Site icon Vistara News

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Actor Darshan

ಮೈಸೂರು/ಬೆಂಗಳೂರು: ಲೈಟ್ ಮ್ಯಾನ್, ಕ್ಯಾಮೆರಾಮನ್ ಆಗಿ ಚಿತ್ರರಂಗದಲ್ಲಿ ಕೆಲಸ ಆರಂಭಿಸಿದ ನಟ ದರ್ಶನ್‌ (Actor Darshan), ನಾಯಕನಾಗಿ ಸಿನಿ ಪಯಣ ಶುರು ಮಾಡಿ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿ ಬಾಕ್ಸ್​ ಆಫೀಸ್​ ಸುಲ್ತಾನ್ ಆಗಿ ಮೆರೆದಿದ್ದಾರೆ. ಅದರ ಜತೆಗೆ ವೈಯಕ್ತಿಕ ಕಾರಣಗಳಿಂದಲೂ ಇವರು ಹೆಚ್ಚು ಸುದ್ದಿಯಾಗಿದ್ದರು. ನಟ ದರ್ಶನ್‌ಗೂ ವಿವಾದಗೂ ಸಿಕ್ಕಾಪಟ್ಟೆ ನಂಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ವೈಯಕ್ತಿಕ ಜೀವನ ಆಗಾಗ ಚರ್ಚೆಯಲ್ಲಿ ಇರುತ್ತದೆ. ದರ್ಶನ್ ಜತೆ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೆ ಎಂದು ಪವಿತ್ರಾ ಗೌಡ ಹೇಳಿಕೆ ನೀಡಿದ್ದರು. ಇದಾದ ಬಳಿಕ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರಾ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ವಾರ್‌ ನಡೆದೇ ಹೋಯ್ತು. ಇದೀಗ ಪವಿತ್ರಾ ಗೌಡಗೆ ಸಂಬಂಧಿಸಿದಂತೆ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಬಂಧನವಾಗಿದೆ. ಇಷ್ಟಕ್ಕೂ ದರ್ಶನ್‌ ವಿರುದ್ಧ ದಾಖಲಾದ ಕೇಸ್‌ಗಳು ಎಷ್ಟು? ಎಷ್ಟು ಬಾರಿ ಜೈಲುವಾಸ ಅನುಭವಿಸಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿದ್ದ ನಟ

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದಕ್ಕೆ ನಟ ದರ್ಶನ್‌ ವಿರುದ್ಧ ಮೊದಲ ಬಾರಿ ಕೇಸ್‌ವೊಂದು ದಾಖಲಾಗಿತ್ತು. ಪತ್ನಿಗೆ ಹೊಡೆದಿದ್ದಕ್ಕೆ ಒಂದು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹೀಗಾಗಿ ವಿಜಯನಗರ ಪೊಲೀಸರು ನಟನನ್ನು ಬಂಧಿಸಿದ್ದರು. ಇಷ್ಟೆಲ್ಲ ಘಟನೆಗಳ ನಂತರ ವಿರಸಗಳನ್ನು ಮರೆತು ಈ ಜೋಡಿ ಮತ್ತೆ ಹೊಂದಾಗಿತ್ತು.

ಚಿತ್ರ ನಿರ್ಮಾಪಕನಿಗೆ ಧಮ್ಕಿ ಹಾಕಿದ್ದ ನಟ ದರ್ಶನ್​

ʻಭಗವಾನ್​ ಶ್ರೀಕೃಷ್ಣ ಪರಮಾತ್ಮʼ ಎಂಬ ಚಿತ್ರದ ನಿರ್ಮಾಪಕ ಭರತ್​ ಎಂಬುವರಿಗೆ ಬೆದರಿಕೆ ಹಾಕಿದ ಆರೋಪದಡಿ ನಟ ದರ್ಶನ್​ ವಿರುದ್ಧ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಚಿತ್ರದಲ್ಲಿ ಧ್ರುವನ್​ ಎಂಬ ನಟ ನಾಯಕನಾಗಿ ಅಭಿನಯಿಸಿದ್ದು, ಈತನೇ ದರ್ಶನ್​​ಗೆ ಹೇಳಿ ಭರತ್​ಗೆ ಕರೆ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿತ್ತು.

