ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಸೀಸನ್ 2ಅನ್ನು (Bigg Boss OTT 2) ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಇತ್ತೀಚಿನ ಸಂಚಿಕೆಯಲ್ಲಿ ಹೋಸ್ಟ್ ಸಲ್ಮಾನ್ ಖಾನ್ ಖಚಿತಪಡಿಸಿದ್ದಾರೆ. ಸಲ್ಮಾನ್ ಖಾನ್ ವಾರಕ್ಕೆ ಎರಡು ಬಾರಿ, ವಾರಾಂತ್ಯದ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ವಾರವಿಡೀ ಸ್ಪರ್ಧಿಗಳ ನಡವಳಿಕೆಯ ಬಗ್ಗೆ ಮಾತನಾಡಲಿದ್ದಾರೆ. ಅಷ್ಟೇ ಅಲ್ಲದೇ ಎರಡು ವಾರಗಳಲ್ಲಿ 400 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ ಎಂತಲೂ ಬಹಿರಂಗಪಡಿಸಿದ್ದಾರೆ.
ಬಿಗ್ ಬಾಸ್ OTT 2
ಜುಲೈ 8ರಂದು ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ಅವರು ಸ್ಪರ್ಧಿಗಳ ಕುರಿತು ಮಾತನಾಡಿದರು. ಸ್ಫರ್ಧಿಗಳಿಗೆ ನಿಮ್ಮ ಸಂಪೂರ್ಣ ವೃತ್ತಿಜೀವನದಲ್ಲಿ ಪ್ರೇಕ್ಷಕರು ನೋಡುವುದಕ್ಕಿಂತ ಹೆಚ್ಚಿನ ಸಮಯವನ್ನು ಈ ಶೋನಲ್ಲಿ ನಿಮ್ಮನ್ನು ನೋಡುತ್ತಿದ್ದಾರೆ ಎಂದು ಹೇಳಿದರು. “ಆರು ವಾರಗಳು ಅಥವಾ ಎಂಟು ವಾರಗಳವರೆಗೆ ಶೋ ವಿಸ್ತರಿಸಬಹುದು. ಅದರರ್ಥ ಏನು? ಅಂದರೆ ಪ್ರದರ್ಶನಕ್ಕೆ ಎರಡು ವಾರಗಳ ವಿಸ್ತರಣೆ ಸಿಕ್ಕಿದೆ. ಅಂದರೆ ಜನರು ಶೋವನ್ನು ಪ್ರೀತಿಸುತ್ತಿದ್ದಾರೆ. ಕೇವಲ ಎರಡು ವಾರಗಳಲ್ಲಿ 400 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ. ನಿಸ್ಸಂಶಯವಾಗಿ, ಬಿಗ್ ಬಾಸ್ ಒಟಿಟಿ ಸೀಸನ್ 2ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದರು.
ಸಲ್ಮಾನ್ ಮಾತನಾಡಿ ʻʻʻಜನರು ಮತ್ತಷ್ಟು ನಿಮ್ಮನ್ನು ಪ್ರೀತಿಸಿಬೇಕೆಂದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ಕೆಲಸ ನೀವೆ ಮಾಡಬೇಕು, ಬೇರೆಯವರಲ್ಲʼʼ ಎಂದರು.
ಸಿಗರೇಟ್ ಸೇದುತ್ತಲೇ ಬಿಗ್ಬಾಸ್ ಶೋ ನಡೆಸಿದ ಸಲ್ಮಾನ್ ಖಾನ್
ಬಿಗ್ ಬಾಸ್ ಒಟಿಟಿ 2 ಶೋನ ಶನಿವಾರದ ‘ವೀಕೆಂಡ್ ಕಾ ವಾರ್’ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಖಾನ್ ಅವರು ವೇದಿಕೆ ಮೇಲೆ ಕೈಯಲ್ಲಿ ಸಿಗರೇಟ್ ಹಿಡಿದು ಮಾತನಾಡುತ್ತಿರುವ ಫೋಟೊ ಲಭ್ಯವಾಗಿದೆ. Redditಗೆ ಮೊದಲು ಫೋಟೊ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ದೇಶಾದ್ಯಂತ ಲಕ್ಷಾಂತರ ಜನರು ವೀಕ್ಷಿಸುವ ಶೋನಲ್ಲಿ ಸಲ್ಮಾನ್ ಖಾನ್ ಅವರು ಸಿಗರೇಟ್ ಹಿಡಿದು ಕಾಣಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
“ಕಳೆದ ವಾರವಷ್ಟೇ, ಟಿವಿ ಕಾರ್ಯಕ್ರಮದಲ್ಲಿ ಕಿಸ್ ಮಾಡುವುದು ನಮ್ಮ ಸಂಸ್ಕೃತಿಯ ವಿರುದ್ಧವಾಗಿದೆ ಎಂಬುದಾಗಿ ಸ್ಪರ್ಧಾಳುಗಳಿಗೆ ಸಲ್ಮಾನ್ ಖಾನ್ ಪಾಠ ಮಾಡಿದ್ದರು. ಈಗ ನೋಡಿದರೆ ಅವರೇ ಇಂತಹ ವರ್ತನೆ ತೋರಿದ್ದಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಸಲ್ಮಾನ್ ಖಾನ್ ಅವರದ್ದು ಹಿಪೋಕ್ರಸಿಯ ವರ್ತನೆ. ಅವರು ಯಾರಿಗೆ ಬೋಧನೆ ಮಾಡಿದ್ದಾರೋ, ಅವರ ಎದುರಾದರೂ ಸಭ್ಯವಾಗಿ ವರ್ತಿಸಬೇಕಿತ್ತು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲ್ಮಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.