Site icon Vistara News

BBK Season 10: ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್‌; ದೊಡ್ಮನೆಯಿಂದಲೇ ಎಳೆದೊಯ್ದರು!

vartur santhosh arrested big boss contestant

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಅತಿ ದೊಡ್ಡ ಶಾಕ್‌ ಎದುರಾಗಿದೆ. ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿರುವ ಆಧುನಿಕ ಕೃಷಿಕ ವರ್ತೂರು ಸಂತೋಷ್‌ (Vartur Santhosh) ಅವರನ್ನು ದೊಡ್ಮನೆಯಿಂದಲೇ ಅರೆಸ್ಟ್‌ (Arrest from Big boss house) ಮಾಡಲಾಗಿದೆ.

ವರ್ತೂರು ಸಂತೋಷ್‌ ಅವರು ಕುತ್ತಿಗೆಯಲ್ಲಿ ಹಾಕಿಕೊಂಡಿರುವ ಚೈನ್‌ನಲ್ಲಿದ್ದ ಹುಲಿಯುಗುರೇ (Nail of tiger) ಅವರಿಗೆ ಮುಳುವಾಗಿದೆ. ಹುಲಿ ಉಗುರನ್ನು ಈ ರೀತಿ ಬಳಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಅಪರಾಧವಾಗಿದ್ದು, ಈ ಕಾರಣಕ್ಕಾಗಿ ಅರಣ್ಯಾಧಿಕಾರಿಗಳು ಕೇಸು ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.

ರಾಮೋಹಳ್ಳಿ ಅರಣ್ಯಾಧಿಕಾರಿಗಳು ಈ ಬಗ್ಗೆ ಕೇಸು ದಾಖಲಿಸಿಕೊಂಡು ಭಾನುವಾರ ರಾತ್ರಿ ರಾಜರಾಜೇಶ್ವರಿ ನಗರದ ಬಳಿ ಇರುವ ಬಿಗ್‌ ಬಾಸ್‌ ಮನೆಗೆ ಭೇಟಿ ನೀಡಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಿದ್ದಾರೆ.

ವರ್ತೂರು ಸಂತೋಷ್‌ ಅವರು ಅಧುನಿಕ ಮತ್ತು ಪ್ರಗತಿಪರ ಕೃಷಿಕರಾಗಿದ್ದು, ಮೈತುಂಬ ಚಿನ್ನಾಭರಣಗಳನ್ನು ಧರಿಸುವ ಖಯಾಲಿ ಹೊಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸಾಧಾರಣವಾಗಿ ಆಡುತ್ತಿರುವ ಅವರು ಶನಿವಾರ ಮತ್ತು ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜತೆ ಮತ್ತು ಸೂಪರ್‌ ಸಂಡೇ ವಿದ್‌ ಸುದೀಪ್‌ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಚಿನ್ನದ ಸರಗಳನ್ನು ಧರಿಸುತ್ತಾರೆ. ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳು ತಕ್ಷಣವೇ ಕೇಸು ದಾಖಲಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದೆ. ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದನ್ನು ಗಮನಿಸಿ ಎಫ್​ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ.

ಟಿವಿಯಲ್ಲಿ ಹುಲಿ ಉಗುರು ಪೆಂಡೆಂಟ್ ಹಾಕಿಕೊಂಡ ದೃಶ್ಯವನ್ನು ಗಮನಿಸಿ ಕ್ರಮ ಕೈಗೊಳ್ಳಲಾಗಿದೆ. ಸಂತೋಷ್ ಅವರನ್ನು ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿಟ್ಟು ವಿಚಾರಿಸಲಾಗುತ್ತಿದೆ. ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ಬೆಂಗಳೂರು ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಬಿಗ್‌ ಬಾಸ್‌ ಇತಿಹಾಸದಲ್ಲಿ ಇದೇ ಮೊದಲು

ಬಿಗ್‌ ಬಾಸ್‌ ಸ್ಪರ್ಧಿಯಾಗಿರುವ ಒಬ್ಬ ವ್ಯಕ್ತಿಯನ್ನು ಬಂಧಿಸುತ್ತಿರುವುದು ಕನ್ನಡ ಬಿಗ್‌ ಬಾಸ್‌ ರಿಯಾಲಿಟಿ ಶೋದಲ್ಲಿ ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಹುಚ್ಚ ವೆಂಕಟ್‌ ಮತ್ತೊಬ್ಬ ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದ್ದರೂ ಅದಕ್ಕೆ ಸಂಬಂಧಿಸಿ ಕೇಸು ದಾಖಲಾಗಿರಲಿಲ್ಲ.

ವರ್ತೂರು ಸಂತೋಷ್‌ ಹಳ್ಳಿಕಾರ್‌ ಹಸುಗಳ ಪಾಲಕ

ದೇಸೀ ತಳಿಯ ಹಸುವಾಗಿರುವ ಹಳ್ಳಿಕಾರ್‌ ತಳಿಯನ್ನು ಅಭಿವೃದ್ಧಪಡಿಸುವ ನಿಟ್ಟಿನಲ್ಲಿ ಸಂತೋಷ್‌ ಅವರು ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಹಳ್ಳಿಕಾರ್‌ ಕ್ಯಾಟಲ್‌ ಬ್ರೀಡ್‌ ಅಥವಾ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿರುವ ಅವರು ಹಳ್ಳಿಕಾರ್‌ ಒಡೆಯ ಎಂಬ ಹೆಸರು ಪಡೆದಿದ್ದಾರೆ.

ಇದನ್ನೂ ಓದಿ: BBK Season 10: ಗಾದೆಗೆ ತಕ್ಕ ವ್ಯಕ್ತಿತ್ವ; ಸಂಗೀತಾ ಗರಂ!

ತಮ್ಮ ತಾಯಿ ಜತೆಗೆ ಕೃಷಿ ಕಾರ್ಯದಲ್ಲಿ ತೊಡಗಿರುವ ಆಧುನಿಕ ಕೃಷಿಕ ಅವರು. ಅದರ ಜತೆಗೆ ಹಲವಾರು ರೀತಿಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಕೃಷಿಕರು ಹೀಗೂ ಇರಬಹುದು ಎನ್ನುವುದನ್ನು ಸಾಕ್ಷೀಕರಿಸಿರುವ ಸಂತೋಷ್‌ ಅವರು ಇದೀಗ ಹುಲಿಯುಗುರಿನ ವಿವಾದದಲ್ಲಿ ಸಿಕ್ಕಿಬಿದ್ದು ಅರೆಸ್ಟ್‌ ಆಗಿರುವುದು ಹಿನ್ನಡೆಯಾಗಿದೆ.

ಸಂತೋಷ್‌ ಅವರನ್ನು ವಿಚಾರಣೆ ನಡೆಸಿ ಬಿಟ್ಟುಬಿಡುತ್ತಾರಾ? ಅವರಿಗೆ ಮತ್ತೆ ದೊಡ್ಮನೆ ಪ್ರವೇಶಿಸಲು ಅವಕಾಶ ಕೊಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

Exit mobile version