Site icon Vistara News

Anil Kapoor: ಹುಷಾರ್, ಅನಿಲ್‌ ಕಪೂರ್‌ ಧ್ವನಿ, ಹೆಸರು, ಫೋಟೊ ಬಳಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ!

Anil Kapoor

Bollywood Actor Anil Kapoor's personality rights safeguarded by Delhi High Court

ನವದೆಹಲಿ: ಬಾಲಿವುಡ್‌ ನಟ ಅನಿಲ್‌ ಕಪೂರ್‌ (Anil Kapoor) ಅವರ ಧ್ವನಿ, ಹೆಸರು, ಸಿಗ್ನೇಚರ್‌, ಫೋಟೊಗಳನ್ನು ಬಳಸುವ ಮುನ್ನ ಎಚ್ಚರದಿಂದಿರಿ. ಏಕೆಂದರೆ, ಅವರ ಧ್ವನಿ, ಸಿಗ್ನೇಚರ್‌, ಫೋಟೊವನ್ನು ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ (Delhi High Court) ಮಧ್ಯಂತರ ಆದೇಶ ಹೊರಡಿಸಿದೆ. ಅನಿಲ್‌ ಕಪೂರ್‌ ಅವರು ಸಲ್ಲಿಸಿದ ಅರ್ಜಿಯನ್ನು ಮನ್ನಿಸಿರುವ ದೆಹಲಿ ಹೈಕೋರ್ಟ್‌ ಇಂತಹ ಆದೇಶ ಹೊರಡಿಸಿದೆ.

ಸಾಮಾಜಿಕ ಜಾಲತಾಣಗಳು, ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಸೇರಿ ಯಾವುದೇ ಮಾಧ್ಯಮಗಳು, ಸಂಸ್ಥೆಗಳು, ಜನ ಅನಿಲ್‌ ಕಪೂರ್‌ ಅವರ ಹೆಸರು, ಧ್ವನಿ, ಇಮೇಜ್‌ಗಳನ್ನು ಅನುಮತಿ ಇಲ್ಲದೆ ವಾಣಿಜ್ಯ ಕಾರಣಗಳಿಗಾಗಿ ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅನಿಲ್‌ ಕಪೂರ್‌ ಅವರ ವ್ಯಕ್ತಿತ್ವದ ಭಾಗವಾಗಿರುವ ಹಾಗೂ ಸಾರ್ವಜನಿಕ ಅಂಶಗಳನ್ನು ವಾಣಿಜ್ಯಿಕ ಕಾರಣಗಳಿಗೆ ಬಳಸಿದರೆ ಅದು ಅಕ್ರಮ ಎಂದು ಕೋರ್ಟ್‌ ತಿಳಿಸಿದೆ.

“ಅನಿಲ್‌ ಕಪೂರ್‌ ಅವರ ಸಿನಿಮಾದ ಡೈಲಾಗ್‌ಗಳು, ಅವರ ಫೋಟೊ, ಧ್ವನಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅವರ ಫೋಟೊ ಎಡಿಟ್‌ ಮಾಡಿ ಬಳಸುವುದು, ಅವರ ಸಹಿಯನ್ನು ಬಳಸುವಂತಿಲ್ಲ. ದೇಶದ ಯಾವುದೇ ಸೆಲೆಬ್ರಿಟಿಯ ಧ್ವನಿ, ಫೋಟೊ ಸೇರಿ ಯಾವುದೇ ಅಂಶಗಳನ್ನು ಹಣಕಾಸು ಲಾಭಕ್ಕಾಗಿ ಬಳಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇದೇ ನಿಯಮವು ಅನಿಲ್‌ ಕಪೂರ್‌ ಅವರಿಗೂ ಅನ್ವಯವಾಗಲಿದೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Anil Kapoor : ಅನಿಲ್‌ ಕಪೂರ್‌ ಸಿನಿ ಪಯಣಕ್ಕೆ 40 ವರ್ಷ: ಸಂತಸದಿಂದ ಪೋಸ್ಟ್‌ ಹಂಚಿಕೊಂಡ ನಟ

ಅನಿಲ್‌ ಕಪೂರ್‌ ಅವರ ಹಾಡಿನ ರಿಂಗ್‌ಟೋನ್‌, ಡೈಲಾಗ್‌, ಅವರ ಫೋಟೊ ಇರುವ ಮಾಸ್ಕ್‌ಗಳನ್ನೂ ಅನುಮತಿ ಇಲ್ಲದೆ ಬಳಸಬಾರದು ಎಂದು ಕೋರ್ಟ್‌ ತಿಳಿಸಿದೆ. ಅನಿಲ್‌ ಕಪೂರ್‌ ಅವರ ಅನುಮತಿ ಇಲ್ಲದೆ ಬಳಸಿದರೆ ಅದು ಕಾನೂನುಬಾಹಿರ ಎಂದು ತಿಳಿಸಿದೆ.

ಈಗಾಗಲೇ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ನ್ಯಾಯಾಲಯವು ಇಂತಹ ರಕ್ಷಣೆ ನೀಡಿದೆ. ಅಮಿತಾಭ್ ಬಚ್ಚನ್‌ ಅನುಮತಿ ಇಲ್ಲದೆ ಅವರ ಫೋಟೊ, ಧ್ವನಿ, ಡೈಲಾಗ್‌ಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಕೋರ್ಟ್‌ ಆದೇಶಿಸಿದೆ. ಅನಿಲ್‌ ಕಪೂರ್‌ ಅವರು ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ ಅವರ ಜತೆ ತೆರೆ ಹಂಚಿಕೊಂಡಿರುವ ಫೈಟರ್‌ ಸಿನಿಮಾದಲ್ಲಿ ನಟಿಸುತ್ತಿದ್ದು, 2024ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.

Exit mobile version