗುತ್ತದೆ.

ಇದನ್ನೂ ಓದಿ: Ayodhya Ram Mandir: ಯುದ್ಧಪೀಡಿತ ಉಕ್ರೇನ್‌ನಲ್ಲೂ ಮಂದಿರ ಹವಾ, ಸಾಮೂಹಿಕ ರಾಮಜಪ

ಅಭಿಜಿತ್‌ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ

ಇನ್ನು ಮಧ್ಯಾಹ್ನ 12.20ರಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆರಂಭವಾದರೂ ಕೇವಲ 84 ಸೆಕೆಂಡ್‌ಗಳಲ್ಲಿ ಪ್ರಾಣ ಪ್ರತಿಷ್ಠೆ ಮುಗಿಯಲಿದೆ. ಹೌದು, ಅಭಿಜಿತ್‌ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮುಹೂರ್ತವು ಕೇವಲ 84 ಸೆಕೆಂಡ್‌ಗಳಲ್ಲಿ ಮುಗಿಯುವ ಕಾರಣ ಇಷ್ಟು ಅವಧಿಯಲ್ಲಿಯೇ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆ 29 ನಿಮಿಷ ಹಾಗೂ 8 ಸೆಕೆಂಡ್‌ಗಳಿಂದ 12 ಗಂಟೆ 30 ನಿಮಿಷ ಹಾಗೂ 32 ಸೆಕೆಂಡ್‌ಗಳ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version