ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 10 (BBK Season 10)ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಚಾಂಪಿಯನ್ ಯಾರಾಗುತ್ತಾರೆ, ಯಾರಾಗಬೇಕು ಎನ್ನುವ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಗ್ಬಾಸ್ ಮನೆಯ ಸದಸ್ಯರಿಗೆ ಬಹು ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಹೊರಬಂದಿರುವ ಪ್ರೋಮೊದಲ್ಲಿ ಇದು ರಿವೀಲ್ ಆಗಿದೆ. ಆ ಕುರಿತಾದ ವಿವರ ಇಲ್ಲಿದೆ.
ಹಳೆ ಸ್ಪರ್ಧಿಗಳ ಭೇಟಿ
ಬಿಗ್ಬಾಸ್ ಮನೆಗೆ ಈ ಸೀಸನ್ನ ಹಳೆಯ ಸ್ಪರ್ಧಿಗಳು ಭೇಟಿ ನೀಡಿ ತಮ್ಮ ಸ್ನೇಹಿತರಿಗೆ ಧೈರ್ಯ ತುಂಬಿದ್ದಾರೆ. ಭಾಗ್ಯಶ್ರೀ, ಸ್ನೇಹಿತ್, ರಕ್ಷಕ್, ಮೈಕಲ್, ಸಿರಿ, ಇಶಾನಿ, ನೀತು ಮತ್ತಿತರರು ಬಿಗ್ಬಾಸ್ ಮನೆಯೊಳಗೆ ಎಂಟ್ರಿಯಾಗಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಸ್ನೇಹಿತರಿಗೆ ಸ್ಫೂರ್ತಿ ತುಂಬಿದ್ದಾರೆ.
ಡ್ರೋನ್ ಪ್ರತಾಪ್ ಜತೆ ಮಾತನಾಡಿದ ನೀತು, ʼʼಈ ಮನೆಯಲ್ಲಿ ನಿಂಗೆ ಸಪೋರ್ಟ್ ಮಾಡೋದು ಸಂಗೀತಾ ಮಾತ್ರ. ಅವರ ಜತೆ ಮನಸ್ತಾಪ ಮಾಡಿಕೊಳ್ಳಬೇಡʼʼ ಎಂದು ಕಿವಿ ಮಾತು ಹೇಳಿದ್ದಾರೆ. ಇನ್ನು ನಮ್ರತಾ ಜತೆ ಮಾತನಾಡಿದ ಇಶಾನಿ, ʼʼಬೇರೆ ಏನನ್ನೂ ಯೋಚನೆ ಮಾಡಬೇಡ. ನಿನ್ನ ಬಗ್ಗೆಯೇ ಆಲೋಚನೆ ಮಾಡು. ಆಟದ ಬಗ್ಗೆ ಗಮನ ಹರಿಸುʼʼ ಎಂದು ಸಲಹೆ ನೀಡಿದ್ದಾರೆ.
ಈ ಮಧ್ಯೆ ನಮ್ರತಾ ಹಾಗೂ ಕಾರ್ತಿಕ್ ಮಧ್ಯೆ ಆಪ್ತತೆ ಬೆಳೆದಿದೆ. ಬಹುಶಃ ಇದರಿಂದ ಸ್ನೇಹಿತ್ ಉರಿದುಕೊಂಡಿರಬಹುದು ಎಂಬುದು ನಮ್ರತಾ ಆಲೋಚನೆ. ಈ ಬಗ್ಗೆ ಇಶಾನಿ ಜತೆ ಪ್ರಸ್ತಾವಿಸಿದ್ದಾರೆ. ಅವರನ್ನು ನೋಡಿ ಸ್ನೇಹಿತ್ ಕೈ ಮುಗಿದಿದ್ದಾರೆ.
