ಸಿನಿಮಾ: ಕಂಗನಾ ರಣಾವತ್ ಅಭಿನಯದ ಧಾಕಡ್ ಸಿನಿಮಾಗೆ ಪ್ರೇಕ್ಷಕರೇ ಇಲ್ಲವಂತೆ! ಸಿನಿಮಾ ಬಿಡುಗಡೆಯಾದ 4 ದಿನದಲ್ಲಿ ಥಿಯೇಟರ್‌ನಿಂದ ಔಟ್ ಆಗಿದೆ. ಧಾಕಡ್ ಸಿನಿಮಾವನ್ನು ಕಾರ್ತಿಕ್ ಆರ್ಯನ್ ಅಭಿನಯದ ʼಭೂಲ್ ಭುಲಯ್- 2′ ಚಿತ್ರವು ಟೇಕ್ ಓವರ್ ಮಾಡಿದೆ.
ಮೇ 20ರಂದು ಧಾಕಡ್ ಹಾಗೂ ಭೂಲ್ ಭುಲಯ್ಯ-2 ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗಿದ್ದವು. ಧಾಕಡ್ ಸಿನಿಮಾದ ಟ್ರೈಲರ್ ನೋಡಿದಾಗ ಕಂಗನಾ ಅಭಿಮಾನಿಗಳಿಗೆ ಹೊಸ ನಿರೀಕ್ಷೆ ಮೂಡಿಸಿತ್ತು. ಒಂದು ವಿಭಿನ್ನ ಚಿತ್ರವಾಗುವ ಭರವಸೆಯಿತ್ತು. ಕಂಗನಾ ಅವರ ಲೇಡಿ ರ‍್ಯಾಂಬೊ ಲುಕ್, ಹಾಗೂ ಅರ್ಜುನ್ ರಾಮ್‌ಪಾಲ್ ಅವರ ವಿಲ್ಲನ್ ಲುಕ್, ಗಮನ ಸೆಳೆದಿತ್ತು. ಡಾರ್ಕ್ ಶೇಡ್ ಹೊಂದಿದ ಒಂದು raw ಸಿನಿಮಾದಂತೆ ಕಂಡಿತ್ತು.
ಇದನ್ನೂ ಓದಿ | ಶುಕ್ರವಾರವೇ ಸಿನಿಮಾ ರಿಲೀಸ್ ಆಗೋದು ಯಾಕೆ?
ಆದರೆ ಧಾಕಡ್ ಬಿಡುಗಡೆಯಾದ ಮೇಲೆ ಹೆಚ್ಚಿನ ಸಮಯ ಚಿತ್ರರಂಗದಲ್ಲಿ ಉಳಿಯಲಿಲ್ಲ. ಜನರು ಭೂಲ್ ಭುಲಯ್ಯ-2 ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಕಿಯಾರ ಅಡ್ವಾಣಿ ಅಭಿನಯದ ಹಾರರ್-ಕಾಮಿಡಿ ಸಿನಿಮಾ ಇದು. ಈ ಮೊದಲು ಅಕ್ಷಯ್ ಕುಮಾರ್ ಹಾಗೂ ವಿದ್ಯಾ ಬಾಲನ್ ಅಭಿನಯದ ಭೂಲ್ ಭುಲಯ್ಯ ಸಿನಿಮಾದ ಸೀಕ್ವೆಲ್ ಕೂಡ ಹೌದು.
ಧಾಕಡ್ ಚಿತ್ರ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದಿತ್ತು. ಚಿತ್ರಮಂದಿರದಲ್ಲಿ ಸಾಕಷ್ಟು ಮಂದಿ ಪ್ರೇಕ್ಷಕರೂ ಇದ್ದರು. ಆದರೆ, ಶನಿವಾರ ಹಾಗೂ ಭಾನುವಾರದಂದು ಕೇವಲ 10-15 ಜನ ಪ್ರೇಕ್ಷಕರು ಚಿತ್ರಮಂದಿರದಲ್ಲಿದ್ದರು. ಈ ಕಾರಣದಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ನಿಂದ ಧಾಕಡ್ ಸಿನಿಮಾವನ್ನು ಹೊರ ಹಾಕಲಾಗಿದೆ. ಇದರ ಬದಲಾಗಿ ಭೂಲ್ ಭುಲಯ್ಯ-2 ಪ್ರದರ್ಶಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮುಂಬೈನ ಮರಾಠಾ ಮಂದಿರದಲ್ಲಿ ಈವರೆಗೆ ಧಾಕಡ್ ಸಿನಿಮಾದ ಒಂದು ಶೋ ಇತ್ತು. ಆದರೆ ಈಗ ಅದನ್ನೂ ನಿಲ್ಲಿಸಲಾಗಿದೆ.
ಇದನ್ನೂ ಓದಿ: ʼದೇವರ ಪುತ್ರಿʼ ಬಾಲಿವುಡ್ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