ರಿಯಾಲಿಟಿ ಶೋಗಳ ಬಾಸ್ ಅಂತಾ ಕರೆಸಿಕೊಳ್ಳುವ ಬಿಗ್‌ಬಾಸ್ ಮತ್ತೆ ಸದ್ದು ಮಾಡುತ್ತಿದೆ. ಒಟಿಟಿ ಸೀಸನ್ ಆರಂಭಿಸಿ ಸಂಚಲನ ಸೃಷ್ಟಿಸಿದ್ದ ಬಿಗ್‌ಬಾಸ್ ಆಯೋಜಕರು, ಇದೀಗ ಟೆಲಿವಿಷನ್ ವರ್ಷನ್ ಸೀಸನ್ 9ಗೆ ಸಿದ್ಧರಾಗುತ್ತಿದ್ದಾರೆ. ಇದೇ ಹೊತ್ತಲ್ಲಿ ಬಿಗ್‌ಬಾಸ್ ಸ್ಪರ್ಧಿ ಅಕ್ಷತಾ ಕುಕ್ಕಿ 4ನೇ ವಾರ ಬಿಗ್‌ಬಾಸ್ ಒಟಿಟಿ ಸೀಸನ್-1ರಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ‘ವಿಸ್ತಾರ ನ್ಯೂಸ್’ಗೆ ಅಕ್ಷತಾ ಕುಕ್ಕಿ ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ.
ಪ್ರಶ್ನೆ-1: ಹೇಗಿತ್ತು ಬಿಗ್‌ಬಾಸ್ ಮನೆ ಅನುಭವ?
ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ. ಬಿಗ್ಬಾಸ್ಗೆ ಸೆಲೆಕ್ಟ್ ಆದ ವಿಚಾರ ಕೇಳಿಯೇ ಖುಷಿಯಾಗಿತ್ತು. ಇನ್ನು ಅಲ್ಲಿಗೆ ಹೋಗಿ ಒಳ್ಳೆಯ ಅನುಭವ ಪಡೆದೆ. ಜೀವನದಲ್ಲಿ ನಾವು ಅರಿಯದ ಸಣ್ಣ ಸಣ್ಣ ವಿಚಾರಗಳನ್ನೂ ಬಿಗ್‌ಬಾಸ್ ಮನೆ ಕಲಿಸಿಕೊಡುತ್ತದೆ. ಊಟದ ವಿಚಾರ ಆಗಿರಬಹುದು, ನಿದ್ದೆ ವಿಚಾರ ಆಗಿರಬಹುದು ಪ್ರತಿಯೊಂದರ ಬೆಲೆಯನ್ನೂ ಆ ಮನೆ ನಮಗೆ ತಿಳಿಸಿಕೊಡುತ್ತದೆ.
ಪ್ರಶ್ನೆ-2: ಅಕ್ಷತಾ ಸೈಲೆಂಟ್ ಆಗಿ ಇದ್ದಿದ್ದರ ಉದ್ದೇಶ ಏನು?
ನಾನು ಇರೋದೆ ಹೀಗೆ, ಮನೆಯಲ್ಲೇ ಆಗಲಿ ಅಥವಾ ಹೊರಗಡೆಯೇ ಇರಲಿ ಸೈಲೆಂಟ್ ಆಗಿರ್ತೀನಿ. ಆದರೆ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದರು. ನಾನು ಸೈಲೆಂಟ್ ಆಗಿ ಇರೋದರ ಹಿಂದೆ ಗೇಮ್ ಪ್ಲ್ಯಾನ್ ಇದೆ ಎಂಬ ಮಾತು ಕೇಳಿಬಂದಿದ್ದವಂತೆ. ಆದರೆ ಈ ವಿಚಾರದಲ್ಲಿ ಕೆಲವರು ತಪ್ಪಾಗಿ ಯೋಚಿಸಿದ್ದಾರೆ. ನನಗೆ ಏನಾದರೂ ಹೇಳಬೇಕೆಂದರೆ ನೇರವಾಗಿ ಹೇಳುತ್ತೇನೆ. ಆದರೆ ಜಗಳ ಮಾಡೋದು ತುಂಬಾ ಕಡಿಮೆ. ಮನೆಯಲ್ಲೂ ಸೈಲೆಂಟ್ ಆಗಿಯೇ ಇರುತ್ತೇನೆ.
