Site icon Vistara News

BBK Season 10 : ಬಿಗ್‌ ಬಾಸ್‌ನಿಂದ ಹೊರಬಿದ್ದ ಗೌರೀಶ್‌ ಅಕ್ಕಿ; ಇದು ಸ್ಕ್ರಿಪ್ಟೆಡಾ?

Gowrish Akki Bigboss 10 elimination

ಬೆಂಗಳೂರು: ಖ್ಯಾತ ನಿರೂಪಕ, ಆಲ್ಮಾ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಗೌರೀಶ್‌ ಅಕ್ಕಿ (Gowrish Akki) ಅವರು ಬಿಗ್‌ ಬಾಸ್‌ ಸೀಸನ್‌ 10ನಿಂದ (BBK Season 10) ಎರಡನೇ ವಾರದಲ್ಲೇ ಹೊರಬಿದ್ದಿದ್ದಾರೆ. ಭಾನುವಾರ ನಡೆದ ಸೂಪರ್‌ ಸಂಡೇ ವಿದ್‌ ಸುದೀಪ್‌ (Super sunday with Sudeep) ಕಾರ್ಯಕ್ರಮದಲ್ಲಿ ಎಲಿಮಿನೇಷನ್‌ ರೌಂಡ್‌ನಲ್ಲಿ ಗೌರೀಶ್‌ ಅಕ್ಕಿ ಹೊರಬಂದರು. ಬಳಿಕ ವೇದಿಕೆಯಲ್ಲಿ ಸುದೀಪ್‌ ಅವರೊಂದಿಗೆ ಮಾತನಾಡಿದ ಗೌರೀಶ್‌ ಬಿಗ್‌ ಬಾಸ್‌ ಶೋ ಒಂದು ಪರ್ಸೆಂಟ್‌ ಕೂಡಾ ಸ್ಕ್ರಿಪ್ಟೆಡ್‌ ಅಲ್ಲವೇ ಅಲ್ಲ ಎಂದು ಘೋಷಿಸಿದರು.

ಅಕ್ಟೋಬರ್‌ 8ರಂದು ಆರಂಭವಾದ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಅಕ್ಟೋಬರ್‌ 22ರಂದು ರಾತ್ರಿ ನಡೆದದ್ದು ಎರಡನೇ ಎಲಿಮಿನೇಷನ್‌. ಅದರ ಹಿಂದಿನ ವಾರದಲ್ಲಿ ಸ್ನೇಕ್‌ ಶ್ಯಾಮ್‌ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇದೀಗ ಮನೆಯಲ್ಲಿ 15 ಮಂದಿ ಉಳಿದಂತಾಗಿದೆ.

ಎಲಿಮಿನೇಷನ್‌ನಿಂದ ತಪ್ಪಿಸಿಕೊಂಡ ಭಾಗ್ಯ ಶ್ರೀ

ಎರಡನೇ ವಾರದ ಅಂತ್ಯದಲ್ಲಿ ಆರು ಮಂದಿ ಎಲಿಮಿನೇಷನ್‌ಗೆ ನಾಮಿನೇಟ್‌ ಆಗಿದ್ದರು. ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ ಮತ್ತು ಕಾರ್ತಿಕ್ ಮಹೇಶ್. ಅವರಲ್ಲಿ ಇಬ್ಬರನ್ನು (ತುಕಾಲಿ ಸಂತೋಷ್‌, ಕಾರ್ತಿಕ್‌ ಮಹೇಶ್‌) ಶನಿವಾರದ ವಾರದ ಕಥೆ ಕಿಚ್ಚನ ಜತೆಯಲ್ಲಿ ಸೇಫ್‌ ಮಾಡಲಾಗಿತ್ತು. ಭಾನುವಾರಕ್ಕೆ ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ ಹಾಗೂ ಗೌರೀಶ್ ಅಕ್ಕಿ ಉಳಿದಿದ್ದರು. ಇವರ ಪೈಕಿ ಮೊದಲು ಸಂಗೀತಾ ಶೃಂಗೇರಿ ಮತ್ತು ಬಳಿಕ ತನಿಷಾ ಕುಪ್ಪಂಡ ಸೇಫ್‌ ಆದರು. ಕೊನೆಯ ಫೈಟ್‌ ಉಳಿದದ್ದು ಗೌರೀಶ್‌ ಅಕ್ಕಿ ಮತ್ತು ಭಾಗ್ಯಶ್ರೀ ಮಧ್ಯೆ. ಇದರಲ್ಲಿ ಜನರಲ್‌ ವೋಟಿಂಗ್‌ ಆಧರಿಸಿ ಗೌರೀಶ್‌ ಅಕ್ಕಿ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ.

