ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನದ (Budget 2024 Parliament joint session) ಕಲಾಪಗಳಿಗೆ ಮುನ್ನ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು, “ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲʼʼ ಎಂದು ಚುಚ್ಚಿದರು. “ಆತ್ಮಾವಲೋಕನ ಮಾಡಿಕೊಳ್ಳಿ” ಎಂದು ಪ್ರತಿಪಕ್ಷಗಳಿಗೆ ಕರೆ ನೀಡಿದರು.
ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಭಂಗಪಡಿಸುವ ಅಭ್ಯಾಸವಿರುವ ಸಂಸದರು ತಮ್ಮ ಸಂಸತ್ತಿನ ಸದಸ್ಯರಾಗಿದ್ದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಸತ್ತಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದವರನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ ಅಡ್ಡಿಪಡಿಸಿದ ಸದಸ್ಯರನ್ನು ಎಂದೂ ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದರು.
Speaking at the start of the Budget Session of Parliament. May it be a productive one. https://t.co/UOeYnXDdlz
— Narendra Modi (@narendramodi) January 31, 2024
ಈ ಬಜೆಟ್ ಅಧಿವೇಶನವು ಪಶ್ಚಾತ್ತಾಪ ಹೊಂದಲು ಮತ್ತು ಸಕಾರಾತ್ಮಕ ಹೆಜ್ಜೆಗುರುತುಗಳನ್ನು ಬಿಡಲು ಒಂದು ಅವಕಾಶವಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ನಾನು ಎಲ್ಲ ಸಂಸದರನ್ನು ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶವು ಪ್ರಗತಿಯ ಹೊಸ ಎತ್ತರಗಳನ್ನು ಮುಟ್ಟುತ್ತಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ದೇಶವು ಸರ್ವತೋಮುಖ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಅನುಭವಿಸುತ್ತಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ, ಲೋಕಸಭೆ ಚುನಾವಣೆಯ ಬಳಿಕದ ಬಜೆಟ್ ಅನ್ನೂ ನಾವೇ ಮಂಡಿಸಲಿದ್ದೇವೆ ಎಂದು ಹೇಳುವ ಮೂಲಕ ಅವರು ಅಧಿಕಾರಕ್ಕೆ ಬಿಜೆಪಿ ಮರಳಲಿದೆ ಎಂದು ಮೋದಿ ಸೂಚ್ಯವಾಗಿ ಹೇಳಿದರು. “ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಸಂಪ್ರದಾಯವನ್ನು ನಾವು ಅನುಸರಿಸಲಿದ್ದೇವೆ” ಎಂದವರು ನುಡಿದರು.
ಇಂದು ಆರಂಭವಾಗಿರುವ ಉಭಯ ಸದನಗಳ ಜಂಟಿ ಬಜೆಟ್ ಅಧಿವೇಶನ, ಫೆಬ್ರವರಿ 9ರಂದು ಮುಕ್ತಾಯಗೊಳ್ಳಲಿದೆ. ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ಇದಕ್ಕೂ ಮುನ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮರ್ಮು ಮಾತನಾಡಿದರು. ಅವರನ್ನು ಸೆಂಗೋಲ್ ದಂಡಧಾರಿಗಳು ಸ್ವಾಗತಿಸಿದರು. ಇದು ಹೊಸ ಕಟ್ಟಡದಲ್ಲಿ ರಾಷ್ಟ್ರಪತಿಗಳ ಮೊದಲ, ದ್ರೌಪದಿ ಮುರ್ಮು ಅವರ ಮೊದಲ ಭಾಷಣ ಆಗಿದೆ.