Site icon Vistara News

Karnataka Budget 2024 : ಪರಿಶಿಷ್ಟ ಪಂಗಡದ 5 ಸಾವಿರ ಯುವಕರಿಗೆ ಡ್ರೋನ್ ಟ್ರೈನಿಂಗ್​​

Drone Training

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಿಗೆ ಅನೇಕ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ನಲ್ಲಿ (Karnataka Budget 2024) ಪ್ರಕಟಿಸಿದ್ದಾರೆ. ಪ್ರಮುಖವಾಗಿ ಉದ್ಯೋಗಕ್ಕೆ ನೆರವಾಗುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ. ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ 5,000 ಯುವಕ/ಯುವತಿಯರಿಗೆ ಡ್ರೋನ್ ತರಬೇತಿಯನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಅನುಸೂಚಿತ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 27,674 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಗೆ 11,44೭ ಕೋಟಿ ರೂ. ಗಳು ಸೇರಿದಂತೆ ಒಟ್ಟಾರೆ 39,12೧ ಕೋಟಿ ರೂ. ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಹೇಳಿದರು.

ವೈಜ್ಞಾನಿಕವಾಗಿ ಹಾಗೂ ಸಂವಿಧಾನಬದ್ಧವಾಗಿ ಪರಿಶಿಷ್ಟ ಜಾತಿಯ ಮೀಸಲು ವರ್ಗೀಕರಣ ಮಾಡುವುದು ಸರ್ಕಾರದ ಧ್ಯೇಯವಾಗಿದೆ. ಈ ಕುರಿತು ಭಾರತದ ಸಂವಿಧಾನದ ಅನುಚ್ಛೇದ 341ಕ್ಕೆ ಅಗತ್ಯ ತಿದ್ದುಪಡಿ ತಂದು, ಹೊಸದಾಗಿ ಕ್ಲಾಸ್​ -3 ಅನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಒಟ್ಟು 2,710 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂಬುದಾಗಿ ಬಜೆಟ್ ಭಾಷಣದಲ್ಲಿ ಸಿಎಂ ಹೇಳಿದರು.

ಇದನ್ನೂ ಓದಿ : Karnataka Budget 2024: ಇದೊಂದು ಅಭಿವೃದ್ಧಿ ಪರ ಬಜೆಟ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಕ್ರೈಸ್‌ ಯೋಜನೆಯಡಿ 23 ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸೇರಿದ ಒಟ್ಟು 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಕಾಮಗಾರಿಗಳನ್ನು 638 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುವುದು| ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಕ್ರೈಸ್‌ ಸಂಸ್ಥೆಯ ಮೂಲಕ ಪ್ರಾರಂಭಿಸಲಾಗುವುದು ಎಂದು ನುಡಿದರು.

2023-24ನೇ ಸಾಲಿನಲ್ಲಿ 23 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ 18 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು 2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಮುಖಾಂತರ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಇದನ್ನೂ ಓದಿ : Karnataka Budget 2024: ಇದೊಂದು ಅಭಿವೃದ್ಧಿ ಪರ ಬಜೆಟ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಸತಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 31 ಹೊಸ ಮೆಟ್ರಿಕ್‌ ನಂತರದ ವಸತಿನಿಲಯಗಳನ್ನು ಮಂಜೂರು ಮಾಡಲಾಗುವುದು. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಸತಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ 100 ರೂ. ನಂತೆ ಹೆಚ್ಚಿಸಲಾಗುವುದು ಎಂದು ಹೇಳಿದರು.

35 ಕೋಟಿ ಕಾರ್ಪಸ್​ ಫಂಡ್​

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ದುಬಾರಿ ವೆಚ್ಚದ ಚಿಕಿತ್ಸಾ ಸೇವೆಗಳನ್ನು ಒದಗಿಸಲು 35 ಕೋಟಿ ರೂ.ಗಳ ಕಾರ್ಪಸ್​​ ಫಂಡ್​ ಸ್ಥಾಪಿಸಲಾಗುವುದು. ಈ ನಿಧಿಯ ಬಡ್ಡಿ ಆಕರಣೆಯನ್ನು ರೋಗಿಗಳ ಚಿಕಿತ್ಸೆಯ ಅಗತ್ಯಕ್ಕನುಗುಣವಾಗಿ ನೀಡಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ 2024-25ನೇ ವರ್ಷದಲ್ಲಿ ಒಟ್ಟಾರೆಯಾಗಿ 1,750 ಕೋಟಿ ರೂ.ಗಳ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು.

ಪರಿಶಿಷ್ಟ ಪಂಗಡಗಳ ಕಲ್ಯಾಣ

  1. ಪರಿಶಿಷ್ಟ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ಈ ಸಚಿವಾಲಯಕ್ಕೆ ಅಗತ್ಯ ಹುದ್ದೆಗಳನ್ನು ಸೃಜಿಸಿ 2023-24ನೇ ಸಾಲಿನಿಂದ ಕಾರ್ಯಾರಂಭ ಮಾಡಲಾಗಿದೆ ಎಂದು ಬಜೆಟ್​ನಲ್ಲಿ ಘೋಷಿಸಿದರು.
  2. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳ ಹೆಸರನ್ನು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಎಂದು ಮರು ನಾಮಕರಣ ಮಾಡಲಾಗುವುದು. ಈ ಶಾಲೆಗಳ ಉನ್ನತೀಕರಣಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
  3. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್‌ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ, ಯಾವುದೇ ಫೆಲೋಶಿಪ್‌ ಪಡೆಯದಿದ್ದಲ್ಲಿ ಮಾಸಿಕ 25,000 ರೂ.ಗಳಂತೆ ಶಿಷ್ಯವೇತನ ನೀಡಲಾಗುವುದು ಎಂದು ಸಿಎಂ ಬಜೆಟ್ ವೇಳೆ ಘೋಷಿಸಿದ್ದಾರೆ.
Exit mobile version