ಲೋಕಸಭೆ ಚುನಾವಣೆ (lok sabha election) ಬಳಿಕ ಮೊದಲ ಬಾರಿಗೆ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ಮೊದಲ ಬಜೆಟ್ (Union Budget 2024) ಮಂಡಿಸಲಿದೆ. ಜುಲೈ 15ರಿಂದ 22ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಕೇಂದ್ರ ಬಜೆಟ್ ಮಂಡನೆಯಾಗಲಿರುವ ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾದ 10 ಆಸಕ್ತಿದಾಯಕ ಸಂಗತಿಗಳಿವೆ.
ಬಜೆಟ್ ಎಂಬ ಪದವು ಫ್ರೆಂಚ್ ಪದ ‘ಬೌಗೆಟ್’ನಿಂದ ಬಂದಿದೆ. ಇದರ ಅರ್ಥ ಸಣ್ಣ ಚೀಲ ಅಥವಾ ಚೀಲ ಎಂಬುದಾಗಿದೆ. ಸ್ವತಂತ್ರ ಪೂರ್ವ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಜೆಟ್ ಮಂಡಿಸಿದ್ದು ಜೇಮ್ಸ್ ವಿಲ್ಸನ್. ಭಾರತೀಯ ಕೌನ್ಸಿಲ್‌ನ ಹಣಕಾಸು ಸಚಿವರಾಗಿ ನೇಮಕಗೊಂಡ ಅವರು ಭಾರತೀಯ ವೈಸ್‌ರಾಯ್‌ಗೆ ಬಜೆಟ್ ಕುರಿತು ಸಲಹೆ ನೀಡಿದರು.
1860ರಲ್ಲಿ ಭಾರತದ ಮೊದಲ ಬಜೆಟ್ ಮಂಡನೆಯಾಗಿತ್ತು. ಸ್ಕಾಟಿಷ್ ಉದ್ಯಮಿಯಾಗಿದ್ದ ಜೇಮ್ಸ್ ವಿಲ್ಸನ್ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದರು. ಪ್ರಸಿದ್ಧ ಪತ್ರಿಕೆಯಾದ ದಿ ಎಕನಾಮಿಸ್ಟ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಸಂಸ್ಥಾಪಕರಾಗಿದ್ದ ಅವರು ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಯುಕೆ ಖಜಾನೆಯ ಹಣಕಾಸು ಕಾರ್ಯದರ್ಶಿ ಮತ್ತು ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿದ್ದರು.
ಕೇಂದ್ರ ಬಜೆಟ್‌ನ 10 ಪ್ರಮುಖ ಸಂಗತಿಗಳು
1. ಮೊದಲ ಬಜೆಟ್ ಮಂಡಿಸಿದ್ದು ಯಾರು?
ಸ್ವತಂತ್ರ ಭಾರತದ ಮೊದಲ ವಾರ್ಷಿಕ ಬಜೆಟ್ ಅನ್ನು ಆರ್.ಕೆ. ಷಣ್ಮುಖಂ ಚೆಟ್ಟಿಯವರು 1948ರ ಫೆಬ್ರವರಿ 28ರಂದು ಮಂಡಿಸಿದರು. ದೇಶ ಸ್ವತಂತ್ರಗೊಂಡ ಮೂರು ತಿಂಗಳ ಅನಂತರ ದೇಶದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ 1947ರ ನವೆಂಬರ್ 26ರಂದು ಮಧ್ಯಂತರ ಬಜೆಟ್ ಮಂಡಿಸಲಾಯಿತು. ಇದು ಕೇವಲ ನಾಲ್ಕು ತಿಂಗಳವರೆಗೆ ಊರ್ಜಿತವಾಗಿತ್ತು.
ಪ್ರಧಾನಿಯೊಬ್ಬರು ಇದುವರೆಗೆ ಮೂರು ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಪಂಡಿತ್ ಜವಾಹರಲಾಲ್ ನೆಹರು ಅವರು 1958ರಲ್ಲಿ, ಪ್ರಧಾನಿ ಇಂದಿರಾ ಗಾಂಧಿ ಅವರು 1970ರಲ್ಲಿ ಬಜೆಟ್ ಮಂಡಿಸಿದರು. ಅನಂತರ ರಾಜೀವ್ ಗಾಂಧಿ ಅವರು 1987ರಲ್ಲಿ ಬಜೆಟ್ ಮಂಡಿಸಿದ್ದಾರೆ.
