Site icon Vistara News

ವಿಸ್ತಾರ ಸಂಪಾದಕೀಯ: ಕನ್ನಡ ಚಲನಚಿತ್ರಗಳು ಒಟಿಟಿಗಳಿಗೆ ಅಸ್ಪೃಶ್ಯವೇ?

Kannada cinema

ಒಟಿಟಿ ವೇದಿಕೆಗಳು (OTT Platforms) ಕನ್ನಡ ಚಿತ್ರರಂಗಕ್ಕೆ (Kannada Film Industry) ಮುುಕ್ತವಾಗಿಲ್ಲ ಎಂದು ‘ಕಾಂತಾರ’ ಚಿತ್ರದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Actor Rishab Shetty) ಆರೋಪಿಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ 54ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (IFFI) ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಒಟಿಟಿಗಳ ತಾರತಮ್ಯ ನೀತಿಯನ್ನು ಖಂಡಿಸಿದ್ದಾರೆ. ಕನ್ನಡದಲ್ಲಿ ಚಂದಾದಾರರು ಇಲ್ಲ ಎನ್ನುತ್ತವೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಎರಡು ನಿರ್ಮಾಣ ಸಂಸ್ಥೆಗಳು ಸಕ್ರಿಯವಾಗಿದ್ದವು. ಹಲವು ನಿರ್ಮಾಣ ಸಂಸ್ಥೆಗಳು ಚಿತ್ರಗಳನ್ನು ತಯಾರಿಸುತ್ತಿದ್ದವು. ನಾವು ನಿರಂತರವಾಗಿ ಫಿಲ್ಮ್ ಫೆಸ್ಟಿವಲ್ ಮಾಡುತ್ತಿದ್ದೇವೆ. ಆದರೂ, ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದ ರಿಷಬ್‌, ಐಎಫ್ಎಫ್ಐ ಮತ್ತು ಅದರ ಪ್ರಾಯೋಜಕರಿಗೆ ತಮ್ಮ ಚಲನಚಿತ್ರಗಳಿಗೆ ಮನ್ನಣೆ ನೀಡುವಂತೆ ವಿನಂತಿಸಿದರು. ಥಿಯೇಟರ್‌ಗಳಲ್ಲಿ ಕಡಿಮೆ ಮಾನ್ಯತೆ ಹೊಂದಿರುವ ಚಲನಚಿತ್ರಗಳು ಸಹ ಸ್ವಲ್ಪ ಮನ್ನಣೆಯನ್ನು ಪಡೆಯಬೇಕು ಮತ್ತು ಅವುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತೆಗೆದುಕೊಳ್ಳಬೇಕು ಎಂದು ಅವರು ಆಶಿಸಿದ್ದಾರೆ.