ಗೌರೀಶ್‌ ಅಕ್ಕಿ ಎಲಿಮಿನೇಷನ್‌ಗೆ ಏಳು ಕಾರಣಗಳು

  1. ಗೌರೀಶ್‌ ಅಕ್ಕಿ ಅವರಿಗೆ ಈ ಶೋಗೆ ಹೋಗಲು ಮನಸಿರಲಿಲ್ಲ. ಪತ್ನಿಯ ಒತ್ತಾಯಕ್ಕೆ ಮಣಿದು ಹೋಗಿದ್ದರು.
  2. ಮನೆಯಲ್ಲಿ ಅವರಿಗೆ ಪೂರ್ತಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎಲ್ಲರ ಜತೆ ಬೆರೆಯುವುದು ಅವರಿಗೆ ಕಷ್ಟವಾಗುತ್ತಿತ್ತು. ಅವರ ಸಂವಾದ ಕೆಲವರ ಜತೆ ಸೀಮಿತವಾಗಿತ್ತು.
  3. ಮನರಂಜನೆ ವಿಚಾರದಲ್ಲಿ ಅವರು ಹಿಂದೆ ಬಿದ್ದಿದ್ದರು. ಯಾವ ಗಮನಾರ್ಹ ಪರ್ಫಾರ್ಮೆನ್ಸ್‌ ಕೂಡಾ ಇರಲಿಲ್ಲ.
  4. ಉಳಿದ ಸ್ಪರ್ಧಿಗಳು ಅವರಿಂದ ದೂರ ಇರಲು ಪ್ರಯತ್ನಿಸುತ್ತಿದ್ದರು. ಅತಿಯಾದ ಗೌರವದಿಂದ ನಡೆದುಕೊಳ್ಳುತ್ತಿದ್ದುದೂ ಹಿನ್ನಡೆಯಾಗಿತ್ತು.
  5. ಗೌರೀಶ್‌ ಅಕ್ಕಿ ಅವರು ಮೈಚಳಿ ಬಿಟ್ಟಿರಲಿಲ್ಲ. ಮಾತನಾಡಿದರೂ ತುಂಬ ಹೈಲೆವೆಲ್ ಯೋಚನೆಯಲ್ಲೇ ಮಾತನಾಡುತ್ತಿದ್ದರು.
  6. ನಾಮಿನೇಷನ್‌ನಲ್ಲಿ ಅವರಿಗೆ ಹೆಚ್ಚು ವೋಟುಗಳು ಬಿದ್ದಿದ್ದವು. ಪಬ್ಲಿಕ್‌ ವೋಟ್‌ ಕೂಡಾ ಬಿದ್ದಿರಲಿಲ್ಲ.
  7. ಟಾಸ್ಕ್‌ ವಿಚಾರದಲ್ಲೂ ಅವರು ಗಟ್ಟಿತನ ತೋರಿಸಲಿಲ್ಲ. ಆಸಕ್ತಿಯನ್ನೂ ತೋರಿಸಲಿಲ್ಲ.

ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಅಲ್ಲ ಎಂದ ಗೌರೀಶ್‌ ಅಕ್ಕಿ

ಬಿಗ್‌ ಬಾಸ್‌ ಹೌಸ್‌ನಿಂದ ಹೊರಗೆ ಬಂದ ಗೌರೀಶ್‌ ಅಕ್ಕಿ ಅವರಿಗೆ ವೇದಿಕೆಯಲ್ಲಿ ಸುದೀಪ್‌ ಅವರಿಗೆ ಒಂದು ಪ್ರಶ್ನೆ ಕೇಳಿದರು: ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಅಂತ ನಿಮಗೆ ಅನಿಸಿತಾ?

