Site icon Vistara News

AR Rahman : ಎ ಆರ್‌ ರೆಹಮಾನ್‌ ಲಂಡನ್‌, ಅಮೆರಿಕದಲ್ಲಿ ನೆಲೆ ನಿಂತಿದ್ದರ ಹಿಂದಿದೆ ಅಂಡರ್‌ವರ್ಲ್ಡ್‌ ಪಾತ್ರ!

AR Rahman

ಮುಂಬೈ: ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ (AR Rahman) ಅವರು ಆಗಾಗ ಸಂದರ್ಶನ ನೀಡುತ್ತಿರುತ್ತಾರೆ. ಅವರು ಹೇಳುವ ಸಾಕಷ್ಟು ಸಂಗತಿಗಳು ಸುದ್ದಿ ಮಾಡುತ್ತವೆ. ಇದೀಗ ಅವರು ಮುಂಬಯಿಯ ಅಂಡರ್‌ವರ್ಲ್ಡ್‌ ಮಾಫಿಯಾ ಬಗ್ಗೆ ಮಾತನಾಡಿದ್ದು, ಅದು ಕೂಡ ಚರ್ಚೆಗೆ ಕಾರಣವಾಗಿದೆ. ತಮ್ಮನ್ನು ಮುಂಬೈಗೆ ಸ್ಥಳಾಂತರವಾಗದಂತೆ ಮಾಡಿದ್ದೇ ಈ ಅಂಡರ್‌ವರ್ಲ್ಡ್‌ ಮಾಫಿಯಾ ಎಂದು ಅವರು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ವಿಸ್ತೃತವಾಗಿ ಮಾತನಾಡಿರುವ ರೆಹಮಾನ್‌ ಅವರು, ತಮಗೆ ಚೆನ್ನೈಯಿಂದ ಮುಂಬೈಗೆ ಸ್ಥಳಾಂತರವಾಗುವಂತೆ ಖ್ಯಾತ ನಿರ್ದೇಶಕ ಸುಭಾಶ್‌ ಘಾಯ್‌ ಅವರು ಸೂಚಿಸಿದ್ದರು ಎಂಬ ವಿಷಯ ಹೇಳಿದ್ದಾರೆ. ಆದರೆ ಅವರಿಗೆ ಮುಂಬೈಗೆ ಅಥವಾ ಅಮೆರಿಕಕ್ಕೆ ಸ್ಥಳಾಂತರವಾಗುವ ಬಗ್ಗೆ ಯಾವುದೇ ಯೋಚನೆ ಇರಲಿಲ್ಲವಂತೆ.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
“1994ರ ಸಮಯವದು. ಆಗ ನಾನು ಚೆನ್ನೈನಲ್ಲೇ ವಾಸವಿದ್ದೆ. ಆಂಧ್ರಪ್ರದೇಶದ ಹೆಸರಾಂತ ನಿರ್ಮಾಪಕರೊಬ್ಬರು ನನಗೆ ಸಹಾಯ ಮಾಡಲು ಮುಂದಾದರು. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಮನೆ ಕಟ್ಟಿಕೊಳ್ಳಲು ಜಾಗ ಕೊಡುವುದಾಗಿ ಹೇಳಿದರು. ಅದು ಹೈದರಾಬಾದ್‌ನ ಅತ್ಯಂತ ಐಷಾರಾಮಿ ಸ್ಥಳವಾಗಿತ್ತು. ಅದರೆ ನಾನು ಅವರಿಗೆ ನಗೆ ಚೆಲ್ಲಿ ಸುಮ್ಮನಾದೆ. ಅದಾದ ನಂತರ ಸುಭಾಶ್‌ ಘಾಯ್‌ ಅವರು ಮುಂದೆ ಬಂದರು. ಉತ್ತರ ಭಾರತದಲ್ಲಿ ಜನರು ಹೆಚ್ಚಾಗಿ ನಿನ್ನನ್ನು ಇಷ್ಟ ಪಡುತ್ತಾರೆ. ಆದ್ದರಿಂದ ನೀನು ಹಿಂದಿ ಕಲಿತುಕೊ, ಮುಂಬೈಗೆ ಸ್ಥಳಾಂತರಗೊಳ್ಳು ಎಂದು ಅವರು ಸಲಹೆ ನೀಡಿದರು. ಆದರೆ ಆಗ ಅಂಡರ್‌ವರ್ಲ್ಡ್‌ ಮಾಫಿಯಾದ ಕಾಟ ಮುಂಬಯಿಯಲ್ಲಿ ಹೆಚ್ಚಿತ್ತು. ಸೆಲೆಬ್ರಿಟಿಗಳಿಗೆ ಬೆದರಿಕೆ, ಹತ್ಯೆ ಪ್ರಕರಣ ವರದಿಯಾಗುತ್ತಲೇ ಇತ್ತು. ಹಾಗಾಗಿ ನಾನು ಮುಂಬೈಗೆ ಸ್ಥಳಾಂತರಗೊಳ್ಳುವ ಮನಸ್ಸನ್ನು ಮಾಡಲಿಲ್ಲ” ಎಂದು ರೆಹಮಾನ್‌ ಅವರು ವಿವರಿಸಿದ್ದಾರೆ.

