ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival)ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕೃತ ಚಾಲನೆ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಡಾ. ಶಿವರಾಜ್ ಕುಮಾರ್, ಚಿತ್ರೋತ್ಸವದ ರಾಯಭಾರಿ ಡಾಲಿ ಧನಂಜಯ, ಬಾಂಗ್ಲಾ ನಟಿ ಅಜ್ಮೇರಿ ಬಂಧಾನ್, ನಿರ್ದೇಶಕ ಡಾ. ಜಬ್ಬರ್ ಪಟೇಲ್ ಮತ್ತಿತರರು ಭಾಗಿಯಾಗಿದ್ದರು. ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್, ಗಾಯಕಿ ಚೈತ್ರಾ ಸೇರಿದಂತೆ ಹೆಸರಾಂತ ಕಲಾವಿದರು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ಸುಮಾರು ಎಂಟು ದಿನಗಳ ಕಾಲ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಒರಾಯನ್ ಮಾಲ್‌ನ ಪಿವಿಆರ್, ಸುಚಿತ್ರಾ ಫಿಲ್ಮ್ ಸೊಸೈಟಿ ಹಾಗೂ ಕಲಾವಿದರ ಸಂಘದಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾ. 7ರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾ ಕಣಕ್ಕಿಳಿಯುತ್ತಿವೆ.
ಇದನ್ನೂ ಓದಿ: BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ‘ಲೈನ್ ಮ್ಯಾನ್ʼ!
ನಟ ಡಾಲಿ ಧನಂಜಯ್ ರಾಯಭಾರಿ
ಇತ್ತೀಚೆಗೆ 2023-24ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಡಾಲಿ ಧನಂಜಯ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ʼʼಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆʼʼ ಎಂದು ಹೇಳಿದ್ದರು.