ನವದೆಹಲಿ: ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್‌ನಲ್ಲಿ (Union Budget 2024) ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಸ್ಟಾಂಡರ್ಡ್ ಡಿಡಕ್ಷನ್ (Standard Deduction) ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದು, ಹೊಸ ತೆರಿಗೆಯ ಪದ್ಧತಿಯ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡಿರುವ ಕಾರಣ 6-7 ಲಕ್ಷ ರೂ. ಹಾಗೂ 9-10 ಲಕ್ಷ ರೂ. ಆದಾಯ ಪಡೆಯುವವರು ವರ್ಷಕ್ಕೆ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ. ಹಾಗಾದರೆ, ಇಷ್ಟು ತೆರಿಗೆ ಉಳಿತಾಯ ಮಾಡುವುದು ಹೇಗೆ? ಸ್ಲ್ಯಾಬ್ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.
17,500 ರೂ. ತೆರಿಗೆ ಉಳಿತಾಯ ಹೇಗೆ?
ಸ್ಟಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ. ಈ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಕೇಂದ್ರ ಸರ್ಕಾರವೀಗ 75 ಸಾವಿರ ರೂ.ಗೆ ಏರಿಕೆ ಮಾಡಿರುವುದರಿಂದ, ಇನ್ನು ಹೊಸ ತೆರಿಗೆಯ ಸ್ಲ್ಯಾಬ್‌ಗಳ ಸ್ಟ್ರಕ್ಚರ್ ಬದಲಾವಣೆ ಮಾಡಿರುವುದರಿಂದ 6-7 ಲಕ್ಷ ರೂ. ಆದಾಯ ಗಳಿಸುವವರು ಶೇ.10ರಷ್ಟು ಬದಲು ಶೇ.5ರಷ್ಟು ತೆರಿಗೆ ಪಾವತಿಸುತ್ತಾರೆ. ಇನ್ನು, 9-10 ಲಕ್ಷ ರೂ. ಆದಾಯ ಗಳಿಸುವವರು ಶೇ.15ರ ಬದಲು ಶೇ.10ರಷ್ಟು ತೆರಿಗೆ ಪಾವತಿಸಲಿದ್ದಾರೆ.
ತೆರಿಗೆಯ ಹೊಸ ಸ್ಲ್ಯಾಬ್ ಹೀಗಿದೆ…
ಆದಾಯ | ವಿಧಿಸುವ ತೆರಿಗೆ |
0-3 ಲಕ್ಷ ರೂ. | ತೆರಿಗೆ ಇರಲ್ಲ |
3-7 ಲಕ್ಷ ರೂ. | 5% |
7-10 ಲಕ್ಷ ರೂ. | 10% |
10-12 ಲಕ್ಷ ರೂ. | 15% |
12-15 ಲಕ್ಷ ರೂ. | 20% |
15 ಲಕ್ಷ ರೂ.ಗಿಂತ ಹೆಚ್ಚು | 30% |
ಹೊಸ ತೆರಿಗೆ ಹಳೆಯ ಸ್ಲ್ಯಾಬ್ ಹೀಗಿತ್ತು…
ಆದಾಯ | ವಿಧಿಸುವ ತೆರಿಗೆ |
0-3 ಲಕ್ಷ ರೂ. | ತೆರಿಗೆ ಇರಲ್ಲ |
3-6 ಲಕ್ಷ ರೂ. | 5% |
6-9 ಲಕ್ಷ ರೂ. | 10% |
9-12 ಲಕ್ಷ ರೂ. | 15% |
12-15 ಲಕ್ಷ ರೂ. | 20% |
15 ಲಕ್ಷ ರೂ.ಗಿಂತ ಹೆಚ್ಚು | 30% |
ಹಳೆಯ ತೆರಿಗೆ ಪದ್ಧತಿಯ ಸ್ಲ್ಯಾಬ್
ಆದಾಯ | ವಿಧಿಸುವ ತೆರಿಗೆ |
2.5 ಲಕ್ಷ ರೂ. | ತೆರಿಗೆ ಇರಲ್ಲ |
2.5 ಲಕ್ಷ ರೂ.- 3 ಲಕ್ಷ ರೂ. | 5% |
3 ಲಕ್ಷ ರೂ.- 5 ಲಕ್ಷ ರೂ. | 5% |
5 ಲಕ್ಷ ರೂ.-10 ಲಕ್ಷ ರೂ. | 20% |
10 ಲಕ್ಷ ರೂ.ಗಿಂತ ಹೆಚ್ಚು | 30% |
ಕಸ್ಟಮ್ಸ್ ಸುಂಕ ಇಳಿಕೆ, ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ
ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಪ್ಲಾಟಿನಮ್ ಮೇಲಿನ ಕಸ್ಟಮ್ ಸುಂಕವನ್ನು ಕೂಡ ಶೇ.6.4ರಷ್ಟು ಇಳಿಕೆ ಮಾಡಲಾಗಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಿದೆ.
ಇದನ್ನೂ ಓದಿ: Union Budget 2024: ಕೇಂದ್ರದ ಬಜೆಟ್‌ನಲ್ಲಿ ಏನೇನಿದೆ? ಈ 50 ಪಾಯಿಂಟ್ಸ್ ಓದಿ ಸಾಕು