ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್ (Actor Darshan) ಹಾಗೂ ಸಹಚರರು ಜೈಲುವಾಸದಲ್ಲಿದ್ದಾರೆ. ಇತ್ತ ನಿತ್ಯವೂ ಅಭಿಮಾನಿಗಳು ದರ್ಶನ್ (Darshan Fans) ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಿದ್ದು, ಪೊಲೀಸರಿಗೆ ತಲೆ ಬಿಸಿಯಾಗಿದೆ. ಗುರುವಾರವೂ ದರ್ಶನ್ ಭೇಟಿಗೆ ವಿಶೇಷ ಚೇತನ ಯುವತಿ ಆಗಮಿಸಿದ್ದಳು.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನ ನಿವಾಸಿ ಸೌಮ್ಯ ತನ್ನ ನೆಚ್ಚಿನ ನಟನನ್ನು ನೋಡಬೇಕೆಂದು ಹಠ ಹಿಡಿದಿದ್ದಳು. ದರ್ಶನ್‌ನನ್ನು ನೋಡುವ ತನಕ ಊಟ ಮಾಡುವುದಿಲ್ಲ ಎಂದಿದ್ದಾಳೆ. ಹೀಗಾಗಿ ಸೌಮ್ಯಳ ಪೋಷಕರು ಪರಪ್ಪನ ಅಗ್ರಹಾರಕ್ಕೆ ಭೇಟಿ ನಿಡಿದ್ದರು. ನಟ ದರ್ಶನ್‌ನ ಅಪ್ಪಟ ಅಭಿಮಾನಿಯಾಗಿರುವ ಸೌಮ್ಯ, ದರ್ಶನ್ ಜೈಲಿಗೆ ಹೋದ ದಿನದಿಂದ ಸರಿಯಾಗಿ ಊಟ ಮಾಡಿಲ್ಲ. ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಬೇಕೆಂದು ಹಠ ಹಿಡಿದಿದ್ದಾಳೆ.
ಯುವತಿ ಪೋಷಣೆಗೆ ಆಟೋ ಕೊಡಿಸಿದ್ದ ದರ್ಶನ್
2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ಸೌಮ್ಯಳನ್ನು ಪೋಷಣೆಗಾಗಿ ನಟ ದರ್ಶನ್ ಖುದ್ದು ಆಟೋ ಕೊಡಿಸಿದ್ದರು. ಹೀಗಾಗಿ ಇದೇ ಆಟೋದಲ್ಲಿ ಜೈಲಿಗೆ ಬಂದು ದರ್ಶನ್ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇಂದು ದರ್ಶನ್ ಭೇಟಿಗೆ ಅವರ ಕುಟುಂಬದವರು ಬರುತ್ತಿದ್ದು, ವಿಶೇಷ ಚೇತನ ಯುವತಿ ಭೇಟಿಗೆ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಪಟ್ಟಣಗೆರೆ ಶೆಡ್ಡಾ? ನಾವು ಅಲ್ಲಿಗೆ ಹೋಗೋಲ್ಲ ಅನ್ನುತ್ತಿರುವ ವಾಹನ ಮಾಲಿಕರು!
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy Murder) ನಟ ದರ್ಶನ್ (Actor Darshan) ಗ್ಯಾಂಗ್‌ನಿಂದ ಬರ್ಬರ ಕೊಲೆಯಾದ ಬಳಿಕ, ಪಟ್ಟಣಗೆರೆಯ ವಾಹನ ಶೆಡ್ (Pattanagere Shed) ಕಡೆ ಸುಳಿದಾಡಲು ವಾಹನ ಮಾಲಿಕರು ಅಂಜುತ್ತಿದ್ದಾರೆ. ಇಲ್ಲಿ ಸಾಲ ಬಾಕಿ (Loan default) ಉಳಿಸಿಕೊಂಡಿರುವವರ ವಾಹನಗಳನ್ನು ಸೀಜ್ (Seize) ಮಾಡಿ ತಂದಿಡಲಾಗುತ್ತಿದೆ. ಈಗ ಈ ವಾಹನಗಳನ್ನು ಬಿಡಿಸಿಕೊಳ್ಳಲು ಕೂಡ ಯಾರೂ ಈ ಶೆಡ್ ಕಡೆ ತಲೆ ಹಾಕುತ್ತಿಲ್ಲ.
