Site icon Vistara News

Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್‌ ಸಲಹೆ

Kicchha sudeep tweet on Cauvery water dispute

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ವಿವಾದ ಭುಗಿಲೇಳುತ್ತಲೇ ಇದೆ. ತಮಿಳುನಾಡಿಗೆ ನೀರು ಬಿಡುತ್ತಿರುವ (Cauvery water to Tamil Nadu) ರಾಜ್ಯ ಸರ್ಕಾರದ (Government of Karnataka) ನಿಲುವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವೇಳೆ ಮಂಗಳವಾರ (ಸೆಪ್ಟೆಂಬರ್‌ 26) ರಾಜಧಾನಿ ಬೆಂಗಳೂರನ್ನು ಬಂದ್‌ (Bangalore bandh) ಮಾಡಿ ಆಕ್ರೋಶವನ್ನು ಹೊರಹಾಕಲಾಗಿದೆ. ಅಲ್ಲದೆ, ಚಿತ್ರನಟರು ಕಾವೇರಿ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿರುವ ಈ ಹೊತ್ತಿನಲ್ಲಿ ಒಬ್ಬೊಬ್ಬರಾಗಿಯೇ ಮಾತನಾಡುತ್ತಿದ್ದಾರೆ. ಸೋಮವಾರ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ದರ್ಶನ್‌ (Actor Darshan) ಭಾಗಿಯಾಗಿ ಕಾವೇರಿ ಪರ ಧ್ವನಿ ಎತ್ತಿದ್ದರು. ಈಗ ನಟ ಕಿಚ್ಚ ಸುದೀಪ್‌ (Kichcha Sudeep) ಟ್ವೀಟ್‌ ಮಾಡುವ ಮೂಲಕ ಕಾವೇರಿ ನಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಕಾವೇರಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಸುದೀಪ್‌ ಟ್ವೀಟ್‌ ಮೂಲಕ ಹೇಳಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮಿಳುನಾಡು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Cauvery water dispute : ನಿರುತ್ತರ ಮುಖ್ಯಮಂತ್ರಿ ಎಂದು ಟೀಕಿಸಿದ ಬಿಜೆಪಿ; ಸಿದ್ದರಾಮಯ್ಯಗೆ 7 ಪ್ರಶ್ನೆ!

ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಬೇಕು ಎಂಬ ಸಲಹೆಯನ್ನು ಸಹ ಕಿಚ್ಚ ಸುದೀಪ್‌ ಇದೇ ವೇಳೆ ನೀಡಿದ್ದಾರೆ. ಅಲ್ಲದೆ, ಈ ಜಲ ವಿವಾದವನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು ಎಂಬ ಕಳಕಳಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್‌ ಟ್ವೀಟ್‌ನಲ್ಲೇನಿದೆ?

“ಸಮಸ್ತ ಕನ್ನಡ ಜನತೆಗೆ ನಮಸ್ಕಾರ; ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಕೃಷಿ ಮಾತ್ರವಲ್ಲದೆ, ಜನರ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ಟ್ರಿಬ್ಯುನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ.

ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ, ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.

ಇದನ್ನೂ ಓದಿ: Cauvery water dispute : ಕಾವೇರಿ ಮಾತುಕತೆಗೆ ನಾವು ಸಿದ್ಧ; ಮೋದಿ ಮನಸ್ಸು ಮಾಡಲಿ ಎಂದ ಸಿದ್ದರಾಮಯ್ಯ

ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ. ಆದರೆ, ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿದು ಹೋರಾಟಕ್ಕೆ ಜಯವಾಗಲಿ. ಇದರ ಜತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ – ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು” ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮೂಲಕ ಬರೆದುಕೊಂಡಿದ್ದಾರೆ.

Exit mobile version