Site icon Vistara News

Union Budget 2024: ಬಂಪರ್‌ ಘೋಷಣೆ; 5 ವರ್ಷದಲ್ಲಿ 4.1 ಕೋಟಿ ಉದ್ಯೋಗ, ಹೊಸ ನೌಕರರಿಗೆ ತಿಂಗಳ ಸಂಬಳ ಕೊಡುಗೆ

Union Budget 2024

Union Budget 2024: 4.1 Crore Jobs, One Month Salary For First Time Employees, Here Are The Budget Highlights

ನವದೆಹಲಿ: ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಎನ್‌ಡಿಎ ಸರ್ಕಾರದ ಬಜೆಟ್‌ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Niramala Sitharaman) ಅವರು ಮಂಡಿಸುತ್ತಿದ್ದಾರೆ. ಬಜೆಟ್‌ ಮಂಡನೆ (Union Budget 2024) ಆರಂಭಿಸುತ್ತಲೇ ದೇಶದ ಜನರಿಗೆ ನಿರ್ಮಲಾ ಸೀತಾರಾಮನ್‌ ಅವರು ಬಂಪರ್‌ ಘೋಷಣೆ ಮಾಡಿದ್ದಾರೆ. ದೇಶದ 4.1 ಕೋಟಿ ಜನರಿಗೆ ಉದ್ಯೋಗ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, 2 ಲಕ್ಷ ಕೋಟಿ ರೂ. ಪ್ಯಾಕೇಜ್‌ ಕೂಡ ಘೋಷಣೆ ಮಾಡಿದ್ದಾರೆ. ಇದು ಮೋದಿ ಸರ್ಕಾರದ ಮಹತ್ವದ ಘೋಷಣೆ ಎನಿಸಿದೆ.

ದೇಶದ 9 ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ರೈತರು, ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ಪ್ರಮುಖ ಯೋಜನೆಗಳ ಮೂಲಕ ದೇಶದ ಕೋಟ್ಯಂತರ ಜನರಿಗೆ ಉದ್ಯೋಗ ನೀಡುವುದು ನಮ್ಮ ಆದ್ಯತೆ ನೀಡಲಾಗಿದೆ. ಯುವಕ-ಯುವತಿಯರಿಗೆ ಉದ್ಯೋಗ ನೀಡುವ ಜತೆಗೆ 1 ಕೋಟಿ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆದ್ಯತೆ ನೀಡುವಂತೆ ಮಾಡಲಾಗುತ್ತದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಒಂದು ತಿಂಗಳ ವೇತನವನ್ನು ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಅಂದರೆ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಕೇಂದ್ರ ಸರ್ಕಾರವು ಒಂದು ತಿಂಗಳ ಸಂಬಳವಾಗಿ 15 ಸಾವಿರ ರೂ. ನೀಡುತ್ತದೆ. ಇದರಿಂದ 2.1 ಕೋಟಿ ಯುವಕರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಇಪಿಎಫ್‌ಒಗೆ ನೋಂದಣಿ ಮಾಡಿಕೊಳ್ಳುತ್ತಲೇ ಒಂದು ತಿಂಗಳ ಸಂಬಳವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಉದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಮೊದಲ ಬಾರಿ ಕೆಲಸಕ್ಕೆ ಸೇರಿದವರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

ಮಹಿಳೆಯರು ಕೂಡ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ, ಯುವತಿಯರಿಗೆ ಕೌಶಲ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ ಘೋಷಣೆ ಮಾಡುತ್ತಿದ್ದೇವೆ. 5 ವರ್ಷದಲ್ಲಿ ಈ ಯೋಜನೆ ಅಡಿಯಲ್ಲಿ 20 ಲಕ್ಷ ಯುವತಿಯರಿಗೆ ತರಬೇತಿ ನೀಡಲಾಗುತ್ತದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು.

ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿ ಮಾಡಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪವಾಗಿತ್ತು. ಆದರೆ, ಈ ಆರೋಪಗಳಿಂದ ಹೊರಬರಲು ಕೇಂದ್ರ ಸರ್ಕಾರವು ಮೂರನೇ ಅವಧಿಯಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. 4 .1 ಕೋಟಿ ಜನರಿಗೆ ಹೇಗೆ ಉದ್ಯೋಗ ನೀಡಲಾಗುತ್ತದೆ ಎಂಬುದರ ಕುರಿತು ಬಳಿಕ ವಿವರ ನೀಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಮಾಹಿತಿ ನೀಡಿದ್ದಾರೆ. ಆದರೂ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಘೋಷಣೆ ಮಾಡಿರುವುದು ಸಕಾರಾತ್ಮಕವಾಗಿದೆ ಎಂದೇ ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Exit mobile version