Site icon Vistara News

‌Veerappa Moily : ಪ್ರಧಾನಿ ಮೋದಿ ಜಾತಿ ನಿಂದನೆ; ವೀರಪ್ಪ ಮೊಯ್ಲಿ ವಿರುದ್ಧ ಸಿಡಿದೆದ್ದ ಬಿಜೆಪಿ

Veerapa moily Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ರಾಮ ಮಂದಿರದ (Rama Mandir) ಗರ್ಭಗುಡಿ ಪ್ರವೇಶಿಸಲು ಅವಕಾಶ ನೀಡಬಾರದಿತ್ತು (Should not have allowed to Garbhagudi), ಅವರು 11 ದಿನ ಉಪವಾಸ ಮಾಡಿರುವ ಬಗ್ಗೆ ಅನುಮಾನವಿದೆ ಎಂಬ ಹೇಳಿಕೆಗಳ ಮೂಲಕ ವಿವಾದದ ಕಿಡಿ ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Former CM Veerappa Moily) ಅವರ ವಿರುದ್ಧ ಬಿಜೆಪಿ ನಾಯಕರು ಮುರಕೊಂಡು ಬಿದ್ದಿದ್ದಾರೆ. ಒಬ್ಬ ಮನುಷ್ಯ 11 ದಿನ ಉಪವಾಸ ಮಾಡಿದರೆ ಬದುಕೋದೇ ಕಷ್ಟ, ಹಾಗಿದ್ದರೆ ಮೋದಿ ಸುಳ್ಳು ಹೇಳಿದ್ದಾರೆ ಎಂದು ಮೊಯ್ಲಿ‌ ಹೇಳಿದ್ದರು. ಮೋದಿ ಅವರನ್ನು ಬ್ರಾಹ್ಮಣರು ಗರ್ಭಗುಡಿ ಪ್ರವೇಶಕ್ಕೆ ಬಿಟ್ಟಿದ್ದೇ ತಪ್ಪು ಎಂಬ ವೀರಪ್ಪ ಮೊಯ್ಲಿ ಹೇಳಿಕೆಯಲ್ಲಿ ಬಿಜೆಪಿ ಜಾತಿ ನಿಂದನೆಯ ಅಂಶವನ್ನೂ ಗ್ರಹಿಸಿದೆ.

ಮೋದಿ ನಿಮ್ಮಂತೆ ಸುಳ್ಳುಗಾರನಲ್ಲ ಎಂದ ಲೆಹರ್‌ ಸಿಂಗ್‌

ಪ್ರಧಾನಿ ನರೇಂದ್ರ ಮೋದಿಯವರ ಉಪವಾಸ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿ ಅವರಿಗೆ ಸಂಸದ ಲಹರ್‌ ಸಿಂಗ್‌ ಸಿರೋಯ(Lehar Singh Siroya) ತೀವ್ರವಾಗಿ ತಿರುಗೇಟು ನೀಡಿದ್ದಾರೆ. ʻʻಮಹಾನ್‌ ಸಾಹಿತಿಯಂತೆ ವೇಷ ಧರಿಸಿರುವ ವೀರಪ್ಪ ಮೊಯ್ಲಿಯವರು ಎಲ್ಲರೂ ತಮ್ಮಂತೆ ಸುಳ್ಳುಗಾರರು ಅಂದುಕೊಂಡಿದ್ದಾರೆ. ಶ್ರೀರಾಮನಲ್ಲಿ ನಂಬಿಕೆ ಇದ್ದರೆ ಮಾತ್ರ ನೀವು ಉಪವಾಸ ಮಾಡಿ ಬದುಕಬಹುದೇ ಹೊರತು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಯತ್ನಿಸಿದರೆ ಅಲ್ಲʼʼ ಎಂದು ಹೇಳಿದ್ದಾರೆ.

ʻ‌ʻಮಹಾನ್‌ ಸಾಹಿತಿಯಂತೆ ವೇಷ ಧರಿಸಿರುವ ವೀರಪ್ಪ ಮೊಯ್ಲಿಯವರು ಎಲ್ಲರೂ ತಮ್ಮಂತೆ ಸುಳ್ಳುಗಾರರು ಅಂದುಕೊಂಡಿದ್ದಾರೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದ ಉಪವಾಸವನ್ನು ಮೊಯ್ಲಿ ಅನುಮಾನದಿಂದ ನೋಡಿದ್ದಾರೆ. ಸತ್ಯ ಏನೆಂದು ದೇಶಕ್ಕೆ ತಿಳಿದಿದೆʼʼ ಎಂದು ಲೆಹರ್‌ ಸಿಂಗ್‌ ಹೇಳಿದ್ದಾರೆ. ಗಾಂಧಿ ಕುಟುಂಬವನ್ನು ಮೆಚ್ಚಿಸಲು ಇಷ್ಟೆಲ್ಲ ಪ್ರಯತ್ನಿಸಿದ ಬಳಿಕವೂ ಮೊಯ್ಲಿ ಅವರಿಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವುದಿಲ್ಲ ಎಂದಿದ್ದಾರೆ ಲೆಹರ್‌ ಸಿಂಗ್‌.

