ಬೆಂಗಳೂರು: ʻಬಾನಲ್ಲೆ ಮಧುಚಂದ್ರಕೆʼ (Baa nalle Madhuchandrake) ಸಿನಿಮಾ ಮೂಲಕ ಕನ್ನಡ ಚಿತ್ರಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕೆ. ಶಿವರಾಮ್ (K Shivaram) ಇನ್ನಿಲ್ಲ. ರಾಜ್ಯ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು ಬಳಿಕ ಬಣ್ಣದ ಲೋಕಕ್ಕೆ ಆಕರ್ಷಿತರಾಗಿ ಅಲ್ಲೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು ಗುರುವಾರ ಸಂಜೆ ಕೊನೆಯುಸಿರೆಳೆದರು. ಅವರು ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಅಧಿಕಾರಿ ಎಂಬುದು ವಿಶೇಷ.
ಸುಮಾರು 20 ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಬೆಳಗ್ಗಿನಿಂದಲೇ ಹಲವಾರು ಸುದ್ದಿಗಳು ಹರಿದಾಡಿದ್ದವು. ಸ್ವತಃ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಅವರು ಸಂತಾಪ ಸೂಚಿಸಿದ್ದರು. ಆದರೆ, ಕುಟುಂಬ ಇನ್ನೂ ಶಿವರಾಮ್ ಅವರು ಜೀವಂತವಾಗಿಯೇ ಇದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದರು. ಹಲವು ಗಣ್ಯರು ಸಂತಾಪ ಸೂಚನೆ ಮಾಡಿದ್ದರು. ಅಂತಿಮವಾಗಿ ಸಂಜೆಯ ಹೊತ್ತಿಗೆ ಕೆ. ಶಿವರಾಮ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪ್ರಕಟಿಸಲಾಗಿದೆ. ಅವರು ಸಂಜೆ 4.15ರ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಅವರ ಅಳಿಯ ಪ್ರದೀಪ್ ಪ್ರಕಟಿಸಿದರು.
ಮರೆಯಲಾಗದ ಸಿನಿಮಾ ನೀಡಿದ ಶಿವರಾಮ್
ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾದಂಬರಿ ಆಧರಿತ, ಅವರೇ ನಿರ್ದೇಶಿಸಿದ “ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡ ಸಿನಿಮಾ ಲೋಕ ಎಂದೂ ಮರೆಯದ ಚಿತ್ರವನ್ನು ಶಿವರಾಮ್ ನೀಡಿದ್ದಾರೆ.
ವಸಂತಕಾವ್ಯ, ಪ್ರತಿಭಟನೆ, ಸಾಂಗ್ಲಿಯಾನ 3 ಖಳ ನಾಯಕ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಟೈಗರ್ ಸೇರಿದಂತೆ 10 ಚಿತ್ರಗಳಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ.
ಇದನ್ನೂ ಓದಿ : Death News: ಶಾಸಕ ರಾಜಾ ವೆಂಕಟಪ್ಪ ನಾಯಕ ಸಾವಿನ ಸುದ್ದಿ ಕೇಳಿ ಅಭಿಮಾನಿಗೆ ಹಾರ್ಟ್ ಅಟ್ಯಾಕ್
ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ಕನ್ನಡಿಗ
ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಹಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು.
ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು.
1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸುದೀರ್ಘ ಐಎಎಸ್ ವೃತ್ತಿಜೀವನದಲ್ಲಿ ಬಿಜಾಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: K. Shivram: ಮಾವ ಕೆ. ಶಿವರಾಮ್‌ರನ್ನು ನೋಡಲು ಆಸ್ಪತ್ರೆಗೆ ನಟ ಪ್ರದೀಪ್ ಭೇಟಿ
ರಾಜಕೀಯ ಜೀವನದಲ್ಲೂ ಮಿಂಚಿದ ಶಿವರಾಮ್
2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.
ಅಂತಿಮ ದರ್ಶನಕ್ಕೆ ಅವಕಾಶ
ಕೆ. ಶಿವರಾಮ್ ಅವರ ನಿಧನಕ್ಕೆ ನಾಡಿನ ಗಣ್ಯರು, ಚಿತ್ರ ನಟರು-ನಟಿಯರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದ್ದು, ಅದಕ್ಕೆ ಮೊದಲು ಮೋದಿ ರಸ್ತೆಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.