ಅದಾಗಿ ಕೆಲ ವರ್ಷಗಳ ನಂತರ ನಾನು ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನನ್ನ ಪತ್ನಿ ಕೇವಲ ಮೂರು ತಿಂಗಳ ಸಮಯವನ್ನು ಮಾತ್ರ ಅಲ್ಲಿ ಕಳೆದು ಭಾರತಕ್ಕೆ ವಾಪಸಾದಳು. ಅದಾದ ಮೇಲೆ ಅಮೆರಿಕಕ್ಕೆ ಹೋಗಬೇಕಾಗಿ ಬಂತು. ಅಲ್ಲಿನ ವಾತಾವರಣ ನಮ್ಮ ಕುಟುಂಬದವರಿಗೂ ತುಂಬ ಇಷ್ಟವಾಯಿತು. ಅದೇ ಕಾರಣಕ್ಕೆ ನಾನು ಅಲ್ಲಿ ಮನೆ ಮಾಡಿದೆ ಎಂದು ಅವರು ತಮ್ಮ ಅಮೆರಿಕ ಮನೆಯ ಬಗ್ಗೆ ಮಾತನಾಡಿದ್ದಾರೆ.

ನಾನು ಸಾಕಷ್ಟು ಹಣ, ಪ್ರಸಿದ್ಧಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಆದರೆ ನನ್ನ ಮೂರು ಮಕ್ಕಳು ಅದನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ ನಾನು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾನು ಹಣಕಾಸು ವಿಚಾರ ಬಂದಾಗ ನನ್ನ ಮಕ್ಕಳನ್ನು ಅದರಲ್ಲಿ ಸೇರಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ಯೋಚಿಸುವುದಿಲ್ಲ ಎಂದೂ ರೆಹಮಾನ್‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಹೆಸರಾಂತ ಸಂಗೀತ ನಿರ್ದೇಶಕರಾಗಿರುವ ಎ.ಆರ್‌.ರೆಹಮಾನ್‌ ಅವರು ಎರಡು ಬಾರಿ ಆಸ್ಕರ್‌ ಪ್ರಶಸ್ತಿಯನ್ನು ಗೆದ್ದಿದ್ದು, ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಭಾರತದಲ್ಲಿ ಹಲವಾರು ಭಾಷೆಗಳಲ್ಲಿ ಸಂಗೀತ ನಿರ್ದೇಶನ ಮಾಡಿ ಪ್ರಸಿದ್ಧತೆ ಪಡೆದುಕೊಂಡಿರುವ ಅವರು ಹಾಲಿವುಡ್‌ನ ಪ್ರೊಡಕ್ಷನ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ಸಂಗೀತ ನಿರ್ದೇಶನ ಮಾಡಿರುವ ಬಾಂಬೆ, ರೋಜಾ ಸೇರಿದಂತೆ ಹಲವಾರು ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಅವರು ಹೊರ ತಂದಿರುವ ವಂದೇ ಮಾತರಂ ಇತ್ಯಾದಿ ಆಲ್ಬಂಗಳೂ ಜನಪ್ರಿಯತೆ ಗಿಟ್ಟಿಸಿಕೊಂಡಿವೆ.

Exit mobile version