Site icon Vistara News

Anil kapoor | ‌66ರಲ್ಲೂ ಚಿರಯುವಕ! ಅನಿಲ್‌ ಕಪೂರ್‌ ಫಿಟ್‌ನೆಸ್‌ ಗುಟ್ಟಿದು!

anil kapoor

ಸೆಲೆಬ್ರಿಟಿಗಳ ಪೈಕಿ ಫಿಟ್‌ನೆಸ್‌ ವಿಷಯದಲ್ಲಿ ಸದಾ ಚಾಲ್ತಿಯಲ್ಲಿರುವ ಅರುವತ್ತು ದಾಟಿದ ಮಂದಿಯಲ್ಲಿ ಮುಂಚೂಣಿಯಲ್ಲಿರುವುದು ಬಾಲಿವುಡ್‌ ನಟ ಅನಿಲ್‌ ಕಪೂರ್‌. ೬೬ ವಯಸ್ಸಾದರೂ ಇಂದಿಗೂ ಬೇಡಿಕೆ ಕುಗ್ಗಿಸದೆ, ವಿಭಿನ್ನ ಪಾತ್ರಗಳಲ್ಲಿ ತನ್ನ ಅತ್ಯದ್ಭುತ ನಟನೆಯಿಂದ ಮಿಂಚುವ, ಸದಾ ಚುರುಕಾಗಿ ಯುವಕರ ಯುವತಿಯರಿಗೂ ಸ್ಪೂರ್ತಿಯ ಚಿಲುಮೆಯಾಗಿ ಕಾಣಿಸುವ ಅನಿಲ್‌ ಕಪೂರ್‌ ತಮ್ಮ ಫಿಟ್‌ನೆಸ್‌ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅನಿಲ್‌ ಕಪೂರ್‌ ತಮ್ಮ ವರ್ಕ್‌ಔಟ್‌ ವಿಡಿಯೋಗಳನ್ನೂ, ಬಲಿಷ್ಟ ಮಾಂಸಖಂಡಗಳ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ, ಫಿಟ್‌ನೆಸ್‌ ವಿಚಾರದಲ್ಲಿ ಎಂದಿಗೂ ಅವರು ಮುಂದು. ಇಂದಿಗೂ ಓಡುವುದು ಅತ್ಯಂತ ಒಳ್ಳೆಯ ವರ್ಕ್‌ಔಟ್‌ ಎನ್ನುವ ಅನಿಲ್‌ ಕಪೂರ್‌ ವಾರದಲ್ಲಿ ಮೂರು ದಿನ ಜಿಮ್‌ ಭೇಟಿಯನ್ನೂ ತಪ್ಪಿಸುವುದಿಲ್ಲ. ಆದರೆ, ಕೇವಲ ಇಷ್ಟೇ ಒಬ್ಬ ಮನುಷ್ಯನನ್ನು ಫಿಟ್‌ ಆಗಿಸುವುದಿಲ್ಲ ಎಂದೂ ಅನಿಲ್‌ ಕಪೂರ್‌ ಹೇಳುತ್ತಾರೆ.

ಅನಿಲ್‌ ಕಪೂರ್‌ ಅವರ ಪ್ರಕಾರ ನಿದ್ದೆಯನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ವಾಸ್ತವದಲ್ಲಿ ನೋಡಿದರೆ ಆರೋಗ್ಯಕರ ಫಿಟ್‌ನೆಸ್‌ನ ಮೂಲ ತಳಹದಿ ನಿದ್ದೆಯಲ್ಲೇ ಅಡಗಿದೆ. ದೇಹಕ್ಕೆ ಸೊಂಪಾದ ನಿದ್ದೆ ಆದರೆ, ದೇಹ ಉಲ್ಲಾಸದಿಂದಿರುತ್ತದೆ. ಹಾಗಾಗಿ ನಿದ್ದೆಯ ಪ್ರಾಮುಖ್ಯತೆಯನ್ನು ಅರಿಯಬೇಕು ಎನ್ನುತ್ತಾರೆ. ಎಷ್ಟೇ ಕೆಲಸವಿದ್ದರೂ ಪ್ರತಿ ರಾತ್ರಿಯೂ ಏಳು ತಾಸು ನಿದ್ದೆ ಮಾಡುವ ಅನಿಲ್‌ ಕಪೂರ್‌ಗೆ ಈ ಶಿಸ್ತು ತನ್ನ ಫಿಟ್‌ನೆಸ್‌ಗೆ ಕಾರಣ ಎಂಬ ಬಲವಾದ ನಂಬಿಕೆಯಿದೆಯಂತೆ.

ಇದಲ್ಲದೆ ಅನಿಲ್‌ ಕಪೂರ್‌ ಪ್ರತಿ ಬೆಳಗ್ಗೆ ಎದ್ದ ಮೇಲೆ ಡಾರ್ಟ್‌ ಆಡುತ್ತಾರಂತೆ. ಏಕಾಗ್ರತೆ ವೃದ್ಧಿ ಮಾಡುವಲ್ಲಿ ಹಾಗೂ ಫೋಕಸ್‌ ಕಲಿಸಲು ಡಾರ್ಟ್‌ ಬಹಳ ಸಹಕಾರಿ ಎನ್ನುವ ಇವರು, ಪ್ರತಿ ನಿತ್ಯ ತಪ್ಪದೆ ಡಾರ್ಟ್‌ ಆಡುತ್ತಾರೆ. ಮಾನವನಿಗೆ ಜೀವಿತಾವಧಿಯಲ್ಲಿ ಏಕಾಗ್ರತೆ ಹಾಗೂ ಗುರಿ ಎರಡೂ ಬಹಳ ಅಗತ್ಯ ಎಂಬುದು ಇವರ ನಂಬಿಕೆ.

