Site icon Vistara News

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

Actor Darshan

ಬೆಂಗಳೂರು: ಆ ಒಂದೇ ಒಂದು ದುಡುಕಿನ ನಿರ್ಧಾರದಿಂದ ನಟ ದರ್ಶನ್ (Actor Darshan) ಜೈಲು ಸೇರುವಂತಾಗಿದೆ. ಪರಪ್ಪನ ಅಗ್ರಹಾರದ ಒಂಟಿ ಕೋಣೆಯಲ್ಲಿ ದಿನ ದೂಡುತ್ತಿರುವ ದರ್ಶನ್‌‌ಗೆ ನರಕ ದರ್ಶನವಾಗುತ್ತಿದೆ. ರೇಣುಕಾಸ್ವಾಮಿ ಕೊಲೆ (Renuka swamy murder case) ಕೇಸ್‌ನಲ್ಲಿ ಬಂಧಿಯಾಗಿರುವ ದರ್ಶನ್‌ ಪಾಪಾ ಪ್ರಜ್ಞೆಯಿಂದಾಗಿ ಒದ್ದಾಡುತ್ತಿದ್ದಾರೆ. ಇದೀಗ ದರ್ಶನ್‌ ಜತೆಗೆ ಜೈಲಿನಲ್ಲಿ ಕಳೆದ 12 ನಿಮಿಷದ ಅಪರೂಪದ ಭೇಟಿಯ ನೈಜ ದರ್ಶನವನ್ನು ಸಹಕೈದಿ ತೆರೆದಿಟ್ಟಿದ್ದಾರೆ. ಜೈಲಿಂದ ಬಿಡುಗಡೆಯಾಗಿ ಬಂದ ದಚ್ಚುವಿನ ಅಭಿಮಾನಿಯೊಬ್ಬರು, ದರ್ಶನ್‌ ದಿನ ದೂಡುತ್ತಿರೋದು ಹೇಗೆ?ದಿನಚರಿ ಹೇಗಿದೆ? ದೈಹಿಕ -ಮಾನಸಿಕ ಸ್ಥಿತಿ ಏನಾಗಿದೆ? ಸಹಕೈದಿ ಕಂಡಂತೆ ಜೈಲಲ್ಲಿ ಸತ್ಯ ದರ್ಶನ ಹೇಗಿತ್ತು ಎನ್ನುವದನ್ನು ವಿಸ್ತಾರ ನ್ಯೂಸ್‌ ಜತೆಗೆ ಬಿಚ್ಚಿಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್‌ ಆಗಿರುವ ದರ್ಶನ್ ಪಾಲಿಗೆ ಮಾತ್ರವಲ್ಲ, ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ಕರಾಳ ಅಧ್ಯಾಯವಾಗಿದೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡು, ಚಾಲೆಂಜಿಂಗ್ ಸ್ಟಾರ್ ಆಗಿ, ನಿರ್ಮಾಪಕರ ಪಾಲಿಗೆ ಅಕ್ಷಯಪಾತ್ರೆ ಅಂತಾನೆ ಕರೆಸಿಕೊಳ್ಳುತ್ತಿದ್ದ ದರ್ಶನ್‌, ಈಗ ಪರಪ್ಪನ ಆಗ್ರಹಾರದಲ್ಲಿ ಆರೋಪಿ ಸ್ಥಾನದಲ್ಲಿ ಕೂತು ಕಂಬಿ ಎಣಿಸುವಂತಾಗಿದೆ. ನನಗೆ ಈ ಸ್ಥಿತಿ ಬರಬಹುದು ಎಂದು ದರ್ಶನ್ ಕನಸ್ಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲವೇನೋ. ಆದರೆ ಕರ್ಮ ಯಾರನ್ನು ಬಿಡೋದಿಲ್ಲ.

ಅಭಿಮಾನಿ ಜತೆಗೆ ದರ್ಶನ್ ನಡೆಸಿದ ಮಾತುಕತೆಯೇನು?

ಮೊನ್ನೆ ಮೊನ್ನೆಯಷ್ಟೆ ಪರಪ್ಪನ ಅಗ್ರಹಾರದಿಂದ 77 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಹೀಗೆ ಜೈಲಿನಿಂದ ಬಿಡುಗಡೆಯಾದವರಲ್ಲಿ ಸಿದ್ಧಾರೂಢ ಕೂಡ ಒಬ್ಬರು. ಸಿದ್ಧಾರೂಢ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದು, ದರ್ಶನ್ ಕುರಿತಾದ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲಿಗೆ ಕಾಲಿಟ್ಟ ಮೊದಲ ದಿನದಿಂದಲೇ ದರ್ಶನ್‌ಗೆ ಪಾಪಪ್ರಜ್ಞೆ ಕಾಡೋದಿಕ್ಕೆ ಆರಂಭವಾಗಿದೆ. ದರ್ಶನ್‌ರ ಕಣ್ಣು, ಅವರ ಮಾತು, ಅವರ ಹಾವಭಾವವೇ ಅವರಿಗೆ ಕಾಡುತ್ತಿರುವ ಪಾಪಪ್ರಜ್ಞೆಯ ಬಗ್ಗೆ ಸಾರಿ ಸಾರಿ ಹೇಳುತ್ತಿದೆ. ಅಯ್ಯೋ…ಇದೇನು ಮಾಡಿಕೊಂಡು ಬಿಟ್ಟೆ.. ನಾನೇ ನನ್ನ ಕೈಯಾರೆ ನನ್ನ ಬದುಕನ್ನು ಹಾಳು ಮಾಡಿಕೊಂಡು ಬಿಟ್ನಲ್ಲ ಅನ್ನೋ ನೋವು ಜೈಲಿನಲ್ಲಿ ದರ್ಶನ್‌ಗೆ ಕಾಡೋದಿಕ್ಕೆ ಶುರುವಾಗಿದ್ಯಂತೆ. ಈ ನೋವು, ಹತಾಶೆ, ದುಃಖದಿಂದ ಹೊರಬರೋದಿಕ್ಕೆ ದರ್ಶನ್ ಒಂದು ದಾರಿಯನ್ನು ಕಂಡುಕೊಂಡಿದ್ದರಂತೆ.. ಅದುವೇ ಆಧ್ಯಾತ್ಮದ.

ಇದನ್ನೂ ಓದಿ: Actor Darshan: ತಿರುಪತಿ ತಿಮ್ಮಪ್ಪನ `ದರ್ಶನ’ ಸಿಗಬಹುದು ಆದರೆ ʻಡಿ ಬಾಸ್‌ʼ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದ ನಟ!

ಜಿಮ್ಮು, ವರ್ಕ್‌ಔಟ್‌ ಅಂತಿದ್ದ ದಚ್ಚುಗೆ ಮೌನವೇನೆ ಧ್ಯಾನವೇ ಪ್ರೇಮಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಜೈಲು ಸೇರಿದ ಬಳಿಕ ದರ್ಶನ್‌ ತೂಕದಲ್ಲಿಯೂ ಇಳಿಕೆಯಾಗಿದೆ. ಇದೇ ರೀತಿ ಮಾನಸಿಕವಾಗಿಯೂ ದರ್ಶನ್‌ ಜೈಲಿನಲ್ಲಿ ದಿನೆದಿನೇ ಸಂಕಟ ಅನುಭವಿಸುವಂತಾಗಿದೆ. ಛೇ..ಇದೇನು ಮಾಡಿಕೊಂಡು ಬಿಟ್ಟೆ ಅನ್ನೋ ನೋವು ದರ್ಶನ್‌ನನ್ನು ಕಾಡುತ್ತಿದೆ. ಹೀಗಾಗಿಯೇ ದರ್ಶನ್ ಜೈಲಿನಲ್ಲಿ ಆಧ್ಯಾತ್ಮದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಆಧ್ಯಾತ್ಮದ ಮೂಲಕ ಮಾನಸಿಕವಾಗಿ ಒಂದಿಷ್ಟು ಗಟ್ಟಿಯಾಗೋದಿಕ್ಕೆ. ಸನ್ಮಾರ್ಗದಲ್ಲಿ ಸಾಗೋದಿಕ್ಕೆ ದರ್ಶನ್ ಪ್ರಯತ್ನಿಸುತ್ತಿದ್ದಾರೆ ಎಂದು ಸಹಖೈದಿ ಸಿದ್ಧಾರೂಢ ತಿಳಿಸಿದ್ದಾರೆ.

