ಚಿಕ್ಕಮಗಳೂರು: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ನನಗೆ ಆಮಂತ್ರಣ ಏನೂ ಬೇಡ. ಆದರೆ, ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ, ಇರೋದು ವಿಶ್ವಗುರು. ನಾವು ಭೂತ, ದೈವದ ಪೂಜೆ ಮಾಡೋರು. ಹೀಗಾಗಿ ಭೂತದ ಬಳಿಯೇ ಹೋಗುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸೋಮವಾರ (ಜ. 22) ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇವರ ಕಾರ್ಯಕ್ರಮಕ್ಕೆ ಆಮಂತ್ರಣ-ಗೀಮಂತ್ರಣ ಬೇಡ. ಆದರೆ, ಅಲ್ಲಿ ಜಗದ್ಗುರು ಇಲ್ಲ. ಇರೋದು ವಿಶ್ವಗುರುವಾಗಿದ್ದಾರೆ. ದೇಶದಲ್ಲಿ ಮೊದಲು ಹೇಳಿಕೆ ನೀಡಿದ್ದೇ ನಾನು. ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದು ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದರೆ ಅದು ಧಾರ್ಮಿಕ ಕಾರ್ಯಕ್ರಮವಾಗುತ್ತದೆ. ಆದರೆ, ಅಲ್ಲಿಗೆ ಶಂಕರಾಚಾರ್ಯರು ಹೋಗಿಲ್ಲ. ಅಲ್ಲಿಗೆ ಹೋಗಿರೋದು ವಿಶ್ವಗುರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಶ್ವಗುರು ಜಗದ್ಗುರು ಅಲ್ಲ. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ಈ ಕಾರ್ಯಕ್ರಮದ ವಿರುದ್ಧ ನಿಂತಿದ್ದರೆ, ಮತ್ತಿಬ್ಬರು ತಟಸ್ಥರಾಗಿ ಉಳಿದಿದ್ದಾರೆ. ಅದು ಬಿಜೆಪಿಯ ವಿಶ್ವಗುರು ನಡೆಸುತ್ತಿರುವ ರಾಜಕೀಯ ಕಾರ್ಯಕ್ರಮವಾಗಿದೆ. ಆಮಂತ್ರಣ ಕೊಡೋಕೆ ಇವರು ಯಾರು? ರಾಮ ಫೋನ್ ಮಾಡಿ ಹೇಳಿದ್ದನಾ? ಈ ಕಾರ್ಯಕ್ರಮವನ್ನು ಶಂಕರಾಚಾರ್ಯರು ಮಾಡಿದ್ದರೆ ನಮಗೆ ಆಮಂತ್ರಣ ಬೇಡವಾಗಿತ್ತು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಇದನ್ನೂ ಓದಿ: Ram Mandir: ಫ್ಯಾಮಿಲಿ ಜತೆ ಅಯೋಧ್ಯೆಯತ್ತ ಎಚ್.ಡಿ ದೇವೇಗೌಡ; ಐತಿಹಾಸಿಕ ಕಾರ್ಯಕ್ರಮವೆಂದ ಮಾಜಿ ಪ್ರಧಾನಿ
ಭೂತದ ಬಳಿಯೇ ಹೋಗುತ್ತೇವೆ
ದೇಶದಲ್ಲಿ 33 ಕೋಟಿ ದೇವರಿದ್ದಾರೆ. ಎಲ್ಲಾದರೂ ಹೋಗುತ್ತೇವೆ. ದೇವರ ಬಳಿ ಹೋಗಬೇಕು, ಇಂಥ ದೇವರ ಬಳಿಯೇ ಹೋಗಬೇಕಾ? ನಾವು ಭೂತ, ದೆವ್ವದ ಪೂಜೆ ಮಾಡುವವರು, ಭೂತದ ಬಳಿಯೇ ಹೋಗುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾಳೆ ಸರ್ಕಾರಿ ರಜೆ ಇಲ್ಲ: ಸಿಎಂ ಸಿದ್ದರಾಮಯ್ಯ
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ರಜೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಳೆ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ. ಎಲ್ಲ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ ಎಂದು ಹೇಳಿದರು.
ನಾನು ಮಹಾದೇಪುರದಲ್ಲಿ ನಿರ್ಮಾಣ ಆಗಿರುವ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೇನೆ. ಅಲ್ಲಿಗೆ ಬರುವಂತೆ ನನಗೆ ಆಹ್ವಾನ ನೀಡಿದ್ದಾರೆ. ಪಾನಕ ನೀಡುತ್ತಾರೋ, ಫಲಾಹಾರ ನೀಡುತ್ತಾರೋ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪರೋಕ್ಷವಾಗಿ ರಜೆ ಇಲ್ಲ ಎಂದಿದ್ದ ಡಿಸಿಎಂ ಡಿಕೆಶಿ
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ರಜೆ ನೀಡುವುದಿಲ್ಲ ಎಂಬುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಭಾನುವಾರ (ಜ. 21) ಬೆಳಗ್ಗೆ ಪರೋಕ್ಷವಾಗಿ ತಿಳಿಸಿದ್ದರು. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದು ಹೇಳಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿಯೇ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್, “ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ” ಎಂದು ತಿಳಿಸಿದ್ದರು.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್, “ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: Karnataka Politics: ಜೆಡಿಎಸ್‌ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಬಿಟ್ಟುಕೊಟ್ಟ ಬಿಜೆಪಿ! ಹೈಕಮಾಂಡ್ ಸಮ್ಮತಿಯಷ್ಟೇ ಬಾಕಿ
ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದರು.