ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1, ಗುರುವಾರ ಬೆಳಗ್ಗೆ 11 ಗಂಟೆಗೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ(Interim Budget 2024). ಮಹತ್ವದ ಘೋಷಣೆಗಳ ಸಾಧ್ಯತೆ ಕಡಿಮೆ ಇದ್ದರೂ, ಒಂದು ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾಗಿದೆ. ಹಾಗಾಗಿಯೇ, ಜನರು ಬಜೆಟ್ ಮೇಲೆ ತಮ್ಮ ಚಿತ್ತ ಹರಿಸಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ (Paid Leave), ಮಹಿಳಾ ಉದ್ಯಮಿಗಳಿಗೆ (women Entrepreneurs) ತೆರಿಗೆ ಸಡಿಲಿಕೆಗಳು ಸೇರಿದಂತೆ ಧಮಾಕಾ ಘೋಷಣೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance minister Nirmala Sitharaman) ಅವರು ಈ ಸಲದ ಕೇಂದ್ರ ಬಜೆಟ್‌ನಲ್ಲಿ (Budget 2024) ಮಾಡುವ ಸಾಧ್ಯತೆ ಇದೆ. ಜತಗೆ ಐದು ಪ್ರಮುಖ ಆದ್ಯತಾ ವಲಯಗಳ ಮೇಲೆ ಗಮನ ಹರಿಸುವ ಸಾಧ್ಯತೆಯೂ ಇದೆ.
Union Finance Minister Smt. @nsitharaman will hold the post-Budget Press Conference at the National Media Centre, New Delhi, tomorrow 👇
— Ministry of Finance (@FinMinIndia) January 31, 2024
🗓️ 1st February 2024
⏰ 16.00 Hours IST#ViksitBharatBudget pic.twitter.com/24xCb8G8BT
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮೊದಲಿನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ, ಮಹಿಳಾ ಉದ್ಯಮಿಗಳಿಗೆ ತೆರಿಗೆ ಸಡಿಲಿಕೆಗಳು, ಮಾತೃತ್ವ ರಜೆ ಪ್ರಯೋಜನಗಳಿಗೆ ಪ್ರೋತ್ಸಾಹ, ಯುವತಿಯರಿಗೆ ಕೌಶಲ್ಯ ತರಬೇತಿಗೆ ಒತ್ತು ಮತ್ತು ಉದ್ಯೋಗಿ ತಾಯಂದಿರಿಗೆ ಸಂಬಳದ ರಜಾದಿನಗಳನ್ನು ಹೆಚ್ಚಿಸುವ ಘೋಷಣೆಗಳ ನಿರೀಕ್ಷೆಯಿದೆ.
ವಿಶೇಷವಾಗಿ ಸಣ್ಣ ನಗರಗಳಲ್ಲಿನ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಬಗ್ಗೆ ಬಜೆಟ್ ಗಮನಹರಿಸುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಮಹಿಳಾ ಉದ್ಯಮಶೀಲತಾ ವೇದಿಕೆಗಳಂತಹ ಯೋಜನೆಗಳು ಈಗಾಗಲೇ ಸಹಾಯಕವಾಗಿವೆ. ಆದರೆ ಹೆಚ್ಚಿನ ಮಾರ್ಗದರ್ಶನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳಿಗೆ ಬೇಡಿಕೆಯಿದೆ.
ಭಾರತದ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣವು ಪ್ರಸ್ತುತ 24%ರಷ್ಟಿದೆ. ಇದು GDPಗೆ ಸುಮಾರು 17% ಕೊಡುಗೆ ನೀಡುತ್ತದೆ. 2023ಕ್ಕೆ ಹೋಲಿಸಿದರೆ ಮಹಿಳಾ-ಕೇಂದ್ರಿತ ಯೋಜನೆಗಳಿಗೆ ಹಂಚಿಕೆಯಲ್ಲಿ 25% ಹೆಚ್ಚಳವನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ. ಈ ಸಂಖ್ಯೆಗಳನ್ನು ಹೆಚ್ಚಿಸಲು ಮತ್ತು ಉದ್ಯೋಗಿಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ರೈತ ಭೂಮಾಲೀಕ ಮಹಿಳೆಯರಿಗೆ ವಾರ್ಷಿಕ ಆದಾಯದ ಸಂಭಾವ್ಯ ದ್ವಿಗುಣಗೊಳಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಈ ಕ್ರಮವು ಸರ್ಕಾರಕ್ಕೆ 11,972 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. ಇದು ಜನಸಂಖ್ಯೆಯ ನಿರ್ಣಾಯಕ ಭಾಗಕ್ಕೆ ಹೆಚ್ಚು ಅಗತ್ಯವಿರುವ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಅನುದಾನ ಹೆಚ್ಚಳ
ʼʼಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ 2023-24ರ ಸಾಲಿನಲ್ಲಿ ಅನುದಾನವನ್ನು ಹೆಚ್ಚಿಸಲಾಗಿತ್ತು. ಇದು 2024-25ರಲ್ಲಿಯೂ ಮುಂದುವರಿಯಲಿದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2023-24ರ ಬಜೆಟ್‌ನಲ್ಲಿ, ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ ಹಂಚಿಕೆಯು ಸುಮಾರು ಶೇ. 71ರಷ್ಟು ಹೆಚ್ಚಳವಾಗಿತ್ತು. ಅದರಲ್ಲಿ ಹೆಚ್ಚಿನ ಭಾಗವನ್ನು ಪರಿಶಿಷ್ಟ ಪಂಗಡದ ಮಕ್ಕಳಿಗೆ ಆರನೇ ತರಗತಿಯಿಂದ ಉಚಿತ ಶಿಕ್ಷಣವನ್ನು ಒದಗಿಸುವ ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಯೋಜನೆಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಬುಡಕಟ್ಟು ಸಮುದಾಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಎಲ್ಲ ಅರ್ಹರಿಗೆ ತಲುಪುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಝಾರ್ಖಂಡ್‌ನ ಖುಂಟಿ ಗ್ರಾಮದಲ್ಲಿ 2023ರ ನವೆಂಬರ್ 15ರಂದು ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ರೈತರ ಕಲ್ಯಾಣ
ಶೇ. 33ಕ್ಕೂ ಹೆಚ್ಚಿನ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ಒದಗಿಸಲಾಗುತ್ತದೆ. 2023-24ರಲ್ಲಿ ಕೇಂದ್ರವು ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2024-25ರಲ್ಲಿ ಹೆಚ್ಚಾಗಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಂತ ಬಜೆಟ್ ಮಂಡನೆ ಯಾವಾಗ?
2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು, ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಬಜೆಟ್ ಲೈವ್ ವೀಕ್ಷಣೆ ಹೇಗೆ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದು, ಅವರ ಭಾಷಣವನ್ನು ದೂರದರ್ಶನದಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ. ಅಧಿಕೃತ ಚಾನೆಲ್‌ಗಳಾದ ಸಂಸದ್ ಟಿವಿಯಲ್ಲೂ ಪ್ರಸಾರವಿರುತ್ತದೆ. ಹಾಗೆಯೇ ಈ ಟಿವಿಗಳ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲೂ ಲೈವ್ ಟೆಲಿಕಾಸ್ಟ್ ಇರುತ್ತದೆ.
ಬಜೆಟ್ ನಿಮ್ಮ ಕೈಯಲ್ಲಿ ಸಿಗಲಿದೆ
ನೀವು ಮಧ್ಯಂತರ ಬಜೆಟ್ ಅನ್ನು ದಾಖಲೆಗಳನ್ನು ಕಾಗದರಹಿತ ರೂಪದಲ್ಲಿ ಪಡೆದುಕೊಳ್ಳಬಹುದು. ಅಂದರೆ, ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್ ಮೂಲಕ ಸಾಫ್ಟ್ ಕಾಪಿ ಪಡೆದುಕೊಳ್ಳಬಹುದು. ವಾರ್ಷಿಕ ಹಣಕಾಸು ಮುಂಗಡ ಪತ್ರ, ಅನುದಾನ ಬೇಡಿಕೆ, ಹಣಕಾಸು ವಿಧೇಯಕ ಸೇರಿದಂತೆ ಎಲ್ಲ ದಾಖಲೆ ಪತ್ರಗಳನ್ನು ಸಾಫ್ಟ್ ಕಾಪಿಯ ರೂಪದಲ್ಲಿ ಸಿಗುತ್ತದೆ. ಈ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. www.indiabudget.gov.in ಮೂಲಕವು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಸಚಿವರ ಭಾಷಣ ಮುಗಿದ ಬಳಿಕಷವಷ್ಟೇ ಲಭ್ಯವಾಗಲಿವೆ.
ಈ ಸುದ್ದಿಯನ್ನೂ ಓದಿ: Budget 2024: ಮಧ್ಯಂತರ ಬಜೆಟ್ ಮಂಡನೆ ದಿನಾಂಕ, ಸಮಯ ಮತ್ತು ಲೈವ್ ವೀಕ್ಷಣೆ ಮಾಹಿತಿ ಇಲ್ಲಿದೆ…