ಪ್ರಶ್ನೆ-3: ವಾರದ ಕಥೆ ಕಿಚ್ಚನ ಜೊತೆ ಹೇಗಿರುತ್ತಿತ್ತು..?
ನಾವೆಲ್ಲಾ ವಾರ ಪೂರ್ತಿ ಬಿಗ್‌ಬಾಸ್ ಮನೆಯ ಒಳಗಡೆ ಒದ್ದಾಡುತ್ತಾ ಸಮಯ ಕಳೆಯುತ್ತಿದ್ದೆವು. ಆದರೆ ಸುದೀಪ್ ಸರ್ ಬಂದಾಗ ರಿಲ್ಯಾಕ್ಸ್ ಆಗೋದು. ಹೊರಗಡೆ ನಡೆಯುವ ವಿಚಾರಗಳ ಬಗ್ಗೆ ಸುದೀಪ್ ಸರ್ ನಮ್ಮನ್ನು ಎಚ್ಚರಿಸೋರು. ಇದೇ ಕಾರಣಕ್ಕೆ ನಾವು ವಾರಾಂತ್ಯದಲ್ಲಿ ಸುದೀಪ್ ಸರ್ ನೋಡೋದಕ್ಕೆ ಕಾಯ್ತಾ ಇದ್ದೆವು.
ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ
ಪ್ರಶ್ನೆ-4: ನಿಮಗೆ ಬೇಕಾದ ಊಟ ಸಿಗುತ್ತಿತ್ತಾ?
ಬಿಗ್‌ಬಾಸ್ ಮನೆಯಲ್ಲಿ ಬಟ್ಟೆ ಮತ್ತು ಔಷಧದ ವಿಚಾರ ಬಿಟ್ಟರೆ ಬೇರೆ ಯಾವುದೇ ಬೇಡಿಕೆಗೆ ಬೆಲೆ ಇರಲಿಲ್ಲ. ನಾವು ಹಾಗೆಲ್ಲಾ ಇದೇ ಊಟ ಬೇಕು, ಅದೇ ಊಟ ಬೇಕು ಅಂತಾ ಕೇಳುವಂತೆ ಇರಲಿಲ್ಲ. 1 ವಾರಕ್ಕೆ ಬೇಕಾದ ಅಡುಗೆ ಸಾಮಗ್ರಿ ಒಂದೇ ಬಾರಿಗೆ ಬರೋದು. ಬೇಳೆ, ಅಕ್ಕಿ ಮಾತ್ರ ಕೊಡುತ್ತಿದ್ದರು. ಬಿಟ್ಟರೆ ಮೊಟ್ಟೆ ಸಿಗೋದು. ಈ ವಸ್ತುಗಳನ್ನ ಬಿಟ್ಟು ಮಿಕ್ಕೆಲ್ಲಾ ವಸ್ತುಗಳನ್ನು ಪಡೆಯೋದಕ್ಕೆ ಲಕ್ಷುರಿ ಬಜೆಟ್ ಪಡೆಯಬೇಕಿತ್ತು. ಆದರೆ ಆ ಅವಕಾಶ ಎಷ್ಟೋ ಬಾರಿ ಕೈತಪ್ಪಿತ್ತು.
ಪ್ರಶ್ನೆ-5: ‘ಬಿಗ್‌ಬಾಸ್’ನಿಂದ ಹೊರಬಂದ ತಕ್ಷಣ ಮಾಡಿದ್ದೇನು?