ಅದಕ್ಕೆ ಉತ್ತರಿಸಿದ ಗೌರೀಶ್‌ ಅಕ್ಕಿ ಅವರು, ಇಲ್ಲವೆ ಇಲ್ಲ. ನಾನು ಇದ್ದ ಇಷ್ಟೂ ದಿನದಲ್ಲಿ ಒಂದೇ ಒಂದು ಮಾಹಿತಿಯಾಗಲಿ, ನಮಗೆ ನೀಡಲಾಗಿಲ್ಲ. ಯಾರೂ ನಮ್ಮ ಜತೆ ಮಾತನಾಡಿಲ್ಲ. ಹೀಗಾಗಿ ನನ್ನ ಪ್ರಕಾರ ಇದು 200% ಸ್ಕ್ರಿಪ್ಟೆಡ್‌ ಅಲ್ಲ ಎಂದು ಸ್ಪಷ್ಟಪಡಿಸಿದರು.

ಗೌರೀಶ್‌ ಅವರ ಪತ್ನಿ ಹೇಳಿದ್ದೇನು?

ಗೌರೀಶ್‌ ಅವರ ಪತ್ನಿ ಮಾಲತಿ ಅವರು ಈ ವಾರ ಗೌರೀಶ್‌ ಅವರೇ ಹೊರಬರುತ್ತಾರೆ ಎಂಬ ಬಗ್ಗೆ ಮೊದಲೇ ಕ್ಲೂ ಕೊಟ್ಟಿದ್ದರು. ಶುಕ್ರವಾರದ ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ನನ್ನ ಮುಂದಿನ ಪೋಸ್ಟ್‌ ಗೌರೀಶ್‌ ಜತೆ ಸೆಲ್ಫಿಯೊಂದಿಗೆ ಎಂದು ಹೇಳಿದ್ದರು. ಗೌರೀಶ್‌ ಅವರು ಹೆಣ್ಮಕ್ಕಳ ಜತೆ ಮಾತನಾಡಲು ಮುಜುಗರ ಮಾಡುತ್ತಾರೆ ಎಂದು ಮಾಲಕಿ ಅವರು ಬಿಗ್‌ ಬಾಸ್‌ ಮನೆ ಪ್ರವೇಶದ ವೇಳೆ ಹೇಳಿದ್ದರು. ಸುದೀಪ್‌ ಅವರು ಗೌರೀಶ್‌ ಮನೆಯಲ್ಲಿ ಹೆಣ್ಮಕ್ಕಳ ಜತೆ ಸಹಜವಾಗಿ ಇದ್ದರಲ್ಲವೇ ಎಂದು ಪ್ರಶ್ನಿಸಿದರು. ಆದರೆ ಮಾಲತಿ ಅವರು ಇದನ್ನು ಒಪ್ಪಿಕೊಳ್ಳಲಿಲ್ಲ. ಅವರು ಮಾತನಾಡುತ್ತಿದ್ದರೂ ಮುಖದಲ್ಲಿ ಮುಜುಗರ ಇತ್ತು ಎಂದರು. ಕೊನೆಗೆ ಬದಲಾಗಿದ್ದರೆ ನನಗೆ ಸಂತೋಷ ಎಂದು ಹೇಳಿದರು.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್‌; ದೊಡ್ಮನೆಯಿಂದಲೇ ಎಳೆದೊಯ್ದರು!

ನೀತೂ ವನಜಾಕ್ಷಿ ನಾಮಿನೇಟ್‌

ಈ ನಡುವೆ, ಗೌರೀಶ್‌ ಅಕ್ಕಿ ಅವರು ಮನೆಯಿಂದ ಹೊರಬೀಳುವ ಹೊತ್ತಿನಲ್ಲಿ ನೀತೂ ಅವರನ್ನು ನೇರವಾಗಿ ಮುಂದಿನ ವಾರಕ್ಕೆ ನಾಮಿನೇಟ್‌ ಮಾಡಿದ್ದಾರೆ. ನೀತು ಅವರು ಸ್ವಲ್ಪ ಅಹಂ ಹೊಂದಿದ್ದಾರೆ, ಯಾರು ಹೇಳಿದ್ದನ್ನೂ ಒಪ್ಪಿಕೊಳ್ಳುವುದಿಲ್ಲ ಎಂಬ ಕಾರಣ ನೀಡಿದ್ದಾರೆ.

Exit mobile version