ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರು ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ಚುರುಕಾಗಿದೆ. ಇದರ ಸಂಚು ರೂಪುಗೊಂಡಿದ್ದು ಅಮೆರಿಕದಲ್ಲಿ ಎಂಬುದು ಗೊತ್ತಾಗಿದೆ.
ಸಾಮಾನ್ಯವಾಗಿ ನಟ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಗುಂಡಿನ ದಾಳಿ ನಡೆಸುವಂತಹ ದೃಶ್ಯಾವಳಿಗಳನ್ನು ನೋಡಿರುವ ಜನರು ಇದೀಗ ನಟ ಸಲ್ಮಾನ್ ಖಾನ್ ಅವರ ನಿವಾಸದ ಮುಂದೆಯೇ ಗುಂಡು ಹಾರಿಸಿದ ಶಬ್ದ ಕೇಳಿ ಹೌಹಾರಿದ್ದಾರೆ.
ಕೊಲೆಗೆ ಸಂಚು?
ದುಷ್ಕರ್ಮಿಗಳ ಈ ಕೃತ್ಯ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳು ಟೋಪಿಗಳನ್ನು ಧರಿಸಿದ್ದು, ಅದರಲ್ಲಿ ಒಬ್ಬ ಕಪ್ಪು ಜಾಕೆಟ್ ಮತ್ತು ಡೆನಿಮ್ ಪ್ಯಾಂಟ್ , ಬಿಳಿ ಟೀ ಶರ್ಟ್ ಧರಿಸಿದ್ದರೆ ಇನ್ನೊಬ್ಬ ಡೆನಿಮ್ ಪ್ಯಾಂಟ್ ಮತ್ತು ಕೆಂಪು ಟೀ ಶರ್ಟ್ ಧರಿಸಿದ್ದ ಎನ್ನಲಾಗಿದೆ. ಅವರು ನಟನ ನಿವಾಸದ ಕಡೆಗೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ನಟ ಸಲ್ಮಾನ್ ಖಾನ್ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.
ಪೊಲೀಸ್ ಮೂಲಗಳ ಪ್ರಕಾರ ಆ ಇಬ್ಬರು ವ್ಯಕ್ತಿಗಳು ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನವರು ಎನ್ನಲಾಗಿದೆ. ಈಗಾಗಲೇ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಲಾರೆನ್ಸ್ ಬಿಷ್ಣೋಯ್ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಹಾಗಾಗಿ ಈ ಯೋಜನೆ ಅಮೆರಿಕದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಅನ್ಮೋಲ್ ಬಿಷ್ಣೋಯ್ ಫೇಸ್ ಬುಕ್ ಪೋಸ್ಟ್ ಮೂಲಕ ಈ ಘಟನೆಯ ಹೊಣೆಯನ್ನು ಹೊತ್ತಿದ್ದಾನೆ ಎನ್ನಲಾಗಿದೆ. ಹಾಗಾಗಿ ಈ ಘಟನೆಯ ಹೊಣೆಯನ್ನು ಹೊತ್ತಿರುವ ಫೇಸ್ ಬುಕ್ ಪುಟದ ಐಪಿ ವಿಳಾಸವನ್ನು ಕೆನಡಾದಲ್ಲಿ ಪತ್ತೆಹಚ್ಚಲಾಗಿದೆಯಂತೆ. ಅಲ್ಲದೇ ಫೇಸ್ ಬುಕ್ ಪೋಸ್ಟ್ ರಚಿಸಲು ವಿಪಿಎನ್ ಅನ್ನು ಬಳಸಿರುವ ಸಾಧ್ಯತೆ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ನಿವಾಸದ ಬಳಿ ಗುಂಡು ಹಾರಿಸಿದ ಶಂಕಿತರು ಬಳಸಿದ ಬೈಕ್ ಸೆಕೆಂಡ್ ಹ್ಯಾಂಡ್ ಬೈಕ್ ಆಗಿದ್ದು, ಅದನ್ನು ರಾಯಗಡ್ ಜಿಲ್ಲೆಯಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬೈಕ್ ಮಾರಾಟದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Loksabha Election 2024: ಐವರು ಪತ್ನಿಯರು, 150 ಮೊಮ್ಮಕ್ಕಳು; ಒಂದೇ ಕುಟುಂಬದಲ್ಲಿದ್ದಾರೆ 350 ಮತದಾರರು!
ಈ ಹಿಂದೆ ನಟ ಸಲ್ಮಾನ್ ಖಾನ್ ಅವರಿಗೆ ಮಾಡಲಾದ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ಭದ್ರತಾ ವ್ಯವಸ್ಥೆಯನ್ನು ವೈ+ಗೆ ಹೆಚ್ಚಿಸಿದ್ದರು. ಇದೀಗ ವೈ+ ಭದ್ರತೆಯ ಜೊತೆಗೆ ಎರಡು ಕಮಾಂಡೊಗಳು ಮತ್ತು ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಸೇರಿದಂತೆ ಹನ್ನೊಂದು ಭದ್ರತಾ ಸಿಬ್ಬಂದಿಗಳು ಎಲ್ಲಾ ಸಮಯದಲ್ಲೂ ನಟನನ್ನು ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.