ಸಾಲ ಬಾಕಿ ಉಳಿಸಿಕೊಂಡ ಪರಿಣಾಮ ಪಟ್ಟಣಗೆರೆ ಶೆಡ್ ಪಾಲಾಗಿರುವ ವಾಹನಗಳ ಮಾಲೀಕರಿಗೆ ಈಗ ಪಟ್ಟಣಗೆರೆಯ ಶೆಡ್ ಭಯವೇ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೊಲೆಯ ನಡೆದ ತಾಣ ಹಾಗೂ ಅದರ ಬರ್ಬರತೆ ಇವರ ಕೈಕಾಲು ನಡುಗುವಂತೆ ಮಾಡಿದೆ. ʼನೋ ಆರ್ಗ್ಯುಮೆಂಟ್, ಓನ್ಲಿ ಸೆಟಲ್‌ಮೆಂಟ್ʼ ಎನ್ನುತ್ತ ಗಪ್‌ಚುಪ್ ಆಗಿ ಹಣ ಕಟ್ಟಿ ಬಿಡಿಸಿಕೊಂಡು ಬರುತ್ತಿದ್ದಾರೆ. ಇದರ ಆಸುಪಾಸಿನಲ್ಲಿ ಓಡಾಡುವವರು ಸಹ, ʼಇದೇ ಆ ಶೆಡ್ʼ ಎಂದು ಮಾತಾಡಿಕೊಳ್ಳುತ್ತ ಶೆಡ್ಡನ್ನು ನೋಡುತ್ತ ಬಿರಬಿರನೆ ಸಾಗುತ್ತಾರೆ!
ಪಟ್ಟಣಗೆರೆ ಶೆಡ್‌ಗೆ ಹೋಗಿ ವಾಹನ ಬಿಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಮಾಲೀಕರು ಕೆಲವೆಡೆ ಬ್ಯಾಂಕ್‌ಗೆ ಹೋಗಿ ಹಣ ಕಟ್ಟಿ, ʼನೀವೇ ವಾಹನ ತಂದುಕೊಡಿʼ ಎಂದೂ ಬ್ಯಾಂಕ್‌ನವರಿಗೆ ಮನವಿ ಮಾಡುತ್ತಿದ್ದಾರಂತೆ. ನಾವು ಶೆಡ್‌ಗೆ ಹೋಗಲ್ಲ ಸರ್, ನೀವೆ ಹೋಗಿ ಎಂದು ದುಂಬಾಲು ಬೀಳುತ್ತಿದ್ದಾರೆ! ʼʼಕ್ರೂರವಾಗಿ ಸತ್ತವರು ದೆವ್ವಗಳಾಗುತ್ತಾರಂತೆ. ಅವರ ಆತ್ಮಗಳು ಅಲ್ಲೇ ಸುಳಿದಾಡ್ತಾ ಇರುತ್ತಾವಂತೆ, ನಮಗ್ಯಾಕೆ ಬೇಕು ಸಾರ್ ಇಲ್ಲದ ಉಪದ್ವ್ಯಾಪʼʼ ಎಂದು ಕೂಡ ಕೆಲವು ಮಾಲೀಕರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿಯನ್ನು ಕೂಡಿಹಾಕಿ ದರ್ಶನ್ ಮತ್ತು ಗ್ಯಾಂಗ್ ಭೀಕರವಾಗಿ ಹಲ್ಲೆ ನಡೆಸಿತ್ತು. ವಾಹನಗಳಿಗೆ ರೇಣುಕಾ ಸ್ವಾಮಿಯ ತಲೆ ಜಪ್ಪಿ, ದೊಣ್ಣೆಗಳಿಂದ ಥಳಿಸಿ, ಮರ್ಮಾಂಗಕ್ಕೆ ಒದ್ದು ಹಿಂಸಿಸಿತ್ತು. ಈ ಪೀಡನೆಯನ್ನು ತಾಳಲಾರದೆ ರೇಣುಕಾ ಸ್ವಾಮಿ ಜೀವ ಶೆಡ್‌ನಲ್ಲಿಯೇ ಹೋಗಿತ್ತು. ಕೆಲಕಾಲ ಶವವನ್ನು ಶೆಡ್‌ನಲ್ಲೇ ಇಟ್ಟಿದ್ದ ಡಿ ಗ್ಯಾಂಗ್, ನಂತರ ಅದನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿತ್ತು.
ದರ್ಶನ್ ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಶಿಫ್ಟ್
ತುಮಕೂರು: ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರಿನ ಜೈಲಿಗೆ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವ್, ನಿಖಿಲ್ ತುಮಕೂರು ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರಿನ ಊರುಕೆರೆ ಬಳಿಯ ರಂಗಾಪುರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಈ ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿಡಲು ಕೋರ್ಟ್ ಆದೇಶಿಸಿತ್ತು. ಹೀಗಾಗಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನು ಕರೆತರಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಜೂನ್ 24ರಂದು ಆದೇಶ ನೀಡಿತ್ತು. ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆರೋಪಿಗಳ ವರ್ಗಾವಣೆ ಯಾಕೆ ಅಗತ್ಯ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಿವರಿಸಿದ್ದರು.
ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್, ಕೇಶವ್ ಮತ್ತು ನಿಖಿಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿತ್ತು. ಒಂದೇ ಜೈಲಿನಲ್ಲಿದ್ದರೇ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆ ಇದ್ದು, ನಾಲ್ವರು ಆರೋಪಿಗಳ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