ಭರತ್​ ನಿರ್ಮಾಣ ಮಾಡುತ್ತಿದ್ದ ಭಗವಾನ್​ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಹಣಕಾಸಿನ ತೊಂದರೆಯಿಂದ ಅರ್ಧಕ್ಕೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ ಭರತ್​ ಅವರು ಸೆಟ್​​ಗೆ ಧ್ರುವನ್​​ರನ್ನು ಕರೆಸಿಕೊಂಡು ʻಸಿನಿಮಾ ತಡವಾಗಿ ಪ್ರಾರಂಭವಾಗುತ್ತದೆ. ನಾನು ಸೆಟ್ಲ್​​ಮೆಂಟ್​ ಮಾಡುತ್ತೇನೆʼ ಎಂದು ಹೇಳಿದ್ದರಂತೆ. ಆದರೆ ಧ್ರುವನ್​ ಸಿನಿಮಾ ನಿಂತಿದ್ದಕ್ಕೆ ಸಿಟ್ಟಾಗಿ, ದರ್ಶನ್​​ ಬಳಿ ಹೇಳಿ ಬೆದರಿಕೆ ಹಾಕಿಸಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.

ನಟ ದರ್ಶನ್​ ಅವರು ಭರತ್​​ಗೆ ಬೆದರಿಕೆ ಹಾಕಿದ ಆಡಿಯೋ ಕೂಡ ವೈರಲ್​ ಆಗಿತ್ತು. ‘ಅವನ ಕರಿಯರ್ ಹಾಳಾದರೆ ನೀನೇನು ಮಾಡುತ್ತೀಯಾ?, ಸಿನಿಮಾ ಶುರು ಮಾಡಿದ ಮೇಲೆ ಮುಗಿಸಿದರೆ ಒಳ್ಳೆಯದು. ಇಲ್ಲ ಅಂದರೆ ನೀನೇ ಇರಲ್ಲ. ಎದುರಿಗೆ ಸಿಕ್ಕಾಗ ಮಾತಾಡೋ ತರಹ ಇರಬೇಕು. ಅದಾಗಲ್ಲ ಅಂದ್ರೆ ನೀನೇ ಕಾಣ್ಸಲ್ಲ ಹಾಗೆ ಮಾಡಿಬಿಡುತ್ತೇನೆ, ನೀನು ರೆಡಿ ಇರಬೇಕು’ ಎಂಬಿತ್ಯಾದಿ ಮಾತುಗಳಿಂದ ದರ್ಶನ್​​ ಬೆದರಿಕೆ ಹಾಕುವುದು ಆಡಿಯೋದಲ್ಲಿತ್ತು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಟ್ವಿಸ್ಟ್;‌ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನೂ ಅರೆಸ್ಟ್!

ನಾಯಿಗಳು ಕಚ್ಚಿದ್ದಕ್ಕೆ ದಾಸನ ವಿರುದ್ಧ ಕೇಸ್‌

ನಟ ದರ್ಶನ್‌ (Actor Darshan) ಅವರ ಮನೆಯ ನಾಯಿಯು ವೈದ್ಯೆಯೊಬ್ಬರಿಗೆ ಕಚ್ಚಿದ (Dog Bite) ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವೇಳೆ ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆ ವಹಿಸಬೇಕಿತ್ತು ಎಂದು ನಮ್ಮ ಹುಡುಗರಿಗೆ ಹೇಳಿದ್ದೇನೆ. ಅಲ್ಲದೆ, ನಾಯಿ ಕಡಿತಕ್ಕೆ ಒಳಗಾದ ವೈದ್ಯೆ ಅಮಿತಾ ಜಿಂದಾಲ್ ಅವರ ಆಸ್ಪತ್ರೆ ವೆಚ್ಚವನ್ನು ಭರಿಸುತ್ತೇನೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಪೊಲೀಸರಿಗೆ ನಟ ದರ್ಶನ್‌ ಹೇಳಿಕೆ ನೀಡಿದ್ದರು.

ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ ನೀಡಿದ್ದ ಕರಿಯ

ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದರ್ಶನ್‌ ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ (Darshan poses with long in hand) ನೀಡಿರುವುದು ಚರ್ಚೆಗೆ ಕಾರಣವಾಗಿತ್ತು. ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯ ದ್ಯೋತಕವಾಗಿ ದರ್ಶನ್‌ ಅವರಿಗೆ ಬೆಳ್ಳಿಯ ಲಾಂಗ್‌ ನೀಡಿದ್ದರು. ದರ್ಶನ್‌ ಅವರು ಅಭಿಮಾನಿಗಳ ಪ್ರೀತಿಗೆ ಮಣಿದು ಈ ಲಾಂಗ್‌ನ್ನು ಕೈಯಲ್ಲಿ ಹಿಡಿದು ಪೋಸ್‌ ನೀಡಿದ್ದರು. ಇದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ ಹುಲಿಯ ಉಗುರಿನ ಪೆಂಡೆಂಟ್‌ (Tiger nail pendent) ಧರಿಸಿದ ಕಾರಣಕ್ಕೆ ದರ್ಶನ್‌ ಕೆಂಗಣ್ಣಿಗೆ ಗುರಿಯಾದ್ದರು .

ಪತ್ನಿ ವಿಜಯಲಕ್ಷ್ಮಿ- ಪವಿತ್ರಾ ಗೌಡ ವಿವಾದ

ದರ್ಶನ್‌ ಗೆಳತಿ ಪವಿತ್ರಾ ಗೌಡ – ಪತ್ನಿ ವಿಜಯಲಕ್ಷ್ಮಿ ತೆರೆ ಮರೆಯಲ್ಲಿ ನಡೆಯುತ್ತಿದ್ದ ವಾಗ್ವಾದ ನಂತರ ಬಹಿರಂಗವಾಯಿತು. ಕಾಟೇರ ಯಶಸ್ಸಿನಲ್ಲಿ ಇದ್ದ ದರ್ಶನ್‌ ಮೊದಲ ಬಾರಿಗೆ ಕೌಟುಂಬಿಕ ಕಲಹ ಇರಸು-ಮುರಸು ಮಾಡಿತ್ತು. ಮಾಡೆಲ್‌ ಪವಿತ್ರ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ (Darshan Thoogudeepa) ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್‌ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದರು. ಇದಾದ ಮೇಲೆ ಪವಿತ್ರಾ ಗೌಡ ಅಸಮಾಧಾನ ಹೊರಹಾಕಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಟ್ಯಾಗ್ ಮಾಡಿ, ಎಚ್ಚರಿಕೆಯ ಸಂದೇಶವನ್ನು ಬರೆದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಬಂಧನ; ಏನಿದು ಪ್ರಕರಣ?

ದರ್ಶನ್‌ ವಿರುದ್ಧ ಅಹೋರಾತ್ರಿ ಆಕ್ರೋಶ!

ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರು 25 ವರ್ಷದ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದರು. ಈ ವೇಳೆ ʻʻಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯʼʼ ಎಂದಿದ್ದರು ದರ್ಶನ್. ದರ್ಶನ್‌ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ಎಂದು ದರ್ಶನ್ (Actor Darshan) ಮಾತಿನ ಭರದಲ್ಲಿ ಹೇಳಿದ್ದು, ಭಾರಿ ವಿವಾದ ಸೃಷ್ಟಿಸಿತ್ತು. ಗೌಡತಿಯರ ಸೇನೆಯಿಂದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಆಗಿತ್ತ. ಇದರ ಬೆನ್ನಲ್ಲೇ ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಮುಂಭಾಗ 50ಕ್ಕಿಂತಲೂ ಹೆಚ್ಚಿನ ಮಹಿಳೆಯರು ಜಮಾಯಿಸಿ ದರ್ಶನ್ ತಮ್ಮ ನಡವಳಿಕೆ ಸರಿಪಡಿಸಿಕೊಂಡು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