2. ಅತಿ ಉದ್ದದ ಬಜೆಟ್ ಭಾಷಣ ಯಾರದ್ದು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಅತಿ ಉದ್ದದ ಬಜೆಟ್ ಭಾಷಣ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದು 2 ಗಂಟೆ 42 ನಿಮಿಷಗಳು. ಅವರು ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಮಂತ್ರಿಯೂ ಆಗಿದ್ದಾರೆ.
3. ಕಾಗದ ರಹಿತ ಬಜೆಟ್
ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 2021ರಲ್ಲಿ ಬಜೆಟ್ ಕಾಗದರಹಿತವಾಯಿತು.
4. ಗರಿಷ್ಠ ಬಜೆಟ್ ಯಾರದ್ದು?
ಗರಿಷ್ಠ ಸಂಖ್ಯೆಯ ಬಜೆಟ್‌ಗಳನ್ನು ಮಂಡಿಸಿದ ಕೀರ್ತಿ ಮಾಜಿ ವಿತ್ತ ಸಚಿವ ಮೊರಾಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವರು ಒಟ್ಟು 10 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಅನಂತರ ಪಿ. ಚಿದಂಬರಂ ಅವರು 9 ಬಾರಿ, ಪ್ರಣಬ್ ಮುಖರ್ಜಿ ಮತ್ತು ಯಶವಂತ್ ಸಿನ್ಹಾ ಅವರು ತಲಾ 8 ಬಾರಿ ಮತ್ತು ಮನಮೋಹನ್ ಸಿಂಗ್ ಅವರು 6 ಬಾರಿ ಬಜೆಟ್ ಮಂಡಿಸಿದ್ದಾರೆ.
5. ಬಜೆಟ್ ಮಂಡನೆ ಸಮಯ ಬದಲಾವಣೆ
ಭಾರತದಲ್ಲಿ ಯಾವಾಗಲೂ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಆಯವ್ಯಯ ಪತ್ರಗಳನ್ನು ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಮತ್ತು ಲಂಡನ್‌ನಲ್ಲಿ ಮಂಡನೆ ಮಾಡುವಂತೆ ಈ ಅಭ್ಯಾಸವು ಮೊದಲು ಪ್ರಾರಂಭವಾಯಿತು. 1999ರವರೆಗೂ ಇದು ಪಾಲನೆಯಾಗುತ್ತಿತ್ತು. ಆದರೆ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿ ಹೊಸ ದಾಖಲೆ ಬರೆದರು. ಆ ಬಳಿಕ ಈಗ ಮಧ್ಯಾಹ್ನವೇ ಬಜೆಟ್ ಮಂಡಿಸಲಾಗುತ್ತದೆ.
6. ಬಜೆಟ್ ದಿನ ಬದಲಾವಣೆ
2017ನೇ ವರ್ಷವು ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಎರಡು ಪ್ರಮುಖ ಬದಲಾವಣೆಗಳನ್ನು ಗುರುತಿಸಿದೆ. ವಾರ್ಷಿಕ ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 28ರಿಂದ ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು. ಏಪ್ರಿಲ್ 1ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ ಆರಂಭದ ಮೊದಲು ಸರ್ಕಾರದ ವಿವಿಧ ಯೋಜನೆಗಳಿಗೆ ಹಣ ಹಂಚಿಕೆಗೆ ಎಲ್ಲಾ ಸಂಸತ್ತಿನ ಅನುಮೋದನೆಗಳು ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗಿದೆ. ಈ ಮೊದಲು ಫೆಬ್ರವರಿ 28 ಮತ್ತು ಹೊಸ ಹಣಕಾಸು ವರ್ಷ ಪ್ರಾರಂಭವಾಗಲು ಕೇವಲ ಒಂದು ತಿಂಗಳು ಬಾಕಿಯಿರುತ್ತಿತ್ತು. ಆಗ ಕೆಲವು ಅನುಮೋದನೆಗಳಿಗೆ ತೊಂದರೆಯಾಗುತ್ತಿತ್ತು. ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನಲ್ಲಿ ವಿಲೀನಗೊಳಿಸಿದ ವರ್ಷವೂ ಇದೇ ಆಗಿತ್ತು.