ರಿಷಬ್‌ ಹೇಳಿದ್ದರಲ್ಲಿ ಸತ್ಯವಿದೆ. ಇಂದು ನೆಟ್‌ಪ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಸೋನಿ ಲೈವ್‌, ಡಿಸ್ನಿ ಹಾಟ್‌ಸ್ಟಾರ್‌ ಮುಂತಾದ ಯಾವುದೇ ಒಟಿಟಿ ವೇದಿಕೆ ತೆಗೆದು ನೋಡಿದರೂ ಅಲ್ಲಿ ಇಂಗ್ಲಿಷ್‌ ಫಿಲಂಗಳು ದಂಡಿಯಾಗಿವೆ. ಹಿಂದಿ ಫಿಲಂಗಳಿಗೆ ಇಡೀ ದೇಶದಲ್ಲಿ ಸಾಕಷ್ಟು ಮಾರುಕಟ್ಟೆಯಿದೆ. ದಕ್ಷಿಣ ಭಾರತದ ತಮಿಳು, ತೆಲುಗು ಚಿತ್ರಗಳೂ ಬೇಕಾದಷ್ಟು ಸಂಖ್ಯೆಯಲ್ಲಿ ಸಿಗುತ್ತವೆ. ಕರ್ನಾಟಕಕ್ಕಿಂತ ಹಲವು ಪಟ್ಟು ಸಣ್ಣದಾದ, ಆದರೆ ಗುಣಮಟ್ಟದಲ್ಲಿ ಉತ್ತಮ ಕಂಟೆಂಟ್‌ ಚಿತ್ರಗಳನ್ನು ನೀಡುತ್ತಿರುವ ಮಲಯಾಳಂ ಚಿತ್ರಗಳಿಗೆ ಕೊರತೆಯೇ ಇಲ್ಲ. ಆದರೆ ಕನ್ನಡದ ಉತ್ತಮ ಚಿತ್ರಗಳು ಒಟಿಟಿಗಳಲ್ಲಿ ಸ್ಥಾನ ಪಡೆಯದೇ ಹೋಗಿವೆ. ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸದ್ದು ಮಾಡಿದ ಕೆಜಿಫ್‌, ಕಾಂತಾರದಂಥ ಚಿತ್ರಗಳನ್ನು ಒಟಿಟಿಗಳು ಬೇಕಾದಷ್ಟು ದುಡ್ಡು ಕೊಟ್ಟು ಖರೀದಿಸಿವೆ. ಆದರೆ ಗುಣಮಟ್ಟದಲ್ಲೂ ಚೆನ್ನಾಗಿರುವ, ಆದರೆ ಚಿತ್ರಮಂದಿರಗಳಲ್ಲಿ ಓಡದ ನೂರಾರು ಕನ್ನಡ ಚಿತ್ರಗಳಿವೆ. ಅವುಗಳು ಒಟಿಟಿಗಳಿಗೆ ಬಂದಿಲ್ಲ. ಅವುಗಳೊಂದಿಗೆ ವ್ಯಾಪಾರ ಕುದುರಿಸಲು ನಮ್ಮ ಇಂಡಸ್ಟ್ರಿಯವರು ಅಸಮರ್ಥರಾಗಿದ್ದಾರೋ ಅಥವಾ ಒಟಿಟಿಗಳೇ ನಮ್ಮನ್ನು ಕಡೆಗಣಿಸುತ್ತಿವೆಯೋ ಎಂಬುದು ಅರ್ಥವಾಗುತ್ತಿಲ್ಲ.

ಭಾರತವು ಪ್ರಸ್ತುತ 42.38 ಕೋಟಿ OTT ವೀಕ್ಷಕರನ್ನು ಹೊಂದಿದೆ. ಅಂದರೆ ಹತ್ತರಲ್ಲಿ ಮೂವರು ಭಾರತೀಯರು ಒಂದು ತಿಂಗಳಲ್ಲಿ ಒಮ್ಮೆಯಾದರೂ ಆನ್‌ಲೈನ್ ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಭಾರತದಲ್ಲಿ 11.9 ಕೋಟಿ ಸಕ್ರಿಯ ಪಾವತಿಸಿದ OTT ಚಂದಾದಾರಿಕೆಗಳಿವೆ. ಒಟಿಟಿ ವೀಕ್ಷಣೆಯಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರು ಮೊದಲ ಮೂರು ಮೆಟ್ರೋ ನಗರಗಳು. ಪ್ರತಿಯೊಂದೂ 85 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪಾವತಿಸಿದ ಚಂದಾದಾರಿಕೆಗಳನ್ನು ಹೊಂದಿವೆ. ಕೋಟಿಗೂ ಅಧಿಕ ವೀಕ್ಷಕರು ಬೆಂಗಳೂರಿನಲ್ಲಿದ್ದರೂ ಕನ್ನಡ ಅನಾಥ.

ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾದ ಇನ್ನೊಂದು ಅಂಶವೂ ಇವೆ. ಎಲ್ಲ ಒಟಿಟಿಗಳೂ ಬೆಂಗಳೂರಿನಲ್ಲಿ ಭಾರಿ ವ್ಯವಹಾರ ನಡೆಸುತ್ತಿವೆ. ಇಲ್ಲಿ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಭಾಷೆಗಳ ಎಲ್ಲರೂ ಬಂದು ನೆಲೆಸಿರುವುದು ಒಂದು ಕಾರಣ. ಇವರು ಇಂಗ್ಲಿಷ್‌, ಹಿಂದಿಗಳ ಜತೆಗೆ ಹೇಗೂ ತಮ್ಮ ಭಾಷೆಗಳ ಚಿತ್ರಗಳನ್ನು ಪ್ರಮೋಟ್‌ ಮಾಡುತ್ತಾರೆ. ಆದರೆ ಕನ್ನಡ ಚಿತ್ರಗಳನ್ನು ಹೀಗೆ ಬಯಸಿ ನೋಡುವವ ಅನ್ಯ ಭಾಷೆಗಳವರು ಕಡಿಮೆ. ಇದಕ್ಕೇನು ಕಾರಣವಿರಬಹುದು? ಕೆಜಿಎಫ್‌, ಕಾಂತಾರದಂಥ ಉತ್ತಮ ಚಿತ್ರಗಳು ಬಂದರೂ ಅವುಗಳು ಈಗ ಇತರ ದಕ್ಷಿಣ ಭಾರತೀಯ ಭಾಷೆಯ ಡಬ್ಬಿಂಗ್‌ ಹಾಗೂ ಸಬ್‌ಟೈಟಲ್‌ನಲ್ಲಿ ಲಭ್ಯವಿರುವುದರಿಂದ ಆ ಭಾಷೆಗಳಲ್ಲಿ ನೋಡುತ್ತಾರೆ. ಹೀಗಾಗಿ ಕನ್ನಡ ಚಿತ್ರಗಳು ಗೆದ್ದರೂ ಅಲ್ಲಿಯೂ ಇತರ ಭಾಷೆಗಳದೇ ಹವಾ. ಇನ್ನು ಕನ್ನಡಿಗರ ಅಭಿಮಾನಶೂನ್ಯತೆಯಂತೂ ಹೇಳುವುದೇ ಬೇಡ. ನಾವು ಬಾಹುಬಲಿ, ಪುಷ್ಪ, ಪೊನ್ನಿಯಿನ್‌ ಸೆಲ್ವನ್‌ ಮುಂತಾದ ಬ್ಲಾಕ್‌ಬಸ್ಟರ್‌ ಚಿತ್ರಗಳು ಕನ್ನಡ ಡಬ್ಬಿಂಗ್‌ನಲ್ಲಿ ಬಂದರೂ ಅವುಗಳನ್ನು ಆಯಾ ಮೂಲ ಭಾಷೆಗಳಲ್ಲೇ ನೋಡಬೇಕು ಎಂದು ಬಯಸುತ್ತೇವೆ. ಇದು ಪರೋಕ್ಷವಾಗಿ ಕನ್ನಡಕ್ಕೆ ಹೊಡೆತ ನೀಡುತ್ತದೆ. ಕನಿಷ್ಠ ಪಕ್ಷ ನಾವು ಕನ್ನಡ ಡಬ್ಬಿಂಗ್‌ ಆಯ್ಕೆಯನ್ನು ಹೆಚ್ಚು ಪ್ರಮೋಟ್‌ ಮಾಡಿದರೆ ಅದು ಕನ್ನಡ ಉದ್ಯಮಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸುರಂಗದಿಂದ ಕಾರ್ಮಿಕರು ಪಾರು, ರಕ್ಷಣಾ ಸಿಬ್ಬಂದಿಯ ಸಾಹಸ ಮೆಚ್ಚಲೇಬೇಕು

