ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ ಮುಖ್ಯ ರೂವಾರಿಗಳಾದ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (CM Stalin) ದಂಪತಿಯನ್ನು ಸನ್ಮಾನಿಸಿದ್ದಾರೆ. ಪ್ರತಿಯೊಬ್ಬರಿಗೂ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೇ 2 ಆನೆ ಶಿಬಿರದಲ್ಲಿ ಇರುವ 91 ಮಾವುತರಿಗೂ ಕೂಡ ತಲಾ ಒಂದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈ ಧನ ಸಹಾಯ ಮಾಡಲಾಗುತ್ತಿದೆ. ಅಲ್ಲದೇ, ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ ಎಂದು ವರದಿ ಆಗಿದೆ.
ತಮಿಳುನಾಡು ಅರಣ್ಯ ಇಲಾಖೆಯ ಆನೆಗಳ ಆರೈಕೆಯ ಬಗ್ಗೆ ಈ ಚಿತ್ರ ವಿಶ್ವದ ಗಮನ ಸೆಳೆದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನ ನೀಲಗಿರಿಯ ಸುಂದರವಾದ ಮುದುಮಲೈ ಕಾಡುಗಳಲ್ಲಿ ವಾಸಿಸುವ ಕಟ್ಟುನಾಯಕನ್ ಬುಡಕಟ್ಟಿನ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ರಘು ಎಂಬ ಅನಾಥ ಆನೆ ಮರಿಯ ಕಥೆಯನ್ನು ಹೇಳುತ್ತದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ 40 ನಿಮಿಷಗಳ ಸಾಕ್ಷ್ಯಚಿತ್ರವು ಆನೆ ಮತ್ತು ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಹೇಳುತ್ತದೆ. ಚಿತ್ರದ ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ಪ್ರವಾಸಿಗರು ಮುದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮರಿ ಆನೆಯನ್ನು ವೀಕ್ಷಿಸುತ್ತಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್’ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ತಮಗೆ ಸಿಕ್ಕಿದ ಈ ಪ್ರಶಸ್ತಿ ʼನನ್ನ ತಾಯ್ನೆಲ ಭಾರತಕ್ಕೆ ಅರ್ಪಿತʼ ಎಂದಿದ್ದಾರೆ ಇದರ ನಿರ್ದೇಶಕ ಕಾರ್ತಿಕಿ. ಕಾರ್ತಿಕಿ ಅವರಿಗೆ ಇದು ಮೊದಲ ನಿರ್ದೇಶನ. ಹೌಲ್‌ಔಟ್, ಹೌ ಡು ಯು ಮೆಶರ್ ಎ ಇಯರ್, ದಿ ಮಾರ್ಥಾ ಮಿಶೆಲ್ ಎಫೆಕ್ಟ್, ಸ್ಟ್ರೇಂಜರ್ ಎಟ್ ದಿ ಗೇಟ್ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು.