Site icon Vistara News

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

Maharaj

Court stays release of Aamir Khan's son's film 'Maharaj' on Hindu group's plea

ಗಾಂಧಿನಗರ: ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ಅವರ ಪುತ್ರ ಜುನೈದ್‌ ಖಾನ್‌ (Junaid Khan) ನಟಿಸಿರುವ ಮೊದಲ ಸಿನಿಮಾಗೇ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂಬುದಾಗಿ ಹಿಂದು ಸಂಘಟನೆಗಳು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಗುಜರಾತ್‌ ಹೈಕೋರ್ಟ್‌, ಜುನೈದ್‌ ಖಾನ್‌ ನಟಿಸಿರುವ ಮೊದಲ ಸಿನಿಮಾ ‘ಮಹಾರಾಜ್’ (Maharaj)‌ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ಇದರಿಂದ ಆಮೀರ್‌ ಖಾನ್‌ ಹಾಗೂ ಜುನೈದ್‌ ಖಾನ್‌ಗೆ ತುಸು ಹಿನ್ನಡೆಯಾದಂತಾಗಿದೆ.

ಸಿದ್ಧಾರ್ಥ್‌ ಪಿ. ಮಲ್ಹೋತ್ರಾ ಅವರು ಮಹಾರಾಜ್‌ ಸಿನಿಮಾವನ್ನು ನಿರ್ದೇಶಿಸಿದ್ದರೆ, ಆದಿತ್ಯ ಚೋಪ್ರಾ ನಿರ್ಮಾಪಕರಾಗಿದ್ದಾರೆ. ಜೂನ್‌ 14ರಂದೇ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ, ಭಗವಾನ್‌ ಕೃಷ್ಣನ ಆರಾಧಕರು ಹಾಗೂ ವಲ್ಲಭಾಚಾರ್ಯ ಅವರ ಅನುಯಾಯಿಗಳು ನ್ಯಾಯಾಲಯದ ಮೊರೆ ಹೋದ ಕಾರಣ, ನ್ಯಾಯಾಲಯವು ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳು ಸಿನಿಮಾದಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾರಣ ತಡೆಯಾಜ್ಞೆ ನೀಡಲಾಗಿದೆ. ಹಾಗೆಯೇ, ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್‌ ನೆಟ್‌ಫ್ಲಿಕ್‌ ಅಭಿಯಾನವೂ ಆರಂಭವಾಗಿದೆ.

ಸಿನಿಮಾದಲ್ಲಿ ಏನಿದೆ? ಯಾಕಿಷ್ಟು ವಿವಾದ?

1862ರಲ್ಲಿ ಪುಷ್ಟಿಮಾರ್ಗ ವೈಷ್ಣವ ಪಂಥದ ಮಹಾರಾಜರ ಕುರಿತು ಕರ್ಸನ್‌ದಾಸ್‌ ಮುಲ್ಝಿ ಎಂಬ ಪತ್ರಕರ್ತ ಬರೆದ ಲೇಖನಗಳ ಪ್ರಕರಣವಾಗಿದೆ. ವೈಷ್ಣವ ಪಂಥದ ಮಹಾರಾಜರು ತಮ್ಮ ಅನುಯಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಸೇರಿ ಹಲವು ಲೇಖನಗಳನ್ನು ಗುಜರಾತಿ ವಾರಪತ್ರಿಕೆ ‘ಸತ್ಯಪ್ರಕಾಶ’ದಲ್ಲಿ ಬರೆದಿದ್ದರು.

ಮಹಾರಾಜರ ಅನುಯಾಯಿಗಳು ಸೇರಿ ಹಿಂದುಗಳು ಕರ್ಸನ್‌ದಾಸ್‌ ಮುಲ್ಝಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿ, ಬ್ರಿಟಿಷ್‌ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಿತ್ತು. 16ನೇ ಶತಮಾನದಲ್ಲಿ ವಲ್ಲಭಾಚಾರ್ಯ ಅವರು ಪುಷ್ಟಿಮಾರ್ಗವನ್ನು ಸಂಸ್ಥಾಪಿಸಿದ್ದು, ಕೃಷ್ಣನ ಆರಾಧಕರು ಈ ಮಾರ್ಗವನ್ನು ಅನುಸರಿಸುತ್ತಾರೆ. ವೈಷ್ಣವ ಪಂಥದ ಮಹಾರಾಜರ ಕುರಿತು ಅವಹೇಳನಕಾರಿಯಾಗಿ ಲೇಖನ ಬರೆದಿದ್ದ ಕರ್ಸನ್‌ದಾಸ್‌ ಮುಲ್ಝಿಯ ಪಾತ್ರವನ್ನೇ ಜುನೈದ್‌ ಖಾನ್‌ ನಿಭಾಯಿಸಿದ್ದಾರೆ.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Exit mobile version