ಬೆಂಗಳೂರು : ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ (Kantara Movie) ಯಶಸ್ಸಿನ ಉತ್ತುಂಗದಲ್ಲಿರುವ ನಡುವೆಯೇ, ಆ ಸಿನಿಮಾದ ಹಾಡುಗಳ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಚಲನ ಚಿತ್ರದಲ್ಲಿ ಬಳಸಲಾಗಿರುವ ಹಾಡುಗಳ ಟ್ಯೂನ್‌ಗಳು ಭಾರತದ ನಾನಾ ಭಾಷೆಯ ಹಾಡುಗಳಿಂದ ನಕಲು ಮಾಡಲಾಗಿದೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಿದೆ. ಕೇರಳದ ಸಂಗೀತ ನಿರ್ದೇಶನ ಮಾಡಿರುವ ತಂಡವೊಂದು ಈ ಬಗ್ಗೆ ಕಾನೂನು ಸಮರದ ಎಚ್ಚರಿಕೆ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಕಾಂತಾರ ಸಿನಿಮಾದ “ವರಾಹ ರೂಪಂ’ ಎಂಬ ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತ್ತು. ಹಾಡಿನ ಸಂಗೀತದ ಇಂಪು ಕನ್ನಡಿಗರ ಮನ ಮುಟ್ಟಿತ್ತು. ಆದರೆ ಈ ಹಾಡಿನ ಟ್ಯೂನ್ ನಮ್ಮದೆಂದು ಕೇರಳದ “ತೈಕುಡಂ ಬ್ರಿಜ್’ ಎಂಬ ಸಂಗೀತ ನಿರ್ದೇಶನ ಸಂಸ್ಥೆ ಆರೋಪಿಸಿದೆ.
ತೈಕುಡಂ ಬ್ರಿಗೇಡ್ ಐದು ವರ್ಷದ ಹಿಂದೆ ನವರಸಂ ಎಂಬ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿತ್ತು. ಆ ಹಾಡಿನಲ್ಲಿರುವ ಟ್ಯೂನ್ ಮತ್ತು ವರಾಹ ರೂಪಂ ಹಾಡಿಗೆ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈಗ ನವರಸಂ ಹಾಡಿನ ಕರ್ತೃಗಳಾದ ತೈಕುಡಮ್ ಬ್ರಿಜ್ ಕಾನೂನು ಹೋರಾಟದ ಸುಳಿವು ನೀಡಿದೆ.
“ಕಾಂತಾರ ಸಿನಿಮಾದೊಂದಿಗೆ ತೈಕುಡಂ ಬ್ರಿಜ್ ಯಾವುದೇ ಸಂಯೋಜನೆ ಮಾಡಿಕೊಂಡಿಲ್ಲ. ಅಂತೆಯೇ ನಮ್ಮ ಆಡಿಯೊ ನವರಸಂ ಮತ್ತು ವರಾಹ ರೂಪಂ ನಡುವೆ ಹೋಲಿಕೆಗಳಿವೆ. ಈ ಮೂಲಕ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವುದು ಸ್ಪಷ್ಟ. ಹಾಡನ್ನು ಬಳಸಿಕೊಂಡಿರುವ ಸಿನಿಮಾ ತಂಡ ನಮ್ಮ ಹಕ್ಕುಗಳನ್ನು ಪಡೆದುಕೊಂಡಿಲ್ಲ. ತಮ್ಮದೇ ಸಂಗೀತವೆಂದು ಹೇಳಿಕೊಳ್ಳಲಾಗಿದೆ. ಹೀಗಾಗಿ ಕಾನೂನು ಕ್ರಮ ಬಯಸುತ್ತೇವೆ,” ಎಂದು ತೈಕುಡಂ ಬ್ರಿಜ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಈ ಪೋಸ್ಟ್ ಅನ್ನು ಹೊಂಬಾಳೆ ಫಿಲ್ಸ್ಮ್, ಅಜನೀಶ್ ಲೋಕನಾಥ್ ಹಾಗೂ ರಿಷಭ್ ಶೆಟ್ಟಿಗೆ ಟ್ಯಾಗ್ ಮಾಡಲಾಗಿದೆ.
ಅಚ್ಚರಿಯೆಂದರೆ ಸೂಪರ್ ಹಿಟ್ ಆಗಿರುವ ಹಾಡನ್ನು ಹೊಂಬಾಳೆ ಫೀಲ್ಸ್ಮ್ ಚಾನೆಲ್‌ನಿಂದ ಬಿಡುಗಡೆ ಮಾಡಿರಲಿಲ್ಲ. ಸಂಗೀತ ನಿರ್ದಶಕ ಅಜನೀಶ್ ಲೋಕನಾಥ್ ಅವರ ಚಾನೆಲ್‌ನಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಡು ನಕಲಾಗಿದೆ ಎಂಬುದರ ಬಗ್ಗೆ ಈ ಹಿಂದೆಯೂ ಅಜನೀಶ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ವೇಳೆ ಅವರು ಕಾಪಿ ಅಲ್ಲ, ಪ್ರೇರಣೆ ಎಂದಿದ್ದರು. ಅಲ್ಲದೆ, ಯಾರೂ ಈ ಬಗ್ಗೆ ಚಕಾರವೇ ಎತ್ತಿಲ್ಲ ಎಂದಿದ್ದರು. ಇದೀಗ ಸಂಗೀತ ತಂಡವೇ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಹೊಸ ತಿರುವು ಲಭಿಸಿದೆ.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನೋಡಿ ಥ್ರಿಲ್ ಆದ ಪೂಜಾ ಹೆಗ್ಡೆ, ಆಕೆ ಹೇಳಿದ್ದೇನು?