Site icon Vistara News

Ram Mandir: 25 ಕೆಜಿ ಬೆಳ್ಳಿ, 10 ಕೆಜಿ ಚಿನ್ನ; 1 ತಿಂಗಳಿನಲ್ಲಿ ರಾಮ ಮಂದಿರದಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ರೂ.?

rama

rama

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Ram Mandir) ಬಾಲಕ ರಾಮ (Balak Ram) ವಿಗ್ರಹದ ಪ್ರಾಣ ಪ್ರತಿಷ್ಠೆ (Pran Prathistha) ನೆರವೇರಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಈ ಸಮಾರಂಭ ನಡೆದಿದೆ. ಅದಾದ ಬಳಿಕ ಜನವರಿ 23ರಿಂದ ಈ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಮಾಡುತ್ತಿದ್ದಾರೆ. ರಾಮ ಮಂದಿರ ಸಾವರ್ಜನಿಕ ಭೇಟಿಗೆ ಮುಕ್ತವಾಗಿ ಇದೀಗ ಸುಮಾರು ಇಂದು ತಿಂಗಳು ಕಳೆದಿದ್ದು ಕೋಟ್ಯಂತರ ರೂ. ಮೌಲ್ಯದ ಕಾಣಿಕೆ ಸಂದಾಯವಾಗಿದೆ.

ಒಂದು ತಿಂಗಳಲ್ಲಿ ಸಂಗ್ರಹವಾಗಿದ್ದು ಎಷ್ಟು?

ಚಿನ್ನ, ಬೆಳ್ಳಿ ಸೇರಿದಂತೆ ಅತ್ಯಮೂಲ್ಯ ಕೊಡುಗೆಗಳನ್ನು ಭಕ್ತರು ರಾಮನಿಗೆ ಅರ್ಪಿಸಿದ್ದಾರೆ. 1 ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಅಧಿಕ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿದ್ದು, ಒಟ್ಟು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಕಾಣಿಕೆ ಪೆಟ್ಟಿಗೆ ಹಾಗೂ ಕಾಣಿಕೆ ಕೌಂಟರ್‌ನಲ್ಲಿ ಈ ದೇಣಿಗೆಯನ್ನು ಸ್ವೀಕರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಭಕ್ತರು ಈ ಮೊತ್ತವನ್ನು ನಗದು, ಚೆಕ್ ಮತ್ತು ಡ್ರಾಫ್ಟ್ ಮೂಲಕ ನೀಡಿದ್ದಾರೆ. ವಿದೇಶಿ ಭಕ್ತರು ನೀಡಿರುವ ದೇಣಿಗೆಯ ಮೊತ್ತ ಈ ಲೆಕ್ಕಾಚಾರದಲ್ಲಿ ಸೇರಿಲ್ಲ.

25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನ

ನಗದಲ್ಲದೆ ರಾಮ ಭಕ್ತರು ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳನ್ನು ಸಹ ದಾನ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, 1 ತಿಂಗಳ ಅವಧಿಯಲ್ಲಿ ಸುಮಾರು 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವು ಕಾಣಿಕೆಯಾಗಿ ಬಂದಿದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಕಿರೀಟ, ಹಾರ, ಛತ್ರಿ, ರಥ, ಬಳೆಗಳು ಮತ್ತು ಕಾಲುಂಗುರಗಳು ಸೇರಿವೆ. ಜತೆಗೆ ಆಟಿಕೆಗಳು, ದೀಪಗಳು, ಧೂಪ ದ್ರವ್ಯದ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳೂ ಕಾಣಿಕೆ ರೂಪದಲ್ಲಿ ರಾಮನಿಗೆ ಸಂದಾಯವಾಗಿದೆ. ಮಾತ್ರವಲ್ಲ ರಾಮಮಂದಿರಕ್ಕೆ ಭಕ್ತರು ಚಿನ್ನ ಮತ್ತು ಬೆಳ್ಳಿ ಪಾತ್ರೆಗಳನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಲಲ್ಲಾ ಹೆಸರು ಬದಲಾಯಿತು; ಇನ್ನಿವನು ʼಬಾಲಕ ರಾಮʼ

ಮಧ್ಯಾಹ್ನ ಬಿಡುವು

ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ. ʼʼಬಾಲಕ ರಾಮ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರುವ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12.30ರಿಂದ 1.30 ರವರೆಗೆ ರಾಮ ವಿಶ್ರಾಂತಿ ಪಡೆಯುತ್ತಾನೆ. ಹೀಗಾಗಿ ನಿತ್ಯ ಮಧ್ಯಾಹ್ನ ಒಂದು ಗಂಟೆ ದೇಗುಲದ ಬಾಗಿಲು ಮುಚ್ಚಲಿದೆʼʼ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಇತ್ತೀಚೆಗೆ ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version