ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ರಜೆ ನೀಡುವುದಿಲ್ಲ ಎಂಬುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪರೋಕ್ಷವಾಗಿ ತಿಳಿಸಿದ್ದಾರೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ” ಎಂದು ತಿಳಿಸಿದರು.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಮನ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಿಸಿ; ಆರ್. ಅಶೋಕ್, ಎಚ್‌ಡಿಕೆ ಆಗ್ರಹ
ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ ರಾಜ್ಯ ಸರ್ಕಾರವು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ (BJP Karnataka) ಹಾಗೂ ಜೆಡಿಎಸ್ (JDS Karnataka) ಆಗ್ರಹಿಸಿದೆ. ಈ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್ (Opposition leader R Ashok) ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದರೆ, ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಇನ್ನಿತರ ನಾಯಕರು ರಜೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸಿಎಂಗೆ ಆರ್. ಅಶೋಕ್ ಸವಾಲು
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿದ್ದು, ಇದು ದೇಶದ ಕಾರ್ಯಕ್ರಮವಾಗಿದ್ದು ರಜೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಅವರೇ ಯಾರೂ ಪತ್ರ ಕೊಟ್ಟಿಲ್ಲ ಎಂದು ನೀವು ಹೇಳಿದ್ದೀರಿ. ಈಗ ನಾನು ಪತ್ರ ಕೊಟ್ಟಿದ್ದೇನೆ. ಈಗ ರಜೆ ಕೊಡುತ್ತೀರಾ? ಚೆಂಡು ಈಗ ನಿಮ್ಮ ಅಂಗಳದಲ್ಲಿದೆ. ನಿರ್ಧಾರ ಮಾಡಿ ಎಂದು ಅಶೋಕ್ ಸವಾಲು ಹಾಕಿದ್ದಾರೆ.
ಆರ್. ಅಶೋಕ್ ಪತ್ರದಲ್ಲೇನಿದೆ?
500 ವರ್ಷಗಳ ಹೋರಾಟ, ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಿ ಜನವರಿ 22 ರಂದು ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ದಿನದಂದು ಪ್ರತಿ ಮನೆಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದೀಪ ಬೆಳಗುವುದು, ಭಜನೆ, ಶ್ರೀರಾಮನ ಆರಾಧನೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರದ ಆಚರಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದಾರೆ. ರಾಜ್ಯದಲ್ಲೂ ದೊಡ್ಡ ಮಟ್ಟದ ಆಚರಣೆ ನಡೆಯುತ್ತಿದ್ದು, ಆ ದಿನ ಕೆಲಸ ಮಾಡುವುದರಿಂದ ಆಚರಣೆಗೆ ತೊಡಕು ಉಂಟಾಗಬಹುದು. ಆದ್ದರಿಂದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಾರ್ವಜನಿಕ ಉದ್ದಿಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅನುಕೂಲವಾಗುವಂತೆ ಜನವರಿ 22 ರಂದು ಒಂದು ದಿನದ ಮಟ್ಟಿಗೆ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ” ಎಂದು ಆರ್. ಅಶೋಕ್ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರಜೆ ಕೊಡಿ ಇಲ್ಲವೇ ಪರಿಣಾಮ ಎದುರಿಸಿ: ಅಶೋಕ್ ಎಚ್ಚರಿಕೆ
ಮಾಧ್ಯಮದವರೊಂದಿಗೆ ಮಾತನಾಡಿದ ಆರ್. ಅಶೋಕ್, ಇಡೀ ದೇಶವೇ ಕಾತುರದಿಂದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕಾಯುತ್ತಲಿದೆ. ರಾಮನ ಪ್ರಾಣ ಪ್ರತಿಷ್ಠಾಪನೆ ನೋಡಲು ಎಲ್ಲರಲ್ಲೂ ಕಾತುರತೆ ಇದೆ. ಈ ಹಿಂದೆ ಸೋಮನಾಥ ದೇವಾಲಯ ಪಟೇಲರು ನಿರ್ಮಾಣ ಮಾಡಿದ್ದರು. ಈಗ ಮೋದಿ ಅವರು ಅದೇ ರೀತಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಕರ್ನಾಟಕದಲ್ಲಿ ಕೂಡ ತಯಾರಾಗಿದೆ. ದೇವಸ್ಥಾನ ಸ್ವಚ್ಛ ಮಾಡಿ ಪೂಜೆಗೆ ತಯಾರಾಗಿದೆ. ಧ್ವಜಗಳನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ರಜೆ ಕೊಡಬೇಕು ಎಂದು ವಿಪಕ್ಷ ನಾಯಕನಾಗಿ ನಾನು ಸಹ ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಹೇಳಿದರು.
