Site icon Vistara News

Spandana Vijay Raghavendra : ಸ್ಪಂದನಾ ಪಾರ್ಥಿವ ಶರೀರ ರಾತ್ರಿ 11.25ಕ್ಕೆ ಬೆಂಗಳೂರಿಗೆ, ಮಲ್ಲೇಶ್ವರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

Spandana vijay Raghavendra Photo

Spandana vijay Raghavendra Photo kept at BK Shivaram house

ಬೆಂಗಳೂರು: ಥಾಯ್ಲೆಂಡ್‌ ಪ್ರವಾಸದಲ್ಲಿರುವ (Thailand tour) ವೇಳೆ ಹಠಾತ್‌ ಹೃದಯಾಘಾತದಿಂದ (Sudden Cardiac Arrest) ನಿಧನರಾದ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಅವರ ಪುತ್ರಿ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರ ಥಾಯ್ ಏರ್ ವೇಸ್‌ಗೆ (Thai Airways) ಸೇರಿದ ವಿಮಾನದಲ್ಲಿ ಮಂಗಳವಾರ ರಾತ್ರಿ 11.25ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International airport) ಆಗಮಿಸಲಿದೆ.

ಕಳೆದ ಭಾನುವಾರ ರಾತ್ರಿ ಕುಸಿದು ಬಿದ್ದು ಮೃತಪಟ್ಟಿದ್ದ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡು ದಾಖಲೆಗಳ ವಿನಿಮಯ ನಡೆದಿದೆ. ಭಾರತೀಯ ದೂತಾವಾಸದ ಜತೆಗಿನ ಪ್ರಕ್ರಿಯೆ ಮತ್ತು ವಿಮಾನದಲ್ಲಿ ಮೃತದೇಹ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ಥಾಯ್ಲೆಂಡ್‌ ಟು ಬೆಂಗಳೂರು ವಿಮಾನ ಆಗಲೇ ಬ್ಯಾಂಕಾಕ್‌ನಿಂದ ಹೊರಟಿದ್ದು, ಮೃತದೇಹದೊಂದಿಗೆ ವಿಜಯ ರಾಘವೇಂದ್ರ ಅವರು ಆಗಮಿಸಲಿದ್ದಾರೆ. ಜತೆಗೆ ಅವರೊಂದಿಗೆ ಥಾಯ್ಲೆಂಡ್‌ಗೆ ಹೋಗಿದ್ದ ಸಂಬಂಧಿಕ ಯುವತಿಯರು, ಕುಟುಂಬದ ಬಂಧುಗಳು ಮರಳಲಿದ್ದಾರೆ.

ಥಾಯ್‌ ಏರ್‌ವೇಸ್‌ನ ಈ ವಿಮಾನವು ರಾತ್ರಿ 11:25ಕ್ಕೆ‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ವಿಮಾನ ನಿಲ್ದಾಣದ WFS ಏರ್ ಕಾರ್ಗೋ ಟರ್ಮಿನಲ್‌ಗೆ ಮೃತದೇಹವನ್ನು ತರಲಾಗುತ್ತದೆ.

ನಿಯಮಾನುಸಾರ ಮೃತದೇಹ ಸ್ಕ್ಯಾನ್ ಮಾಡಿ ದಾಖಲೆ ಪರಿಶೀಲನೆ ಮಾಡಲಿರುವ ಅಧಿಕಾರಿಗಳು, ಬಳಿಕ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲಿದ್ದಾರೆ. ಕಸ್ಟಮ್ಸ್ ಕ್ಲಿಯರೆನ್ಸ್ ಆದ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ನಡೆಯಲಿದೆ.

ಮಲ್ಲೇಶ್ವರದ ಬಿ.ಕೆ. ಶಿವರಾಂ ಮನೆಯ ಪರಿಸರದಲ್ಲಿ ಸ್ಪಂದನಾ ಅವರ ಭಾವಚಿತ್ರಗಳನ್ನು ಇಟ್ಟಿರುವುದು.

ತಡರಾತ್ರಿ ಮಲ್ಲೇಶ್ವರದ ಮನೆಗೆ ಆಗಮನ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಲಿರುವ ಪಾರ್ಥಿವ ಶರೀರವನ್ನು ಮಲ್ಲೇಶ್ವರದಲ್ಲಿರುವ ಬಿಕೆ ಶಿವರಾಂ ಅವರ ಮನೆಗೆ (No.34, 4ನೇ ದೇವಸ್ಥಾನ ರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ) ತರಲಾಗುತ್ತದೆ. ಮಧ್ಯರಾತ್ರಿಯಿಂದ ಬುಧವಾರ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ನಗರದ ಸತ್ಯಹರಿಶ್ಚಂದ್ರ ರುದ್ರಭೂಮಿಯಲ್ಲಿ ಈಡಿಗ ಸಮುದಾಯದ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೇರಿಸಲಾಗುವುದು ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.

ಶಿವರಾಂ ಮನೆಯ ಪರಿಸರದಲ್ಲಿ ಸಕಲ ಸಿದ್ಧತೆ

ಪಾರ್ಥಿವ ಶರೀರದ ಆಗಮನ ಮತ್ತು ಅಂತಿಮ ದರ್ಶನಕ್ಕೆ ಸಂಬಂಧಿಸಿ ಬಿ.ಕೆ. ಶಿವರಾಂ ಅವರ ಮನೆಯ ಪರಿಸರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈಗಾಗಲೇ ಬಂಧುಗಳು, ಕುಟುಂಬಿಕರು ಮನೆಗೆ ಆಗಮಿಸಿದ್ದಾರೆ. ಬ್ಯಾರಿಕೇಡ್, ಟೇಬಲ್, ಕುರ್ಚಿಗಳನ್ನು ಹಾಕಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬಿ.ಕೆ ಹರಿಪ್ರಸಾದ್ ಹಾಗೂ ಶ್ರೀಮುರುಳಿ ಅವರು ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.

ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದ್ದು, ಯಾವುದೇ ಒತ್ತಡವಿಲ್ಲದೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರನಟರು, ವಿಜಯ ರಾಘವೇಂದ್ರ ಅಭಿಮಾನಿಗಳು, ರಾಜಕಾರಣಿಗಳು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: Spandana Vijay Raghavendra : ಸ್ಪಂದನಾ ಜಿಮ್‌ ಸೇರಿದ್ದು ಬಾಡಿ ಬಿಲ್ಡ್‌ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!

Exit mobile version