ಇನ್ನು ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಇತರ ಭಾಷೆಗಳ ಚಿತ್ರಗಳನ್ನು ನೋಡುವುದರಲ್ಲಿ ಕನ್ನಡಿಗರನ್ನೂ ಮೀರಿಸುವವರಿಲ್ಲ. ನಾವು ರಜನಿಕಾಂತ್‌, ವಿಜಯ್‌ ಚಿತ್ರಗಳು ಬಿಡುಗಡೆಯಾದರೆ ಮೊದಲ ದಿನ ಥಿಯೇಟರ್‌ ಮುಂದೆ ಸಾಲುಗಟ್ಟಿ ನಿಲ್ಲುತ್ತೇವೆ. ಅದೇ ಕನ್ನಡದ ಹೀರೋಗಳ ಚಿತ್ರಗಳಿಗೆ ಆ ಪರಿಯ ರೆಸ್ಪಾನ್ಸ್‌ ತೋರಿಸುವುದಿಲ್ಲ. ಕಳಪೆ ಚಿತ್ರಗಳನ್ನೂ ನಾವು ಮೆರೆಸಬೇಕು ಎಂದು ಇದರರರ್ಥವಲ್ಲ. ಇತ್ತೀಚೆಗೆ ಬಿಡುಗಡೆಯಾದ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಚಿತ್ರ ಒಂದು ಸದಭಿರುಚಿಯ, ಉತ್ತಮ ಕಂಟೆಂಟ್‌ನ ಚಿತ್ರ. ಆದರೆ ಕನ್ನಡಿಗರದು ಶೀತಲ ರೆಸ್ಪಾನ್ಸ್.‌ ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿದ ʼಡೇರ್‌ಡೆವಿಲ್‌ ಮುಸ್ತಫಾʼ ಸಾಧಾರಣ ಹಿಟ್‌ ಮಾತ್ರ ಆಯ್ತು. ನಮ್ಮ ಚಿತ್ರಗಳನ್ನು ನಾವೇ ನೋಡಿ ಕೊಂಡಾಡದಿದ್ದರೆ ಇತರ ಭಾಷಿಕರು ಯಾಕೆ ನೋಡುತ್ತಾರೆ? ಇಂಥ ಪರಿಸ್ಥಿತಿಯಲ್ಲಿ ಒಟಿಟಿಗಳು ನಮ್ಮ ಚಿತ್ರಗಳನ್ನು ಖರೀದಿಸಬೇಕೆಂದು ನಿರೀಕ್ಷಿಸುವುದು ಹೇಗೆ? ನಮ್ಮ ಅಭಿಮಾನಶೂನ್ಯತೆಯೇ ನಮಗೆ ಮುಳುವಾಗಿದೆ.

ನಮ್ಮ ಭಾಷಾಭಿಮಾನ ಹೆಚ್ಚಿಸಿಕೊಂಡು, ನಮ್ಮ ಕನ್ನಡ ಚಿತ್ರಗಳನ್ನು ನಾವು ಕೇಳಿ ಪಡೆದು ನೋಡುವ ಅಭ್ಯಾಸ ರೂಢಿಸಿಕೊಂಡರೆ ಒಟಿಟಿಗಳೂ ಬದಲಾಗುತ್ತವೆ. ಅವು ಮಾರುಕಟ್ಟೆ ಲಾಭವನ್ನು ಮಾತ್ರವೇ ನೋಡುವುದರಿಂದ, ನಾವು ಬದಲಾದರೆ ಅವೂ ಬದಲಾಗದೇ ನಿರ್ವಾಹವಿಲ್ಲ. ಜೊತೆಗೆ, ನಮ್ಮ ಕನ್ನಡ ಚಿತ್ರೋದ್ಯಮವೂ ಮಲಯಾಳಂಗೆ ಸಮವಾಗಿ ನಿಲ್ಲಬಲ್ಲ, ಸಾಧಾರಣ ಬಜೆಟ್‌ನ ಉತ್ತಮ ಚಿತ್ರಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕೊಡತೊಡಗಿದರೆ, ಒಟಿಟಿಗಳ ಮೇಲೆ ಒತ್ತಡ ಹಾಕಲು ನಮಗೆ ಸಾಧ್ಯವಾಗುತ್ತದೆ. ಜೊತೆಗೆ, ನಮ್ಮ ರಾಜ್ಯದಲ್ಲಿ ವ್ಯವಹಾರ ನಡೆಸಬೇಕಿದ್ದರೆ ಇಂತಿಷ್ಟು ಕನ್ನಡ ಚಿತ್ರಗಳನ್ನು ಖರೀದಿಸಬೇಕು ಎಂದು ನಿಯಮವನ್ನು ಸರ್ಕಾರವೂ ಒಟಿಟಿಗಳ ಮೇಲೆ ಹಾಕುವ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ.

Exit mobile version