Site icon Vistara News

Budget 2024: ದೇಶದ ಬಜೆಟ್‌ಗೆ ಇದೆ ಅಪೂರ್ವ ಇತಿಹಾಸ; ಕುತೂಹಲಕಾರಿ ಅಂಶಗಳು ಇಲ್ಲಿವೆ

Budget 2024

Budget 2024: 10 Interesting Facts About The History Of Indian Budget

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಧ್ಯಂತರ ಬಜೆಟ್‌ಗೆ (Budget 2024) ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡಿಸಲಿದ್ದಾರೆ. ಹಾಗಾಗಿ, ದೇಶದ ಸಾಮಾನ್ಯ ಜನರಿಂದ ಉದ್ಯಮಿಗಳ ಕಣ್ಣು ಬಜೆಟ್‌ ಮೇಲಿದೆ. ಇನ್ನು, ಪ್ರತಿ ವರ್ಷ ಇಷ್ಟೆಲ್ಲ ಕುತೂಹಲ ಕೆರಳಿಸುವ ಬಜೆಟ್‌ಗೆ ಭಾರಿ ಇತಿಹಾಸ ಇದೆ. ಮೊದಲ ಬಜೆಟ್‌ ಯಾವಾಗ ಮಂಡನೆಯಾಯಿತು ಎಂಬುದು ಸೇರಿ ಬಜೆಟ್‌ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.

