ಬೆಂಗಳೂರು: ತಮಿಳಿನ ಹೆಸರಾಂತ ನಟ ಸೂರ್ಯ (Suriya) ಅವರಿಗೆ ಇಂದು (ಜು.23) ಜನುಮದಿನದ ಸಂಭ್ರಮ. 47ನೇ ಹುಟ್ಟು ಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಪ್ರಕಟವಾದ ರಾಷ್ಟ್ರ ಪ್ರಶಸ್ತಿ ಅವರ ಸಂಭ್ರಮವನ್ನು ಹೆಚ್ಚು ಮಾಡಿದೆ.
ಜು.೨೨ರಂದು ಪ್ರಕಟವಾದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅವರಿಗೆ ನಟನೆಗಾಗಿ ಅತ್ಯುತ್ತ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿದೆ. ʻಸೂರರೈ ಪೋಟ್ರುʼ ಸಿನಿಮಾದಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಈ ಪ್ರಶಸ್ತಿ ಸಂದಿದೆ. ಈ ಚಿತ್ರವನ್ನು ನಟನೆ ಜತೆ ಅವರೇ ನಿರ್ಮಾಣ ಮಾಡಿರುವುದು ವಿಶೇಷ. ಸೂರ್ಯಗೆ ಇದೇ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.
ಸೂರರೈ ಪೋಟ್ರು (soorarai pottru) ಕತೆ ಏನು?
ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಕರ್ನಾಟಕದ ಜಿ.ಆರ್.ಗೋಪಿನಾಥ್ ಅವರ ಜೀವನಾಧರಿಸಿ ಈ ಸಿನಿಮಾ ಮಾಡಲಾಗಿದೆ. ‘ಏರ್ ಡೆಕ್ಕನ್’ ಸಂಸ್ಥೆಯ ಹುಟ್ಟು ಬೆಳವಣಿಗೆಯನ್ನು ಈ ಚಿತ್ರ ದಾಖಲಿಸಿದೆ. ಈ ಚಿತ್ರವನ್ನು ಇರುಧಿ ಸುಟ್ರು ನಿರ್ದೇಶಿಸಿದ್ದಾರೆ. ಪ್ರಶಸ್ತಿ ಪಡೆದ ಸೂರ್ಯ ಅವರಿಗೆ ಹಲವಾರು ತಾರೆಗಳು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡ ಅಜಯ್ ದೇವಗನ್, ಸೂರ್ಯ
ಸಿನಿ ರಂಗಕ್ಕೆ ಭರ್ಜರಿ ಎಂಟ್ರಿ
ಸೂರ್ಯ ಅವರ ಮೂಲ ಹೆಸರು ಅರವಣನ್ ಶಿವಕುಮಾರ್. ನೆರುಕ್ಕು ನೇರ್ (1997) ಸಿನಿಮಾದ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು. ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಎರಡು ಎಡಿಸನ್ ಪ್ರಶಸ್ತಿ, ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಇದುವರೆಗೆ ಪಡೆದುಕೊಂಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೂರ್ಯ ಅವರು ಮುಂದಿನ ಚಿತ್ರ ʻವಿರುಮನ್ʼ (VIRUMAN) ಸೆಟ್ಟೇರಲು ಸಜ್ಜಾಗಿದೆ. ಎಂ. ಮುತ್ತಯ್ಯನ ಅವರು ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಪತ್ನಿ ಜ್ಯೋತಿಕಾ ಅವರೊಂದಿಗೆ ಸೂರ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಕಾರ್ತಿ ಮತ್ತು ಚೊಚ್ಚಲ ನಟಿ ಅದಿತಿ ಶಂಕರ್ ನಟಿಸಿದ್ದರೆ, ಪ್ರಕಾಶ್ ರಾಜ್, ರಾಜ್ಕಿರಣ್, ಶರಣ್ಯ ಪೊನ್ವಣ್ಣನ್, ಸೂರಿ ಮತ್ತು ಕರುಣಾಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಂಬರುವ ವನಂಗನ್ (VANANGAAN) ಸಿನಿಮಾ ಬಾಲಾ ಅವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರ ಸೂರ್ಯ ಅವರ 41ನೇ ಚಿತ್ರವಾಗಿದೆ. ಚಿತ್ರದಲ್ಲಿ ಸೂರ್ಯ ಜತೆಗೆ ಕೃತಿ ಶೆಟ್ಟಿ ಮತ್ತು ಮಮಿತಾ ಬೈಜು ಕೂಡ ನಟಿಸಲಿದ್ದಾರೆ. ಜುಲೈ 11 ರಂದು ಬಾಲ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಸೂರ್ಯ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ | Vikram | ನಟ ಸೂರ್ಯ ಅವರ ರೋಲೆಕ್ಸ್ ಪಾತ್ರದ ಮೇಕಪ್ ಮಾಡಿದವರು ಇವರೆ!