ಕರ್ನಾಟಕ ಜನರ ಭಾವನೆ ಇದೆ. ಇಲ್ಲಿ ಕೂಡ ಪೂಜೆ ನೋಡಲು ಅರ್ಧ ದಿನ ರಜೆ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ನೀಡಿ, ಯಾರೂ ಪತ್ರ ಕೊಟ್ಟಿಲ್ಲ ಅಂತ ಹೇಳಿದ್ದಾರೆ. ನಾನು ಈಗ ಪತ್ರವನ್ನು ಬರೆದಿದ್ದೇನೆ. ಪತ್ರವನ್ನು ಸಿಎಂಗೆ ಕಳುಹಿಸಿದ್ದೇನೆ. ಯಾವುದೇ ರೀತಿ ಆಚರಣೆಗೆ ತೊಂದರೆ ಆಗದಂತೆ, ತಾವು ರಜೆ ಘೋಷಣೆ ಮಾಡಬೇಕು. ಹಿಂದುಗಳ ಭಾವನೆಗೆ ಧಕ್ಕೆ ಬಾರದಂತೆ ರಜೆ ಘೋಷಣೆ ಮಾಡಬೇಕು. ಪತ್ರ ಕೇಳಿದ್ದೀರಿ, ನಾನೀಗ ಪತ್ರ ಕೊಟ್ಟಿದ್ದೇನೆ. ಚಂಡು ಈಗ ನಿಮ್ಮ ಅಂಗಳದಲ್ಲಿದೆ. ಹಿಂದು ವಿರೋಧಿ ಅನ್ನೋದು ಇತಿಹಾಸ ಪುಟ ಸೇರಬಾರದು. ಕೂಡಲೇ ರಜೆ ಘೋಷಣೆ ಮಾಡಿ. ಶಾಲೆಗಳಲ್ಲಿ ಮಕ್ಕಳು ರಜೆ ಹಾಕಿದರೆ, ಶಿಕ್ಷೆ ಕೊಡ್ತೀವಿ, ಸಾವಿರ ರೂ ಫೈನ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಅತಿರೇಕದ ಪ್ರವೃತ್ತಿ ಸರಿಯಲ್ಲ. ಈ ರೀತಿ ಮಾಡುವವರಿಗೆ ಪಾಠ ಕಲಿಸಬೇಕಾಗುತ್ತದೆ. ಪೋಷಕರು ಈಗಾಗಲೇ ತಿರುಗಿ ಬಿದ್ದಿದ್ದಾರೆ. ಹಿಂದುಗಳ ಭಾವನೆಗೆ ಧಕ್ಕೆ ತಂದರೆ ನೀವು ಪರಿಣಾಮವನ್ನು ಎದುರಿಸಬೇಕಾಗಲಿದೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Pradeep Eshwar: ಜೆಡಿಎಸ್ ಕಾರ್ಯಕರ್ತನಿಗೆ ಪ್ರದೀಪ್ ಈಶ್ವರ್ ಬೆಂಬಲಿಗರ ಜೇವ ಬೆದರಿಕೆ: ಜೆಡಿಎಸ್ ಕಿಡಿ
ರಜೆ ಘೋಷಣೆ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದು ಅಯೋಧ್ಯೆಗೆ ಹೋಗುತ್ತೇವೆ. ನಾಳೆ ರಜೆ ಘೋಷಣೆ ಮಾಡಬೇಕು ಎನ್ನೋದು ಜನರ ಭಾವನೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಬೇಕು ಎಂದು ಎಲ್ಲರು ಬಯಸುತ್ತಾರೆ. ಇದು ನಾಡಿನ ಕಾರ್ಯಕ್ರಮವಾಗಿದೆ. ಹೀಗಾಗಿ ರಜೆ ಘೋಷಣೆ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಈಗಾಗಲೇ ಅನೇಕ ರಾಜ್ಯಗಳು ರಜೆಯನ್ನು ಘೋಷಣೆ ಮಾಡಿವೆ ಎಂದು ಹೇಳಿದರು.