ಕಾಟೇರ ಸಕ್ಸಸ್‌ ಪಾರ್ಟಿ ಎಫೆಕ್ಟ್- ದರ್ಶನ್‌ಗೆ ನೋಟಿಸ್‌

ಜೆಟ್​ಲಾಗ್ ಪಬ್​ನಲ್ಲಿ (Jetlog Pub) ಕಾಟೇರ ಸಿನಿಮಾದ (Kaatera Movie) ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಸೇರಿ ಹಲವು ನಟರು ಸುಬ್ರಮಣ್ಯ ನಗರ ಪೊಲೀಸ್‌ ಠಾಣೆಗೆ ಖುದ್ದು ಹಾಜರಾಗಿದ್ದರು. ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದಲ್ಲಿ ಖ್ಯಾತ ನಟ ದರ್ಶನ್ (Actor Darshan), ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್‌, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಈಗ ಸುಬ್ರಮಣ್ಯ ನಗರ ಪೊಲೀಸರು ನೋಟಿಸ್‌ ನೀಡಿದ್ದರು. ಇದರ ಪ್ರಕಾರ ಈ ಸ್ಟಾರ್‌ಗಳು ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇವರ ಮೇಲಿನ ಪ್ರಕರಣ ಇಲ್ಲಿಗೇ ಮುಕ್ತಾಯವಾಗಿದೆಯೇ ? ಮುಂದೇನಾದರೂ ಕ್ರಮಗಳಿವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಅಯ್ಯೋ ತಗಡೇ, ಯಾಕಪ್ಪ ಗುಮ್ಮಿಸ್ಕೋತಿಯಾ: ಉಮಾಪತಿಗೆ ದರ್ಶನ್‌ ವಾರ್ನಿಂಗ್‌!

ಕಳೆದ ಫೆ.20ರಂದು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆದಲ್ಲಿ ದರ್ಶನ್‌ ಭಾಗಿಯಾಗಿದ್ದರು. ಇದೇ ವೇಳೆ ದರ್ಶನ್‌ ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ತಿರುಗೇಟು ಕೊಟ್ಟಿದ್ದರು. ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ಸಮಾರಂಭದಲ್ಲಿ, ಉಮಾಪತಿಯನ್ನುದ್ದೇಶಿಸಿ ‘ಅಯ್ಯೋ ತಗಡೇ, ಯಾಕಪ್ಪ ಗುಮ್ಮಿಸ್ಕೋತಿಯಾ ಎಂದು ಕಠು ಪದಗಳನ್ನು ಬಳಸಿ ನಿಂದಿಸಿ ಮತ್ತೆ ಸುದ್ದಿಯಾಗಿದ್ದರು.

ಇನ್ನೂ ಪವಿತ್ರ ಗೌಡ ವಿಚಾರದಲ್ಲಿ ಪತ್ನಿ ವಿಜಯಲಕ್ಷ್ಮಿ ಆರೋಪಿಸಿ ದೂರು ಕಾಂಟ್ರವರ್ಸಿಗೆ ಕಾರಣವಾಗಿತ್ತು. ಮೈಸೂರಿನ ಸೋಷಿಯಲ್ ಹೋಟೆಲ್‌ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಸಂಬಂಧ ದೂರು ದಾಖಲಾಗಿತ್ತು. ಮೈಸೂರಿನಲ್ಲಿ ಹೆಬ್ಬಾಳ ರಿಂಗ್ ರಸ್ತೆಯ ಬಳಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ದರ್ಶನ್ ಹೆಸರಿನಲ್ಲಿ ದೂರು ದಾಖಲಾಗಿತ್ತು. ಸದ್ಯ ರೇಣುಕಾ ಸ್ವಾಮಿ ಎಂಬಾತ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version