ನವದೆಹಲಿ: ಸಾರ್ವತ್ರಿಕ ಚುನಾವಣೆ (Lok Sabha Election) ಮುಂದಿರುವಂತೆಯೇ ಮಧ್ಯಂತರ ಬಜೆಟ್ (Interim Budget) ಮಂಡಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸನ್ನದ್ಧರಾಗಿದ್ದಾರೆ. ಈ ಹಿಂದೆಯಲ್ಲ, ವಿತ್ತ ಸಚಿವರು ಬಜೆಟ್ (Budget 2024) ಮಂಡನೆಗೆ ಹೋಗುವ ಮುನ್ನ ಬ್ರೀಫ್ಕೇಸ್ನೊಂದಿಗೆ ಮಾಧ್ಯಮಗಳಿಗೆ ಪೋಸು ನೀಡುತ್ತಿದ್ದರು. ಆದರೆ, ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾದಾಗಿನಿಂದ ಬ್ರೀಫ್ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಪುಸ್ತಕದೊಂದಿಗೆ ಮಾಧ್ಯಮಗಳಿಗೆ ಪೋಸು ನೀಡಿದ್ದನ್ನು ನೀವು ಗಮನಿಸಿರಬಹುದು. ಕೆಂಪು ಬಟ್ಟೆಯಲ್ಲಿರುವ ಪುಸ್ತಕವನ್ನು ‘ವಹಿ ಖಾತಾ’ ಎಂದು ಕರೆಯಲಾಗುತ್ತದೆ.
ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಬ್ರೀಫ್ಕೇಸ್ ಬಿಟ್ಟು ನಿರ್ಮಲಾ ಸೀತಾರಾಮನ್ ಅವರು 2019ರಲ್ಲಿ ಮೊದಲ ಬಾರಿಗೆ ವಹಿ ಖಾತಾದೊಂದಿಗೆ ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸಿದರು. ಬ್ರಿಟಿಷ್ ವಸಾೊಹತುಶಾಹಿ ಪದ್ಧತಿಯನ್ನು ಕೈ ಬಿಟ್ಟು ಭಾರತೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಈ ಬದಲಾವಣೆಯ ಹಿಂದಿನ ಉದ್ದೇಶವಾಗಿತ್ತು. ಬ್ರಿಟಿಷ್ ವಿತ್ತ ಸಚಿವರು ಬಜೆಟ್ ಮಂಡಿಸುವಾಗ ಗ್ಲಾಡ್ ಸ್ಟೋನ್ ಬಾಕ್ಸ್ನೊಂದಿಗೆ ಸಂಸತ್ತಿಗೆ ಹೋಗುತ್ತಿದ್ದರು. ಆ ಬಳಿಕ, ಬಾಕ್ಸ್ ಬದಲಿಗೆ ಬ್ರೀಫ್ಕೇಸ್ ತೆಗೆದುಕೊಂಡು ಹೋಗುವ ಪದ್ಧತಿ ಜಾರಿಗೆ ಬಂತು. ಅದೇ ಆಚರಣೆಯನ್ನು ಭಾರತದಲ್ಲಿ ವಿತ್ತ ಸಚಿವರು ಸ್ವಾತಂತ್ರ್ಯದ ಬಳಿಕ ಅನುಸರಿಸಲು ಶುರು ಮಾಡಿದರು.
2019 ರ ಬಜೆಟ್ ಮಂಡನೆಗೆ ಮುನ್ನ, ನಿರ್ಮಲಾ ಸೀತಾರಾಮನ್ ಅವರು ಸಾಂಪ್ರದಾಯಿಕ ಬ್ರೀಫ್ಕೇಸ್ ಬದಲಿಗೆ ಖಾತೆಗಳ ಸಾಂಪ್ರದಾಯಿಕ ಲೆಡ್ಜರ್ ಕೆಂಪು ವಹಿ ಖಾತಾದೊಂದಿಗೆ ಆಗಮಿಸಿದರು. ಬ್ರೀಫ್ಕೇಸ್ ತ್ಯಜಿಸಿರುವುದು ವಸಾಹತುಶಾಹಿ ಪರಂಪರೆಯ ಸಾಂಕೇತಿಕ ತ್ಯಜಿಸುವಿಕೆ ಎಂದು ವ್ಯಾಖ್ಯಾನಿಸಲಾಗಿದೆ. ಬ್ರೀಫ್ಕೇಸ್ ಸ್ವತಃ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕುರುಹು ಆಗಿದ್ದು, ಬ್ರಿಟಿಷ್ ಬಜೆಟ್ ಪ್ರಸ್ತುತಿಗಳಲ್ಲಿ ಬಳಸಲಾದ ‘ಗ್ಲಾಡ್ಸ್ಟೋನ್ ಬಾಕ್ಸ್’ ಮಾದರಿಯಲ್ಲಿದೆ.
