Site icon Vistara News

BBK SEASON 10: ಆಟದಲ್ಲಿ ಸಂಗೀತಾ, ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್?

Sangeetha and Tanisha bidding Karthik

ಬೆಂಗಳೂರು: ಬಿಗ್‌ಬಾಸ್ ಮನೆಯೊಳಗೆ ಬಿಡ್ಡಿಂಗ್ (BBK SEASON 10) ಭರಾಟೆ ಜೋರಾಗಿಯೇ ಸಾಗಿದೆ. ತಂಡ ರಚನೆಯಲ್ಲಿ ಗುಪ್ತವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ. ಇದರ ಝಲಕ್ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರಿಗೆ ಬಿಗ್‌ಬಾಸ್‌ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ. ಆದರೆ ಕಾರ್ತಿಕ್‌ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ! ಇದರ ಮೇಲೆ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್‌ ಅವರು’ ಎಂದು ಬೇರೆ ಹೇಳಿದ್ದಾರೆ.

ಇದನ್ನು ನೋಡಿ ತುಕಾಲಿ ಸಂತೋಷ್‌, ‘ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಅವನ್ನ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡು ನಂತರ ಪಕ್ಷ ಬದಲಾಯಿಸಿ ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ.
ಹಾಗಾದರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಖರೀದಿಸಿದ್ದಾರೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ವಿನಯ್‌- ಅವಿನಾಶ್‌ ಕಾಳಗ; ಆಟದಿಂದ ಹೊರಗುಳಿದ ʻಆನೆʼ!

ಟಾಸ್ಕ್‌ ಏನು?

ತನಿಷಾ ಹಾಗೂ ಸಂಗೀತಾ ಅವರ ತಂಡಗಳನ್ನು ರಚಿಸಿ, ತಮ್ಮ ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಬಿಗ್‌ ಬಾಸ್‌ ಹೇಳಿದರು. ಇಬ್ಬರಿಗೂ 11 ಸಾವಿರ ರೂಪಾಯಿ ಹಣ ನೀಡಿ, ಪ್ರತಿ ಆಟಗಾರನಿಗೂ ಇಂತಿಷ್ಟೆಂದು ಹಣ ಕೊಟ್ಟು ತಲಾ ನಾಲ್ಕು ಜನರನ್ನು ಖರೀದಿಸಬೇಕು ಎಂದು ಷರತ್ತು ಹಾಕಲಾಯ್ತು. ಈ ಪಾಯಿಂಟ್ಸ್ ಉಪಯೋಗಿಸಿ, ತಮ್ಮ ತಮ್ಮ ತಂಡಕ್ಕೆ ಮಾಲೀಕರು ತಲಾ 4 ಸದಸ್ಯರನ್ನು ಖರೀದಿ ಮಾಡಬೇಕಿತ್ತು. ಯಾವುದೇ ತಂಡಕ್ಕೆ ಸೇರ್ಪಡೆಯಾಗದ ಒಬ್ಬ ಆಟಗಾರ, ಎರಡೂ ತಂಡಗಳಿಂದ ಹೊರಗುಳಿದಂತೆ. ಟಾಸ್ಕ್‌ಗಳನ್ನು ಗೆಲ್ಲುವ ತಂಡ ಪಾಯಿಂಟ್ಸ್ ಗಳಿಸುತ್ತಾ ಹೋಗುತ್ತದೆ. ಆ ಪಾಯಿಂಟ್‌ಗಳನ್ನು ಆಟಗಾರರೊಂದಿಗೆ ಮಾಲೀಕರು ಹಂಚಿಕೊಳ್ಳಬಹುದು. ವಾರದ ಟಾಸ್ಕ್ ಕೊನೆಯಲ್ಲಿ ಅತೀ ಹೆಚ್ಚು ಪಾಯಿಂಟ್ಸ್ ಹೊಂದಿರುವ ಒಬ್ಬ ಮಾಲೀಕ ಹಾಗೂ ಅತೀ ಹೆಚ್ಚು ಪಾಯಿಂಟ್ಸ್ ಪಡೆದಿರುವ 3 ಆಟಗಾರರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ.

Exit mobile version