7. ಮೊದಲ ಬಾರಿ ವೈಯಕ್ತಿಕ ತೆರಿಗೆ ಇಳಿಕೆ
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಿದ 1997-98ರ ಬಜೆಟ್ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಿದ ಮೊದಲ ಬಜೆಟ್ ಆಗಿದೆ. ಅಂದಿನಿಂದ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಆ ದರಗಳು ಇನ್ನೂ ಬದಲಾಗದೆ ಹಾಗೇ ಉಳಿದಿವೆ.
8. ಮನಮೋಹನ್ ಸಿಂಗ್ ಐತಿಹಾಸಿಕ ಬಜೆಟ್
ಮನಮೋಹನ್ ಸಿಂಗ್ ಅವರ 1991ರ ಬಜೆಟ್ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಐತಿಹಾಸಿಕ ಬಜೆಟ್ ಆಗಿದೆ. ಇದು ಭಾರತೀಯ ಆರ್ಥಿಕತೆಯನ್ನು ಉದಾರೀಕರಣಗೊಳಿಸಿತು. ಇದು ಭಾರತವನ್ನು ಉನ್ನತ ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯಲು ಪ್ರೇರಣೆಯಾಯಿತು ಮತ್ತು ವಿದೇಶಿ ಸ್ಪರ್ಧೆಗೆ ಭಾರತೀಯ ಕಂಪನಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು.
ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್
9. ಹಲ್ವಾ ಸಮಾರಂಭ
ಪ್ರತಿ ವರ್ಷ ಹಣಕಾಸು ಸಚಿವರು ಬಜೆಟ್ ಮಂಡಿಸುವ ಒಂದು ವಾರದ ಮೊದಲು ‘ಹಲ್ವಾ ಸಮಾರಂಭ’ ನಡೆಯುತ್ತದೆ. ಬಜೆಟ್ ಮುದ್ರಿಸಿದ ಸ್ಥಳದಲ್ಲಿ ‘ಹಲ್ವಾ’ ತಯಾರಿಸಿ ಎಲ್ಲರಿಗೂ ಬಡಿಸಲಾಗುತ್ತದೆ. ವಿತ್ತ ಸಚಿವರು ಮತ್ತು ವಿತ್ತ ಸಚಿವಾಲಯದ ಎಲ್ಲಾ ಪ್ರಮುಖ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು, ಶುಭ ಕಾರ್ಯದ ಆರಂಭವನ್ನು ಸೂಚಿಸುತ್ತಾರೆ. ಬಜೆಟ್ ಪೇಪರ್‌ಗಳ ಮುದ್ರಣಕ್ಕೆ ಹೋಗುವ ಮೊದಲು ಅಧಿಕಾರಿಗಳನ್ನು ಲಾಕ್ ಮಾಡಲಾಗುತ್ತದೆ. ಬಜೆಟ್ ಮಂಡನೆಯಾಗುವವರೆಗೆ ಬಜೆಟ್‌ನ ಮುದ್ರಣದಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳು ಹೊರ ಜಗತ್ತಿನೊಂದಿಗೆ ಯಾವುದೇ ಸಂವಹನವಿಲ್ಲದೆ ಹಣಕಾಸು ಸಚಿವಾಲಯದೊಳಗೆ ಬಂಧಿಯಾಗುತ್ತಾರೆ.
10. ಸೋರಿಕೆಯಾಗಿತ್ತು ಬಜೆಟ್ ಸಾರ
1950ರಲ್ಲಿ ಬಜೆಟ್ ಸೋರಿಕೆಯಾಯಿತು. ಅದರ ಅನಂತರ ಸರ್ಕಾರವು ಬಜೆಟ್‌ನ ಮುದ್ರಣವನ್ನು ರಾಷ್ಟ್ರಪತಿ ಭವನದಿಂದ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯಕ್ಕೆ ವರ್ಗಾಯಿಸಿತು. 1980ರಲ್ಲಿ ಇದನ್ನು ದೆಹಲಿಯ ರೈಸಿನಾ ರಸ್ತೆಯಲ್ಲಿರುವ ನಾರ್ತ್ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ನೆಲಮಾಳಿಗೆಯಲ್ಲಿರುವ ಸರ್ಕಾರಿ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಯಿತು.