Site icon Vistara News

Budget 2024: ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ; ಅಭಿವೃದ್ಧಿಪರ ಅಭೂತಪೂರ್ವ ಬಜೆಟ್ ಎಂದ ಜೋಶಿ

Pralhad Joshi

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಅನ್ನು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಸ್ವಾಗತಿಸಿದ್ದಾರೆ. ಇದು ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡಿದ ಬಜೆಟ್‌ ಅಲ್ಲ. ದೇಶದ ಹಿತಕ್ಕಾಗಿ ಮಾಡಿದ ಬಜೆಟ್‌ ಆಗಿದೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ದೂರದೃಷ್ಟಿ, ಪ್ರೋತ್ಸಾಹದ ಕಾರಣ ನಾವಿಂದು ಸ್ವಾವಲಂಬಿ ಭಾರತದತ್ತ ಸಾಗಿದ್ದೇವೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಜೋಶಿ ಹೇಳಿದ್ದೇನು?

ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಲ್ಲ. ಬದಲಾಗಿ ದೇಶದ ಹಿತ, ಬಡವರ ಹಿತದೃಷ್ಟಿ ಹಾಗೂ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿಕ ಮಾತನಾಡಿರುವ ಸಚಿವರು, ದೇಶದ ಹಣಕಾಸಿನ ಭದ್ರತೆ ಜೊತೆಗೆ ಅಭಿವೃದ್ಧಿ ಪರವಾಗಿ ಇರುವಂಥ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಪ್ರೇರಿತವಾಗಿ ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ, ಹಾಗೆ ಮಾಡದೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಸತಿ, ಆರೋಗ್ಯ, ರಸ್ತೆ, ಸಾರಿಗೆ ಹೀಗೆ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟು ಮಂಡಿಸಿದಂತಹ ಮುಂಗಡ ಪಾತ್ರವಾಗಿದೆ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಕೃಷಿ, ಮೀನುಗಾರಿಕೆ, ಆರೋಗ್ಯ ಕ್ಷೇತ್ರಗಳಿಗೆ ಸಾಕಷ್ಟು ಒತ್ತು

ಈ ವಿಕಸಿತ ಭಾರತ ಬಜೆಟ್‌ನಲ್ಲಿ ಘೋಷಿಸಿದಂತೆ ರೈಲ್ವೆ ಕಾರಿಡಾರ್ ಕಾರ್ಯಕ್ರಮ ಕಲ್ಲಿದ್ದಲು ಸಚಿವಾಲಯದ ಫಸ್ಟ್ ಮೈಲ್ ಕನೆಕ್ಟಿವಿಟಿ ಯೋಜನೆಗಳಿಗೆ ಪೂರಕವಾಗಿದೆ. ವಿತ್ತ ಸಚಿವರು ಕೃಷಿ, ಮೀನುಗಾರಿಕೆ, ಆರೋಗ್ಯ ಕ್ಷೇತ್ರಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. 11.11 ಲಕ್ಷ ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ ಎಂದಿದ್ದಾರೆ.

ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿ

ರಾಷ್ಟ್ರೀಯ ಮಿಷನ್ ದಾಖಲೆ ಸಿದ್ಧ; ಕೇಂದ್ರ ಸರ್ಕಾರ 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಅನಿಲೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ದಾಖಲೆ ಸಿದ್ಧಪಡಿಸಿದೆ. ಸುಸ್ಥಿರ ಬಳಕೆಗಾಗಿ ಕಲ್ಲಿದ್ದಲಿನ ವೈವಿಧ್ಯೀಕರಣದತ್ತ ಸಾಗುತ್ತಿದ್ದೇವೆ. ಜಾಗತಿಕವಾಗಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿಯೊಂದಿಗೆ ಹೆಜ್ಜೆ ಹಾಕಿದ್ದೇವೆ.

ಇದನ್ನೂ ಓದಿ: Budget 2024: ವಿನಾಶಕಾರಿ ಭಾರತ ಬಜೆಟ್‌; 190 ಲಕ್ಷ ಕೋಟಿ ರೂ. ಸಾಲ ಮಾಡಿದ ಮೋದಿ: ಸಿಎಂ ಸಿದ್ದರಾಮಯ್ಯ

ಸ್ವಾವಲಂಬಿ ಭಾರತದತ್ತ ಸಾಗಿದ್ದೇವೆ

ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ದೂರದೃಷ್ಟಿ, ಪ್ರೋತ್ಸಾಹದ ಕಾರಣ ನಾವಿಂದು ಸ್ವಾವಲಂಬಿ ಭಾರತದತ್ತ ಸಾಗಿದ್ದೇವೆ” ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ನಿರ್ವಹಿಸುತ್ತಿರುವ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Exit mobile version