Site icon Vistara News

Actor Rajinikanth: `ಜೈಲರ್‌’ ಆ್ಯವರೇಜ್ ಸಿನಿಮಾ ಎಂದ ರಜನಿ; ಸಿನಿಮಾಗೆ ಸ್ವಲ್ಪ ಗೌರವ ಕೊಡಿ ಅಂದ್ರು ನೆಟ್ಟಿಗರು!

Actor Rajinikanth

ಬೆಂಗಳೂರು: ಆಗಸ್ಟ್ 10ರಂದು ಬಿಡುಗಡೆಯಾದ ರಜನಿಕಾಂತ್ (Actor Rajinikanth) ಅವರ ಜೈಲರ್ ಸಿನಿಮಾ, ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ. ಹಲವು ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇತ್ತೀಚೆಗೆ, ಜೈಲರ್ ಚಿತ್ರತಂಡ ಸಕ್ಸಸ್‌ ಮೀಟ್‌ನಲ್ಲಿ ಚಿತ್ರದ ಯಶಸ್ಸನ್ನು ಆಚರಿಸಿತು. ಈ ವೇಳೆ ಚಿತ್ರದ ಕುರಿತು ಹಲವು ವಿಚಾರಗಳನ್ನು ರಜನಿ ಹಂಚಿಕೊಂಡರು ‘ರೀ-ರೆಕಾರ್ಡಿಂಗ್ ಮಾಡುವ ಮೊದಲು ಸಿನಿಮಾ ಆ್ಯವರೇಜ್ ಆಗಿತ್ತು. ಯಾವಾಗ ಅನಿರುದ್ಧ ರವಿಚಂದರ್ ಸಂಗೀತ ಅದಕ್ಕೆ ಸೇರಿತ್ತೋ ಆಗ ಸಿನಿಮಾ ಬ್ಲಾಕ್‌ ಬಸ್ಟರ್‌ ಆಯಿತುʼʼ ಎಂದು ಹೇಳಿಕೊಂಡಿದ್ದಾರೆ. ಇದೀಗ ರಜನಿ ಅವರ ಮಾತಿಗೆ ಪರ ಹಾಗೂ ವಿರೋಧ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗುತ್ತಿದೆ.

ಸಂಗೀತದಿಂದ ಮಾತ್ರ ಚಲನಚಿತ್ರ ಯಶಸ್ವಿಯಾಗಲು ಸಾಧ್ಯವಿಲ್ಲ

ರಜನಿ ಮಾತನಾಡಿ ʻʻನಾನು ಮೊದಲು ರೀ-ರೆಕಾರ್ಡಿಂಗ್ ಇಲ್ಲದೆಯೇ ಸಿನಿಮಾ ನೋಡಿದೆ. ನಂತರ ನಾನು ಸೆಂಬಿಯಾನ್ ಸರ್ ಮತ್ತು ಕಣ್ಣನ್ ಸರ್ ಅವರಲ್ಲಿ ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದೆ. ಕಣ್ಣನ್ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆಗ ನಾನು ಕಣ್ಣನ್‌ಗೆ ಹೇಳಿದೆ, ನೆಲ್ಸನ್ ನಿಮ್ಮ ಸ್ನೇಹಿತ ಆದ ಕಾರಣ ಖಂಡಿತವಾಗಿಯೂ ನೀವು ಮೆಚ್ಚುತ್ತೀರಿ ಎಂದೆ. ಬಳಿಕ ಸೆಂಬಿಯನ್ ಅವರನ್ನು ಕೇಳಿದೆ. ಅವರು ಸಿನಿಮಾ ಆ್ಯವರೇಜ್ ಎಂದರು. ಆದರೆ, ರೀ-ರೆಕಾರ್ಡಿಂಗ್ ಮಾಡುವ ಮೊದಲು ನನಗೂ ಕೂಡ ಆ್ಯವರೇಜ್ ಎಂತಲೇ ಅನ್ನಿಸಿತ್ತು. ಯಾವಾಗ ಅನಿರುದ್ಧ್ ಅವರ ಸಂಗೀತ ಸಿನಿಮಾಗೆ ಸೇರಿತೋ, ಮೈ ಗಾಡ್! ಸಿನಿಮಾ ಬ್ಲಾಕ್‌ ಬಸ್ಟರ್‌ ಎಂದೆನಿಸತೊಡಗಿತುʼ ʼಎಂದು ರಜನಿ ಅನಿರುದ್ಧ ಅವರನ್ನು ಹಾಡಿ ಹೊಗಳಿದ್ದಾರೆ. ಈ ವೇಳೆ ಕ್ಯಾಮೆರಾಮನ್ ಕಾರ್ತಿಕ್ ಹಾಗೂ ಸಂಕಲನಕಾರ ನಿರ್ಮಲ್ ಅವರನ್ನು ರಜನಿ ಹೊಗಳಿದ್ದಾರೆ.