ಮೋದಿ ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ನಿಂದನೆ: ಆರ್‌. ಅಶೋಕ್

ಮೋದಿ ಅವರನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂಬ ವೀರಪ್ಪ ಮೊಯ್ಲಿ ಅವರ ಹೇಳಿಕೆಯಲ್ಲಿ ಜಾತಿನಿಂದನೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ʻʻಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹಿಂದುಳಿದ ಜಾತಿಗೆ ಸೇರಿದವರು ಅನ್ನುವ ಕಾರಣಕ್ಕೆ ನಿಂದನೆ ಮಾಡುತ್ತೀರಲ್ಲಾ ಕಾಂಗ್ರೆಸ್‌ ನಾಯಕರೇ,
ಇದೇನಾ ನಿಮ್ಮ ಜಾತ್ಯತೀತತೆ?
ಇದೇನಾ ನಿಮ್ಮ ಸಮಾಜವಾದ?
ಇದೇನಾ ನಿಮ್ಮ ಸಾಮಾಜಿಕ ನ್ಯಾಯ?
ಇದೇನಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ನೀವು ಕೊಡುವ ಗೌರವ?

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಪ್ರಧಾನಿ ಮೋದಿ ಅವರಿಗೆ ಈ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಅವರು ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆರ್‌. ಅಶೋಕ್‌ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Veerappa Moily : ಮೋದಿಯನ್ನು ಗರ್ಭಗುಡಿಗೆ ಬಿಟ್ಟಿದ್ದೇ ತಪ್ಪು; ವೀರಪ್ಪ ಮೊಯ್ಲಿ ವಿವಾದಾತ್ಮಕ ಹೇಳಿಕೆ

ಮೊಯಿಲಿಯವರ ಕೊಳಕು ಮನಸ್ಸು ತೋರಿಸಿದ ಹೇಳಿಕೆ: ರಘು ಕೌಟಿಲ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಇವತ್ತಿನ ಹೇಳಿಕೆ ಅವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಹೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಹಿಂದುಳಿದ ವರ್ಗದ ಪ್ರಮುಖರಾಗಿ, ವೈಚಾರಿಕವಾಗಿ ಒಂದಷ್ಟು, ಸಾಹಿತ್ಯಕವಾಗಿ ಒಂದಷ್ಟು ಹಿನ್ನೆಲೆಯಿರುವ ಮೊಯಿಲಿಯವರಿಂದ ಇಂಥ ಕೊಳಕು ಹೇಳಿಕೆಯನ್ನು ಜನರು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದರು.

ಸನಾತನ ಹಿಂದೂ ಧರ್ಮದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಸುಧಾರಣೆಯ ಕ್ರಾಂತಿ ಆಗುತ್ತಿದೆ. ಸಮಾನತೆ, ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದುಗಳು ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ಹಿಂದೂ ಧರ್ಮದ ಸಮಾನತೆಯ ಸಂಕೇತವಾಗಿದೆ ಎಂದು ವಿವರಿಸಿದರು.
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಲರಾಮನ ಪ್ರತಿಷ್ಠೆ ಮಾಡಿದ್ದು, ಇಡೀ ವಿಶ್ವದ ಹಿಂದೂಗಳ ಪಾಲಿಗೆ ಅತ್ಯಂತ ಸಂಭ್ರಮದ ವಿಷಯವಾಗಿದೆ. ಇದನ್ನು ಕಂಡು ವೀರಪ್ಪ ಮೊಯಿಲಿಯವರು ಪ್ರಶಂಸೆ ಮಾಡಬೇಕಿತ್ತು ಎಂದರು.

ಸನಾತನ ಹಿಂದೂ ಧರ್ಮದಲ್ಲಿ ಭಗವಂತನನ್ನು ಅಪ್ಪಿಕೊಳ್ಳಲು, ಅಪ್ಪಿಕೊಳ್ಳಲು, ಆರಾಧಿಸಲು ಅವಕಾಶ ಆಗಿದೆ. ಆದರೆ, ವೀರಪ್ಪ ಮೊಯಿಲಿ ಅವರ ಹತಾಶೆಯ ಈ ಹೇಳಿಕೆಯ ಮೂಲಕ ಅವರ ಘನತೆಯನ್ನು ತಗ್ಗಿಸಿಕೊಂಡಿದ್ದಾರೆ; ಅವರ ಸಂಸ್ಕಾರದಲ್ಲಿ ಕಪ್ಪುಚುಕ್ಕಿಯನ್ನು ಅವರೇ ಬಳಿದುಕೊಂಡಿದ್ದಾರೆ ಎಂದು ತಿಳಿಸಿದರು.

Exit mobile version