ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ಗೆ ಷೇರು ಮಾರುಕಟ್ಟೆ ಹೂಡಿಕೆದಾರರು ಹೆಚ್ಚಿನ ಪ್ರತಿಕ್ರಿಯೆ ತೋರಲಿಲ್ಲ. ಭಾರತೀಯ ಷೇರುಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡವು. ಬಳಿಕ ಅದು ಚೇತರಿಸಿಕೊಂಡವು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಜೆಟ್ ಮಂಡಿಸಿದ್ದು, ನಿರೀಕ್ಷಿತ ಪ್ರಮುಖ ಘೋಷಣೆಗಳಿಲ್ಲದ ಕಾರಣ ಆರಂಭದಲ್ಲಿ 150 ಪಾಯಿಂಟ್ಗಳಷ್ಟು ಇಳಿಕೆ ಕಂಡಿತ್ತು. ನಂತರದಲ್ಲಿ ನಿಧಾನವಾಗಿ ಏರಿಕೆಯಾಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆನ್ಸೆಕ್ಸ್ 73.99 ಪಾಯಿಂಟ್ ಅಥವಾ ಶೇಕಡಾ 0.10 ರಷ್ಟು ಏರಿಕೆ ಕಂಡು 71,826.10 ಕ್ಕೆ ತಲುಪಿದೆ ಮತ್ತು ನಿಫ್ಟಿ 2.50 ಪಾಯಿಂಟ್ ಅಥವಾ 0.01% ಏರಿಕೆ ಕಂಡು 21,728.20 ಕ್ಕೆ ತಲುಪಿದೆ.
ಕೇಂದ್ರ ಬಜೆಟ್ನಲ್ಲಿ ರಫ್ತು ಗುರಿಯನ್ನು ದ್ವಿಗುಣಗೊಳಿಸಿದ್ದರಿಂದ ಭಾರತೀಯ ಮೀನುಗಾರಿಕೆ ಷೇರುಗಳು ಜಿಗಿತ ಕಂಡವು. 10 ಮಿಲಿಯನ್ ಮನೆಗಳಿಗೆ ಸೌರ ಫಲಕಗಳ ಮೂಲಕ ಉಚಿತ ವಿದ್ಯುತ್ ನೀಡಲಾಗುವುದು ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದರಿಂದ ವಿದ್ಯುತ್ ಸ್ಟಾಕ್ಗಳು ಏರಿಕೆ ಕಂಡವು. ಆಟೋಮೊಬೈಲ್ ಕ್ಷೇತ್ರದ ಷೇರುಗಳು ಹೆಚ್ಚಿನ ಲಾಭ ಗಳಿಸಿದವು, ಕಂಪನಿಗಳು ಜನವರಿಯ ಮಾರಾಟದ ಡೇಟಾವನ್ನು ವರದಿ ಮಾಡಿದ್ದರಿಂದ 1% ಏರಿಕೆ ಕಂಡಿದೆ.
ಆದಾಯ ತೆರಿಗೆಯಲ್ಲಿ ಬದಲಾವಣೆ ಇದೆಯೇ? ಇಲ್ಲಿದೆ ಟ್ಯಾಕ್ಸ್ ಸ್ಲ್ಯಾಬ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಸಂಬಳ ಪಡೆಯುವ ವೃತ್ತಿಪರರು, ವಿಶೇಷವಾಗಿ, ಆದಾಯ ತೆರಿಗೆಯ ಬಗ್ಗೆ ಅವರ ಘೋಷಣೆಗಳ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು. ಅವರೆಲ್ಲರಿಗೂ ಶುಭ ಸುದ್ದಿ ನೀಡಿದ್ದು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದೇ ರೀತಿ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರವಾಗಿದೆ.
ಇದನ್ನೂ ಓದಿ : Budget 2024: ಕೇಂದ್ರ ಬಜೆಟ್‌ಗೆ FKCCI ಸಂತಸ; ಭವಿಷ್ಯದ ಭಾರತ ಬಗ್ಗೆ ಸ್ಪಷ್ಟತೆ
ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ಗಳು ಹಿಂದಿನದ್ದನ್ನೇ ಉಳಿಸಿಕೊಳ್ಳಲಾಗಿದೆ. ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಕೊಟ್ಟಿಲ್ಲ . ಅಸ್ತಿತ್ವದಲ್ಲಿರುವ ಸ್ಲ್ಯಾಬ್ (ಕಳೆದ ವರ್ಷದ ಬಜೆಟ್ನಲ್ಲಿ ಪ್ರಕಟಿಸಿರುವ ಹೊಸ ಮಾದರಿಯ ತೆರಿಗೆ ಪದ್ಧತಿ) ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.
ಇದೇ ವೇಳೆ ಅದಕ್ಕಿಂತ ಹಿಂದಿನ (ಓಲ್ಡ್ ರೆಜಿಮ್) ಆದಾಯ ಸ್ಲ್ಯಾಬ್ಗಳನ್ನು ಅದೇ ರೀತಿ ಮುಂದುವರಿಸಲಾಗಿದೆ. 2023ರವರೆಗೆ ಒಟ್ಟು 5 ಲಕ್ಷ ರೂ. ತನಕದ ಆದಾಯಕ್ಕೆ ವಿನಾಯಿತು ಲಭಿಸುತ್ತಿತ್ತು. ಹೊಸ ಮಾದರಿಯಲ್ಲಿ (ನ್ಯೂ ರೆಜಿಮ್) 7 ಲಕ್ಷ ರೂ.ಗೆ ವಿಸ್ತರಿಸಲಾಗಿತ್ತು. 5 ಲಕ್ಷ ರೂ. ತನಕದ ಆದಾಯಕ್ಕೆ 12,500 ರೂ. ತನಕ ತೆರಿಗೆ ರಿಬೇಟ್ ಸಿಗುತ್ತಿತ್ತು. ಹೀಗಾಗಿ ವೈಯಕ್ತಿಕ ತೆರಿಗೆದಾರರು 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ನೀಡದೆ ಇರಬಹುದು.