ಮೊದಲು ನಿದ್ದೆ ಮಾಡಿದೆ. ಏಕೆಂದರೆ ಬಿಗ್‌ಬಾಸ್ ಮನೆಯಲ್ಲಿ ನಮಗೆ ಬೇಕಾದಷ್ಟು ನಿದ್ದೆ ಸಿಗುವುದೇ ಇಲ್ಲ. ಬಿಗ್‌ಬಾಸ್ ಮನೆಯಿಂದ ಹೊರ ಬಂದಾಗ ಅಪ್ಪ-ಅಮ್ಮ ಮತ್ತು ಫ್ಯಾಮಿಲಿ ಬಂದಿದ್ದರು. ಅವರ ಜೊತೆ ಒಂದಷ್ಟು ಸಮಯ ಕಳೆದೆ. ಆವತ್ತು ರಾತ್ರಿ ಕೇಕ್ ಕಟ್ ಮಾಡಿ ನನಗೆ ವಿಶ್ ಮಾಡಿದರು. ಆವತ್ತು ರಾತ್ರಿ 3 ಗಂಟೆಗೆ ಮಲಗಿದ್ದವಳು, ದಿನವೂ ನಿದ್ದೆಯ ಜೊತೆಗೇ ಕಾಲ ಕಳೆದಿದ್ದೇನೆ. ಮನಸ್ಸಿಗೆ ತೃಪ್ತಿ ಆಗುವಷ್ಟು ನಿದ್ದೆ ಮಾಡುತ್ತಿದ್ದೇನೆ.
ಪ್ರಶ್ನೆ-6: ಅಕ್ಷತಾ ಮುದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಹೆಣ್ಣು ಮಕ್ಕಳು ಯಾವತ್ತಿದ್ದರೂ ಮದುವೆ ಆಗಲೇಬೇಕು. ಆದರೆ ಈಗ ಕಾಲ ಕೂಡಿಬಂದಿಲ್ಲ. ಮನೆಯಲ್ಲೂ ಈ ಬಗ್ಗೆ ಮಾತನಾಡಿಲ್ಲ. ನನಗೆ ನನ್ನ ಜೀವನ ಕಟ್ಟಿಕೊಳ್ಳಲು ಸ್ವಾತಂತ್ರ್ಯ ಕೊಟ್ಟಿದ್ದಾರೆ. ಈ ಕಾರಣಕ್ಕೆ ಸದ್ಯಕ್ಕೆ ಭವಿಷ್ಯದ ಬಗ್ಗೆ, ಸಿನಿಮಾ ಬಗ್ಗೆ ಗಮನ ಹರಿಸಿದ್ದೇನೆ. ಆದರೆ ಮುಂದೊಂದು ದಿನ ಮದುವೆ ಆಗುವುದು ಪಕ್ಕಾ.
ಪ್ರಶ್ನೆ-7: ಧ್ರುವ ಸರ್ಜಾರ ‘ಮಾರ್ಟಿನ್’ನಲ್ಲಿ ಅಕ್ಷತಾ ಪಾತ್ರವೇನು?
ನಾಯಕಿಯ ಜೊತೆಗೆ ಇರುವ ಪಾತ್ರವನ್ನ ‘ಮಾರ್ಟಿನ್’ ಸಿನಿಮಾದಲ್ಲಿ ನಾನು ನಿಭಾಯಿಸಿದ್ದೀನಿ. ಆದರೆ ‘ಮಾರ್ಟಿನ್’ ಹಲವು ವಿಚಾರವನ್ನು ಕಲಿಸಿಕೊಟ್ಟಿದೆ. ಅದರಲ್ಲೂ ಧ್ರುವ ಸರ್ಜಾ ಹೆಣ್ಣುಮಕ್ಕಳ ಮೇಲೆ ಇಟ್ಟಿರುವ ಗೌರವ ತುಂಬಾ ದೊಡ್ಡದು. ಮಾರ್ಟಿನ್ ಸೆಟ್ನಲ್ಲೂ ನಮಗೆ ಏನೂ ತೊಂದರೆ ಆಗದ ರೀತಿಯಲ್ಲಿ ನೋಡಿಕೊಂಡರು.
ಇದನ್ನೂ ಓದಿ: Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್ ಗಿಫ್ಟ್!