ಯಾರೊಂದಿಗೂ ಮಾತಿಲ್ಲ.. ಮಾತನಾಡಬೇಕೆಂತ ಅನಿಸಿದ್ದರೂ ಅದಕ್ಕಲ್ಲಿ ಅವಕಾಶ ಸಿಗುತ್ತಿಲ್ಲ. ಒಬ್ಬಂಟಿಯಾದ ಭಾವನೆ. ಯಾರು ನನ್ನವರು..? ಯಾರು ನಿಜವಾಗಿಯೂ ನನ್ನವರು ಎನ್ನುವ ಜಿಜ್ಞಾಸೆಯ ಪ್ರಶ್ನೆ ದರ್ಶನ್‌ನ ಕಾಡುತ್ತಿದೆ. ಮನಸ್ಸು ಶಾಂತವಾಗುವಂತಹ, ಮನಸ್ಸಿಗೆ ನೆಮ್ಮದಿ ಸಿಗುವಂತಹ ಯಾವುದೇ ಕೆಲಸವನ್ನಾದರೂ ಮಾಡೋದಕ್ಕೆ ಜೈಲಿನಲ್ಲಿ ದರ್ಶನ್ ಸಿದ್ಧರಾಗಿದ್ದಾರೆ. ಆರೋಪಿಯಾಗಿ ಜೈಲು ಸೇರುವ ಮುನ್ನ ಜಿಮ್ಮು, ವರ್ಕೌಟ್ ಅಂತಿದ್ದ ದರ್ಶನ್‌ಗೆ ಈಗ ಅದ್ಯಾವುದನ್ನೂ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೈಲಿನಲ್ಲಿರುವ ದರ್ಶನ್‌ ಆಧ್ಯಾತ್ಮದ ಜತೆಗೆ ಧ್ಯಾನವನ್ನೂ ಇಷ್ಟ ಪಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸಿದ್ಧಾರೂಢ ಅವರ ಜತೆಗೆ ಸುಮಾರು 10 ನಿಮಿಷಗಳ ಧ್ಯಾನವನ್ನು ದರ್ಶನ್ ಮಾಡಿದ್ದಾರೆ. ದರ್ಶನ್ – ಸಿದ್ಧಾರೂಢ ಅವರ ಭೇಟಿಯ ಒಟ್ಟು 12 ನಿಮಿಷದ ಅವಧಿಯಲ್ಲಿ ದರ್ಶನ್ 10 ನಿಮಿಷ ಧ್ಯಾನದಲ್ಲಿಯೇ ಕಾಲ ಕಳೆದಿದ್ದಾರೆ.

ಜೈಲಿನಲ್ಲಿ ಮಾಡಿದ ಆ 10 ನಿಮಿಷಗಳ ಧ್ಯಾನ ನಿಜಕ್ಕೂ ದರ್ಶನ್‌ಗೆ ಸಮಾಧಾನದ ಜತೆಗೆ ಕೊಂಚ ನಿರಾಳತೆಯನ್ನು ಮೂಡಿಸಿದೆ. ಹೀಗಾಗಿ ಇನ್ಮುಂದೆಯೂ ಧಾನ್ಯ ಮುಂದುವರಿಸಿಕೊಂಡು ಹೋಗುವ ಮಾತುಗಳನ್ನು ದರ್ಶನ್ ಆಡಿದ್ದಾರೆ. ಧ್ಯಾನ, ಆಧ್ಯಾತ್ಮದ ಜತೆಗೆ ಜೈಲಿನಲ್ಲಿರುವ ದರ್ಶನ್ ಪುಸ್ತಕಗಳ ಮೊರೆ ಹೋಗಿದ್ದು, ವಿಶೇಷ ಅಂದರೆ ಆ ಎಲ್ಲಾ ಪುಸ್ತಕಗಳು ಕೂಡ ಆಧ್ಯಾತ್ಮಕ್ಕೆ ಸಂಬಂಧಪಟ್ಟಿವೆ.

ವಿವೇಕನಂದ, ರಾಮಕೃಷ್ಣ ಪರಮಹಂಸರ ಪುಸ್ತಕಗಳ ಓದು

ಕೊಲೆ ಪ್ರಕರಣದ ಆರೋಪಿಯಾಗಿ ಜೈಲುಹಕ್ಕಿಯಾಗಿರುವ ದರ್ಶನ್ ಯೋಗಿಯ ಆತ್ಮಕತೆ, ವಿವೇಕನಂದರು, ರಾಮಕೃಷ್ಣ ಪರಮಹಂಸರ ಪುಸ್ತಕಗಳು, ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದೋಕೆ ಆರಂಭಿಸಿದ್ದಾರೆ. ಜತೆಗೆ ಇಸ್ಕಾನ್‌ನ ಭಗವದ್ಗೀತೆಯನ್ನು ಕೂಡ ದರ್ಶನ್ ತಮ್ಮ ಕೊಠಡಿಯಲ್ಲಿ ಇಟ್ಟುಕ್ಕೊಂಡಿದ್ದಾರೆ.

ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

ಇನ್ನು ಜೈಲಿನಲ್ಲಿರುವ ದರ್ಶನ್ ವಿಚಾರವಾಗಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆ ಅಂದರೆ ದರ್ಶನ್‌ಗೆ ಅಲ್ಲಿ ವಿಶೇಷ ಸವಲತ್ತುಗಳನ್ನು ಕೊಡಲಾಗುತ್ತಿದ್ಯಾ? ದರ್ಶನ್ ಇರುವ ಜೈಲು ಕೋಣೆ ಹೇಗಿದೆ? ಅಲ್ಲಿ ಏನೆಲ್ಲಾ ವ್ಯವಸ್ಥೆಗಳಿವೆ? ನಟ, ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ದರ್ಶನ್‌‌ಗೆ ಜೈಲಿನಲ್ಲಿ ವಿಶೇಷ ಸೌಕರ್ಯಗಳನ್ನು ನೀಡಲಾಗುತ್ತಿದ್ಯಾ ಅನ್ನೋ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೂ ಕೂಡ ಸಿದ್ಧಾರೂಢ ಅವರು ಉತ್ತರಿಸಿದ್ದಾರೆ. ದರ್ಶನ್ ಸೆಲ್‌ನಲ್ಲಿ ಟಿವಿ ಇದೆ, ಮ್ಯಾನ್ಯುಲ್ ಪ್ರಕಾರವೇ ಅದನ್ನು ಕೊಟ್ಟಿದ್ದಾರೆ. ಹಾಗೇನೆ ರೂಮಿನ ಮುಂದೆ ಸ್ವಲ್ಪ ಜಾಗವಿದೆ, ಅಲ್ಲಿ ವಾಕ್‌ ಮಾಡ್ಬಹುರು. ದರ್ಶನ್‌ಗೆ ಒಂದು ಕಂಬಳಿ, ಜಮ್ಕಾನ, ವೈಟ್ ಬೆಡ್ ಶೀಟ್‌ ಕೊಟ್ಟಿದ್ದಾರೆ. 20 ಲೀಟರ್ ನೀರಿನ ಕ್ಯಾನ್ ಹಾಗೂ ಅಟ್ಯಾಚ್ ಬಾತರೂಂ ಅಲ್ಲಿದೆ. ಜೈಲಿನ ಮ್ಯಾನ್ಯುಲ್‌‌ನಲ್ಲಿ ಏನಿದ್ಯೋ ಅದನ್ನು ಮಾತ್ರ ದರ್ಶನ್‌ಗೆ ನೀಡಿದ್ದಾರೆ ಅಂತ ಜೈಲಿನಲ್ಲಿ ದರ್ಶನ್‌ನ ದರ್ಶನ ಮಾಡಿದ ಸಿದ್ಧಾರೂಢ ಅವರು ಹೇಳಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ದಿನದೂಡ್ತಾ ಇರುವ ದರ್ಶನ್‌ಗೆ ಪ್ರತಿ ಕ್ಷಣವೂ ಸಂಕಟದಲ್ಲೇ ಕಾಲ ಕಳೆಯುವಂತಾಗಿದೆ. ನೋವು, ಹತಾಶೆಯ ಭಾವ ದರ್ಶನ್‌ಗೆ ಕಾಡುತ್ತಿದೆ. ನಟನಾಗಿ ಮಿಂಚಿದ್ದ ದರ್ಶನ್‌ ವಿಚಾರಣಾಧೀನ ಖೈದಿಯಾಗಿ ದಿನದೂಡುವಂತಾಗಿದೆ. ಜೈಲಿನಲ್ಲಿರುವ ದರ್ಶನ್‌ಗೆ ಪುಸ್ತಕಗಳೇ ಪ್ರಪಂಚ, ಆಧ್ಯಾತ್ಮವೇ ತನ್ನೆಲ್ಲಾ ನೋವು, ಸಂಕಟದಿಂದ ಹೊರಬರೋದಿಕ್ಕೆ ಇರುವ ಅಸ್ತ್ರ ಎಂದು ಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version