ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ (Budget 2024) ಅನ್ನು ಖಂಡಿಸುವ ಭರದಲ್ಲಿ ಸಂಸದ ಡಿ.ಕೆ. ಸುರೇಶ್ (DK Suresh) ಭಾರತ ವಿಭಜನೆಯ (Partition of India) ಮಾತನಾಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು ಉತ್ತರ ಭಾರತ (North India) ಹಾಗೂ ದಕ್ಷಿಣ ಭಾರತ (South India) ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ” ಎಂದು ಸಂಸದ ಡಿ.ಕೆ. ಸುರೇಶ್ ನೀಡಿರುವ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸುರೇಶ್ ಹೇಳಿಕೆಯನ್ನು ಬಿಜೆಪಿ (BJP Karnataka) ಬಲವಾಗಿ ಖಂಡಿಸಿದೆ. ಆದರೆ, ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ (Bharat Jodo) ಎಂದರೆ, ಅವರ ಪಕ್ಷದ ಸಂಸದ ಭಾರತ್ ತೋಡೋ (Bharat Todo) ಎಂದು ಹೇಳುತ್ತಿದ್ದಾರೆ. ಮತ್ತೊಮ್ಮೆ ಭಾರತವನ್ನು ಒಡೆಯುವ ಹುನ್ನಾರ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಟೀಕಿಸಿದ್ದಾರೆ.
ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಯಾವುದೇ ಹೇಳಿಕೆ ಕೊಡುವ ಮೊದಲು ಯೋಚನೆ ಮಾಡಬೇಕು ಎಂಬ ಸಲಹೆಗಳು ವ್ಯಕ್ತವಾಗಿವೆ.
ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
ಒಂದು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಕರ್ನಾಟಕದ ನಾಯಕ ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ಭಾರತ್ ತೋಡೋ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆ ಅನುಭವಿಸಿದ್ದು, ಈಗ ಮತ್ತೂಮ್ಮೆ ಭಾರತವನ್ನ ಒಡೆಯುವ ಮಾತನಾಡುತ್ತಿದ್ದಾರೆ. ದೇಶದ ಅಖಂಡತೆ, ಸಾರ್ವಭೌಮತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿದ ಸಂಸದರೊಬ್ಬರು ಈ ರೀತಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ದೇಶದ್ರೋಹಿ ಹೇಳಿಕೆ: ಎ.ಎಸ್. ಪಾಟೀಲ್ ನಡಹಳ್ಳಿ
ಮಾಜಿ ಶಾಸಕ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಪ್ರತಿಕ್ರಿಯೆ ನೀಡಿ, ಸಂಸದರೊಬ್ಬರು ದೇಶದ್ರೋಹಿ ಹೇಳಿಕೆ ಕೊಟ್ಟಿದ್ದಾರೆ. ಡಿ.ಕೆ. ಸುರೇಶ್ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಪ್ರತ್ಯೇಕ ರಾಷ್ಟ್ರದ ಹೇಳಿಕೆ ಖಂಡನೀಯ. ಸಂಸದರಾದವರು ಹೇಳಿಕೆಯನ್ನು ನೀಡುವ ಮುನ್ನ ಎಚ್ಚರದಿಂದ ಇರಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು 80 ಸಾವಿರ ಕೋಟಿ ರೂಪಾಯಿ ಮಾತ್ರ. 10 ವರ್ಷದ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಕರ್ನಾಟಕ್ಕ ರಾಜ್ಯಕಕ್ಕೆ ಕೊಟ್ಟದೂ 2 ಲಕ್ಷ 82 ಸಾವಿರ ಕೋಟಿ ರೂಪಾಯಿ ಆಗಿದೆ. ಯಾವುದೇ ಹೇಳಿಕೆ ಕೊಡುವ ಮೊದಲು ಯೋಚನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ್ರೋಹದ ಕೇಸ್ ದಾಖಲು ಮಾಡಬೇಕು
ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ನವರು ಯಾವಾಗಲೂ ದೇಶ ವಿಭಜನೆಯ ಮಾನಸಿಕತೆಯನ್ನು ಹೊಂದಿದ್ದಾರೆ. ದೇಶವನ್ನು ಒಡೆಯುವ ಷಡ್ಯಂತ್ರವನ್ನು ಕಾಂಗ್ರೆಸ್‌ನವರು ಸುರೇಶ್ ಮೂಲಕ ಹೇಳಿಸಿದ್ದಾರೆ. ಜಮ್ಮು ಕಾಶ್ಮೀರದ ವಿಚಾರದಲ್ಲೂ ಕಾಂಗ್ರೆಸ್ ಅದೇ ರೀತಿಯಲ್ಲಿ ನಡೆದುಕೊಂಡಿದೆ. ಕೇರಳದಲ್ಲಿ ಬಿಜೆಪಿಯ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿಲ್ಲ. ಆದರೂ ಅಲ್ಲಿ ಎಲ್ಲ ರೀತಿಯ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ್ರೋಹದ ಕೇಸ್ ಅನ್ನು ಡಿ.ಕೆ. ಸುರೇಶ್ ಮೇಲೆ ದಾಖಲು ಮಾಡಬೇಕು. ಕಾಂಗ್ರೆಸ್‌ನವರಿಗೆ ದೇಶದ ಜನ ಒಗ್ಗಟ್ಟಾಗಿರೋದನ್ನು ನೋಡುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಈ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಚ್.ಕೆ. ಪಾಟೀಲ್ ಸಮರ್ಥನೆ
ಡಿ.ಕೆ. ಸುರೇಶ್ ಹೇಳಿಕೆ ಒಬ್ಬ ಮಂತ್ರಿಯಾಗಿ ಇಷ್ಟು ವರ್ಷ ರಾಜಕಾರಣದಲ್ಲಿ ಇದ್ದಾರೆ. ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಪ್ರಮಾಣದ ಕಡಿಮೆ ಹಣ ಕೊಡುತ್ತೀರಿ? ಬಿಡುಗಡೆ ಯಾವಾಗ ಮಾಡುತ್ತೀರಿ. ಇಷ್ಟು ದೊಡ್ಡ ಪ್ರಮಾಣದ ಬರ ಇದ್ದಾಗಲೂ ನಯಾ ಪೈಸೆ ಪರಿಹಾರ ಕೊಡಲಿಲ್ಲ. ಇದು ಯಾವ ಧೋರಣೆ? ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಕುದುರಬೇಕೇ ಹೊರತು ವಿಶ್ವಾಸ ಕುಂದಬಾರದು. ಎಲ್ಲಿ ಹೆಚ್ಚು ಶ್ರಮ ಇದೆಯೋ ಆ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಬೇಕು. ಆರ್ಥಿಕತೆಯ ವಿಚಾರದಲ್ಲೂ ರಾಜಕೀಯವೇ ಮಾಡುವುದಾದರೆ ಯಾವ ರೀತಿಯಿಂದ ರಾಜ್ಯಗಳ ವಿಶ್ವಾಸಾರ್ಹತೆ ಕುದುರಿಸಿಕೊಳ್ಳುತ್ತೀರಿ? ಎಂದು ಹೇಳುವ ಮೂಲಕ ಸಚಿವ ಎಚ್.ಕೆ. ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿ.ಕೆ. ಸುರೇಶ್ ಹೇಳಿದ್ದೇನು?
ಸಂಸದ ಡಿ.ಕೆ. ಸುರೇಶ್ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡುವಾಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕ ಮಾತ್ರ ಬದಲಾಯಿಸಲಾಗಿದೆ: ಡಿ.ಕೆ. ಸುರೇಶ್
ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನು ಇಡಲಾಗಿದೆ. ಎಕನಾಮಿಕ್ ಸರ್ವೆಯವರು ಮುಂದಿಟ್ಟಿದ್ದಿದ್ದರೆ ಇವರ ಪರಿಸ್ಥಿತಿ ಏನಿದೆ? ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಎಂಬುದು ತಿಳಿಯುತ್ತಿತ್ತು. ಈಗ ದೇಶದ ಸ್ಥಿತಿ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ.
ಇದನ್ನೂ ಓದಿ: Budget 2024: ಪ್ರಗತಿನಿಷ್ಠ ಬಜೆಟ್’ ಎಂದ ಬಿಎಸ್‌ವೈ; ನಾಮಫಲಕವನ್ನು ಮಾತ್ರ ಬದಲಾಗಿದೆ ಎಂದ ಡಿ.ಕೆ. ಸುರೇಶ್
ಈ ಬಜೆಟ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳನ್ನು ನೀಡಿದೆ. ಆದರೆ, ಹೇಳಿಕೆಗಳಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಹೇಳಬಹುದಾಗಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವತ್ತು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂಥವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.