ರಜನಿಕಾಂತ್ ಭಾಷಣದ ವಿಡಿಯೊವನ್ನು ನಿರ್ಮಾಪಕರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಹೀಗೆ ಬರೆದುಕೊಂಡಿದ್ದಾರೆ, “ರಜನಿ ತಮಗೆ ಅನಿಸಿದ್ದನ್ನು ಮಾತನಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ. ಅಂತಹ ಒಳ್ಳೆಯ ರತ್ನ ಅವರುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, “ಏನು ಮಾತು, ಏನು ಮನುಷ್ಯ, ಸೋ ಡೌನ್ ಟು ಅರ್ಥ್. ದಿ ಒನ್ ಆ್ಯಂಡ್ ಓನ್ಲಿ ರಜನಿʼʼ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ರಜನಿ ಮಾತುಗಳನ್ನು ಒಪ್ಪಿಲ್ಲ. ʻʻನಿರ್ದೇಶಕ ನೆಲ್ಸನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಇಮೇಜ್ ಎತ್ತಿ ಹಿಡಿದಿದ್ದಾರೆ. ರಜನಿಕಾಂತ್ ಅವರನ್ನೂ ಗೌರವಿಸಬೇಕು. ಚಿತ್ರವನ್ನು ಪ್ರಶ್ನಿಸಬಾರದು” ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು “ಸಂಗೀತದಿಂದ ಮಾತ್ರ ಚಲನಚಿತ್ರ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ರಜನಿಕಾಂತ್ ತಿಳಿದಿರಬೇಕು. ಅವರ ಹೇಳಿಕೆಯು ನಿರ್ದೇಶಕ ಮತ್ತು ತಂಡದ ವಿಶ್ವಾಸದ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Rajinikanth: ರಜನಿಯನ್ನು ಸೂಪರ್‌ಸ್ಟಾರ್‌ ಸ್ಟೈಲಿನಲ್ಲೇ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ! ವಿಡಿಯೋ ವೈರಲ್

ನಾನು ತುಂಬಾ ಟೆನ್ಷನ್‌ನಲ್ಲಿದ್ದೇನೆ

ಸಕ್ಸಸ್ ಮೀಟ್‌ನಲ್ಲಿ ರಜನಿ ಮಾತು ಮುಂದುವರಿಸಿ ʻʻನಾನು ಪ್ರಮಾಣ ಮಾಡುತ್ತೇನೆ, ಈ ಚಿತ್ರ ಹಿಟ್ ಆದಾಗ, ನಾನು ಐದು ದಿನ ಮಾತ್ರ ಸಂತೋಷಪಟ್ಟೆ. ಆ ಐದು ದಿನಗಳ ನಂತರ, ನನ್ನ ಮುಂದಿನ ಚಿತ್ರ ಇದಕ್ಕಿಂತಲೂ ಹೆಚ್ಚು ನಿರೀಕ್ಷೆ ಇರುವ ಸಿನಿಮಾ ಕೊಡಬೇಕು ಎಂದು ಯೋಚಿಸಿದೆ. ನನ್ನ ಮುಂದಿನ ಚಿತ್ರದ ಬಗ್ಗೆ ನಾನು ತುಂಬಾ ಟೆನ್ಷನ್‌ನಲ್ಲಿದ್ದೇನೆ ಮತ್ತು ಏನು ಮಾಡಬೇಕೆಂದೂ ನನಗೆ ತಿಳಿದಿಲ್ಲ. ಇದನ್ನು ನಾನು ಈ ಸಮಯದಲ್ಲಿ ಹೇಳಲೇಬೇಕು” ಎಂದು ಹೇಳಿಕೋಂಡಿದ್ದಾರೆ.

ಜೈಲರ್ ವಿಶ್ವಾದ್ಯಂತ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರವಾಗಿತ್ತು.

ಜೈಲರ್ ಸಿನಿಮಾದಲ್ಲಿ ವಸಂತ ರವಿ, ತಮನ್ನಾ ಭಾಟಿಯಾ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್, ಮಲಯಾಳಂನ ಹಿರಿಯ ನಟ ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಕೂಡ ಇದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

Exit mobile version