Site icon Vistara News

Ram Mandir: ರಾಮ ಮಂದಿರದ ಸಮೀಪದಲ್ಲೇ ಇನ್ನೂ 13 ದೇವಾಲಯಗಳ ನಿರ್ಮಾಣ

ram mandir

ram mandir

ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ತಲೆ ಎತ್ತಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠೆಯನ್ನೂ (Pran prathishta) ನೆರವೇರಿಸಿದ್ದಾರೆ. ಇದೀಗ ದೇಗುಲವನ್ನು ಸಾರ್ವಜನಿಕರ ಪ್ರವೇಶಕ್ಕಾಗಿ ಮುಕ್ತಗೊಳಿಸಲಾಗಿದೆ. ಈ ಮಧ್ಯೆ ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇದರ ಭಾಗವಾಗಿ ಕನಿಷ್ಠ 13 ಹೊಸ ದೇವಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಮಾಹಿತಿ ನೀಡಿ, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕಾಮಗಾರಿ ಸೇರಿದಂತೆ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ. ಜನವರಿ 22ರಂದು ಲೋಕಾರ್ಪಣೆಗೊಂಡ ರಾಮ ಮಂದಿರದ ಮೊದಲ ಮಹಡಿಯಷ್ಟೇ ಪೂರ್ಣಗೊಂಡಿದೆ.

ಶೀಘ್ರ ಪೂರ್ಣ

“ರಾಮ ಮಂದಿರದ ಎರಡನೇ ಮಹಡಿಯ ಕೆಲಸ ಪ್ರಗತಿಯಲ್ಲಿದೆ. ಬಳಿಕ ಶಿಖರ-ಕೇಂದ್ರ ಗುಮ್ಮಟವನ್ನು ಮಾಡಲಾಗುತ್ತದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. “ನಂತರ ರಾಮ ಪರಿವಾರದ ಐದು ಪ್ರಮುಖ ದೇವಾಲಯಗಳ ಕಾಮಗಾರಿ ನಡೆಸಲಾಗುತ್ತದೆ. ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿರುವುದರಿಂದ, ಗಣಪತಿ, ಶಿವ, ಸೂರ್ಯ ದೇವರು ಮತ್ತು ಜಗದಂಬಾ ದೇವಿಗೆ ಸಮರ್ಪಿತವಾದ ದೇವಾಲಯಗಳು ಸಮೀಪ ಇರಬೇಕು. ಇದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆʼʼ ಎಂದು ತಿಳಿಸಿದ್ದಾರೆ.

ಈ ದೇಗುಲಗಳು ಮುಖ್ಯ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ನಿರ್ಮಾಣವಾಗಲಿದೆ. ರಾಮ ಭಕ್ತ ಹನುಮಂತನಿಗಾಗಿ ಪ್ರತ್ಯೇಕ ದೇವಸ್ಥಾನವನ್ನೇ ನಿರ್ಮಿಸುವ ಯೋಜನೆ ಇದೆ. ಈಗಾಗಲೇ ಈ ದೇಗುಲಗಳ ಕಾಮಗಾರಿ ಆರಂಭವಾಗಿದೆ. ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಬಾಕಿ ಇದೆ. ಸದ್ಯ ಕೊನೆಯ ಹಂತದ ಕೆಲಸ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಸೀತಾ ದೇವಿಯ ಅಡುಗೆಮನೆ ಎಂದು ಪರಿಗಣಿಸಲಾದ ಸೀತಾ ರಸೋಯಿ ಬಳಿ ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇವಾಲಯವಿದೆ.

ರಾಮ ಮಂದಿರ ಸಂಕೀರ್ಣದ ಹೊರಗೆ ದೊಡ್ಡ ಪ್ರದೇಶದಲ್ಲಿ ಏಳು ದೇವಾಲಯಗಳು ಇರಲಿವೆ. ಭಗವಾನ್ ರಾಮನ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಿದ ಮುಖ್ಯ ಏಳು ಮಂದಿಯ ದೇವಸ್ಥಾನ ಇದಾಗಿರಲಿದೆ. ಇವು ಋಷಿಗಳಾದ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಶಬರಿ ಮತ್ತು ರಾಮನಿಗಾಗಿ ಪ್ರಾಣವನ್ನೇ ಸಮರ್ಪಿಸಿದ ಜಟಾಯುಗೆ ಸಂಬಂಧಿಸಿದ ದೇಗುಲಗಳು ಎನ್ನುವುದು ವಿಶೇಷ.

ಇದನ್ನೂ ಓದಿ: Ram Mandir: ರಾಮನ ದರ್ಶನಕ್ಕೆ ಸೇರಿದ ಲಕ್ಷಾಂತರ ಜನ; ನೂಕುನುಗ್ಗಲು, ಕಾಲ್ತುಳಿತ

ಜನವರಿ 23ರಂದು ಸುಮಾರು 3 ಲಕ್ಷ ಮಂದಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಮುಂಜಾನೆ 3 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಬಾಲ ರಾಮನ ದರ್ಶನ ಮಾಡಿದ್ದಾರೆ. ಈ ಮಧ್ಯೆ ಗೊಂದಲದ ವಾತಾವರಣವೂ ನಿರ್ಮಾಣವಾಗಿದ್ದು, ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version