  1. ಭಾರತದಲ್ಲಿ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ್ದು 1860ರ ಏಪ್ರಿಲ್‌ 7ರಂದು. ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಕಾಟ್ಲೆಂಡ್‌ ಆರ್ಥಿಕ ತಜ್ಞ ಜೇಮ್ಸ್‌ ವಿಲ್ಸನ್‌ ಅವರು ದೇಶದಲ್ಲಿ ಮೊದಲ ಬಾರಿಗೆ ಬಜೆಟ್‌ ಮಂಡಿಸಿದರು. ಇವರು ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆಯನ್ನು ಪರಿಚಯಿಸಿದರು. ಈಗಲೂ ಸರ್ಕಾರಕ್ಕೆ ಆದಾಯ ತೆರಿಗೆಯೇ ಪ್ರಮುಖ ಆದಾಯವಾಗಿದೆ.
  2. 1947ರ ನವೆಂಬರ್‌ 26ರಂದು ಆರ್.ಕೆ. ಷಣ್ಮುಗಂ ಚೆಟ್ಟಿ ಅವರು ಸ್ವತಂತ್ರ ಭಾರತದ ಮೊದಲ ಬಜೆಟ್‌ ಮಂಡಿಸಿದರು.
  3. ದೇಶದ ಇತಿಹಾಸದಲ್ಲಿ ಸುದೀರ್ಘವಾಗಿ ಬಜೆಟ್‌ ಮಂಡಿಸಿದ ಖ್ಯಾತಿ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರದ್ದಾಗಿದೆ. ಇವರು 2020ರ ಫೆಬ್ರವರಿ 1ರಂದು 2 ಗಂಟೆ 42 ನಿಮಿಷಗಳವರೆಗೆ ಬಜೆಟ್‌ ಭಾಷಣ ಮಾಡಿದರು. ಇದು ದೇಶದ ಇತಿಹಾಸದಲ್ಲಿಯೇ ಸುದೀರ್ಘ ಬಜೆಟ್‌ ಭಾಷಣ ಎನಿಸಿದೆ.
  4. ಬಜೆಟ್‌ ಭಾಷಣದಲ್ಲಿ ಅತಿ ಹೆಚ್ಚು ಪದಗಳನ್ನು ಬಳಸಿದ ಖ್ಯಾತಿ ಮಾಜಿ ಪ್ರಧಾನಿ, ಮಾಜಿ ಹಣಕಾಸು ಸಚಿವರೂ ಆದ ಡಾ. ಮನಮೋಹನ್‌ ಸಿಂಗ್‌ ಅವರದ್ದಾಗಿದೆ. ಮನಮೋಹನ್‌ ಸಿಂಗ್‌ ಅವರು 1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಬಜೆಟ್‌ ಭಾಷಣದ ವೇಳೆ 18,604 ಪದಗಳನ್ನು ಬಳಸಿದ್ದರು. ಅರುಣ್‌ ಜೇಟ್ಲಿ ಅವರು ಕೂಡ 2018ರಲ್ಲಿ 18,604 ಪದಗಳನ್ನು ಬಳಸಿದ್ದರು.
  5. ಪದಗಳ ಲೆಕ್ಕದಲ್ಲಿ ಅತಿ ಕಡಿಮೆ ಪದ ಬಳಸಿದ ಕೀರ್ತಿ ಹೀರುಭಾಯಿ ಮುಲಿಜಿಭಾಯಿ ಪಟೇಲ್‌ ಅವರದ್ದಾಗಿದೆ. ಇವರು 1977ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಇದೇ ವರ್ಷ ಮಂಡಿಸಿದ ಬಜೆಟ್‌ ವೇಳೆ ಕೇವಲ 800 ಪದ ಬಳಸಿದ್ದರು.
  6. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿ ಮೊರಾರ್ಜಿ ದೇಸಾಯಿ ಅವರದ್ದಾಗಿದೆ. ಮೊರಾರ್ಜಿ ದೇಸಾಯಿ ಅವರು 10 ಬಾರಿ ಬಜೆಟ್‌ ಮಂಡಿಸಿದರೆ, ಪಿ. ಚಿದಂಬರಂ 9, ಪ್ರಣಬ್‌ ಮುಖರ್ಜಿ 8 ಹಾಗೂ ಯಶವಂತ್‌ ಸಿನ್ಹಾ ಅವರು 8 ಬಾರಿ ಬಜೆಟ್‌ ಮಂಡಿಸಿದ್ದಾರೆ.
  7. ಸಂಸತ್‌ನಲ್ಲಿ ಮೊದಲು ಫೆಬ್ರವರಿಯ ಕೊನೆಯ ದಿನದಂದು ಸಂಜೆ 5 ಗಂಟೆಗೆ ಬಜೆಟ್‌ ಮಂಡಿಸುವ ಪದ್ಧತಿ ಇತ್ತು. ಆದರೆ, 1999ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ ಅವರು ಬಜೆಟ್‌ ಮಂಡನೆಯ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಇನ್ನು 2017ರಲ್ಲಿ ಅರುಣ್‌ ಜೇಟ್ಲಿ ಅವರು ಬಜೆಟ್‌ ಮಂಡನೆಯ ದಿನಾಂಕವನ್ನು ಫೆಬ್ರವರಿ 28ರ ಬದಲಾಗಿ ಫೆಬ್ರವರಿ 1ಕ್ಕೆ ನಿಗದಿಪಡಿಸಿದರು.
  8. 1955ರವರೆಗೂ ಇಂಗ್ಲಿಷ್‌ನಲ್ಲಿ ಮಾತ್ರ ಬಜೆಟ್‌ ಪುಸ್ತಕವನ್ನು ಮುದ್ರಿಸಲಾಗುತ್ತಿತ್ತು. ಇದಾದ ಬಳಿಕ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬಜೆಟ್‌ ಮುದ್ರಿಸಲಾಗುತ್ತಿದೆ.
  9. ಕೊರೊನಾ ಹಿನ್ನೆಲೆಯಲ್ಲಿ 2021-22ರಲ್ಲಿ ಮೊದಲ ಬಾರಿಗೆ ಬಜೆಟ್‌ ಪ್ರತಿ ಮುದ್ರಿಸಿರಲಿಲ್ಲ. ಇದು ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ಮಂಡಿಸಿದ ಡಿಜಿಟಲ್‌ ಬಜೆಟ್‌ ಇದಾಗಿತ್ತು.
  10. 1970-71ನೇ ಹಣಕಾಸು ವರ್ಷದಲ್ಲಿ ಇಂದಿರಾ ಗಾಂಧಿ ಅವರು ಬಜೆಟ್‌ ಮಂಡಿಸುವ ಮೂಲಕ ಬಜೆಟ್‌ ಮಂಡಿಸಿದ ದೇಶದ ಮೊದಲ ಮಹಿಳೆ ಎನಿಸಿದರು. ನಂತರ 2019ರಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ ದ್ವಿತೀಯ ಮಹಿಳೆ ಎನಿಸಿದರು.

ಇದನ್ನೂ ಓದಿ: Budget 2024: ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್ ನಡುವಿನ ವ್ಯತ್ಯಾಸಗಳೇನು?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version