ಬೆಂಗಳೂರು: ರೋಚಕತೆ ಮೂಡಿಸಿರುವ ಬಿಗ್ ಬಾಸ್ ಸೀಸನ್ 10(BBK Season 10)ರಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿವೆ. ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಮನೆಯಿಂದ ಹೊರ ಹೋಗುವುದಾಗಿ ಪಟ್ಟು ಹಿಡಿದು ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಅವರು ಬಿಗ್‌ಬಾಸ್ ಮನೆಯಲ್ಲಿ ಇರುತ್ತಾರಾ ಅಥವಾ ಹೊರ ಹೋಗುತ್ತಾರಾ? ಎನ್ನುವ ವಿಚಾರ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿತ್ತು. ಇದೀಗ ಗೊಂದಲಕ್ಕೆ ತೆರೆ ಬಿದ್ದಿದ್ದು ಅವರು ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಕಾರಣ ಏನು?
ವರ್ತೂರು ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದು ಮಗನ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಆಟವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲಿಗೆ ʼ‘ನನ್ನಿಂದ ಸಾಧ್ಯವಿಲ್ಲʼʼ ಎಂದು ಕಣ್ಣೀರು ಹಾಕಿದ ವರ್ತೂರು ಸಂತೋಷ್ ಬಳಿಕ ತಾಯಿಯ ಮಾತನ್ನು ಒಪ್ಪಿಕೊಂಡಿದ್ದಾರೆ. ಸ್ಪರ್ಧೆಯಿಂದ ಅರ್ಧದಲ್ಲೇ ಹೊರ ಹೋಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ʼʼಈಗ ಗೇಮ್ ಸ್ಟಾರ್ಟ್ʼʼ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್ ಸಮ್ಮತಿ ನೀಡಿರುವುದು ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಸ್ಪಷ್ಟವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಮನೆಯೊಳಗೆ ಬಂದ ವರ್ತೂರು ಸಂತೋಷ್ ಅವರ ಅಮ್ಮ ಮಗನನ್ನು ಸಮಾಧಾನ ಪಡಿಸುತ್ತಿರುವುದು ಕೂಡ ಪ್ರೋಮೋದಲ್ಲಿ ಕಂಡು ಬಂದಿದೆ. ಈ ಮೂಲಕ ವರ್ತೂರು ಸಂತೋಷ್ ಸ್ಪರ್ಧೆ ಮುಂದುವರಿಸುತ್ತಾರಾ? ಎನ್ನುವ ಕೆಲವು ದಿನಗಳ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.
ಕಣ್ಣೀರಿಟ್ಟಿದ್ದ ವರ್ತೂರ್ ಸಂತೋಷ್?
ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ವರ್ತೂರು ಸಂತೋಷ್ ಬಳಿಕ ಬಿಗ್ ಬಾಸ್ ಸ್ಪರ್ಧೆಗೆ ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು. ಕಳೆದ ವಾರ ವರ್ತೂರ್ ಸಂತೋಷ್ ನಾಮಿನೇಟ್ ಆಗಿದ್ದರೂ ಬರೋಬ್ಬರಿ 34,15,472 ಮತಗಳು ಬಂದು ಸೇಫ್ ಆಗಿದ್ದರು. ಆದರೆ ಅವರು ಕಿಚ್ಚ ಸುದೀಪ್ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು.
ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಘಟನೆ ನಡೆಯಿತು. ನಾನು ಆ ಗುಂಗಿನಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼ ಎಂದು ಸಂತೋಷ್ ಹೇಳಿದ್ದರು. ಸುದೀಪ್ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್ 34,15,472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼ ಎಂದು ವೇದಿಕೆಯಿಂದ ಹೊರಟೇ ಬಿಟ್ಟಿದ್ದರು. ಅಲ್ಲದೆ ವರ್ತೂರು ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದರು.
ಇದನ್ನೂ ಓದಿ: BBK Season 10: ವಿನಯ್‌ಗೆ ಸಂಗೀತಾಳಿಂದ ಬಂದ ದೀಪಾವಳಿ ಸ್ಪೆಷಲ್ ಏನು?
ಈ ಮಧ್ಯೆ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ. ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿ ವರ್ತೂರು ಅವರನ್ನು ಸಮಾಧಾನ ಪಡಿಸಿದ್ದರು. ʼʼನಾನು ನಿಮ್ಮ ಅಕ್ಕ ಆಗಿ ಹೇಳ್ತಿದ್ದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸಿಂದ ತೆಗೆದುಬಿಡಿʼʼ ಎಂದು ಪಕ್ಕ ಕೂತು ಧೈರ್ಯ ತುಂಬಿದ್ದರು. ಸದ್ಯ ವರ್ತೂರು ಸ್ಪರ್ಧೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದು ಅವರ ಮುಂದಿನ ಆಟ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