ಹಾಗಾದರೆ, ಅನಿಲ್‌ ಕಪೂರ್‌ ಅವರ ಪ್ರಕಾರ ಫಿಟ್‌ನೆಸ್‌ ಎಂದರೇನು ಎಂದು ಅವರನ್ನೇ ಕೇಳಿದರೆ ಅವರು ವಿವರಿಸುವುದು ಹೀಗೆ. ಫಿಟ್‌ನೆಸ್‌ ಎಂದರೆ, ನಮ್ಮ ಬಗ್ಗೆ ನಮಗೆ ಖುಷಿಯಿರುವುದು. ನಮ್ಮ ದೇಹ, ಮನಸ್ಸು ಫಿಟ್‌ ಆಗಿದ್ದರೆ ಉಲ್ಲಾಸ ಇರುತ್ತದೆ. ನಮ್ಮ ಬಗ್ಗೆ ನಮಗೆ ಖುಷಿಯಿರುತ್ತದೆ. ಅದು ಬಹಳ ಅಗತ್ಯ ಎನ್ನುತ್ತಾರೆ.

ಇದನ್ನೂ ಓದಿ | Sunil Shetty | 60 ದಾಟಿದರೂ ಚಿರತಾರುಣ್ಯದ ಸುನಿಲ್‌ ಶೆಟ್ಟಿ ಫಿಟ್‌ನೆಸ್‌ ಮಂತ್ರ ಇದು!

ಹಾಗಾದರೆ, ಫಿಟ್‌ ಆಗಿರಲು, ಆಹಾರದ ಸಮತೋಲನದ ಬಗ್ಗೆಯೂ ಕಪೂರ್‌ ಸಾಕಷ್ಟು ಕಾಳಜಿ ವಹಿಸುತ್ತಾರೆ. ಪ್ರತಿನಿತ್ಯ ವ್ಯಾಯಾಮ ಮಾಡುವುದಕ್ಕಿಂತಲೂ ನಾವು ತಿನ್ನುವ ಆಹಾರದಲ್ಲಿ ಸಮತೋಲನ ಇರಬೇಕು. ಏನು ತಿನ್ನುತ್ತಿದ್ದೇವೆ ಎಂಬ ಬಗ್ಗೆ ಯೋಚನೆ ಇರಬೇಕು ಎನ್ನುತ್ತಾರೆ. ಮುಖ್ಯವಾಗಿ ತಿನ್ನುವುದು ಕೇವಲ ರುಚಿಗಾಗಿ ಅಲ್ಲ, ಬದಲಾಗಿ ಅದು ನಮ್ಮನ್ನು ಶಕ್ತಿವಂತರನ್ನಾಗಿ, ಆರೋಗ್ಯವಂತರನ್ನಾಗಿ ಮಾಡುತ್ತದೆ ಎಂಬುದರ ಬಗ್ಗೆ ಅರಿವಿರಬೇಕು ಆಗ ನಾವು ತಿನ್ನುವ ಆಹಾರದ ಬಗೆಗೆ ನಮಗೆ ಕಾಳಜಿ ಬರುತ್ತದೆ ಎನ್ನುತ್ತಾರೆ ಅನಿಲ್‌ ಕಪೂರ್.‌

ಫಿಟ್‌ನೆಸ್‌ ಹಾಗೂ ಆರೋಗ್ಯದ ಮೂಲ ಮಂತ್ರ ಸಂತೋಷದಲ್ಲಡಗಿದೆ ಎಂಬುದನ್ನು ಬಲವಾಗಿ ನಂಬುವ ಅನಿಲ್‌ ಕಪೂರ್‌ ಅದನ್ನು ಅಕ್ಷರಶಃ ಪಾಲಿಸುತ್ತಾರೆ ಕೂಡಾ. ನಮ್ಮ ಸಂತೋಷ ಯಾವುದರಲ್ಲಿದೆ ಎಂಬುದನ್ನುಕಂಡುಕೊಂಡು ಪಾಸಿಟಿವ್‌ ಆಗಿರುವುದು ಬಹಳ ಮುಖ್ಯ ಎನ್ನುವ ಕಪೂರ್‌ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾ ಮಾನಸಿಕ ಆರೋಗ್ಯದ ಗುಟ್ಟೂ ಯಾವುದರಲ್ಲಡಗಿದೆ ಎಂದು ವಿವರಿಸುತ್ತಾರೆ. ನಮ್ಮನ್ನು ಪ್ರೀತಿಸುವವರ ಜೊತೆಗೆ ಕಾಲ ಕಳೆಯುವುದೂ ಕೂಡಾ ಇವೆಲ್ಲವುಗಳ ಮೇಲೆ ಪರಿಣಾಮ ಬೀರುತ್ತದೆ ಎಂದೂ ಹೇಳುತ್ತಾರೆ.

ಹೀಗಾಗಿಯೇ ೬೦ ದಾಟಿದ ವಯಸ್ಸಿನಲ್ಲೂ, ಯುವಕರನ್ನೂ ನಾಚಿಸುವಂತೆ ಕಾಣಿಸಿಕೊಳ್ಳುತ್ತಾರೆ. ಸ್ಪೂರ್ತಿಯಾಗುತ್ತಾರೆ.

ಇದನ್ನೂ ಓದಿ | Aishwarya rai | 48ರಲ್ಲೂ ಕಂಗೊಳಿಸುವ ಐಶ್ ಫಿಟ್‌ನೆಸ್‌ ರಹಸ್ಯ ಇಲ್ಲಿದೆ!

Exit mobile version