ಸ್ನೇಹ ಹಸ್ತ ಚಾಚಿದ ಸ್ಪರ್ಧಿಗಳು
ಈ ಹಿಂದೆ ಬಿಗ್ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಉತ್ತಮ ಗೆಳೆಯರಾಗಿದ್ದರು. ಆದರೆ ಕೆಲವು ದಿನಗಳಿಂದ ಕಾರಣಾಂತರಗಳಿಂದ ಈ ಸ್ನೇಹ ಮುರಿದು ಬಿದ್ದಿದೆ. ಆದರೆ ಸಂಕ್ರಾಂತಿ ಸಂಭ್ರಮದಲ್ಲಿ ಅಚ್ಚರಿಯೊಂದು ಪ್ರೇಕ್ಷಕರಿಗೆ ಎದುರಾಗಿದೆ. ಮತ್ತೆ ವಿನಯ್-ಸಂಗೀತಾ ಹಾಗೂ ಕಾರ್ತಿಕ್-ಸಂಗೀತಾ ಮಧ್ಯೆ ಸ್ನೇಹ ಚಿಗುರಿದೆ. ಸಂಕ್ರಾಂತಿ ಪ್ರಯುಕ್ತ ಎಳ್ಳು-ಬೆಲ್ಲ ತಿಂದು ಇವರೆಲ್ಲ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಸಂಕ್ರಾಂತಿ ಹಬ್ಬದಂದು ತಮ್ಮೊಳಗಿರುವ ವೈಮನಸ್ಸು, ದ್ವೇಷ, ಮನಸ್ತಾಪಗಳನ್ನು ತ್ಯಜಿಸಿ ಸ್ನೇಹ ಬೆಳೆಸಲು ಬಿಗ್ಬಾಸ್ ಎಲ್ಲ ಸ್ಪರ್ಧಿಗಳಿಗೂ ಸೂಚಿಸಿದ್ದರು. ಅದರಂತೆ ಪ್ರತಿಯೊಬ್ಬರೂ ವೇದಿಕೆಗೆ ಬಂದು ತಮ್ಮೊಳಗಿರುವ ಯಾವ ನಕಾರಾತ್ಮಕ ಅಂಶವನ್ನು ತ್ಯಜಿಸಲು ಇಚ್ಛಿಸುತ್ತಾರೆ ಹಾಗೂ ಯಾವ ಸಕಾರಾತ್ಮಕ ಅಂಶವನ್ನು ಬೆಳೆಸಲು ಇಚ್ಛಿಸುತ್ತಾರೆ ಎಂಬುದನ್ನು ವಿವರಿಸಬೇಕಿತ್ತು. ಜತೆಗೆ ಯಾರೊಂದಿಗಿನ ತಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಇಚ್ಛಿಸುತ್ತಾರೆ ಎನ್ನುವುದನ್ನೂ ತಿಳಿಸಿ ಅವರಿಗೆ ಎಳ್ಳು-ಬೆಲ್ಲ ತಿನ್ನಿಸಬೇಕಿತ್ತು.
ಅದರಂತೆ ಸಂಗೀತಾ ಅವರು ಕಾರ್ತಿಕ್ಗೆ ಸಂಗೀತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ. ನಮ್ರತಾ ಅವರಿಗೆ ವರ್ತೂರು ಸಂತೋಷ್ ಎಳ್ಳು-ಬೆಲ್ಲ ನೀಡಿದ್ದಾರೆ. ಸಂಗೀತಾ ಅವರಿಗೆ ವಿನಯ್, ಕಾರ್ತಿಕ್ ಅವರಿಗೆ ತನಿಷಾ, ನಮ್ರತಾ ಅವರಿಗೆ ತನಿಷಾ ಎಳ್ಳು ಬೆಲ್ಲ ಕೊಟ್ಟಿದ್ದಾರೆ. ತುಕಾಲಿ ಸಂತು ಅವರಿಗೆ ನಮ್ರತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ. ಡ್ರೋನ್ ಪ್ರತಾಪ್ ಬಳಿ ತುಕಾಲಿ ಸಂತು ಕ್ಷಮೆ ಕೇಳಿದ್ದಾರೆ. ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳು ಪರಸ್ಪರ ದ್ವೇಷ ಮರೆತು, ಕ್ಷಮೆ ಕೇಳಿ ಒಂದಾಗಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