ಸಾಂಪ್ರದಾಯಿಕ ಭಾರತೀಯ ಲೆಕ್ಕಪರಿಶೋಧಕ ಸಾಧನವಾದ ವಹಿ ಖಾತಾವನ್ನು ಬಳಸುವುದು ದೇಶದ ಪರಂಪರೆ ಮತ್ತು ಸಾಂಕೇತಿಕತೆಯನ್ನು ಅಳವಡಿಸಿಕೊಳ್ಳುವ ಮಾರ್ಗವಾಗಿದೆ ಭಾವಿಸಲಾಗಿದೆ. ಹಾಗಾಗಿ, ಬ್ರೀಫ್ಕೇಸ್ಗೆ ಗುಡ್ ಬೈ ಹೇಳಲಾಯಿತು.
ವಹಿ ಖಾತಾ ಅನೇಕ ಭಾರತೀಯರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಣ್ಣ ವ್ಯಾಪಾರಗಳಿಗೆ ಪರಿಚಿತ ಸಂಕೇತವಾಗಿದೆ. ಬಜೆಟ್ ಮಂಡನೆಯನ್ನು ಹೆಚ್ಚು ಸಾಪೇಕ್ಷವಾಗಿ ಮತ್ತು ಸಾಮಾನ್ಯ ನಾಗರಿಕರಿಗೆ ಪ್ರವೇಶಿಸುವಂತೆ ಮಾಡುವ ಮಾರ್ಗವಾಗಿ ಇದನ್ನು ಬಳಸಲಾಗಿದೆ.
ವಹಿ ಖಾತಾವನ್ನು ಸಾಮಾನ್ಯವಾಗಿ ಸಣ್ಣ ವ್ಯಾಪಾರಗಳು ಮತ್ತು ಉದ್ಯಮಿಗಳು ತಮ್ಮ ಹಣಕಾಸುಗಳನ್ನು ಪತ್ತೆಹಚ್ಚಲು ಬಳಸುತ್ತಾರೆ. ಈ ವಲಯಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಸೂಚಿಸುವ ಮಾರ್ಗವಾಗಿ ಇದನ್ನು ಬಳಸಲಾಗಿದೆ. ಭಾರತೀಯತೆಯನ್ನು ಸಾಕಾರಗೊಳಿಸುವುದಕ್ಕಾಗಿ ಈಗ ಬ್ರೀಫ್ಕೇಸ್ ಬದಲಿಗೆ ಕೆಂಪು ವಹಿ ಖಾತಾವನ್ನು ಬಳಸಲಾಗುತ್ತದೆ.
ಸ್ವತಂತ್ರ ಭಾರತದ ಚೊಚ್ಚಲ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವ ಆರ್.ಕೆ. ಶಂಕ್ಮುಖಂ ಚೆಟ್ಟಿ ಅವರು ಬ್ರಿಟಿಷ್ ಸಂಪ್ರದಾಯದಂತೆ ದಾಖಲೆ ಪತ್ರಗಳನ್ನು ಚರ್ಮದ ಬ್ಯಾಗ್ನಲ್ಲಿ ತಂದಿದ್ದರು. ತರುವಾಯ, ಮುಂದಿನ ವರ್ಷಗಳಲ್ಲಿ, ವಿವಿಧ ಹಣಕಾಸು ಮಂತ್ರಿಗಳು ಬಜೆಟ್ ಮಂಡಿಸಲು ವಿಭಿನ್ನ ಬ್ರೀಫ್ಕೇಸ್ಗಳನ್ನು ಆರಿಸಿಕೊಂಡರೆಂದು ಹೇಳಬಹುದು. ಅಂತಿಮವಾಗಿ ಈಗ ಬ್ರೀಫ್ಕೇಸ್ ಕೈ ಬಿಟ್ಟು ಕೆಂಪು ವಹಿ ಖಾತಾವನ್ನು ವಿತ್ತ ಸಚಿವರು ಬಳಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Budget 2024: ಮಧ್ಯಂತರ ಬಜೆಟ್ ಮತ್ತು ಲೇಖಾನುದಾನ ನಡುವಿನ ವ್ಯತ್ಯಾಸಗಳೇನು?